ಬಾಹ್ಯಾಕಾಶ ನಿಲ್ದಾಣದತ್ತ ಪ್ರಯಾಣ ಆರಂಭಿಸೋ ಮುನ್ನ ಶುಕ್ಲಾ ತಮ್ಮ ಪಾಲಕರಿಗೆ ಹೇಳಿದ ಹೆಮ್ಮೆಯ ಮಾತಿದು..! Shubhanshu Shukla

Shubhanshu Shukla
Published on

Shubhanshu Shukla : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ತಮ್ಮ ಚೊಚ್ಚಲ ಪ್ರಯಾಣ ಬೆಳೆಸಿದ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ತಮ್ಮ ಐತಿಹಾಸಿಕ ಪ್ರಯಾಣಕ್ಕೆ ಕೆಲವು ಗಂಟೆಗಳ ಮೊದಲು ತಮ್ಮ ಕುಟುಂಬದೊಂದಿಗೆ ಮಾತನಾಡಿ, ನನಗಾಗಿ ಕಾಯಿರಿ, ನಾನು ಹೋಗಿ ಬರುತ್ತೇನೆ ಎಂಬ ಸಂದೇಶವನ್ನು ಹಂಚಿಕೊಂಡರು ಎಂದು ವರದಿಯಾಗಿದೆ.

ರಾಕೆಟ್​ ಉಡಾವಣೆಗೂ ಮುನ್ನ ಇಂದು ಮುಂಜಾನೆ, ಶುಭಾಂಶು ಶುಕ್ಲಾ ಅವರ ತಾಯಿ ಭಾರತೀಯ ಸಂಪ್ರದಾಯದಂತೆ ಕೆಲ ಪೂಜೆಗಳನ್ನು ಮಾಡಿದರು. ವಿಡಿಯೋ ಕರೆ ಮೂಲಕ ವಾಸ್ತವಿಕವಾಗಿ ಮೊಸರು ಮತ್ತು ಸಕ್ಕರೆಯ ಮಿಶ್ರಣವಾದ ದಹಿ ಚೀನಿಯನ್ನು ಶುಕ್ಲಾ ಅವರಿಗೆ ತಿನ್ನಿಸಿದರು. ಯಾವುದೇ ಪ್ರಮುಖ ಕೆಲಸವನ್ನು ಕೈಗೊಳ್ಳುವ ಮೊದಲು, ಇದನ್ನು ಸವಿದರೆ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಇದನ್ನು ಅನೇಕ ಭಾರತೀಯ ಮನೆಗಳು ಆಚರಿಸುತ್ತಾರೆ. ಹೋಗಿ ಎಲ್ಲ ಕಾರ್ಯಗಳನ್ನು ಯಶಸ್ವಿಯಾಗಿ ಮುಗಿಸಿ ಬರುವಂತೆ ನಾನು ಆತನಿಗೆ ಹೇಳಿದ್ದೇವೆ. ನಾವಿಬ್ಬರು ಮತ್ತೆ ಭೇಟಿಯಾಗುತ್ತೇವೆ ಎಂದು ಶುಕ್ಲಾ ಅವರ ತಾಯಿ ಎನ್​ಡಿಟಿವಿಗೆ ತಿಳಿಸಿದ್ದಾರೆ.

ಇದು ಆನಂದದ ಕಣ್ಣೀರು. ಬಹುಶಃ ಆತ ತುಂಬಾ ದೂರ ಹೋಗುತ್ತಿರುವುದರಿಂದ ಎಂದು ಶುಕ್ಲಾ ಅವರ ಸಹೋದರಿ ಇದೇ ಸಂದರ್ಭದಲ್ಲಿ ಹೇಳಿದರು. ನಾವು ಎಷ್ಟು ಉತ್ಸುಕರಾಗಿದ್ದೇವೆ ಎಂದರೆ, ಅದನ್ನು ಅಳತೆ ಸಹ ಮಾಡಲಾಗುವುದಿಲ್ಲ. ನಮಗೆ ಸಂತೋಷದ ಜೊತೆಗೆ ಹೆಮ್ಮೆ ಇದೆ ಎಂದರು.

ಇನ್ನು ಮಿಷನ್‌ಗೆ ಹೊರಡುವ ಮೊದಲು, ಶುಕ್ಲಾ ಅವರು ಸಿದ್ಧರಾಗುತ್ತಿದ್ದಾಗ, ನಮ್ಮೊಂದಿಗೆ ಮಾತನಾಡಿದರು. ಅವರು ನಗುತ್ತಿದ್ದರು ಮತ್ತು ಸಂತೋಷವಾಗಿದ್ದರು. ಈ ಒಂದು ಕ್ಷಣಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೆ ಎಂದು ಹೇಳಿದರು ಅಂತ ಶುಕ್ಲಾ ಅವರ ತಾಯಿ ಹಾಗೂ ಸಹೋದರಿ ಎನ್​ಡಿಟಿವಿಗೆ ತಿಳಿಸಿದ್ದಾರೆ.

ಅಂದಹಾಗೆ, ಇಡೀ ಭಾರತವನ್ನು ಪ್ರತಿನಿಧಿಸಿರುವ ಹೆಮ್ಮೆಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸುಮಾರು 40 ವರ್ಷಗಳ ಬಳಿಕ ಭಾರತ ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಿದೆ. 1984ರಲ್ಲಿ ಸೋವಿಯತ್ ಕಾರ್ಯಾಚರಣೆಯ ಭಾಗವಾಗಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶ ಪ್ರಯಾಣ ಮಾಡಿದ ನಾಲ್ಕು ದಶಕಗಳ ನಂತರ, ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಭಾರತದ ಎರಡನೇ ಗಗನಯಾತ್ರಿ ಆಗಿದ್ದಾರೆ.

