ISS​ಗೆ Axiom-4 'ಶುಭ' ಸ್ವಾಗತ, ಡಾಕಿಂಗ್ ಯಶಸ್ವಿ; ಅಷ್ಟಕ್ಕೂ ಏನಿದು Docking? ಅದು ಹೇಗಾಗುತ್ತೆ? ಇಲ್ಲಿದೆ ವಿವರ

ವಿಜಯವಾಣಿ - 2025-06-26T171111.347
Published on

Shubhanshu Shukla: ಭಾರತೀಯ ಕಾಲಮಾನದ ಪ್ರಕಾರ, ಬುಧವಾರ (ಜೂನ್​.25) ಮಧ್ಯಾಹ್ನ 12.01ಕ್ಕೆ, ಅಮೆರಿಕದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಫಾಲ್ಕನ್-9 ರಾಕೆಟ್ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾಯಿಸಲಾಯಿತು. ಇತರ ಮೂವರು ಗಗನಯಾತ್ರಿಗಳೊಂದಿಗೆ ಪ್ರಯಾಣ ಬೆಳೆಸಿದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ಇದೀಗ ಐಎಸ್​ಎಸ್​ಗೆ ಯಶಸ್ವಿಯಾಗಿ ಬಂದಿಳಿದಿದೆ.

ಡಾಕಿಂಗ್ ಯಶಸ್ವಿ

ಐಎಸ್​ಎಸ್​ ತಲುಪಿರುವ ಆಕ್ಸಿಯಮ್​-4 ಇದೀಗ ಯಶಸ್ವಿಯಾಗಿ ಡಾಕಿಂಗ್ ಮಾಡಿದೆ. ಈ ಮೂಲಕ ಶುಭಾಂಶು ಶುಕ್ಲಾ ಅವರ ಗಗನಯಾತ್ರಿ ತಂಡ ಬಾಹ್ಯಾಕಾಶದಲ್ಲಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಇದು ಭಾರತೀಯ ಗಗನಯಾತ್ರಿ ಶುಕ್ಲಾ ಅವರ ಹೆಸರಿನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿರುವುದು ಸದ್ಯ ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ.

ಅಷ್ಟಕ್ಕೂ ಏನಿದು ಡಾಕಿಂಗ್​?

ಡಾಕಿಂಗ್​ ಎಂದರೆ ಒಂದು ಬಾಹ್ಯಾಕಾಶ ನೌಕೆಯನ್ನು (ಸ್ಪೇಸ್​ಕ್ರಾಫ್ಟ್​) ಇನ್ನೊಂದು ಬಾಹ್ಯಾಕಾಶ ನೌಕೆಯೊಂದಿಗೆ ಅಥವಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್​ಎಸ್​) ದೊಂದಿಗೆ ಸಂಪರ್ಕಿಸುವ ಪ್ರಕ್ರಿಯೆ. ಇದು ಎರಡು ವಾಹನಗಳನ್ನು ಒಂದುಗೂಡಿಸಿ, ಒಂದು ನಿರ್ವಾತ ಸಂಪರ್ಕವನ್ನು ರಚಿಸುತ್ತದೆ. ಇದರಿಂದ ಗಗನಯಾತ್ರಿಗಳು ಒಂದು ನೌಕೆಯಿಂದ ಇನ್ನೊಂದಕ್ಕೆ ಸುರತವಾಗಿ ತೆರಳಬಹುದು. ಆಕ್ಸಿಯಮ್​-4 ಮಿಷನ್​ನಲ್ಲಿ ಸ್ಪೇಸ್​ಎಕ್ಸ್​ನ ಡ್ರಾಗನ್​ ಸ್ಪೇಸ್​ಕ್ರಾಫ್ಟ್​ ಐಎಸ್​ಎಸ್​ನ ಒಂದು ನಿರ್ದಿಷ್ಟ ಪೋರ್ಟ್​ಗೆ ಡಾಕ್​ ಆಗುತ್ತದೆ.

ಡಾಕಿಂಗ್​ ಹೇಗೆ ಆಗುತ್ತದೆ?

ಡಾಕಿಂಗ್​ ಒಂದು ಸಂಕೀರ್ಣ ಮತ್ತು ಉನ್ನತ ತಂತ್ರಾನದ ಪ್ರಕ್ರಿಯೆ. ಇದು ಸಾಮಾನ್ಯವಾಗಿ ಸ್ವಯಂಚಾಲಿತವಾಗಿ ನಡೆಯುತ್ತದೆ. ಆದರೆ ಗಗನಯಾತ್ರಿಗಳು ಮತ್ತು ಗ್ರೌಂಡ್​ ಕಂಟ್ರೋಲ್​ ತಂಡದಿಂದ ಮೇಲ್ವಿಚಾರಣೆ ನಡೆಸುತ್ತಾರೆ.

ಯಾರು ಈ ಶುಭಾಂಶು ಶುಕ್ಲಾ?

ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ತರಬೇತಿ ಪಡೆದ ವಾಯುಪಡೆಯ ಪೈಲಟ್. ಅವರನ್ನು ಇಸ್ರೋದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮದ (HSP) ಅಡಿಯಲ್ಲಿ ಆಯ್ಕೆ ಮಾಡಲಾಯಿತು. ಅವರು ಭಾರತದ ಮೊದಲ ಸ್ಥಳೀಯವಾಗಿ ಮಾನವಸಹಿತ ಗಗನಯಾನ ಕಾರ್ಯಾಚರಣೆಗೆ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರು. 2006ರಲ್ಲಿ ಭಾರತೀಯ ವಾಯುಪಡೆಗೆ ಫೈಟರ್ ಪೈಲಟ್ ಆಗಿ ಸೇರಿದರು. ಸುಖೋಯ್-30 MKI, MiG-21, MiG-29, ಜಾಗ್ವಾರ್, ಹಾಕ್, ಡಾರ್ನಿಯರ್ ಮತ್ತು An-32 ನಂತಹ ವಿಮಾನಗಳನ್ನು ಹಾರಿಸಿದ್ದಾರೆ. ಆಗಸದಲ್ಲಿ 2,000 ಗಂಟೆಗಳಿಗೂ ಹೆಚ್ಚು ಕಾಲ ಹಾರಾಡಿದ ಅನುಭವವನ್ನು ಹೊಂದಿದ್ದಾರೆ. 1999ರ ಕಾರ್ಗಿಲ್ ಯುದ್ಧದಿಂದ ಪ್ರೇರಿತರಾಗಿ ಶುಕ್ಲಾ ಸೈನ್ಯಕ್ಕೆ ಸೇರಿದರು.

2006, ಜೂನ್ ತಿಂಗಳಲ್ಲಿ ಐಎಎಫ್ ಫೈಟರ್ ವಿಂಗ್ ಸೇರುವ ಮೂಲಕ ಶುಕ್ಲಾ ಅವರ ಪ್ರಯಾಣ ಪ್ರಾರಂಭವಾಯಿತು. 2024, ಮಾರ್ಚ್ ತಿಂಗಳಲ್ಲಿ ಅವರಿಗೆ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಲಾಯಿತು. 2019ರಲ್ಲಿ ಶುಕ್ಲಾ ಅವರಿಗೆ ಇಸ್ರೋದಿಂದ ಕರೆ ಬಂತು. ರಷ್ಯಾದ ಮಾಸ್ಕೋದ ಸ್ಟಾರ್ ಸಿಟಿಯಲ್ಲಿರುವ ಯೂರಿ ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ಶುಕ್ಲಾ ಕಠಿಣ ತರಬೇತಿಯನ್ನು ಪಡೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net