

ನವದೆಹಲಿ: ವರ್ಷದ ಮೊದಲ ಮನ್ ಕಿ ಬಾತ್ ಬಾನೂಲಿ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ಮೋದಿ ನಿನ್ನೆ (ಭಾನುವಾರ) ಮಾತನಾಡಿದರು. ಈ ವೇಳೆ ವಿಶೇಷವಾಗಿ ಮಹಿಳಾ ಸಬಲೀಕರಣದ ಬಗ್ಗೆ ಪ್ರಧಾನಿ ಮಾತನಾಡಿದ್ದನ್ನು ಉಲ್ಲೇಖಿಸಿ "ಸಮಾಜದಲ್ಲಿ ಮಹಿಳೆಯರ ಭಾಗವಹಿಸುವಿಕೆ ಎಲ್ಲಾ ವಿಭಾಗಗಳಲ್ಲೂ ಹೆಚ್ಚುತ್ತಿದೆ" ಎಂದು ಬಾಲಿವುಡ್ ನಟಿ ಕರೀನಾ ಕಪೂರ್ ಸಂತಸ ವ್ಯಕ್ತಪಡಿಸಿದ್ದಾರೆ.
ಮನ್ ಕಿ ಬಾತ್ 73ನೇ ಆವೃತ್ತಿ ಮತ್ತು ಹೊಸ ವರ್ಷದ ಮೊದಲ ಬಾನೂಲಿ ಕಾರ್ಯಕ್ರಮ ಭಾನುವಾರ (ಜ.31) ನಡೆಯಿತು. ಈ ವೇಳೆ ಪ್ರಧಾನಿ ಮೋದಿ ದೇಶದ ಅನೇಕ ವಿಚಾರಗಳನ್ನು ಜನರ ಮುಂದಿಟ್ಟರು. ವಿಶೇಷವಾಗಿ ಮಹಿಳೆಯರ ಬಗ್ಗೆ ಮಾತನಾಡಿದ ಪ್ರಧಾನಿ, ಇಂದು ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ಹೆಚ್ಚಾಗಿ ಭಾಗವಹಿಸುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿ, ಉದಾಹರಣೆ ಸಹ ನೀಡಿದರು.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಕರೀನಾ ಕಪೂರ್, ತಡೆರಹಿತ ವಾಣಿಜ್ಯ ವಿಮಾನಗಳನ್ನು ಹಾರಿಸುವುದರಿಂದ ಹಿಡಿದು ಗಣರಾಜ್ಯೋತ್ಸವದ ಮೆರವಣಿಗೆವರೆಗೆ ಮಹಿಳಾ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ. ದೇಶದ ಮಗಳಿಂದು ರಾಷ್ಟ್ರ ನಿರ್ಮಾಣ ಚಟುವಟಿಕೆಯಲ್ಲಿ ಭಯ ಮುಕ್ತ, ಧೈರ್ಯಶಾಲಿ ಮತ್ತು ಸಮಾನವಾಗಿ ಭಾಗವಹಿಸುತ್ತಿದ್ದಾಳೆ ಎಂದು ತಿಳಿಸಿದ್ದಾರೆ. ಜತೆಯಲ್ಲಿ #WomenSupportingWomen #MannKiBaat #PMOINDIA ಹ್ಯಾಷ್ಟ್ಯಾಗ್ ನೀಡಿದ್ದಾರೆ.
ನಿನ್ನೆ ಮನ್ ಕಿ ಬಾತ್ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಕೆಲವು ದಿನಗಳ ಹಿಂದೆ ನಮ್ಮ ನಾಲ್ವರು ಭಾರತೀಯ ಮಹಿಳಾ ಪೈಲಟ್ಗಳು ಅಮೆರಿಕದ ಸ್ಯಾನ್ ಫ್ರ್ಯಾನ್ಸಿಸ್ಕೋದಿಂದ ಬೆಂಗಳೂರಿಗೆ ನೇರವಾಗಿ ವಿಮಾನ ಚಲಾಯಿಸಿದರು. 225 ಜನರನ್ನು ಹೊತ್ತ ವಿಮಾನವೂ 10 ಸಾವಿರ ಕಿ.ಮೀ ಪ್ರಯಾಣ ಮಾಡಿದೆ. ಯಾವುದೇ ಕ್ಷೇತ್ರವಾಗಲಿ, ರಾಷ್ಟ್ರದ ಮಹಿಳೆಯರ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. (ಏಜೆನ್ಸೀಸ್)