Keerthy Suresh : ಸೌತ್ ಇಂಡಿಯನ್ ಸ್ಟಾರ್ ಹೀರೋಯಿನ್ ಕೀರ್ತಿ ಸುರೇಶ್, ತಮ್ಮ ಬಹುಕಾಲದ ಗೆಳೆಯ ಆಂಟೋನಿ ಥಟ್ಟಿಲ್ ಎಂಬುವರನ್ನು ಇದೇ ಡಿಸೆಂಬರ್ ತಿಂಗಳಲ್ಲಿ ಮದುವೆಯಾಗುತ್ತಿರುವ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಆರಂಭದಲ್ಲಿ ಕೀರ್ತಿ ಅವರ ಮದುವೆ ವಿಚಾರವಾಗಿ ಸಾಕಷ್ಟು ವದಂತಿಗಳು ಹರಿದಾಡಿದ್ದವು. ಆದರೆ, ಸ್ವತಃ ಕೀರ್ತಿ ಅವರೇ ತಮ್ಮ ಭಾವಿ ಪತಿಯನ್ನು ಪರಿಚಯಿಸಿ, ವದಂತಿಗಳಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಭಾವಿ ಪತಿಯೊಂದಿಗೆ ಇರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ದೀಪಾವಳಿ ಆಚರಣೆ ಸಂದರ್ಭದಲ್ಲಿ ಸೆರೆಹಿಡಿದಂತಹ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಕೀರ್ತಿ ಹಂಚಿಕೊಂಡು ಆಂಟೋನಿ ಥಟ್ಟಿಲ್ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ವಿಚಾರವನ್ನು ಕೀರ್ತಿ ಸುರೇಶ್ ಖಚಿತಪಡಿಸಿದರು. ಕೀರ್ತಿ ಹಂಚಿಕೊಂಡಿದ್ದ ಫೋಟೋದಲ್ಲಿ ಭಾವಿ ಪತಿಯ ಮುಖವನ್ನು ಬಹಿರಂಗಪಡಿಸಿಲ್ಲ. ಇಬ್ಬರು ಕ್ಯಾಮೆರಾಗೆ ಬೆನ್ನು ಮಾಡಿ ಆಗಸದಲ್ಲಿ ಬೆಳಕು ನೋಡುತ್ತಿರುವ ದೃಶ್ಯ ಫೋಟೋದಲ್ಲಿದೆ. ಆದರೆ, ಭಾವಿ ಪತಿಯ ಹೆಸರನ್ನು ಬಹಿರಂಗಪಡಿಸುವ ಮೂಲಕ ಆಂಟೋನಿ ಜತೆಗಿನ ಕಳೆದ 15 ವರ್ಷಗಳ ಗೆಳೆತನವನ್ನು ಖಚಿತಪಡಿಸಿದರು. 15 ವರ್ಷದ ಸ್ನೇಹ ಜೀವನಪೂರ್ತಿ ಇರುತ್ತದೆ. ಎಂದೆಂದಿಗೂ ಆಂಟೋನಿ-ಕೀರ್ತಿ ಒಂದೇ ಎಂದು ಕೀರ್ತಿ ಬರೆದುಕೊಂಡಿದ್ದರು.