ಆಕ್ಸಿಯಮ್ ಮಿಷನ್ 4

ಅಮೆರಿಕದ ಆಕ್ಸಿಯಮ್​-4 ಮಿಷನ್​ ಅಡಿ ಭಾರತದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಫಾಲ್ಕನ್ -9 ರಾಕೆಟ್​ ಉಡಾವಣೆ ಯಶಸ್ವಿಯಾಗಿದ್ದು, ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್​ಎಸ್​)ದತ್ತ ಪ್ರಯಾಣ ಬೆಳೆಸಿದೆ. ಫಾಲ್ಕನ್-9 ರಾಕೆಟ್‌ನಲ್ಲಿರುವ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39A ನಿಂದ ಮಧ್ಯಾಹ್ನ 12.01 ಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿತು. ನಾಳೆ (ಜೂನ್​ 06) ಸಂಜೆ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕಿಂಗ್​ ಆಗಲಿದೆ. 1969 ರಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ ಅಪೊಲೊ 11ರಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಿದ್ದು ಕೂಡ ಇದೇ ಸ್ಥಳದಿಂದ. ಹೀಗಾಗಿ ಈ ಮಿಷನ್​ ತುಂಬಾ ವಿಶೇಷ ಎನಿಸಿಕೊಂಡಿದೆ.

ಈ ಮಿಷನ್​ನಲ್ಲಿ ಗ್ರೂಪ್ ಕ್ಯಾಪ್ಟನ್ ಶುಕ್ಲಾ ಮಾತ್ರವಲ್ಲದೆ, ಮಿಷನ್ ತಜ್ಞರಾದ ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಮತ್ತು ಅಮೆರಿಕದ ಕಮಾಂಡರ್ ಪೆಗ್ಗಿ ವಿಟ್ಸನ್ ಬಾಹ್ಯಾಕಾಶ ನೌಕೆಯಲ್ಲಿದ್ದಾರೆ. ಆಕ್ಸಿಯಮ್ -4 ಮಿಷನ್‌ನ ನಾಲ್ಕು ಸದಸ್ಯರ ತಂಡವು ಹದಿನೈದು ದಿನಗಳ ಕಾಲ ನಡೆಯುವ ಕಾರ್ಯಾಚರಣೆಯಲ್ಲಿ 60 ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದ್ದು, ಅವುಗಳಲ್ಲಿ ಏಳು ಪ್ರಯೋಗಗಳನ್ನು ಭಾರತೀಯ ಸಂಶೋಧಕರು ಪ್ರಸ್ತಾಪಿಸಿದ್ದಾರೆ.

ಯಾರು ಈ ಶುಭಾಂಶು ಶುಕ್ಲಾ?

ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ತರಬೇತಿ ಪಡೆದ ವಾಯುಪಡೆಯ ಪೈಲಟ್. ಅವರನ್ನು ಇಸ್ರೋದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮದ (HSP) ಅಡಿಯಲ್ಲಿ ಆಯ್ಕೆ ಮಾಡಲಾಯಿತು. ಅವರು ಭಾರತದ ಮೊದಲ ಸ್ಥಳೀಯವಾಗಿ ಮಾನವಸಹಿತ ಗಗನಯಾನ ಕಾರ್ಯಾಚರಣೆಗೆ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರು. 2006ರಲ್ಲಿ ಭಾರತೀಯ ವಾಯುಪಡೆಗೆ ಫೈಟರ್ ಪೈಲಟ್ ಆಗಿ ಸೇರಿದರು. ಸುಖೋಯ್-30 MKI, MiG-21, MiG-29, ಜಾಗ್ವಾರ್, ಹಾಕ್, ಡಾರ್ನಿಯರ್ ಮತ್ತು An-32 ನಂತಹ ವಿಮಾನಗಳನ್ನು ಹಾರಿಸಿದ್ದಾರೆ. ಆಗಸದಲ್ಲಿ 2,000 ಗಂಟೆಗಳಿಗೂ ಹೆಚ್ಚು ಕಾಲ ಹಾರಾಡಿದ ಅನುಭವವನ್ನು ಹೊಂದಿದ್ದಾರೆ. 1999ರ ಕಾರ್ಗಿಲ್ ಯುದ್ಧದಿಂದ ಪ್ರೇರಿತರಾಗಿ ಶುಕ್ಲಾ ಸೈನ್ಯಕ್ಕೆ ಸೇರಿದರು.

2006, ಜೂನ್ ತಿಂಗಳಲ್ಲಿ ಐಎಎಫ್ ಫೈಟರ್ ವಿಂಗ್ ಸೇರುವ ಮೂಲಕ ಶುಕ್ಲಾ ಅವರ ಪ್ರಯಾಣ ಪ್ರಾರಂಭವಾಯಿತು. 2024, ಮಾರ್ಚ್ ತಿಂಗಳಲ್ಲಿ ಅವರಿಗೆ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಲಾಯಿತು. 2019ರಲ್ಲಿ ಶುಕ್ಲಾ ಅವರಿಗೆ ಇಸ್ರೋದಿಂದ ಕರೆ ಬಂತು. ರಷ್ಯಾದ ಮಾಸ್ಕೋದ ಸ್ಟಾರ್ ಸಿಟಿಯಲ್ಲಿರುವ ಯೂರಿ ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ಶುಕ್ಲಾ ಕಠಿಣ ತರಬೇತಿಯನ್ನು ಪಡೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net