_1764612357159.webp?w=480&auto=format%2Ccompress&fit=max)
_1764612357159.webp?w=480&auto=format%2Ccompress&fit=max)
ವಾಸ್ತು ಎಂಬುದು ಒಂದು ಪರಿಶುದ್ಧ ಶಾಸ್ತ್ರ ಎಂಬುದು ನಿರ್ವಿವಾದ. ಇದಕ್ಕೆ ಪ್ರಾಚೀನ ಗ್ರಂಥಗಳು, ಶಾಸನಗಳು, ಸಾಹಿತ್ಯಗಳಲ್ಲಿ ಹಲವು ಸಾಕ್ಷಿ, ಉದಾಹರಣೆಗಳು ದೊರೆಯುತ್ತವೆ. ಅಂತಹ ವಾಸ್ತು ಶಾಸ್ತ್ರ ಇಂದಿನ ದಿನಮಾನಕ್ಕೂ ಅಗತ್ಯವಿದೆಯೇ? ಅಥವಾ ಅನಿವಾರ್ಯವೇ? ಒಂದು ವೇಳೆ ಅದು ಅನಿವಾರ್ಯವೆನಿಸುವು ದಾದರೆ ಆ ವಾಸ್ತು ಶಾಸ್ತ್ರಕ್ಕೆ ಆಧಾರವೇನು? ವಾಸದ ಮನೆಯಲ್ಲಿ ವಾಸ್ತು ಅಳವಡಿಕೆಯ ಬಗೆ ಹೇಗೆ? ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿ ಹಲವರನ್ನು ಕಾಡಬಹುದು. ಆ ಪ್ರಶ್ನೆಗಳಿಗೆ ಉತ್ತರ ನೀಡುವ ಮೊದಲು ಒಂದಿಷ್ಟು ಉದಾಹರಣೆಗಳನ್ನು ನೋಡೋಣ.
ಮನುಷ್ಯನನ್ನು ಹೊರತುಪಡಿಸಿ ಕಾಡಿನಲ್ಲಿರುವ ಯಾವುದೇ ಪ್ರಾಣಿಗಳಿಗೆ ರೋಗಗಳು ಬರುವುದಿಲ್ಲ. ಗೆದ್ದಲು ಹುಳುವಿನಿಂದ ಹಿಡಿದು ಆನೆ, ಹುಲಿ, ಸಿಂಹದಂತಹ ದೈತ್ಯ ಪ್ರಾಣಿಗಳು, ಪಕ್ಷಿಗಳು, ಜಲಚರಗಳು ಸ್ವತಂತ್ರವಾಗಿ ಜೀವನ ಸಾಗಿಸುತ್ತವೆ. ಮನುಷ್ಯ ಎದುರಿಸುವ ವಿವಿಧ ಬಗೆಯ ಸಮಸ್ಯೆಗಳು ಈ ಪ್ರಾಣಿಗಳಲ್ಲಿ ಕಂಡು ಬರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಪ್ರಾಣಿಗಳು ಪ್ರಕೃತಿಯ ಮಧ್ಯದಲ್ಲಿ ಬದುಕುತ್ತವೆ. ಪ್ರಾಣಿಗಳು ಪ್ರಕೃತಿಯಲ್ಲಿನ ಶಕ್ತಿಯನ್ನು ಯಥಾವತ್ತಾಗಿ ಬಳಸಿಕೊಂಡು ಬದುಕುತ್ತವೆ. ಅಥವಾ ಅವು ಬಳಸಿಕೊಳ್ಳದಿದ್ದರೂ ಅವುಗಳ ಜೀವನಶೈಲಿ ಪ್ರಕೃತಿಯ ಸಹಜ ಕ್ರಿಯೆಗಳಿಗೆ ಪೂರಕವಾಗಿವೆ. ಆದರೆ, ಪ್ರಾಣಿಗಳಿಗೆ ಭಿನ್ನವಾಗಿರುವ ಮನುಷ್ಯ ನಾಗರಿಕತೆಯ ಹಂತವನ್ನು ಮೇಲೆ ಹತ್ತುತ್ತಾ ಹತ್ತುತ್ತಾ ಪ್ರಕೃತಿಯನ್ನು ಮರೆತು ಅದನ್ನು ವಿರೂಪಗೊಳಿಸಿದ್ದಾನೆ.
