

ಬೆಂಗಳೂರು: ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಕಾರಣ ಕೇಳಿ ನೋಟಿಸ್ ನೀಡಿರುವುದಕ್ಕೆ ಬೇಸರವಿಲ್ಲ. ಬದಲಿಗೆ ಖುಷಿಯಾಗಿದ್ದು, ನನಗೆ ಆಗಿರುವ ತೊಂದರೆಗಳನ್ನು ಹೇಳಿಕೊಳ್ಳಲು ಅವಕಾಶ ದೊರೆತಿದೆ. ಪಕ್ಷದ ವರಿಷ್ಠರು ಏನೇ ತೀರ್ಮಾನ ಕೈಗೊಂಡರೂ ಸ್ವಾಗತಿಸುವೆ ಎಂದು ಮಾಜಿ ಸಚಿವ ಪಕ್ಷದ ರೆಬೆಲ್ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.
ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ವಕೀಲರ ಜತೆಗೆ ಶಿಸ್ತು ಸಮಿತಿ ವಿಧಿಸಿದ ಗಡುವಿನೊಳಗೆ ವಿವರವಾದ ಉತ್ತರ ನೀಡುವೆ. ಮುಂಬರುವ 2028ರ ವಿಧಾನಸಭೆ ಚುನಾವಣೆಗೆ ತಯಾರಿ ದೃಷ್ಟಿಯಿಂದ ವರಿಷ್ಠರು ಆದಷ್ಟು ಬೇಗ ನಿರ್ಧಾರ ಕೈಗೊಂಡರೆ ಅನುಕೂಲವಾಗುತ್ತದೆ ಎಂದರು.
ಪಕ್ಷದ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದ್ದನ್ನು ಮಾಧ್ಯಮದಲ್ಲಿ ಗಮನಿಸಿದೆ. ಬೇರೆ ಯಾರಿಗೋ ಕರೆ ಮಾಡಿ ನೋಟಿಸ್ ತರಿಸಿಕೊಂಡಿದ್ದೇನೆ. ಪಕ್ಷದಲ್ಲಿ ಬಡವರಿಗೊಂದು ಬಲಿಷ್ಠರಿಗೊಂದು ಎನ್ನುವ ತಾರತಮ್ಯ ಅನುಸರಿಸಲಾಗುತ್ತಿದೆ ಎಂದು ಎಸ್.ಟಿ.ಸೋಮಶೇಖರ್ ದೂರಿದರು.
ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರ ಅವರನ್ನು ರಾಷ್ಟ್ರೀಯ ನಾಯಕರು ನೇಮಕ ಮಾಡಿದರು. ಆದರೆ ಅವರ ವಿರುದ್ಧವೇ ಶಾಸಕ ಬಸನಗೌಡ ಯತ್ನಾಳ್ ಅತ್ಯಂತ ಕೆಳಮಟ್ಟಕ್ಕೆ ಹೋಗಿ ಟೀಕೆ, ಆರೋಪ ಮಾಡಿದರು. ನಾನು ಅದೇ ರೀತಿ ಯಾವುದೇ ನಾಯಕರ ವಿರುದ್ಧ ಮಾತನಾಡಿಲ್ಲ ಎಂದು ಸಮರ್ಥಿಸಿಕೊಂಡರು.
ನಾನು ಯತ್ನಾಳ್ ವಿರೋಧಿ, ವಿಜಯೇಂದ್ರ ಬಣವೆಂದಲ್ಲ. ಸಮಸ್ಯೆಗಳಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು ಎಂದು ಯತ್ನಾಳ್ ರಿಗೂ ಹೇಳಿದ್ದೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಪಕ್ಷದ ಸಂಘಟನೆಗೆ ಕುಂದು ತರುವಂತಹ ಬಹಿರಂಗ ಹೇಳಿಕೆಗಳನ್ನೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಹಗಲು ಹೊತ್ತು ಭೇಟಿ ಮಾಡಿ ಚರ್ಚಿಸಿದ್ದೇನೆ. ಕೆಲವರು ರಾತ್ರಿ ಹೋಗಿ ಡಿಸಿಎಂ ಅವರನ್ನು ಭೇಟಿ ಮಾಡಿದ್ದಿದೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ಶಾಸಕನಾಗಿ ಭಾಗವಹಿಸಿರುವೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನನ್ನನ್ನು ಸಭೆ, ಪ್ತಚಾರ ಕಾರ್ಯಕ್ರಮಗಳಿಗೆ ಕರೆಯಲಿಲ್ಲ. ಭಿತ್ತಿಪತ್ರಗಳಲ್ಲಿ ನನ್ನ ಭಾವಚಿತ್ರವನ್ನೂ ಬಳಸಿಕೊಳ್ಳಲಿಲ್ಲ ಎಂದರು.
ರಾಜ್ಯ ಸರ್ಕಾರವನ್ನು ಕಟ್ಟಿ ಹಾಕುವಂತಹ ಅನೇಕ ವಿಷಯಗಳಿದ್ದವು. ಆದರೆ ಅವುಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲಿಲ್ಲ. ಸಮರ್ಪಕ ಕಾರ್ಯನಿರ್ವಹಣೆ, ಸಮನ್ವಯದ ಕೊರತೆಯಿಂದ ಒಬ್ಬರು ಒಂದು ವಿಷಯ ಮಾತನಾಡುತ್ತಿದ್ದರೆ, ಮತ್ತೊಬ್ಬರು ಬೇರೊಂದು ವಿಷಯ ಎತ್ತಿದ್ದರು ಎಂಬ ಬೇಸರ ವ್ಯಕ್ತಪಡಿಸಿದರು.
ಗ್ರೇಟರ್ ಬೆಂಗಳೂರು ವಿಧೇಯಕದ ಬಗ್ಗೆ ಚರ್ಚೆ ಬದಲು ಸಭಾತ್ಯಾಗ ಮಾಡಿದರು. ಸದನದ ನಿರ್ಣಯದಂತೆ ಪರಿಶೀಲನಾ ಸಮಿತಿ ರಚನೆಯಾಗಿತ್ತು. ಎಲ್ಲ ಪಕ್ಷಗಳ ಸದಸ್ಯರಿದ್ದೆವು. ಸಮಿತಿ ಸಭೆಗಳಲ್ಲಿ ಚರ್ಚಿಸಿ ವರದಿ ಕೊಟ್ಟ ನಂತರವೇ ಸದನದಲ್ಲಿ ಮಂಡನೆಯಾಗಿದ್ದು, ಸಭಾತ್ಯಾಗದ ಬದಲು ಚರ್ಚೆ ಮಾಡಬೇಕಾಗಿತ್ತು ಎಂದರು.
ಹನಿಟ್ರ್ಯಾಪ್ ಪ್ರಕರಣದಲ್ಲಿ ಆಡಳಿತ ಪಕ್ಷದಿಂದ ಚೀಟಿ ಬಂತು ಸರಿಯಾಗಿ ಚರ್ಚಿಸಲಿಲ್ಲ. ಸಣ್ಣವರನ್ನು ಸ್ಪೀಕರ್ ಪೀಠ ಹತ್ತಿಸಿದರು, ಅವರು ಸಸ್ಪೆಂಡ್ ಆದರು. ಆದರೆ ಬಲಿಷ್ಠರು ಹಾಗೂ ದೊಡ್ಡವರು ಬಚಾವಾದರು ಎಂದು ಶಾಸಕ ಎಸ್.ಟಿ.ಸೋಮಶೇಖರ್ ಮಾರ್ಮಿಕವಾಗಿ ಹೇಳಿದರು.