ಅಸ್ತಿತ್ವಕ್ಕೆ ಹೋರಾಟವೆಂದು ಯಾವ ಅಯೋಗ್ಯ ಹೇಳಿರೋದು? : ಬಿ.ವೈ.ವಿಜಯೇಂದ್ರ ತೀಕ್ಷ್ಣ ಪ್ರಶ್ನೆ |Janakrosh Yatra from today

IMG-20250407-WA0006
Published on

ಬೆಂಗಳೂರು: ಈಗ ಯಾವುದೇ ಚುನಾವಣೆಗಳು ಇಲ್ಲದಿದ್ದರೂ ಜನಹಿತಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಬಿಜೆಪಿ ಅಸ್ತಿತ್ವಕ್ಕಾಗಿ ಜನಾಕ್ರೋಶ ಯಾತ್ರೆ ನಡೆಸುತ್ತಿದೆ ಎಂದು ಯಾವ ಅಯೋಗ್ಯ ಹೇಳಿರೋದು ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೆಸರೆತ್ತದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಪ್ರಶ್ನಿಸಿದರು.

ಮೈಸೂರಿಗೆ ತೆರಳುವ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬೆಲೆಗಳ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಜನ ಪರವಾಗಿ ಧ್ವನಿ ಎತ್ತುವುದು ನಮ್ಮ ಕರ್ತವ್ಯ. ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷವಾಗಿದೆ. ಕೇಂದ್ರ ಸೇರಿ ಅನೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಅಸ್ತಿತ್ವ ಪ್ರಶ್ನೆ ಕಾಡುತ್ತಿರುವುದು ಕಾಂಗ್ರೆಸ್ ಗೆ ಹೊರತು ಬಿಜೆಪಿಗೆ ಅಲ್ಲ. ಕಾಂಗ್ರೆಸ್ ಈಗ ಯಾವ ಪರಿಸ್ಥಿತಿ ಎದುರಿಸುತ್ತಿದೆ ಎನ್ನುವುದು ಜನರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.

ರಾಜಕೀಯ ಅಧಿಕಾರಕ್ಕಾಗಿ ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಪಾದಯಾತ್ರೆ ನಡೆಸಿದರು. ಜನಪರ ಪ್ರಾಮಾಣಿಕ ಕಾಳಜಿಯುಳ್ಳ ಬಿಜೆಪಿ ಚುನಾವಣೆ ಅಥವಾ ಅಧಿಕಾರಕ್ಕಾಗಿ ಹೋರಾಡುವುದಿಲ್ಲ. ಜನರ ಪರವಾಗಿ ಧ್ವನಿ ಎತ್ತುವ ಏಕೈಕ ಉದ್ದೇಶದಿಂದ ಈಗ ಚುನಾವಣೆಯಿಲ್ಲದೆ ಇದ್ದರೂ ದೀರ್ಘಾವಧಿ ಚಳವಳಿ ಕೈಗೆತ್ತಿಕೊಂಡಿದ್ದೇವೆ ಎಂದು ಬಿ.ವೈ.ವಿಜಯೇಂದ್ರ ಸಮರ್ಥಿಸಿಕೊಂಡರು.

ಮೈಸೂರಿನಲ್ಲಿ ಇಂದು ಚಾಲನೆ

ಭ್ರಷ್ಟ ಸರ್ಕಾರದ ವಿರುದ್ಧ ಇಂದಿನಿಂದ ಜನಾಕ್ರೋಶ ಯಾತ್ರೆ ಆರಂಭಿಸಲಿದ್ದೇವೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಮೈಸೂರಿನಲ್ಲಿ ಚಾಲನೆ ನೀಡಲಿದ್ದಾರೆ. ನಾಲ್ಕು ಹಂತಗಳಲ್ಲಿ ಹೋರಾಟ ಮಾಡಿ ಜನರಿಗೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ತಿಳಿಸಲಿದ್ದೇವೆ. ದರ ಏರಿಕೆ, ಮುಸ್ಲಿಮ್ ಓಲೈಕೆ ಹಾಗೂ ಕಾಂಗ್ರೆಸ್ ಪಕ್ಷದ ಅಟ್ಟಹಾಸ ಜನರ ಮುಂದೆ ಇಡುತ್ತೇವೆ ಎಂದು ತಿಳಿಸಿದರು.

