

(( ಜಗತ್ತು ಕರೊನಾ ವೈರಸ್ ಅಲೆಗಳಿಂದಾಗಿ ತಲ್ಲಣಗೊಂಡಿದೆ. ಅನೇಕ ದೇಶಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. 3ನೇ ಮಹಾಯುದ್ಧದಲ್ಲಿ ಜೈವಿಕಾಸ್ತ್ರ ಬಳಕೆ ವಿಚಾರವಾಗಿ ಚೀನಾದ ಬಗ್ಗೆ ಜಗತ್ತಿಗೆ ಅನುಮಾನ ಕಾಡಿದೆ. ಇವೆಲ್ಲದರ ನಡುವೆ, ಚೀನಾದ ಆರ್ಥಿಕ ಸ್ಥಿತಿ, ಜಿಡಿಪಿ ಬೆಳವಣಿಗೆ ಧನಾತ್ಮಕವಾಗಿದೆ. ಆದಾಗ್ಯೂ, ಚೀನಾದಲ್ಲೂ ಕರೊನಾ ಆತಂಕ ಮರೆಯಾಗಿಲ್ಲ. ಹೀಗಾಗಿ ಕೋವಿಡ್ 19 ಮೂಲ ಶೋಧಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೆ ಒತ್ತಡ ಹೆಚ್ಚಾಗಿದೆ.)))
ಕರೊನಾ ವೈರಸ್ ಸೋಂಕು ಚೀನಾದಿಂದ ಜಗತ್ತಿನಾದ್ಯಂತ ಹರಡಲಾರಂಭಿಸಿದ ಬೆನ್ನಿಗೆ ಆ ದೇಶ ಜೈವಿಕ ಅಸ್ತ್ರ ಸಿದ್ಧಪಡಿಸುತ್ತಿರುವ ಸಂದೇಹ ವ್ಯಕ್ತವಾಗಿತ್ತು. ಇದನ್ನು ಪುಷ್ಟೀಕರಿಸುವಂತೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ವಿುಯ ಶಸ್ತ್ರ ಪರಿಣತರು ಮತ್ತು ವಿಜ್ಞಾನಿಗಳು 2015ರಲ್ಲಿ ಸಿದ್ಧಪಡಿಸಿದ್ದ ಸಂಶೋಧನಾ ಪ್ರಬಂಧದ ದಾಖಲೆ ಇತ್ತೀಚೆಗೆ ಬಹಿರಂಗವಾಗಿತ್ತು. ವೈರಸ್ ಸೋಂಕು ಕಾಣಿಸಿಕೊಂಡಾಗ ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡದೇ ವಿಳಂಬ ಮಾಡಿದ್ದು ಇತ್ಯಾದಿ ಆರೋಪಗಳೂ ಚೀನಾ ಸರ್ಕಾರದ ಮೇಲಿವೆ. ಅಷ್ಟೇ ಅಲ್ಲ, ವೈರಸ್ ಸೋಂಕಿನ ಮೊದಲ ಅಲೆಯ ವೇಳೆ ಕೋವಿಡ್ ಸೋಂಕಿತರು ಮತ್ತು ಮರಣ ಸಂಖ್ಯೆಯ ವಿಚಾರದಲ್ಲೂ ಚೀನಾ ಪಾರದರ್ಶಕತೆ ಕಾಪಾಡಿಕೊಂಡಿಲ್ಲ. ಈಗ ಜಗತ್ತು ಎರಡನೇ-ಮೂರನೇ ಅಲೆಯನ್ನು ಎದುರಿಸುತ್ತಿರುವಾಗ ಚೀನಾದಲ್ಲಿ ಮತ್ತೆ ಹೊಸ ಸೋಂಕು ಕಾಣಿಸಿಕೊಂಡಿದೆ.
ವೂಹಾನ್ ಸೋರಿಕೆ ಸಿದ್ಧಾಂತಕ್ಕೆ ಪುಷ್ಟಿ: ಚೀನಾದ ವೂಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಮೂವರು ಸಂಶೋಧಕರು ಕೋವಿಡ್ 19 ಸೋಂಕು ಹರಡುವ ಮೊದಲೇ, ಅಂದರೆ, 2019ರ ನವೆಂಬರ್ನಲ್ಲೇ ಆಸ್ಪತ್ರೆಗೆ ದಾಖಲಾಗಿದ್ದರು. ಇದು ಕೋವಿಡ್ 19 ವೈರಾಣು ಲ್ಯಾಬ್ನಿಂದಲೇ ಸೋರಿಕೆಯಾಗಿದ್ದಕ್ಕೆ ಪುರಾವೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ಭಾನುವಾರದ ವರದಿಯಲ್ಲಿ ಉಲ್ಲೇಖಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮಹತ್ವದ ಸಭೆ ಈ ವಾರ ನಡೆಯಲಿದ್ದು, ಕೋವಿಡ್ 19 ಮೂಲದ ತನಿಖೆ ವಿಚಾರ ಚರ್ಚೆಗೆ ಬರುವ ನಿರೀಕ್ಷೆ ಇದೆ. ಹೀಗಾಗಿ ಈ ವರದಿ ಪರಿಣಾಮ ಬೀರುವ ಸಾಧ್ಯತೆ ಇದೆ. ಚೀನಾ ಈ ವರದಿಯನ್ನು ಅಲ್ಲಗಳೆದಿದೆಯಾದರೂ ಸಂಶಯ ಹೊಗೆಯಾ ಡುತ್ತಲೇ ಇದೆ.