ಬೃಹತ್ ಮನೆಯನ್ನು ನಿರ್ವಿುಸಿಕೊಂಡಿರುವ ಮನುಷ್ಯ, ಒಂದು ಹಂತದಲ್ಲಿ ಪ್ರಕೃತಿಯನ್ನು ಪ್ರತಿಬಂಧಿಸಿಕೊಂಡಿದ್ದಾನೆ. ಮನುಷ್ಯನಿಗೆ ಪ್ರಕೃತಿಯಲ್ಲಿನ ಶಕ್ತಿ ಸಿಗದೆ ಇನ್ನಿಲ್ಲದ ಸಮಸ್ಯೆ, ರೋಗಗಳಿಗೆ ತುತ್ತಾಗುತ್ತಿದ್ದಾನೆ. ಈ ಪ್ರಕೃತಿಯನ್ನು ಪ್ರತಿಬಂಧಿಸಿಕೊಂಡಿರುವುದೇ ವಾಸ್ತು ದೋಷ. ಪ್ರಕೃತಿಯಲ್ಲಿನ ಶಕ್ತಿಯನ್ನು ಕ್ರಮಬದ್ಧವಾಗಿ ಬಳಸಿಕೊಳ್ಳು ವುದೇ ವಾಸ್ತು ಶಾಸ್ತ್ರ. ವಾಸ್ತು ಎಂಬುದು ಪಂಚಮಹಾಭೂತಗಳಿಗೆ ಸಂಬಂಧಿಸಿದ ಒಂದು ಶಕ್ತಿ ಸಂಚಯ. ಗಾಳಿ, ಬೆಳಕು, ನೀರು, ಭೂಮಿ ಮತ್ತು ಆಕಾಶವನ್ನು ಮನುಷ್ಯನ ಜೀವನಕ್ಕೆ ಕ್ರಮಬದ್ಧವಾಗಿ ಬೆಸೆಯುವುದೇ ವಾಸ್ತು.
ಇದು ವಾಸ್ತುಶಿಲ್ಪಿಯ ಕರ್ತವ್ಯ. ಪ್ರಕೃತಿ- ಪುರುಷ - ಸ್ಥಳ (ಮನೆ ಅಥವಾ ಕಟ್ಟಡ) ಈ ಮೂರನ್ನೂ ಸೇರಿಸಿ ವಾಸ್ತು ಎನ್ನಲಾಗುತ್ತದೆ. ಆದ್ದರಿಂದ ವಾಸ್ತುಶಿಲ್ಪಿಯು ಮನೆಯಲ್ಲಿ ರುವ ವ್ಯಕ್ತಿಗಳು, ಅವರ ಮನಸ್ಥಿತಿ, ಅಭಿರುಚಿ, ಹಿರಿಯರ ಹಿನ್ನೆಲೆ, ಅಲ್ಲಿನ ಸ್ಥಳ ಮತ್ತು ಸುತ್ತಮುತ್ತಲಿನ ಪ್ರಕೃತಿಯನ್ನು ಅಧ್ಯಯನ ಮಾಡಿ ಅದಕ್ಕೆ ಅನುಗುಣವಾಗಿ ವಾಸ್ತು ವಿನ್ಯಾಸಗೊಳಿಸಬೇಕು. ವಾಸ್ತು ಎಲ್ಲರಿಗೂ, ಎಲ್ಲ ಪ್ರದೇಶಗಳಿಗೂ ಒಂದೇ ರೀತಿ ಯಾಗಿ ಅನ್ವಯಿಸುವುದಿಲ್ಲ. ಸತ್ವ, ರಜೋ, ತಮೋ ಎಂಬ ತ್ರಿಗುಣಗಳನ್ನು ಆಧರಿಸಿ, ಮನೆಯವರ ವೃತ್ತಿ-ಪ್ರವೃತ್ತಿಗಳಿಗೆ ಅನುಗುಣವಾಗಿ ಪೂರಕ ವಾತಾವರಣ ಅಥವಾ ಚಿತ್ರಣವನ್ನು ಒದಗಿಸಿಕೊಡುವುದೇ ವಾಸ್ತು.
