ಚಳಿಗಾಲದಲ್ಲಿ ಸದ್ದು ಮಾಡ್ತಿದೆ ಸ್ಲೆಡ್ಜಿಂಗ್ ಟ್ರೆಂಡ್! ಕೆಲವರಿಗೆ ಆ ಬಯಕೆ, ಇತರರಿಗೆ ಏಕಾಂಗಿತನ ತಪ್ಪಿಸುವ ಆಸೆ | Sledging

Sledging
Published on

Sledging : ನಾವಿಂದು ಡೇಟಿಂಗ್​ ಟ್ರೆಂಡ್ಸ್​ ಯುಗದಲ್ಲಿ ವಾಸಿಸುತ್ತಿದ್ದೇವೆ. ಘೋಸ್ಟಿಂಗ್​, ಸಿಚುವೇಶನ್​ಶಿಪ್​, ಬ್ರೆಡ್​ಕ್ರಂಬಿಂಗ್​, ಜೋಂಬಿಯಿಂಗ್​ ಮತ್ತು ಫ್ರೆಂಡ್​ಶಿಪ್​ ಮ್ಯಾರೇಜ್​ನಂತ ಅನೇಕ ಡೇಟಿಂಗ್​ ಟ್ರೆಂಡ್ಸ್​ ಜಗತ್ತಿನಲ್ಲಿಂದು ಚರ್ಚೆಯಾಗುತ್ತಿವೆ. ಅನೇಕ ದೇಶದ ಯುವಕರು ಈ ಟ್ರೆಂಡ್ಸ್​ ಹಿಂದೆ ಬಿದ್ದಿದ್ದಾರೆ. ಇದೀಗ ಈ ಗುಂಪಿನ ಅಡಿಯಲ್ಲಿ ಬಂದಿರುವ ಹೊಸ ಟ್ರೆಂಡ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಅದುವೇ "ಸ್ಲೆಡ್ಜಿಂಗ್" ಡೇಟಿಂಗ್​ ಟ್ರೆಂಡ್​.

ಜೆನ್ ಸಿ ಯುವಕರು ಚಳಿಗಾಲದಲ್ಲಿ ಅನುಸರಿಸುವ ಡೇಟಿಂಗ್ ಟ್ರೆಂಡ್​ ಅನ್ನು ಸ್ಲೆಡ್ಜಿಂಗ್ ಎಂದು ಕರೆಯಲಾಗುತ್ತದೆ. ಅಂದಹಾಗೆ ಜೆನ್​ ಸಿ ಅಂದರೆ, ಜನರೇಷನ್ ಸಿ ಅಥವಾ ಜನರಲ್ ಸಿ ಯುವಕರು ಎಂದರ್ಥ. ಡಿಜಿಟಲ್ ಜೀವನಶೈಲಿ, ಮೌಲ್ಯಗಳು, ವರ್ತನೆಗಳು ಮತ್ತು ನಡವಳಿಕೆಗಳ ಮೇಲೆ ವ್ಯಾಖ್ಯಾನಿಸಲಾದ ಜನರ ಗುಂಪನ್ನು ವಿವರಿಸಲು ಬಳಸಲಾಗುವ ಪದವಾಗಿದೆ.

ಸ್ಲೆಡ್ಜಿಂಗ್​ ಎಂದರೇನು?

ಸ್ಲೆಡ್ಜಿಂಗ್ ಎಂಬುದು ಒಂದು ಡೇಟಿಂಗ್ ಟ್ರೆಂಡ್​ ಆಗಿದೆ. ವರ್ಷದ ಅತ್ಯಂತ ತಂಪಾದ ಅಥವಾ ಅತ್ಯಂತ ಚಳಿ ಇರುವ ತಿಂಗಳುಗಳಲ್ಲಿ ಏಕಾಂಗಿತನವನ್ನು ತಪ್ಪಿಸಿಕೊಳ್ಳಲು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದಾಗಿದೆ. ಈ ಸಮಯದಲ್ಲಿ ಆಯ್ಕೆ ಮಾಡಿದ ಸಂಗಾತಿಯ ಮೇಲೆ ನಿಜವಾದ ಆಸಕ್ತಿಯಿಲ್ಲದಿದ್ದರೂ ಸಹ ಪ್ರಣಯ ಸಂಬಂಧಕ್ಕೆ ಎಳೆಯುವ ಒಂದು ಕ್ರಿಯೆಯನ್ನು ಸ್ಲೆಡ್ಜಿಂಗ್​ ಎಂದು ವ್ಯಾಖ್ಯಾನಿಸಲಾಗಿದೆ. ಈ ಟ್ರೆಂಡ್​ 18 ರಿಂದ 25 ವರ್ಷದೊಳಗಿನ ಜೆನ್ ಸಿ ಯುವಕರಲ್ಲಿ ಪ್ರಚಲಿತದಲ್ಲಿದೆ. ಈ ಸಂಬಂಧಗಳಲ್ಲಿ ಯಾವುದೇ ಪ್ರಾಮಾಣಿಕತೆ ಇರುವುದಿಲ್ಲ. ಇದು ಕೇವಲ ಚಳಿಗಾಲದ ಆರಾಮಕ್ಕಾಗಿ ಮಾತ್ರ ಕಂಡುಬರುವ ಸಂಬಂಧ ಎಂದು ವಾದಿಸಲಾಗಿದೆ.

