ಪಾರಸ್ಪರಿಕ ತೆರಿಗೆ ಬೆನ್ನಲ್ಲೇ ಟ್ರಂಪ್​ ಗೋಲ್ಡ್​ ಕಾರ್ಡ್​ ರಿವೀಲ್​! ಇಲ್ಲಿದೆ ನಿಮಗೆ ಗೊತ್ತಿಲ್ಲದ ಸಂಗತಿ | Trump Gold Card

ವಿಜಯವಾಣಿ - 2025-04-04T153145.822
Published on

Trump Gold Card: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾರಸ್ಪರಿಕ ತೆರಿಗೆ ವಿಧಿಸಿದ್ದೇ ತಡ ಜಾಗತಿಕ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಹುಟ್ಟುಹಾಕಿದೆ. ತನ್ನ ಹೇಳಿಕೆಗೆ ಬದ್ಧವಾದ ಟ್ರಂಪ್​, ಇತರೆ ದೇಶಗಳಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಭಾರೀ ಸುಂಕಗಳನ್ನು ವಿಧಿಸಿದ್ದಾರೆ. ಪ್ರತೀಕಾರದ ತೆರಿಗೆ ವಿಧಿಸಿದ ಬೆನ್ನಲ್ಲೇ ತಮ್ಮ ಮುಖವಾಣಿ ಇರುವ ಹೊಸ ಗೋಲ್ಡ್ ಕಾರ್ಡ್ ವೀಸಾವನ್ನು ಟ್ರಂಪ್ ಬಿಡುಗೆಡೆಗೊಳಿಸಿದ್ದಾರೆ. ಸದ್ಯ ಇದು ಮತ್ತೊಂದು ಸಂಚಲನಕ್ಕೆ ಕಾರಣವಾಗಿದೆ.

ಅಮೆರಿಕದ ನಾಗರಿಕರಾಗಲು ಇಚ್ಛಿಸುವ ಶ್ರೀಮಂತರಿಗೆ ಈ ಗೋಲ್ಡ್ ಕಾರ್ಡ್ ಲಭ್ಯವಾಗುವಂತೆ ಮಾಡುವುದಾಗಿ ಟ್ರಂಪ್ ಇತ್ತೀಚೆಗೆ ಘೋಷಿಸಿದ್ದಾರೆ. ಅಸಲಿಗೆ ಇದನ್ನು ಖರೀದಿಸುವವರು ಯುಸ್​ ಪೌರತ್ವವನ್ನು ಪಡೆಯಬಹುದು ಎಂದು ಹೇಳಲಾಗಿದೆ. ಇದರ ಅನಾವರಣ ಕಂಡ ಜಗತ್ತು, ಗೋಲ್ಡ್​ ಕಾರ್ಡ್‌ ಮೇಲಿರುವ ಟ್ರಂಪ್​ರನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದೆ. ಈ ಚಿನ್ನದ ಕಾರ್ಡ್‌ನ ವಿಶೇಷತೆ ಏನು? ಇದನ್ನು ಹೊರತರಲು ಕಾರಣವೇನು? ಎಂಬ ಪ್ರಶ್ನೆ ಹಲವರದ್ದು.

ಈ ಗೋಲ್ಡ್ ಕಾರ್ಡ್ ಎರಡು ವಾರಗಳಲ್ಲಿ ಲಭ್ಯವಾಗಲಿದೆ ಎಂದು ಟ್ರಂಪ್ ಬಹಿರಂಗಪಡಿಸಿದ್ದಾರೆ. ಯಾರು ಐದು ಮಿಲಿಯನ್ ಡಾಲರ್‌ (ಸುಮಾರು 44 ಕೋಟಿ ರೂ.) ವ್ಯಯಿಸುತ್ತಾರೋ ಅವರಿಗೆ ಈ ಗೋಲ್ಡನ್ ಕಾರ್ಡ್ ಲಭ್ಯವಾಗುತ್ತದೆ. ಆದಾಗ್ಯೂ, ಚಿನ್ನದ ವೀಸಾ ಕಾರ್ಡ್ ಎರಡು ವಾರಗಳಲ್ಲಿ ಜನರ ಕೈಗೆ ಸೇರಲಿದೆ ಎಂದು ಟ್ರಂಪ್​ ಸ್ಪಷ್ಟಪಡಿಸಿದ್ದಾರೆ. ಇದರ ಮೊದಲ ಖರೀದಿದಾರರು ಯಾರು ಎಂಬ ಪ್ರಶ್ನೆಗೆ, 'ನಾನೇ' ಎಂದು ಉತ್ತರಿಸಿದ ಟ್ರಂಪ್​, "ಮೊದಲಿಗೆ ನಾನೇ. ಆದರೆ ಎರಡನೇ ಖರೀದಿದಾರರು ಯಾರಾಗುತ್ತಾರೆ ಎಂಬುದರ ಬಗ್ಗೆ ನನಗೆ ಮಾಹಿತಿಯಿಲ್ಲ. ಇನ್ನೆರೆಡು ವಾರಗಳಲ್ಲಿ ಗೋಲ್ಡ್ ಕಾರ್ಡ್​ ಖರೀದಿಗೆ ಲಭ್ಯವಿರಲಿದೆ" ಎಂದು ಹೇಳಿದರು.

ಈ ಹೊಸ ಟ್ರಂಪ್​ ಗೋಲ್ಡ್ ಕಾರ್ಡ್ ಚಾಲ್ತಿಯಲ್ಲಿರುವ EB-5 ವಲಸೆ ಹೂಡಿಕೆದಾರರ ವೀಸಾ ಕಾರ್ಯಕ್ರಮವನ್ನು ಬದಲಾಯಿಸಲಿದೆ. ಇದು ಪ್ರಸ್ತುತ ವಿದೇಶಿ ಹೂಡಿಕೆದಾರರು ಉದ್ದೇಶಿತ ಉದ್ಯೋಗ ಪ್ರದೇಶಗಳಲ್ಲಿ (TEAs) ಇರುವ ಯೋಜನೆಗಳಲ್ಲಿ ಕನಿಷ್ಠ 8,00,000 ಡಾಲರ್​ ಅಥವಾ ಬೇರೆಡೆ 1.8 ಮಿಲಿಯನ್ ಡಾಲರ್​ ಹೂಡಿಕೆ ಮಾಡಿದರೆ ಗ್ರೀನ್ ಕಾರ್ಡ್‌ಗಳನ್ನು ಪಡೆಯಲು ಅನುಮತಿಸುತ್ತದೆ ಮತ್ತು ಕನಿಷ್ಠ ಹತ್ತು ಅಮೆರಿಕ ಉದ್ಯೋಗಗಳನ್ನು ಸೃಷ್ಟಿಸುತ್ತದೆ. EB-5 ವ್ಯವಸ್ಥೆಯನ್ನು ಟೀಕಿಸಿದ ಟ್ರಂಪ್, ಅದು ಅಸಮರ್ಥ ಮತ್ತು ಹಳೆಯದ್ದಾಗಿದೆ ಎಂದು ತಳ್ಳಿಹಾಕಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net