

ನವದೆಹಲಿ: ಕೇಂದ್ರ ಸರ್ಕಾರ 2025-26ರ ರಬಿ ಮಾರುಕಟ್ಟೆ ಋತುವಿನಲ್ಲಿ ವಿವಿಧ ರಾಜ್ಯಗಳಿಂದ 31 ಮೆಟ್ರಿಕ್ ಟನ್ ಗೋಧಿ ಸಂಗ್ರಹ ನಿರೀಕ್ಷಿಸಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಗುರುವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜತೆ ಪರಿಶೀಲನಾ ಸಭೆ ನಡೆಸಿದರು.
ಉತ್ತರಪ್ರದೇಶದಲ್ಲಿ ಪ್ರಸ್ತುತ ಗೋಧಿ ದಾಸ್ತಾನು, ಸಂಗ್ರಹ ಕುರಿತು ಮಾಹಿತಿ ಪಡೆದ ಸಚಿವರು, ಉತ್ತರ ಪ್ರದೇಶ ಸರ್ಕಾರ ಏಪ್ರಿಲ್ ಮೊದಲ ವಾರದಲ್ಲಿ 1 ಲಕ್ಷ ಟನ್ ಗೋಧಿ ಸಂಗ್ರಹಿಸಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಈ ಬಾರಿ ವಿವಿಧ ಏಜೆನ್ಸಿಗಳಿಂದ ಏಪ್ರಿಲ್-ಜೂನ್ ಅವಧಿಯಲ್ಲಿ 31 ಮೆಟ್ರಿಕ್ ಟನ್ ಗೋಧಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಇದು 2024-25ರ ಹಂಗಾಮಿನ 26.6 ಮೆಟ್ರಿಕ್ ಟನ್ಗಿಂತ ಶೇ. 26ರಷ್ಟು ಹೆಚ್ಚಾಗಿದೆ. ಇದಕ್ಕೆ ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯಗಳು ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.
ಯೋಗಿ ಆದಿತ್ಯನಾಥ ಮಾತನಾಡಿ, ಉತ್ತರ ಪ್ರದೇಶದಲ್ಲಿ ಗೋಧಿ ಖರೀದಿಗೆ 5,780 ಕೇಂದ್ರಗಳನ್ನು ತೆರೆಯಲಾಗಿದ್ದು, 20,409 ರೈತರು ಗೋಧಿ ಮಾರಾಟ ಮಾಡಿದ್ದಾರೆ. ರೈತರು 100 ಕ್ವಿಂಟಾಲ್ವರೆಗೆ ಗೋಧಿ ಮಾರಲು ಅವಕಾಶ ಇದೆ. ರಜಾ ದಿನಗಳಲ್ಲಿಯೂ ಖರೀದಿ ಕೇಂದ್ರ ತೆರೆದಿರುತ್ತವೆ ಎಂದರು.
ಇದೇ ವೇಳೆ ಸಚಿವ ಜೋಶಿ ಉತ್ತರಪ್ರದೇಶದಲ್ಲಿ ಪಿಎಂ ಕುಸುಮ್ ಮತ್ತು ಪಿಎಂ ಸೂರ್ಯ ಘರ್ ಯೋಜನೆಗಳಲ್ಲಾದ ಪ್ರಗತಿ ಬಗ್ಗೆಯೂ ರ್ಚಚಿಸಿದರು. ಲಖನೌದಲ್ಲಿ ಸೂರ್ಯ ಘರ್ ಯೋಜನೆಯಡಿ ಅಳವಡಿಸಿದ ಸೌರ ಸ್ಥಾವರ, ಮೇಲ್ಛಾವಣಿ ಘಟಕಗಳನ್ನು ವೀಕ್ಷಿಸಿದರು. ಸೂರ್ಯ ಘರ್ ಫಲಾನುಭವಿ ಉಮೇಶ ರಾವತ್, ‘1.8 ಲಕ್ಷ ರೂ. ವೆಚ್ಚದಲ್ಲಿ ಸೌರ ಮೇಲ್ಛಾವಣಿ ಅಳವಡಿಸಿಕೊಂಡಿದ್ದು, ಸರ್ಕಾರದಿಂದ 1.08 ಲಕ್ಷ ರೂ. ಸಬ್ಸಿಡಿ ಬಂದಿದೆ. ಮೊದಲು 2000- 3000 ರೂ. ವಿದ್ಯುತ್ ಬಿಲ್ ಭರಿಸುತ್ತಿದ್ದೆ. ಈಗ 150-200 ರೂ.ಗೆ ಇಳಿದಿದೆ’ ಎಂದು ಸಂತಸ ಹಂಚಿಕೊಂಡರು.