ಕಾರ್ಖಾನೆ ಪರ ಮಾತನಾಡಿರುವುದರ ಗುಟ್ಟೇನು ?

HLY BOBATI
Published on

ಹಳಿಯಾಳ: ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ಕ್ಷೇತ್ರದ ಜನ ಮತದಾನ ಮಾಡಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ ಹೊರತು ಸಕ್ಕರೆ ಕಾರ್ಖಾನೆಯವರಲ್ಲ ಎನ್ನುವುದನ್ನು ಅವರು ಮೊದಲು ಅರಿತುಕೊಳ್ಳಬೇಕು. ಕಬ್ಬಿಗೆ ಉತ್ತಮ ಬೆಲೆ, ರೈತರ ಬಾಕಿ ಹಣ ಇವುಗಳ ಬಗ್ಗೆ ಮಾತನಾಡದೆ ಕಾರ್ಖಾನೆ ಪರವಾಗಿ ಮಾತನಾಡುವುದರ ಹಿಂದಿನ ಮರ್ಮವೇನು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಕ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೋಬಾಟಿ ಪ್ರಶ್ನಿಸಿದರು.

ಪಟ್ಟಣದ ಮರಾಠಾ ಭವನದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಶಾಸಕ ದೇಶಪಾಂಡೆಯವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಸಕ್ಕರೆ ಕಾರ್ಖಾನೆಯವರ ಪರವಾಗಿ ಮಾತನಾಡುವ ಭರದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರನ್ನು ರೈತ ಮುಖಂಡರೆನ್ನುವವರು ರೈತರ ದಾರಿ ತಪ್ಪಿಸುತ್ತಿದ್ದಾರೆ. ಇವರಿಗೆ ಕೆಲಸ ಇಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ರೈತರ ಹಿತ ಕಾಪಾಡಬೇಕಾದ ಜವಾಬ್ದಾರಿ ಹೊಂದಿರುವ ಶಾಸಕರು ತಮ್ಮ ಜವಾಬ್ದಾರಿ ಮರೆತಿದ್ದರಿಂದಲೇ ನಾವು ಬೀದಿಗಿಳಿದು ಹಕ್ಕಿಗಾಗಿ ಹೋರಾಟಕ್ಕಿಳಿಯಬೇಕಾಗಿದೆ ಎಂದು ಕಿಡಿಕಾರಿದರು.

ತಮಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ ನ. 11ರಂದು ಹಳಿಯಾಳ ತಾಲೂಕು ಆಡಳಿತ ಸೌಧದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಹಾಜರಾಗಿ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಬೋಬಾಟಿ ಸವಾಲೆಸೆದರು. ರೈತರ ಸಮಸ್ಯೆ ಬಗ್ಗೆ ಅದೆಷ್ಟು ಚರ್ಚೆ ನಡೆಸಿದ್ದೀರಿ? ರೈತರ ಪರವಾಗಿ ಎಷ್ಟು ಧ್ವನಿ ಎತ್ತಿದ್ದೀರಿ ಎನ್ನುವುದು ನಮಗೆ ತಿಳಿದಿದೆ ಎಂದರು.

ಹಿರಿಯ ರೈತ ಮುಖಂಡ ನಾಗೇಂದ್ರ ಜಿವೋಜಿ ಮಾತನಾಡಿ, ಕಾರ್ಖಾನೆ ರೈತರಿಗೆ ಕಾಮಧೇನುವಲ್ಲ, ಆದರೆ, ಕಾರ್ಖಾನೆಗೆ ರೈತರು ಕಾಮಧೇನುಗಳು. ಶಾಸಕರು ಮಾತನಾಡುವ ಪರಿ ನೋಡಿದರೆ ಕಾರ್ಖಾನೆ ಶಾಸಕರ ಒಡೆತನದ್ದೋ ಅಥವಾ ಕಾರ್ಖಾನೆಗೆ ಪಾಲುದಾರರೋ? ಎನ್ನುವುದು ತಿಳಿಯದಾಗಿದೆ. ಒಮ್ಮೆಯೂ ರೈತರ ಕಡೆ ತಿರುಗಿ ನೋಡದ ಶಾಸಕರು ನಮ್ಮ ಹೋರಾಟಕ್ಕೆ ಅವಹೇಳನ ಮಾಡುತ್ತಿರುವುದು ತೀವ್ರ ಖಂಡನೀಯ ಎಂದರು.

