

Akshaya Tritiya 2025: ಅಕ್ಷಯ ತೃತೀಯಾವನ್ನು ವೈಶಾಖ ಮಾಸ ಶುಕ್ಲ ಪಕ್ಷದ ತೃತೀಯಾ ತಿಥಿಯಂದು ಆಚರಿಸಲಾಗುತ್ತದೆ. ಅಕ್ಷಯ ತೃತೀಯಾದ ದಿನದಂದು ಮಾಡುವ ದಾನ ಮತ್ತು ಒಳ್ಳೆಯ ಕಾರ್ಯಗಳು ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬ ನಂಬಿಕೆಯಿದೆ. ಈ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಇದು ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಈ ದಿನದಂದು ಹೊಸ ಕೆಲಸವನ್ನು ಪ್ರಾರಂಭಿಸುವುದು ಶುಭವೆಂದು ನಂಬಲಾಗಿದೆ. ಹಾಗಾದ್ರೆ ಅಕ್ಷಯ ತೃತೀಯಾ ಯಾವಾಗ, ಶುಭ ಸಮಯ ಮತ್ತು ಈ ದಿನದ ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ಅಕ್ಷಯ ತೃತೀಯವನ್ನು ಯಾವಾಗ ಆಚರಿಸಲಾಗುತ್ತದೆ?
ಇದೇ ತಿಂಗಳು ಏಪ್ರಿಲ್ 29 ರಂದು ಸಂಜೆ 5.32ಕ್ಕೆ ತೃತೀಯಾ ತಿಥಿ ಆರಂಭವಾಗಲಿದ್ದು, ಏಪ್ರಿಲ್ 30 ರಂದು ಮಧ್ಯಾಹ್ನ 2.13ರವರೆಗೆ ತೃತೀಯಾ ತಿಥಿ ಇರುತ್ತದೆ. ಏ.30 ರ ಬುಧವಾರ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ದಿನ ಅಬುಜ್ ಮುಹೂರ್ತ ಇರುವುದರಿಂದ ಯಾವುದೇ ಕೆಲಸವನ್ನು ಯಾವುದೇ ಸಮಯದಲ್ಲಿ ಪ್ರಾರಂಭಿಸಬಹುದು. ಚಿನ್ನ, ಆಸ್ತಿ ಅಥವಾ ವಾಹನವನ್ನು ಖರೀದಿಸಬಹುದು. ಶಾಸ್ತ್ರಗಳಲ್ಲಿ ಇದನ್ನು ಯುಗಾದಿ ತಿಥಿ ಎಂದು ಕರೆಯಲಾಗುತ್ತದೆ, ಅಂದರೆ, ಈ ದಿನ ಯುಗ ಪ್ರಾರಂಭವಾಯಿತು, ಆದ್ದರಿಂದ ಈ ದಿನದ ಮುಹೂರ್ತ ದೋಷವಿಲ್ಲ.
ಅಕ್ಷಯ ತೃತೀಯ ಆಚರಣೆಗಳು
ಅಕ್ಷಯ ತೃತೀಯದ ಶುಭ ದಿನದಂದು, ಬೆಳಿಗ್ಗೆ ಬೇಗನೆ ಎದ್ದು, ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಲಕ್ಷ್ಮಿ ನಾರಾಯಣನ ದೇವರನ್ನು ಪೂಜಿಸಿ, ವಿಷ್ಣುವಿಗೆ ಶ್ರೀಗಂಧದ ತಿಲಕ ಮತ್ತು ಲಕ್ಷ್ಮಿ ದೇವಿಗೆ ಕುಂಕುಮವಿಟ್ಟು, ಹಳದಿ ಹೂವು ವಿಷ್ಣುವಿಗೆ ಮತ್ತು ಲಕ್ಷ್ಮಿ ದೇವಿಗೆ ಕಮಲದ ಹೂವುಗಳನ್ನು ಅರ್ಪಿಸಿ. ನಂತರ ಬಾರ್ಲಿ, ಗೋಧಿ, ಸೌತೆಕಾಯಿ, ಕಡಲೆ ಬೇಳೆ, ಬೆಲ್ಲ ಇತ್ಯಾದಿಗಳನ್ನು ನೈವೆದ್ಯವಾಗಿ ಅರ್ಪಿಸಿ. ತದನಂತರ ನೀವು ಲಕ್ಷ್ಮಿ ನಾರಾಯಣನ ಕಥೆಯನ್ನು ಸಹ ಹೇಳಬಹುದು. ಕೊನೆಯದಾಗಿ ಆರತಿ ಮಾಡಿ.
ಈ ದಿನದಂದು ನೀವು ಬ್ರಾಹ್ಮಣರಿಗೆ ಅನ್ನದಾನ ಮಾಡಬಹುದು ಮತ್ತು ಬಡವರಿಗೆ ದಾನ ಮಾಡಬಹುದು. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನದಂದು ಮಾಡುವ ಪೂಜೆ, ದಾನ, ಮಂತ್ರ ಪಠಣ, ಹವನ ಇತ್ಯಾದಿಗಳಿಂದ ಸಿಗುವ ಪುಣ್ಯ ಹೆಚ್ಚು. ಆ ದಿನದಂದು ಗಳಿಸಿದ ಪುಣ್ಯವು ವ್ಯಕ್ತಿಯ ಜೀವನಕ್ಕೆ ನಿರಂತರ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
ಅಕ್ಷಯ ತೃತೀಯ ಮಹತ್ವ
ಅಕ್ಷಯ ತೃತೀಯ ದಿನದಂದು ಗಂಗೆ ಭೂಮಿಗೆ ಇಳಿದಳು ಎಂದು ನಂಬಲಾಗಿದೆ. ಸತ್ಯಯುಗ, ದ್ವಾಪರಯುಗ ಮತ್ತು ತ್ರೇತಾಯುಗಗಳ ಆರಂಭವನ್ನು ಈ ದಿನದಿಂದ ಲೆಕ್ಕಹಾಕಲಾಗುತ್ತದೆ. ಈ ದಿನ ವಿಷ್ಣುವಿನ ಆರನೇ ರೂಪವಾದ ಪರಶುರಾಮ ಜನಿಸಿದನು. ಅದೇ ರೀತಿ ಉತ್ತರಾಖಂಡದಲ್ಲಿರುವ ನಾಲ್ಕು ಧಾಮಗಳಿಗೆ ತೀರ್ಥಯಾತ್ರೆ ಕೂಡ ಅಕ್ಷಯ ತೃತೀಯ ದಿನದಂದು ಪ್ರಾರಂಭವಾಗುತ್ತದೆ. ಗಂಗೋತ್ರಿ ಮತ್ತು ಯಮುನೋತ್ರಿಯ ಬಾಗಿಲುಗಳು ತೆರೆಯಲ್ಪಡುತ್ತವೆ ಎಂಬ ನಂಬಿಕೆಗಳು ಇವೆ.
ಅಕ್ಷಯ ತೃತೀಯದಂದು ಪ್ರಾರಂಭವಾದ ಕೆಲಸವು ವೇಗವಾಗಿ ಬೆಳೆಯುತ್ತದೆ ಮತ್ತು ಈ ದಿನದಂದು ಪಾಪ ಕಾರ್ಯಗಳನ್ನು ಮಾಡಬಾರದು. (ಏಜೆನ್ಸೀಸ್)