ಕೀರ್ತಿ ಸುರೇಶ್ ಅವರ ಮದುವೆಗೆ ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದೆ. ಇದರ ನಡುವೆ ಒಂದು ಸ್ವಾರಸ್ಯಕರ ಸಂಗತಿ ಬೆಳಕಿಗೆ ಬಂದಿದೆ. ಅದೇನೆಂದರೆ, ಕೀರ್ತಿ ಸುರೇಶ್ ಅವರನ್ನು ಮದುವೆಯಾಗಲು ಕಾಲಿವುಡ್ ಸೂಪರ್ಸ್ಟಾರ್ ವಿಶಾಲ್ ಬಯಸಿದ್ದರಂತೆ. ಅಲ್ಲದೆ, ತಮ್ಮ ಮನೆಯಯವರನ್ನು ಕಳುಹಿಸಿ ಹೆಣ್ಣು ಕೇಳಿಸಿದ್ದರಂತೆ. ಆದರೆ, ಕೀರ್ತಿ ಅವರು ಮದುವೆಗೆ ಒಪ್ಪಲಿಲ್ಲ ಸಂಗತಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ತಮಿಳು, ತೆಲುಗಿನಲ್ಲಿ ಸಿಗುವಂತ ಪಾತ್ರಗಳು ಈ ಚಿತ್ರರಂಗದಲ್ಲಿ ಸಿಗ್ತಿಲ್ಲ: ನಟಿ ಐಶ್ವರ್ಯಾ ಲಕ್ಷ್ಮಿ
ಈ ವಿಚಾರವನ್ನು ಕಾಲಿವುಡ್ ಹಿರಿಯ ನಟ ಚಿತ್ರ ಲಕ್ಷ್ಮಣನ್ ಅವರು ಇತ್ತೀಚಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಸಂಡೆಕೋಳಿ-2 ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ವಿಶಾಲ್ ಅವರಿಗೆ ಕೀರ್ತಿ ಸುರೇಶ್ ಮೇಲೆ ಪ್ರೇಮಾಂಕುರವಾಗಿತ್ತಂತೆ. ಮದುವೆಯಾದರೆ, ಕೀರ್ತಿ ಸುರೇಶ್ ಅವರನ್ನೇ ಮದುವೆಯಾಗಬೇಕೆಂದು ಅಂದುಕೊಂಡಿದ್ದರಂತೆ. ತಮ್ಮ ಆಪ್ತ ನಿರ್ದೇಶಕರಾಗಿದ್ದ ಲಿಂಗುಸ್ವಾಮಿ ಮುಖಾಂತರ ಪಾಲಕರನ್ನು ಕಳುಹಿಸಿ ಹೆಣ್ಣು ಕೇಳಿಸಿದಾಗ ಕೀರ್ತಿ ಸುರೇಶ್ ನಿರಾಕರಿಸಿದರಂತೆ. ಅದಕ್ಕೆ ಕಾರಣ ಅಷ್ಟರಲ್ಲಾಗಲೇ ಕೀರ್ತಿ ಅವರು ಆಂಟೋನಿ ಥಟ್ಟಿಲ್ ಪ್ರೀತಿಯಲ್ಲಿ ಬಿದ್ದಿದ್ದರು. ಈ ವಿಚಾರ ಕೇಳಿ ವಿಶಾಲ್ ಅವರಿಗೆ ತುಂಬಾ ಬೇಸರವಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಅಂದಹಾಗೆ ಕೀರ್ತಿ ಸುರೇಶ್ ಮಲಯಾಳಂ ನಿರ್ಮಾಪಕ ಸುರೇಶ್ ಮತ್ತು ನಟಿ ಮೇನಕಾ ಅವರ ಪುತ್ರಿ. ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ ಕೀರ್ತಿ ಮಲಯಾಳಂ ಚಿತ್ರ ಗೀತಾಂಜಲಿ ಮೂಲಕ ನಟಿಯಾಗಿ ಬಡ್ತಿ ಪಡೆದರು. ಸದ್ಯ ತಮಿಳು ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ತೆಲುಗಿನಲ್ಲೂ ನಟಿಸಿದ್ದಾರೆ. ನಟ ವಿಜಯ್, ಸೂರ್ಯ, ವಿಕ್ರಮ್, ಶಿವಕಾರ್ತಿಕೇಯನ್, ನಾನಿ, ಮಹೇಶ್ ಬಾಬು ಸೇರಿದಂತೆ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಪ್ಯಾನ್ ಇಂಡಿಯಾ ಪರಿಕಲ್ಪನೆ ಬಳಿಕ ಕೀರ್ತಿ ಸುರೇಶ್ ನಟನೆಯ ಡಬ್ಬಿಂಗ್ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿದ್ದು, ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ.
ಪ್ರಸ್ತುತ ರಿವಾಲ್ವರ್ ರೀಟಾ ಮತ್ತು ಬೇಬಿ ಜಾನ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನೊಂದೆಡೆ ಇಂಜಿನಿಯರಿಂಗ್ ಓದಿರುವ ಕೀರ್ತಿ ಸುರೇಶ್ ಭಾವಿ ಪತಿ ಆಂಟೋನಿ ಕೆಲಕಾಲ ವಿದೇಶದಲ್ಲಿ ಕೆಲಸ ಮಾಡಿದ್ದರು. ಸದ್ಯ ಕೇರಳದಲ್ಲಿ ಹಲವು ವ್ಯವಹಾರಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ಡಿಸೆಂಬರ್ನಲ್ಲಿ ಇಬ್ಬರು ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಇದೆ. (ಏಜೆನ್ಸೀಸ್)