

ಕೃಷಿ
2024ರಲ್ಲಿ 2.58 ಶತಕೋಟಿ ಡಾಲರ್ ಮೌಲ್ಯದ ಮೀನು, ಮಾಂಸ, ಸಂಸ್ಕರಿತ ಸಮುದ್ರಾಹಾರವನ್ನು ಅಮೆರಿಕಕ್ಕೆ ರಫ್ತು ಮಾಡಲಾಗಿತ್ತು. ಈಗ ಅದರ ಮೇಲೆ ಏಕಾಏಕಿ ಶೇ. 27.83ರಷ್ಟು ಸುಂಕದ ವ್ಯತ್ಯಾಸ ಆಗಲಿದೆ. ಒಟ್ಟು ಸೀಗಡಿ ರಫ್ತಿನ ಶೇ. 40 ಭಾಗ ಅಮೆರಿಕಕ್ಕೆ ಹೋಗುತ್ತಿದೆ. ಅದು ಇನ್ನು ಮುಂದೆ ಸ್ಪರ್ಧಾತ್ಮಕತೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. 1.03 ಶತಕೋಟಿ ಡಾಲರ್ನಷ್ಟಿರುವ ಅಕ್ಕಿ, ಸಕ್ಕರೆ, ಕೊಕೊ ರಫ್ತಿನ ಮೇಲೆ ಶೇ. 24.99ರಷ್ಟು ಹೆಚ್ಚಿನ ಸುಂಕದ ಒತ್ತಡ ಬೀಳಲಿದೆ. ಆದರೆ, ವಿಯೆಟ್ನಾಂ, ಥಾಯ್ಲೆಂಡ್ಗಿಂತ ಕಡಿಮೆ ಸುಂಕದಿಂದಾಗಿ ಭಾರತಕ್ಕೆ ಕೆಲವು ಪ್ರಯೋಜನಗಳೂ ಆಗಬಹುದು. ಆದರೂ ರಫ್ತು ಪ್ರಮಾಣ ಕಡಿಮೆಯಾಗಿ ರೈತರ ಜೀವನೋಪಾಯಕ್ಕೆ ಧಕ್ಕೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಮಾಹಿತಿ ತಂತ್ರಜ್ಞಾನ
ಐಟಿ ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳಿಗೆ ಪ್ರಸ್ತುತ ಸುಂಕ ಇಲ್ಲ. ಆದರೆ ಡಾಲರ್ ಎದುರು ರೂಪಾಯಿ ಬೆಲೆ ಕುಸಿತ ಮತ್ತು ವ್ಯಾಪಾರ ಒತ್ತಡದಿಂದ ಟಿಸಿಎಸ್, ಇನ್ಪೋಸಿಸ್ನಂತಹ ಕಂಪನಿಗಳ ಮೇಲೆ ಪರೋಕ್ಷವಾಗಿ ಈ ಸುಂಕದಿಂದ ಪರಿಣಾಮವಾಗಲಿದೆ.
ಎಲೆಕ್ಟ್ರಾನಿಕ್ಸ್
ಸ್ಮಾರ್ಟ್ಫೋನ್ ಮತ್ತಿತರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಒಟ್ಟು ರಫ್ತಿನಲ್ಲಿ ಅಮೆರಿಕಕ್ಕೆ ಹೋಗುತ್ತಿರುವುದರ ಪಾಲು ಶೇ. 50ರಷ್ಟಿದೆ. ಶೇ. 25ರಷ್ಟು ಸುಂಕದಿಂದ ಅಮೆರಿಕದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಭಾರತದಿಂದ ರಫ್ತಿನ ಪ್ರಮಾಣ ಕಡಿಮೆಯಾಗಲಿದೆ. ಇದಲ್ಲದೆ, ಆತ್ಮನಿರ್ಭರ ಕ್ರಮಗಳಿಗೆ ಭಾರತ ಹೆಚ್ಚಿನ ಒತ್ತು ನೀಡುವ ಪರಿಸ್ಥಿತಿ ಉದ್ಭವಿಸಬಹುದು. ವಿಯೆಟ್ನಾಂಗಿಂತಲೂ ಸ್ಪರ್ಧಾತ್ಮಕತೆ ಕಡಿಮೆಯಾಗಿ ಫಾಕ್ಸ್ಕಾನ್ನಂತಹ ಕಂಪನಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ.
ಆಟೋಮೊಬೈಲ್, ಬಿಡಿಭಾಗ
ಆಟೋಮೊಬೈಲ್ ಬಿಡಿಭಾಗಗಳ ಒಟ್ಟು ರಫ್ತಿನಲ್ಲಿ ಅಮೆರಿಕಕ್ಕೆ ಹೋಗುತ್ತಿರುವ ಪಾಲು ಶೇ. 27ರಷ್ಟಿದ್ದು, ಮೌಲ್ಯ 21 ಶತಕೋಟಿ ಡಾಲರ್ನಷ್ಟಿದೆ. ಈ ಉದ್ಯಮದ ಮೇಲೆ ಶೇ. 25 ಸುಂಕ ಜಾರಿಯಾದರೆ ಕಾರು, ಆಟೋಮೊಬೈಲ್ ಬಿಡಿಭಾಗ ಉದ್ಯಮಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಲಿದೆ. ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಕಡಿಮೆಯಾಗಿ ಆದಾಯ ಕುಂಠಿತವಾಗಲಿದೆ. ಸರಬರಾಜು ಸರಪಳಿಗೂ ತೊಂದರೆಯಾಗಬಹುದು.
