

DMK: ಭ್ರಷ್ಟಾಚಾರದಲ್ಲಿ ಸಿಲುಕಿದವರನ್ನು ಬಿಜೆಪಿ ಎಂಬ ವಾಷಿಂಗ್ ಮಿಷನ್ನಲ್ಲಿ ಹಾಕಿ ಶುದ್ಧ ಮಾಡಿ, ಅವರಿಗೆ ಪದವಿ ನೀಡಿ ಅದರ ಸೌಂದರ್ಯವನ್ನು ನೋಡುವವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವ ಹಕ್ಕಿದೆ? ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಡಿಎಂಕೆ ನಾಯಕ ಮತ್ತು ಸಂಸದ ಎ.ರಾಜ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಿಎಂ, ಸಿಎಂ ಪದಚ್ಯುತಗೊಳಿಸುವ ಮಸೂದೆಯ 130ನೇ ತಿದ್ದುಪಡಿಯನ್ನು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಟೀಕಿಸಿದ್ದು, ಅದೊಂದು ಕಪ್ಪು ಮಸೂದೆ ಎಂದು ಕರೆದಿದ್ದರು. ಇದಕ್ಕೆ ನಿನ್ನೆ ತಮಿಳುನಾಡಿನಲ್ಲಿ ತಿರುಗೇಟು ನೀಡಿದ್ದ ಅಮಿತ್ ಶಾ, ಅವರು ಕಪ್ಪು ಮಸೂದೆ ಎಂದು ಕರೆಯುತ್ತಾರೆ. ಆದರೆ ಆ ರೀತಿ ಹೇಳಲು ಅವರಿಗೆ ನೈತಿಕ ಹಕ್ಕಿಲ್ಲ ಎಂದಿದ್ದರು.
ಈ ಕುರಿತು ಇಂದು ಮಾತನಾಡಿರುವ ಎ.ರಾಜ, ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದಲ್ಲಿ ಜೈಲಿನಲ್ಲಿದ್ದವರೆಲ್ಲಾ ಈ ಕಾನೂನು ತರಲು ಅರ್ಹರಲ್ಲ. ಮೋದಿ ಸಂಪುಟದಲ್ಲಿ 28 ಸಚಿವರ ವಿರುದ್ಧ ಪ್ರಕರಣಗಳಿವೆ. ಈ ಪೈಕಿ 19 ಸಚಿವರ ಮೇಲೆ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ. ಮೋದಿ ಸಂಪುಟದ ಶೇ. 39 ರಷ್ಟು ಸದಸ್ಯರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಕಾನೂನಿನ ಸೆಕ್ಷನ್ 130 ಅವರೆಲ್ಲರಿಗೂ ಅನ್ವಯಿಸುತ್ತದೆಯೇ?, ತಮಗೆ ಇಷ್ಟವಿಲ್ಲದವರನ್ನು ಅಧಿಕಾರದಿಂದ ಹೊರಹಾಕಲು ತಂದ ಕಾನೂನನ್ನು ಅವರು 'ಕಪ್ಪು ಕಾನೂನು' ಅನ್ನದೇ ಏನೆಂದು ಕರೆಯಬೇಕು? ಅದು ಒಳ್ಳೆಯ ಕಾನೂನು ಆಗಿದ್ದರೆ, ಬಿಜೆಪಿಗೆ ಏಕೆ ಅನ್ವಯಿಸುವುದಿಲ್ಲ? ಎಂದು ಕಿಡಿಕಾರಿದ್ದಾರೆ.
ವಿರೋಧ ಪಕ್ಷಗಳು ಆಳುವ ರಾಜ್ಯಗಳಲ್ಲಿ ಅವ್ಯವಸ್ಥೆ ಸೃಷ್ಟಿಸಲು ಬಿಜೆಪಿ ಇಡಿಯನ್ನು ಹೇಗೆ ಬಳಸುತ್ತದೆ ಎಂದು ದೇಶದ ಜನರಿಗೆ ಗೊತ್ತಿದೆ. ತಾನು ಸೋಲಿಸಲು ಸಾಧ್ಯವಾಗದ ಮತ್ತು ಬೆದರಿಸಲಾಗದ ರಾಜ್ಯ ಸರ್ಕಾರಗಳನ್ನು ತೆಗೆಯಲು 130ನೇ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದೆ. ಸಿಎಂ ಎಂ.ಕೆ.ಸ್ಟಾಲಿನ್ ಅವರ ಧ್ವನಿ ಅಮಿತ್ ಶಾ ಅವರನ್ನು ಬೆಚ್ಚಿ ಬೀಳಿಸಿದೆ. ಅದಕ್ಕಾಗಿ ತಮಿಳುನಾಡಿಗೆ ಓಡಿ ಬಂದು ಮಾತನಾಡಿದ್ದಾರೆ. ಅವರ ಅಸಂಬದ್ಧ ಮಾತುಗಳಿಗೆ ಹೆದರಲು ಇದು ಎಡಪ್ಪಾಡಿ ಪಳನಿಸ್ವಾಮಿ ಸರ್ಕಾರವಲ್ಲ. ತಮಿಳುನಾಡಿನ ನೆಲ, ಜಲ, ಭಾಷೆ ಹಾಗೂ ಗೌರವವನ್ನು ರಕ್ಷಿಸುತ್ತಿರುವ ಸರ್ಕಾರ ಎಂದು ತಿರುಗೇಟು ನೀಡಿದ್ದಾರೆ.
ತಿರುನಲ್ವೇಲಿ ಬಿಜೆಪಿ ಬೂತ್ ಸಮಿತಿ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿದ್ದ ಶಾ ದೆಹಲಿಯಿಂದ ಏನನ್ನೂ ತಂದಿಲ್ಲ. ಎಂದಿನಂತೆ ಅದೇ ಹಳೆಯ ಹಿಟ್ಟನ್ನು ಪುಡಿಮಾಡಿದ್ದಾರೆ. ದ್ರಾವಿಡ ಮಾದರಿ ಸರ್ಕಾರವನ್ನು ಟೀಕಿಸಲು ಏನೂ ಸಿಗದೆ, ಅವರು ಈಗಾಗಲೇ ಹುದುಗಿಸಿರುವ ಸುಳ್ಳುಗಳನ್ನು ಹೇಳಿದ್ದಾರೆ, ಮುಂದಿನ ಚುನಾವಣೆಯಲ್ಲಿ, ಡಿಎಂಕೆಯನ್ನು ಬೇರುಸಹಿತ ಕಿತ್ತುಹಾಕಬೇಕು ಎಂದಿದ್ದಾರೆ. ಆದರೆ ಫ್ಯಾಸಿಸ್ಟ್ ಬಿಜೆಪಿ ಒಂದು ವಿಷಕಾರಿ ಸಸ್ಯವಾಗಿದ್ದು, ಅದನ್ನು ಭಾರತದಿಂದಲೇ ಕಿತ್ತುಹಾಕಬೇಕು. ಇಂಡಿಯಾ ಕೂಟ ಮತ್ತು ಜನ ಅದನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)