ಈ ಭೂಮಿಯ ಮೇಲೆ ಜೀವಿಸುವ ಪ್ರತಿ ಜೀವಿಗೂ ಆಯಸ್ಕಾಂತೀಯ ಮತ್ತು ಗುರುತ್ವಾಕರ್ಷಣೆಯ ಬಲ ಕಡ್ಡಾಯವಾಗಿ ಬೇಕು. ಅದಿಲ್ಲದೆ ಹೋಗಿದ್ದರೆ ದೃಢತೆ ಇಲ್ಲದೆ ಪ್ರಪಂಚ ಅಯೋಮಯವಾಗುತ್ತಿತ್ತು. ಪಂಚಭೂತಗಳಿಂದ ಬರುವ ಚೈತನ್ಯಶಕ್ತಿಯಿಂದ ವ್ಯಕ್ತಿಯ ಭವಿತವ್ಯ ನಿರ್ಣಯವಾಗುತ್ತದೆ. ಈ ದೇಹ ನಿರ್ಮಾಣವಾಗಿರುವುದು ಪಂಚಮಹಾಭೂತಗಳಿಂದ. ಪ್ರಕೃತಿಯಲ್ಲಿರುವ ಆ ಪಂಚಶಕ್ತಿಗಳು ಮನುಷ್ಯನ ದೇಹದಲ್ಲೂ ಇವೆ. ಅವುಗಳಿಗೆ ಚೈತನ್ಯ ಸಿಗಬೇಕಾದರೆ ಪ್ರಕೃತಿಯಲ್ಲಿರುವ ನೈಸರ್ಗಿಕ ಶಕ್ತಿಯೊಂದಿಗೆ ಸಂಯೋಗವಾಗಬೇಕು. ಅಂದರೆ ಗಾಳಿ, ಬೆಳಕು, ನೀರು, ಭೂಮಿ, ಆಕಾಶಗಳು ಸೂಕ್ತವಾಗಿ ಬಳಕೆಯಾಗಬೇಕು. ಅದನ್ನು ನಿರ್ಬಂಧಿಸಿದರೆ ಅದು ವಾಸ್ತು ವಿರುದ್ಧವಾಗುತ್ತದೆ. ಇದರಿಂದ ದೋಷಗಳು ಆರಂಭವಾಗಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಯಾವುದೇ ಒಂದು ಕಟ್ಟಡದ ನಕ್ಷೆಯನ್ನು ಸಿದ್ಧಪಡಿಸಬೇಕಾದರೆ, ಎಲ್ಲೆಂದರಲ್ಲಿ ಕೋಣೆ, ಎಲ್ಲೆಂದರಲ್ಲಿ ಡೈನಿಂಗ್ ಹಾಲ್, ಎಲ್ಲೆಂದರಲ್ಲಿ ಪ್ಯಾಸೇಜ್ ವಿನ್ಯಾಸಗೊಳಿಸಲು ಸಾಧ್ಯವಿಲ್ಲ. ಯಾಕೆಂದರೆ ಸೂರ್ಯನಿಂದ ದೊರೆಯುವ ಪಂಚಭೂತಗಳ ಶಕ್ತಿಯನ್ನು ಅಳವಡಿಸಿಕೊಳ್ಳಬೇಕಾದರೆ, ಆ ಕಟ್ಟಡದಲ್ಲಿ ನಡೆಯುವ ಚಟುವಟಿಕೆಗಳ ದೃಷ್ಟಿಕೋನಕ್ಕನುಗುಣವಾಗಿ ಸೂರ್ಯನ ಪಥವನ್ನು ಅನುಸರಿಸಿ ಒಳಾಂಗಣದ ವಿನ್ಯಾಸ ಮಾಡಬೇಕು. ಅಂದರೆ ನಾಲ್ಕು ದಿಕ್ಕುಗಳ ಪ್ರಾಮುಖ್ಯತೆಯನ್ನು ಅಧ್ಯಯನ ಮಾಡಿ ಅರ್ಥಮಾಡಿಕೊಂಡಿರಬೇಕು.
ಒಂದೇ ಸೂರ್ಯನ ಬೆಳಕು ಮನೆಯೊಳಗೆ ಯಾವ ದಿಕ್ಕಿನಿಂದ ಬರುತ್ತದೆ ಎಂಬುದನ್ನು ಆಧರಿಸಿ ಅದರ ಶಕ್ತಿ ಸಂಚಯ ವಿಭಿನ್ನವಾಗಿ ನಿರ್ಣಯವಾಗುತ್ತದೆ. ಆದ್ದರಿಂದ ವಾಸ್ತುಶಿಲ್ಪಿಯು ದಿಕ್ಕುಗಳ ಮಹತ್ವಕ್ಕನುಗುಣವಾಗಿ ಮನೆಯ ಒಳಗಿನ ವಾಸ್ತು ವಿನ್ಯಾಸಗೊಳಿಸಿ ಆಯಾ ಚಟುವಟಿಕೆಗಳಿಗೆಬೇಕಾದ ಭೌತಿಕ ಕೊಠಡಿಗಳನ್ನು ನಿರ್ಧರಿಸಬೇಕೆ ಹೊರತು ತನಗೆ ಇಷ್ಟ ಬಂದಂತೆ ಕೂಡಿ ಹಾಕಿದರೆ ಅದು ವಾಸ್ತು ಶುದ್ಧ ಕಟ್ಟಡವಾಗುವುದಿಲ್ಲ.