ರತ್ನ- ಆಭರಣ
ಅಮೆರಿಕಕ್ಕೆ ಭಾರತದಿಂದ ರತ್ನ ಮತ್ತು ಆಭರಣ ರಫ್ತಿನ ಪ್ರಮಾಣ 8.5 ಶತಕೋಟಿ ಡಾಲರ್ನಷ್ಟಿದೆ. ಹೊಸ ಸುಂಕದಿಂದ ಮಾರುಕಟ್ಟೆ ಪಾಲು ಕಳೆದುಕೊಳ್ಳುವ ಭೀತಿ ಈ ಉದ್ಯಮಕ್ಕೆ ಎದುರಾಗಿದೆ. ಆದರೆ ಚೀನಾಕ್ಕೆ ಅಮೆರಿಕ ಶೇ. 54ರಷ್ಟು ಸುಂಕ ವಿಧಿಸಿರುವುದರಿಂದ ಭಾರತಕ್ಕೆ ಕೆಲವು ಪ್ರಯೋಜನಗಳಿವೆ. ಒಟ್ಟಾರೆ ಉದ್ಯಮದ ಆದಾಯ, ಉದ್ಯೋಗಾವಕಾಶ ಕಡಿಮೆ ಯಾಗುವ ಸಾಧ್ಯತೆ ಇದೆ.
ಜವಳಿ, ಸಿದ್ಧ ಉಡುಪು
ಅಮೆರಿಕಕ್ಕೆ ಭಾರತದ ವಸ್ತ್ರೋದ್ಯಮ ರಫ್ತು ಪ್ರಮಾಣ 9.6 ಶತಕೋಟಿ ಡಾಲರ್ನಷ್ಟಿದ್ದು ಶೇ. 25ರ ಸುಂಕದಿಂದ ಸ್ಪರ್ಧಾತ್ಮಕತೆ ಕಡಿಮೆಯಾಗಲಿದೆ. ಆದರೆ, ಬಾಂಗ್ಲಾದೇಶ (ಶೇ. 37), ವಿಯೆಟ್ನಾಂ (ಶೇ. 46), ಚೀನಾ (ಶೇ. 54) ದೇಶಗಳಿಗಿಂತ ಕಡಿಮೆ ಸುಂಕ ಭಾರತಕ್ಕೆ ಇರುವ ಕಾರಣ, ಭಾರತಕ್ಕೆ ಮಾರುಕಟ್ಟೆ ಪಾಲು ಉಳಿಸಿಕೊಳ್ಳುವ ಅವಕಾಶವಿದೆ. ಆದರೆ ಕಡಿಮೆ ಆರ್ಡರ್ಗಳು, ಕಡಿಮೆ ಲಾಭದಿಂದಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಮಸ್ಯೆ ಆಗುವ ಸಾಧ್ಯತೆ ಇದೆ.
ಪೆಟ್ರೋಕೆಮಿಕಲ್ಸ್, ರಾಸಾಯನಿಕ
ಅಮೆರಿಕಕ್ಕೆ ಭಾರತದಿಂದ ಪೆಟ್ರೋಕೆಮಿಕಲ್ಸ್ ರಫ್ತು ಪ್ರಮಾಣ 4 ಶತಕೋಟಿ ಡಾಲರ್ನಷ್ಟಿದೆ. ಟ್ರ್ರಪ್ ಸುಂಕದಿಂದ ರಫ್ತು ವೆಚ್ಚ ಹೆಚ್ಚಾಗಲಿದೆ. ತೈಲ ಮತ್ತು ಅನಿಲಕ್ಕೆ ವಿನಾಯಿತಿ ಇರುವುದರಿಂದ ಸ್ವಲ್ಪಮಟ್ಟಿನ ರಕ್ಷಣೆ ಇದೆ.
ಉಕ್ಕು, ಅಲ್ಯೂಮಿನಿಯಂ
1-5 ಶತಕೋಟಿ ಡಾಲರ್ ಮೌಲ್ಯದ ರಫ್ತಿನ ಪ್ರಮಾಣವುಳ್ಳ ಉಕ್ಕು ಮತ್ತು ಅಲ್ಯೂಮಿನಿಯಂ ಕ್ಷೇತ್ರದ ಮೇಲೆ ಮಾರ್ಚ್ 12ರಿಂದಲೇ ಶೇ. 25ರಷ್ಟು ಸುಂಕ ಜಾರಿಯಾಗಿದೆ. ಈ ಕ್ಷೇತ್ರದ ಮೇಲೆ ಮತ್ತೆ ಶೇ. 25ರಷ್ಟು ಸುಂಕ ಜಾರಿಯಾಗುತ್ತದೆಯೋ ಅಥವಾ ಈಗಿರುವ ಸುಂಕವನ್ನೇ ಉಳಿಸಿಕೊಳ್ಳಲಾಗುತ್ತದೆಯೋ ಎಂಬುದು ಇನ್ನೂ ಖಚಿತವಾಗಿಲ್ಲ. ಹೆಚ್ಚಿನ ಸುಂಕ ಅನ್ವಯವಾದರೆ ಖಾಸಗಿ ಉಕ್ಕು ಕಂಪನಿಗಳ ರಫ್ತು ಈಗಿರುವುದಕ್ಕಿಂತಲೂ ಕಡಿಮೆಯಾಗಲಿದೆ. ಆದರೆ, ದೇಶೀಯ ಬಳಕೆಯೇ ಜಾಸ್ತಿ ಇರುವುದರಿಂದ ಈ ಉದ್ಯಮದ ಮೇಲೆ ಆಗುವ ಪರಿಣಾಮ ಕಡಿಮೆ.