

ಮಾನವತೆಯ ಮೂಲವನ್ನು ಎತ್ತಿ ತೋರಿಸುವುದೇ ಶೀಲ ಎಂಬುದು ವಿಶಾಲಾರ್ಥ. ಶೀಲದಿಂದ ಆತ್ಮವಿಶ್ವಾಸ, ಕಷ್ಟ ಸಹಿಷ್ಣುತೆ, ಸುಸ್ವಭಾವ ಮೊದಲಾದ ಸದ್ಗುಣಗಳು ಉಂಟಾಗುತ್ತವೆ. ಜ್ಞಾನನಿಧಿ ಚನ್ನಬಸವಣ್ಣ ನವರು ಶೀಲ ವಿಚಾರವಾಗಿ ತಮ್ಮ ವಚನದಲ್ಲಿ ಹೀಗೆ ತಿಳಿಸಿದ್ದಾರೆ:
ಶೀಲ ಶೀಲವೆಂದು ಗರ್ವಿಸಿ ನುಡಿಯುತ್ತಿಪ್ಪಿರಿ/ ಶೀಲವಾವುದೆಂದು ಅರಿಯಿರಿ,
ಕೇಳಿರಣ್ಣ/ ಇದ್ದುದ ವಂಚನೆ ಮಾಡದಿಪ್ಪುದೇ ಶೀಲ/ಇಲ್ಲದುದ ಕಡವ ಮಾಡದಿಪ್ಪುದೇ ಶೀಲ/ಪರಧನ ಪರಸ್ತ್ರೀ ಮುಟ್ಟದಿಪ್ಪುದೇ ಶೀಲ/ಪರದೈವ ಪರಸಮಯಕ್ಕೆ ಆಳುಪದಿಪ್ಪುದೇ ಶೀಲ/ಗುರುನಿಂದೆ ಹರನಿಂದೆ ಕೇಳದಿಪ್ಪುದೇ ಶೀಲ/ನಮ್ಮ ಕೂಡಲಸಂಗನ ಶರಣರ ಬರವಿಂಗೆ ಪ್ರಿಯಂತುದೇ ಅಚ್ಚ ಶೀಲ.. ಇದ್ದುದಕ್ಕೆ ವಂಚನೆ ಮಾಡದೆ ಸಂಕುಚಿತ ಭಾವನೆ ಬಿಡಬೇಕು. ತನ್ನಂತೆ ಪರರ ಬಗೆಯಬೇಕು, ಅದು ಶೀಲ. ತನ್ನಲ್ಲಿ ಪರರನ್ನು ಕಾಣಬೇಕು. ಇತರರ ದುಃಖ ದುಮ್ಮಾನಗಳನ್ನು ಕಿವಿಯಿಂದ ಕೇಳಬಾರದು. ದೀನ- ದಲಿತರ ಕಷ್ಟ- ನಷ್ಟಗಳಲ್ಲಿ ಪಾಲುಗಾರರಾಗುವುದೇ ಶೀಲ. ಇದ್ದುದ ಬಿಟ್ಟು ಮತ್ತೊಂದಕ್ಕೆ ಆಸೆ ಮಾಡದೆ ಇರುವುದೇ ಶೀಲ. ಪರಧನವ ಮುಟ್ಟಬಾರದು. ಅಷ್ಟೇ ಅಲ್ಲ, ಪರರ ಧನದ ಮೇಲೆ ಮನಸ್ಸು ಸಹ ಮಾಡಬಾರದು. ಪರಸ್ತ್ರೀಯರೆಂದರೆ ತಾಯಿಯ ಸಮಾನವೆಂದು ತಿಳಿದು ನಡೆಯಬೇಕು.
ಬಸವಣ್ಣನವರು ಪರವಧುವನು ಮಹಾದೇವಿ ಯಂಬೆ ಎಂದರೆ, ಸೊನ್ನಲಾಪುರದ ಸಿದ್ಧರಾಮೇಶ್ವರರು ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನವೆಂದು ದೇವರ ಸ್ವರೂಪ ಎಂದಿರುವರು. ಅಂದಾಗ ಪರಸ್ತ್ರೀಯರನ್ನು ಮುಟ್ಟುವಂತಿರಲಿ, ಕಣ್ಣೆತ್ತಿಯೂ ನೋಡಬಾರದು. ಗುರುನಿಂದೆ ಶಿವನಿಂದೆ ಕೇಳಿದರೆ ಪಾಪವೆಂದಾಗ ಗುರುನಿಂದೆ ಹರನಿಂದೆ ಮಾಡಿದರೆ ಇನ್ನೂ ಹೆಚ್ಚಿನ ಪಾಪ ಬರುತ್ತದೆ. ಅದಕ್ಕೆ ನಿಂದೆಯನ್ನು ಕೇಳದಿರುವುದೇ ಶೀಲವಾಗಿದೆ. ನಮ್ಮ ಕೂಡಲ ಚನ್ನಸಂಗನ ಶರಣರ ಬರುವಿಗೆ ಮೈಯೆಲ್ಲ ಕಣ್ಣಾಗಬೇಕು. ಅದು ಅಚ್ಚಶೀಲ ಎಂದಿರುವರು ಬಸವಣ್ಣ. ಕೂಡಲಸಂಗನ ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ ಎಂದರೆ ಮತ್ತೊಂದೆಡೆಗೆ ಶರಣರ ಬರುವಿಂಗೆ ಗುಡಿ ತೋರಣವ ಕಟ್ಟುವೆ ಎಂದಿರುವರು. ಅಂದಾಗ ಶರಣರ ಆಗಮನಕ್ಕೆ ಹೆಚ್ಚು ಮಹತ್ವ ಕೊಟ್ಟು ಅದಕ್ಕೆ ಅಚ್ಚ ಶೀಲ ಎಂದಿರುವರು. ಪ್ರತಿಯೊಬ್ಬರೂ ಶೀಲವನ್ನರಿತು ನಡೆದು ಜನ್ಮ ಸಾರ್ಥಕ್ಯ ಮಾಡಿಕೊಳ್ಳಬೇಕು.