ಜನಾಕ್ರೋಶ ಯಾತ್ರೆಯಲ್ಲಿ ನಮ್ಮ ಪಕ್ಷದ ಎಲ್ಲ ನಾಯಕರೂ ಭಾಗವಹಿಸುತ್ತಾರೆ. ಪ್ರತೀ ಜಿಲ್ಲೆಗೂ ನಮ್ಮ ಜನಾಕ್ರೋಶ ಯಾತ್ರೆ ತಲುಪಲಿದೆ. ಅಯೋಗ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ, ಮುಸ್ಲಿಮರ ಓಲೈಕೆ, ದಲಿತರಿಗೆ ದೋಖಾ ಮಾಡುತ್ತಿದೆ. ಈ ಸರ್ಕಾರದ ಜನ ವಿರೋಧಿ ನೀತಿಗಳನ್ನು ಜನರಿಗೆ ತಿಳಿಸುತ್ತೇವೆ. ನಮ್ಮ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಗೌರವಿಸಬೇಕು ಎಂದು ನಾವು ನಿರೀಕ್ಷೆ ಮಾಡುವುದಿಲ್ಲ ಎಂದು ಬಿ.ವೈ.ವಿಜಯೇಂದ್ರ ಕುಟುಕಿದರು.

ಯಾವುದೇ ಒಡಕಿಲ್ಲ

 ಮಿತ್ರಪಕ್ಷ ಜೆಡಿಎಸ್ ಹಾಗೂ ನಮ್ಮ ನಡುವೆ ಯಾವುದೇ ಗೊಂದಲ, ಭಿನ್ನಾಭಿಪ್ರಾಯವಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಈ ಹೋರಾಟದ ಬಗ್ಗೆ. ಸ್ಪಷ್ಟ ಪಡಿಸಿದ್ದೇವೆ. ಜನಾಕ್ರೋಶ ಯಾತ್ರೆ ಪ್ರತ್ಯೇಕವಾಗಿ ಮಾಡುತ್ತಿದ್ದೇವೆ ಎಂಬ ಕಾರಣಕ್ಕೆ ಅಂತಹ ವ್ಯತ್ಯಾಸವೇನೂ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ನಾವು, ಅವರು ಸದನದ ಒಳಗೆ, ಹೊರಗೆ ಒಂದಾಗಿ, ಪ್ರತ್ಯೇಕವಾಗಿ ಹೋರಾಟ ಮಾಡಿದ್ದಿದೆ. ಅವರೂ ಜನಪರವಾಗಿ ಧ್ವನಿ ಎತ್ತಿ ಪ್ರತಿಭಟನೆ ನಡೆಸಿದ್ದಾರೆ. ನಮ್ಮ ನಡುವೆ ಒಡಕು ಉಂಟಾಗಿಲ್ಲ, ಇದು ಸತ್ಯಕ್ಕೆ ದೂರವಾದ ಅಪವಾದವಾಗಿದೆ ಎಂದು ಹೇಳಿದರು.

ಕಾರ್ಯಕರ್ತರಿಗೆ ಅಭಯ

ಪಕ್ಷದ ಕಾರ್ಯಕರ್ತ ಕೊಡಗಿನ ವಿನಯ್ ಸೋಮಯ್ಯ ಆತ್ಮಹತ್ಯೆ ತೀವ್ರ ನೋವು ತಂದಿದೆ. ಕೋರ್ಟ್ ನಿಂದ ಜಾಮೀನು ಪಡೆದ ಮೇಲೂ ಪೊಲೀಸರು ಪದೇ ಪದೆ ಮನೆಗೆ ಹೋಗಿ ಕ್ರೂರವಾಗಿ ನಡೆದುಕೊಂಡಿದ್ದಾರೆ. ವಿನಯ್ ಸೋಮಯ್ಯ ಪ್ರಕರಣದಲ್ಲಿ ರಾಜ್ಯ ಬಿಜೆಪಿಯಿಂದ ಏನೆಲ್ಲ ಮಾಡಬೇಕೋ ಎಲ್ಲ ಮಾಡಿದ್ದೇವೆ ಎಂದರು.

ಆದರೆ ಪೊಲೀಸರ ಕಿರುಕುಳದ ಬಗ್ಗೆ ವಿನಯ್ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಸರ್ಕಾರದ ದಬ್ಬಾಳಿಕೆ ಸಹಿಸಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಯಾರೇ ಹಿಂದು ಅಥವಾ ಬಿಜೆಪಿ ಕಾರ್ಯಕರ್ತ ಇರಬಹುದು. ಕಾಂಗ್ರೆಸ್ ಪುಢಾರಿಗಳಿಂದ ತೊಂದರೆ ಆದರೆ ನೇರವಾಗಿ ಸಂಪರ್ಕಿಸಲಿ. ನಾವು ಅವರಿಗೆ ಏನು ಕಾನೂನು ಅನುಕೂಲ ಬೇಕೋ ಅದನ್ನು ಒದಗಿಸುತ್ತೇವೆ ಬಿಜೆಪಿ ಅವರ ಜತೆಗಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ಬಿ.ವೈ.ವಿಜಯೇಂದ್ರ ಅಭಯ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net