

ನವದೆಹಲಿ: ವಾಟ್ಸ್ಆ್ಯಪ್ ಪ್ರೈವಸಿ ಸೆಕ್ಯುರಿಟಿ ಬಗ್ಗೆ ಸಾಕಷ್ಟು ವಾದ ವಿವಾದಗಳು ನಡೆಯುತ್ತಿರುವಾಗಲೇ ಇದೀಗ ವಾಟ್ಸ್ಆ್ಯಪ್ನಲ್ಲಿ ಮತ್ತೊಂದು ದೋಷ ಕಂಡುಬಂದಿದೆ. ಖಾಸಗಿ ಗ್ರೂಪಗಳಿಗೆ ಸೇರಲು ಗೂಗಲ್ನಲ್ಲೇ ಲಿಂಕ್ ಲಭ್ಯವಾಗಿದ್ದು, ಇದರ ಕುರಿತು ವರದಿ ಪ್ರಕಟವಾಗುತ್ತಿದ್ದಂತೆಯೇ ಸಂಸ್ಥೆ ತಪ್ಪನ್ನು ತಿದ್ದಿಕೊಂಡಂತೆ ಕಂಡುಬಂದಿದೆ.
ಇದನ್ನೂ ಓದಿ: ದೇಶದ ಮೊದಲ ಲಿಥಿಯಂ ನಿಕ್ಷೇಪ ಮಂಡ್ಯದಲ್ಲಿ ಪತ್ತೆ!
ವಾಟ್ಸ್ಆ್ಯಪ್ನ ಈ ದೋಷವನ್ನು ಜಾಲತಾಣವೊಂದು ಬಯಲಿಗೆಳೆದಿದೆ. ವಾಟ್ಸ್ಆ್ಯಪ್ ಗ್ರೂಪುಗಳಲ್ಲಿ ಇಂಡೆಕ್ಸಿಂಗ್ ಆಪ್ಷನ್ ಆಯ್ಕೆ ಮಾಡಿದ್ದರೆ ಅಂತಹ ಗ್ರೂಪುಗಳ ಲಿಂಕ್ ಗೂಗಲ್ನಲ್ಲಿ ಲಭ್ಯವಾಗಿದೆ. ಆ ಲಿಂಕ್ನ್ನು ಕ್ಲಿಕ್ಕಿಸುವ ಮೂಲಕ ಅಪರಿಚಿತರು ನಮ್ಮ ಖಾಸಗಿ ಗ್ರೂಪುಗಳಿಗೆ (ಉದಾಹರಣೆಗೆ ಫ್ಯಾಮಿಲಿ ಗ್ರೂಪ್, ಕ್ಲೋಸ್ ಫ್ರೆಂಡ್ಸ್ ಗ್ರೂಪು, ಇತ್ಯಾದಿ) ಸೇರಬಹುದಿತ್ತು. ನಂತರ ಗ್ರೂಪಿನ ಯಾವುದೇ ಸದಸ್ಯನ ಫೋನ್ ನಂಬರನ್ನು ಯಾವುದೇ ಸಮಸ್ಯೆಯಿಲ್ಲದೆಯೆ ತೆಗೆದುಕೊಳ್ಳಬಹುದಿತ್ತು.
ಈ ದೋಷದ ಕುರಿತು ವರದಿ ಪ್ರಕಟವಾಗುತ್ತಿದ್ದಂತೆ ವಾಟ್ಸ್ಆ್ಯಪ್ ಸ್ಪಂದಿಸಿದೆ. ನಮ್ಮಲ್ಲಿ ಡೀಪ್ ಸೆಕ್ಯುರಿಟಿ ಇರುವ ಚಾಟಿಂಗ್ ಗ್ರೂಪುಗಳಿಗೆ ನೊಇಂಡೆಕ್ಸ್ನ್ನು ಅಟಾಮೆಟಿಕ್ ಆಗಿ ಆಯ್ಕೆ ಮಾಡಿಕೊಡಲಾಗುತ್ತಿದೆ ಎಂದು ಹೇಳಿದೆ. ಆದ್ದರಿಂದ ಇಂತಹ ಯಾವುದೇ ಸಮಸ್ಯೆ ವಾಟ್ಸ್ಆ್ಯಪ್ನಲ್ಲಿ ಇಲ್ಲ ಎಂದೂ ಸಂಸ್ಥೆ ವಾದಿಸಿದೆ. ಇದಾದ ಕೆಲವೇ ಸಮಯದಲ್ಲಿ ದೋಷ ಸರಿಹೋಗಿದ್ದು, ವಾಟ್ಸ್ಆ್ಯಪ್ ಖಾಸಗಿ ಗ್ರೂಪುಗಳಿಗೆ ಸೇರುವ ಲಿಂಕ್ ಗೂಗಲ್ನಿಂದ ನಾಪತ್ತೆಯಾಗಿರುವುದಾಗಿ ತಿಳಿಸಲಾಗಿದೆ. ಆದರೆ ವಾಟ್ಸ್ಆ್ಯಪ್ ಸಂಸ್ಥೆ ದೋಷವನ್ನು ಸರಿಪಡಿಸಿಕೊಂಡಿರುವ ಕುರಿತಾಗಿ ಯಾವುದೇ ಮಾಹಿತಿ ನೀಡಿಲ್ಲ.
ಅಂದ ಹಾಗೆ ಇಂತಹ ದೋಷ ಕಂಡುಬರುತ್ತಿರುವುದು ಇದೇ ಮೊದಲಲ್ಲ. 2019ರಲ್ಲಿಯೂ ಒಮ್ಮೆ ಇಂತದ್ದೇ ತಾಂತ್ರಿಕ ದೋಷ ಉಂಟಾಗಿತ್ತು. ಈ ಕುರಿತು ವರದಿಗಳು ಪ್ರಕಟವಾದ ನಂತರ ಎಚ್ಚೆತ್ತುಕೊಂಡ ಸಂಸ್ಥೆ ದೋಷವನ್ನು ಸರಿಪಡಿಸಿಕೊಂಡಿತ್ತು. (ಏಜೆನ್ಸೀಸ್)