ಒಂದು ವೇಳೆ ನಾವು ರೈತರ ದಿಕ್ಕು ತಪ್ಪಿಸಿದ್ದೇ ಆದಲ್ಲಿ ರೈತರು ನಮ್ಮ ಹೋರಾಟದ ಫಲರೂಪದಲ್ಲಿ ಕಬ್ಬಿಗೆ ಹೆಚ್ಚಿನ ದರ ಪಡೆಯುತ್ತಿರಲಿಲ್ಲ. ಸಕ್ಕರೆ ಆಯುಕ್ತರಾದಿಯಾಗಿ ಕಾರ್ಖಾನೆ ಪರಿಶೀಲನೆಗೊಳಪಡುತ್ತಿರಲಿಲ್ಲ. ಕಾರ್ಖಾನೆಯ ಕರ್ಮಕಾಂಡಗಳು ಬಹಿರಂಗವಾಗುತ್ತಿರಲಿಲ್ಲ. ಕಾರ್ಖಾನೆಯ ಮೋಸದ ಪರಿ ಜನರಿಗೆ ತಿಳಿಯುತ್ತಿರಲಿಲ್ಲ ಎಂದರು.

ಶಾಸಕರದ್ದು ಕೇವಲ ಲಾಭ ಕಾರ್ಖಾನೆಗೆ ಮಾತ್ರ ಸಿಗಲಿ ರೈತನ ಕಷ್ಟಕ್ಕೆ ಯಾವತ್ತೂ ಕಾರ್ಖಾನೆ ಭಾಗಿಯಾಗದಿರಲಿ ಎನ್ನುವ ಧೋರಣೆ ಎದ್ದು ಕಾಣುತ್ತಿದ್ದು ಜನತೆ ಇದನ್ನು ಅರಿತಿದ್ದಾರೆ ಎಂದರು.

ರೈತ ಮುಖಂಡ ಸಾತೋರಿ ಗೋಡಿಮನಿ ಮಾತನಾಡಿ, ತಾನು ಕಾಮಧೇನುವನ್ನು ನಂಬಿ ಕಳೆದ ವರ್ಷ ನನ್ನ ಕಬ್ಬನ್ನು ಕೊಟ್ಟೆ. ಕೇವಲ 500 ಟನ್ ಕಬ್ಬಿಗೆ ಪಕ್ಕದ ಕಾರ್ಖಾನೆಯವರು ಕೊಡುತ್ತಿರುವ ದರದ ವ್ಯತ್ಯಾಸವೇ 1,30,000 ರೂ.ಗಳು ಅಂದರೆ ನಮ್ಮ ಕ್ಷೇತ್ರದ 11 ಸಾವಿರ ರೈತರ ಒಟ್ಟು ವ್ಯತ್ಯಾಸ ಲೆಕ್ಕ ಹಾಕಿದರೆ ಇಐಡಿ ಪ್ಯಾರಿ ಎನ್ನುವ ಶಾಸಕರ ಕಾಮಧೇನು ನಮಗೆ ಮಾಡಿದ ಮೋಸ ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ತಾಲೂಕಾಧ್ಯಕ್ಷ ಶಂಕರ ಕಾಜಗಾರ ಮಾತನಾಡಿ, 2022-23ನೇ ಸಾಲಿನ ಉಪ ಉತ್ಪನ್ನಗಳ ಲಾಭದ ಹಂಚಿಕೆ ರೈತರ ಪಾಲು ಪ್ರತಿ ಟನ್​ಗೆ 119 ರೂ., ಇಥೆನಾಲ್ ಉತ್ಪನ್ನದ 150 ರೂ. ಹಾಗೂ ಹೆಚ್ಚುವರಿಯಾಗಿ ಎಚ್ ಆಂಡ್ ಟಿಗೆ ಪಡೆದ ಪ್ರತಿ ಟನ್ ಕಬ್ಬಿಗೆ 256 ರೂ.ಗಳಿಗೆ ಪ್ರತಿ ಟನ್ ಕಬ್ಬಿಗೆ 525 ರೂ.ಗಳು ಅಂದರೆ ಸರ್ಕಾರದ ಆದೇಶದಂತೆಯೇ ಕ್ಷೇತ್ರದ ರೈತರ ಕೋಟ್ಯಂತರ ರೂ.ಗಳನ್ನು ಕಾರ್ಖಾನೆ ರೈತರಿಗೆ ನೀಡದೆ ಸತಾಯಿಸುತ್ತಿದ್ದರೂ, ಸಹಿತ ಈ ಬಗ್ಗೆ ಮಾತನಾಡದ ಶಾಸಕರು ರೈತ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡುವುದು ಎಷ್ಟು ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ರಾಮದಾಸ ಬೆಳಗಾಂವಕರ, ಗಿರೀಶ ಟೋಸೂರ, ಶ್ರೀಪಾದ ಹೊಸಮನಿ, ಇತರರಿದ್ದರು.

ಸಭೆ ಇಂದು

2024-25 ನೇ ಸಾಲಿನ ಕಬ್ಬು ಅರೆಯುವ ಹಂಗಾಮು ಪ್ರಾರಂಭಿಸುವ ಬಗ್ಗೆ ಹಾಗೂ ಮತ್ತಿತರ ವಿಷಯಗಳನ್ನು ರ್ಚಚಿಸಲು ನ. 9 ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ಕಬ್ಬು ಬೆಳೆಗಾರ ರೈತರು, ಕಾರ್ಖಾನೆಯವರ ಸಭೆ ಕರೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net