ಅಧ್ಯಯನ ವರದಿ

ಡೇಟಿಂಗ್ ಆ್ಯಪ್ "ಹ್ಯಾಪನ್" ಸ್ಲೆಡ್ಜಿಂಗ್ ಟ್ರೆಂಡ್ ಕುರಿತು ವಿಸ್ತೃತ ಅಧ್ಯಯನ ನಡೆಸಿದ್ದು, ಕೆಲ ಆಸಕ್ತಿಕರ ಸಂಗತಿಗಳು ಹೊರಬಿದ್ದಿವೆ. ಒಬ್ಬರಿಗೊಬ್ಬರು ಇಷ್ಟಪಡದಿದ್ದರೂ ಸಹ ಶೇ.15ರಷ್ಟು ಮಂದಿ ಕ್ರಿಸ್ಮಸ್ ಋತುವಿನಲ್ಲಿ ಸ್ಲೆಡ್ಜಿಂಗ್ ಡೇಟಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಸೀಸನ್​ ಮುಗಿದ ಬಳಿಕ ಇಬ್ಬರು ಬೇರೆಯಾಗುತ್ತಾರೆ. ಇತರೆ 15 ರಷ್ಟು ಮಂದಿಯು ಕೂಡ ಬೇರೆಯಾಗಲು ಬಯಸುತ್ತಾರೆ. ಆದರೆ, ಅವರು ಸೀಸನ್​ ಮುಗಿದ ಬೆನ್ನಲ್ಲೇ ಬೇರೆಯಾಗುವುದಿಲ್ಲ, ಬದಲಾಗಿ ಹಲವು ತಿಂಗಳುಗಳವರೆಗೆ ಸಂಬಂಧವನ್ನು ಮುಂದುವರಿಸಿ ಆನಂತರ ಬೇರೆಯಾಗುತ್ತಾರೆ.

ಸ್ಲೆಡ್ಜಿಂಗ್​ ಏಕೆ ಪ್ರಸಿದ್ಧ?

ತಜ್ಞರ ಪ್ರಕಾರ, ಚಳಿಗಾಲದಲ್ಲಿ ಅದರಲ್ಲೂ ವಿಶೇಷವಾಗಿ ರಜಾದಿನಗಳಲ್ಲಿ ಒಂಟಿತನವನ್ನು ತಪ್ಪಿಸಲು ಸ್ಲೆಡ್ಜಿಂಗ್ ಒಂದು ಮಾರ್ಗವಾಗಿದೆ. ಅನೇಕ ಸ್ಲೆಡ್ಜರ್‌ಗಳು ಚಳಿಗಾಲದಲ್ಲಿ ಯಾರೊಂದಿಗಾದರೂ ಸರಸವಾಡಲು ಸಂಗಾತಿಯನ್ನು ಬಯಸುವುದಾಗಿ ಒಪ್ಪಿಕೊಳ್ಳುತ್ತಾರೆ. ಎಲ್ಲರೂ ಇದನ್ನು ಆಚರಿಸುತ್ತಿರುವಾಗ ಇತರರು ಕೇವಲ ಒಬ್ಬಂಟಿಯಾಗಿರಲು ಬಯಸುವುದಿಲ್ಲ. ಆದಾಗ್ಯೂ, ಈ ನಡವಳಿಕೆಯು ಜೊತೆಯಲ್ಲಿರುವ ವ್ಯಕ್ತಿಗೆ ಭಾವನಾತ್ಮಕವಾಗಿ ಹಾನಿಕಾರಕವಾಗಿದೆ. ಸ್ಲೆಡ್ಜಿಂಗ್ ಒಂದು ತಾತ್ಕಾಲಿಕ ಪರಿಹಾರವೆಂದು ತೋರುತ್ತದೆಯಾದರೂ, ಇದು ಅಂತಿಮವಾಗಿ ವಿಷಕಾರಿ ಟ್ರೆಂಡ್​ ಎಂದು ಹ್ಯಾಪನ್​ನ ತಜ್ಞರು ಎಚ್ಚರಿಸಿದ್ದಾರೆ. ಸಂಬಂಧಗಳು ನಂಬಿಕೆ ಮತ್ತು ಪರಸ್ಪರ ವಾತ್ಸಲ್ಯದ ಮೇಲೆ ನಿರ್ಮಿಸಬೇಕೆ ಹೊರತು ಸಮಯ ಕಳೆಯಲು ಸಂಗಾತಿಯನ್ನು ಹೊಂದುವ ಅನುಕೂಲಕ್ಕಾಗಿ ಅಲ್ಲ. ಆನಂತರದ ವಿಭಜನೆ, ಗೊಂದಲ ಮತ್ತು ಭಾವನಾತ್ಮಕ ಯಾತನೆಗೆ ಕಾರಣವಾಗುತ್ತದೆ ಎಂದಿದ್ದಾರೆ.

ಯುವಕರು ಅನುಸರಿಸುತ್ತಿರುವ ಈ ಪದ್ಧತಿ ವಿರುದ್ಧ ಹಲವು ಸಮುದಾಯಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಯುವಕರು ಪ್ರತಿಯೊಂದು ಸಂಬಂಧದಲ್ಲೂ ಸತ್ಯಾಸತ್ಯತೆಯನ್ನು ಕಂಡುಕೊಳ್ಳಲು ಶ್ರಮಿಸಬೇಕು ಎಂದು ಸಲಹೆ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net