ತಿರುವೋಣಂ ಬಂಪರ್​ ಬಹುಮಾನ ವಿಜೇತ ಕೊನೆಗೂ ಪತ್ತೆ: 25 ಕೋಟಿಯಲ್ಲಿ ಏನ್​ ಮಾಡ್ತಿರಾ? ಶರತ್​ ಉತ್ತರ ವೈರಲ್​... Prize Money

Prize Money
Published on

Prize Money : ತಿರುವೋಣಂ ಬಂಪರ್ ಲಾಟರಿಯ ಅದೃಷ್ಟಶಾಲಿ ವಿಜೇತರಾಗಿ ತುರಾವೂರಿನ ಮೂಲದ ಶರತ್ ಎಸ್. ನಾಯರ್ ಹೊರಹೊಮ್ಮಿದ್ದಾರೆ. ಶರತ್ ಅವರು ಖರೀದಿ ಮಾಡಿದ TH 577825 ನಂಬರಿನ ಲಾಟರಿ ಟಿಕೆಟ್​ನಿಂದಾಗಿ ಬರೋಬ್ಬರಿ 25 ಕೋಟಿ ರೂ.ಗಳನ್ನು ಗೆದ್ದಿದ್ದಾರೆ.

ಬಹುಮಾನದ ಹಣವನ್ನು ಏನು ಮಾಡಲಿದ್ದಾರೆ ಎಂಬುದನ್ನು ಶರತ್​ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ನನಗೆ ಈಗಾಗಲೇ ಒಂದು ಮನೆ ಇದೆ. ಆ ಮನೆ ಖರೀದಿ ಮಾಡಲು ಒಂದಿಷ್ಟು ಸಾಲ ಮಾಡಿದ್ದೇನೆ. ಮೊದಲು ನಾನು ಆ ಸಾಲಗಳನ್ನು ತೀರಿಸಬೇಕಾಗಿದೆ. ನಾನು ಈ ಹಿಂದೆಯೂ ಹಲವು ಬಾರಿ ಸಣ್ಣ ಮೊತ್ತಕ್ಕೆ ಲಾಟರಿ ಗೆದ್ದಿದ್ದೇನೆ. ಆದರೆ, ಬಂಪರ್ ಬಹುಮಾನ ಗೆದ್ದಿದ್ದು ಇದೇ ಮೊದಲು ಎಂದರು.

ನಾನು ನನ್ನ ಫೋನ್‌ನಲ್ಲಿ ಲಾಟರಿ ಟಿಕೆಟ್‌ನ ಚಿತ್ರವನ್ನು ತೆಗೆದುಕೊಂಡಿದ್ದೆ. ಫಲಿತಾಂಶಗಳು ಬಂದ ತಕ್ಷಣ, ನಾನು ಅದನ್ನು ನೋಡಿದೆ. ಮೊದಲಿಗೆ ನನಗೆ ಅದನ್ನು ನಂಬಲು ಸಾಧ್ಯವಾಗಲಿಲ್ಲ. ನಾನು ಅದನ್ನು ಎರಡು ಅಥವಾ ಮೂರು ಬಾರಿ ನೋಡಿದೆ. ಈ ವೇಳೆ ನಾನು ಅದನ್ನು ಯಾರಿಗೂ ತೋರಿಸಲಿಲ್ಲ ಎಂದು ಶರತ್​ ಹೇಳಿದ್ದಾರೆ.

ನನಗೆ ಮೊದಲಿಗೆ ಸಮಾಧಾನ ಆಗಲೇ ಇಲ್ಲ. ಹೀಗಾಗಿ ನಾನು ನನ್ನ ಹೆಂಡತಿಗೆ ಕರೆ ಮಾಡಿ, ಟಿಕೆಟ್ ಪರಿಶೀಲಿಸುವಂತೆ ಹೇಳಿದೆ. ಅದಾದ ನಂತರ ಏನೋ ಕೆಲಸ ಇದೆ ಎಂಬ ಕಾರಣಕ್ಕೆ ಸುಮ್ಮನಾದೆ. ಬಳಿಕ ಮನೆಗೆ ಹಿಂತಿರುಗಿ ಮತ್ತೊಮ್ಮೆ ಪರಿಶೀಲಿಸಿದೆ. ಈ ವೇಳೆ ನನ್ನ ತಂದೆ, ತಾಯಿ, ಸಹೋದರ, ಹೆಂಡತಿ ಮತ್ತು ಮಗು ಮನೆಯಲ್ಲೇ ಇದ್ದರು. ನಾನು ಲಾಟರಿ ಗೆದ್ದಿದ್ದೇನೆ ಎಂದು ತಿಳಿದಾಗ ಆ ಸಂತೋಷನ್ನು ಹೇಗೆ ವ್ಯಕ್ತಪಡಿಸಬೇಕೆಂಬುದೇ ನನಗೆ ಗೊತ್ತಾಗಲಿಲ್ಲ ಎಂದು ಶರತ್​ ಹೇಳಿದರು.

ಅಂದಹಾಗೆ, ಶನಿವಾರ (ಅ.04) ಡ್ರಾ ಮಾಡಿದ ರಾಜ್ಯ ಲಾಟರಿಯ ತಿರುಓಣಂ ಬಂಪರ್‌ನಲ್ಲಿ 25 ಕೋಟಿ ರೂ.ಗಳ ಮೊದಲ ಬಹುಮಾನವನ್ನು ಎರ್ನಾಕುಲಂನ ನೆಟ್ಟೂರಿನಲ್ಲಿ ಮಾರಾಟವಾದ ಟಿಕೆಟ್ ಗೆದ್ದಿದೆ ಎಂದು ತಿಳಿದಾಗಿನಿಂದ, ಮಾಧ್ಯಮಗಳು ಮತ್ತು ಸ್ಥಳೀಯ ನಿವಾಸಿಗಳು ಅದೃಷ್ಟಶಾಲಿ ವಿಜೇತರನ್ನು ಹುಡುಕುತ್ತಿದ್ದರು. ಟಿಕೆಟ್ ಮಾರಾಟ ಮಾಡಿದ ನೆಟ್ಟೂರಿನ ಏಜೆಂಟ್ ಲತೀಶ್, ನಿನ್ನೆ ನೆಟ್ಟೂರಿನ ಗೃಹಿಣಿಯೊಬ್ಬರು ಬಹುಮಾನವನ್ನು ಗೆದ್ದಿದ್ದಾರೆ ಮತ್ತು ಅವರು ಮಧ್ಯಾಹ್ನ 12 ಗಂಟೆಗೆ ಮಾಧ್ಯಮಗಳ ಮುಂದೆ ಇರುತ್ತಾರೆ ಎಂದು ಘೋಷಿಸಿದ್ದರು. ಇದಾದ ನಂತರ, ಮಾಧ್ಯಮದವರು ಮಧ್ಯಾಹ್ನ 12 ಗಂಟೆಯ ಮೊದಲು ಏಜೆನ್ಸಿಯಲ್ಲಿ ಮೊಕ್ಕಾಂ ಹೂಡಿದರು ಆದರೆ, ನಿರಾಶೆಯಿಂದ ಹಿಂತಿರುಗಿದರು. ಅಂತಿಮವಾಗಿ, ಇಂದು, ನಿಜವಾದ ಅದೃಷ್ಟಶಾಲಿ ವಿಜೇತರು ಪತ್ತೆಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net