ಹ್ಯಾಷ್ಟ್ಯಾಗ್ ಜಿಜಿಯಾ ಟ್ರೆಂಡ್: ಈಶಾನ್ಯ ಚೀನಾದ ಲಿಯೋನಿಂಗ್ ಪ್ರಾಂತ್ಯದ ರಾಜಧಾನಿ ಶೇನ್ಯಾಂಗ್ನಲ್ಲಿ ಮೇ ಮಧ್ಯಭಾಗದಲ್ಲಿ ಹೊಸ ಕರೊನಾ ಕೇಸ್ ಪತ್ತೆಯಾಗಿವೆ. ಈ ಪ್ರಾಂತ್ಯದ ಸಾಮಾಜಿಕ ಜಾಲತಾಣದಲ್ಲಿ ಹ್ಯಾಷ್ಟ್ಯಾಗ್ ಜಿಜಿಯಾ (ಚಿಕನ್ ರಿಬ್ಸ್) ಟ್ರೆಂಡ್ ಆಗಿದೆ. ಸೋಂಕು ತಗುಲಿದವರೆಲ್ಲ ಸ್ಥಳೀಯ ರೆಸ್ಟೋರೆಂಟ್ಗೆ ಹೋಗಿ ಜಿಜಿಯಾ ತಿಂದಿದ್ದರು ಎಂಬ ಅಂಶ ಜನರನ್ನು ಆತಂಕಕ್ಕೆ ದೂಡಿದೆ.
ನಿಯಂತ್ರಣಕ್ಕೆ ಏನು ಮಾಡುತ್ತಿದೆ?
ಗ್ಲೋಬಲ್ ಟೈಮ್ಸ್ ವರದಿ ಪ್ರಕಾರ, ಹೊಸ ಕೇಸ್ ಹೆಚ್ಚಳ ತಡೆಯುವುದಕ್ಕೆ ಚೀನಾ, ಕಳೆದ ವರ್ಷದ ಮಾದರಿಯನ್ನೇ ಕಟ್ಟುನಿಟ್ಟಾಗಿ ಮುಂದುವರಿಸಿದೆ. ಹೊಸ ಕೇಸ್ ಪತ್ತೆಯಾದ ಕೂಡಲೇ ಅವರ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚಿ ಐಸೋಲೇಶನ್ನಲ್ಲಿ ಇರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಲಸಿಕೆ ಅಭಿಯಾನ ಮುಂದುವರಿಸಿರುವುದು ಸೇರಿ ಕೋವಿಡ್ ನಿಯಮಗಳನ್ನು ಪಾಲಿಸುತ್ತ ಬಂದಿದೆ.
ಚೀನಾ ಲಸಿಕೆ
ಚೀನಾದ ಸಿನೊಫಾರ್ವ ಕೋವಿಡ್ 19 ಲಸಿಕೆ ‘ಆಆಐಆಕಇಟ್ಟ್ಖ 3ನೇ ಹಂತದ ಕ್ಲಿನಿಕಲ್ ಟ್ರಯಲ್ನಲ್ಲಿದೆ. ಈ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಸುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮೇ 7ರಂದು ಅನುಮತಿ ನೀಡಿದೆ. ಇದರ ಬೆನ್ನಿಗೆ, ಈ ಲಸಿಕೆಯನ್ನು ಪಾಕಿಸ್ತಾನ, ಸೆಷಲೆಸ್ ಮತ್ತು ಇತರೆ ದೇಶಗಳಿಗೆ ಬೀಜಿಂಗ್ ರವಾನಿಸತೊಡಗಿದೆ. 5 ಅರಬ್ ರಾಷ್ಟ್ರಗಳಲ್ಲಿ 2020ರ ಬೇಸಿಗೆಯಿಂದ ಈ ಲಸಿಕೆ ಪ್ರಯೋಗ ನಡೆಯುತ್ತಿದೆ. 18 ವರ್ಷ ಮೇಲ್ಪಟ್ಟವರಲ್ಲಿ ಇದು ಶೇಕಡ 78.89 ಕಾರ್ಯಕ್ಷಮತೆ, ಪರಿಣಾಮ ತೋರಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ತಿಳಿಸಿದೆ.
ಎನ್ಎಡಿಪಿಸಿ ಸ್ಥಾಪನೆ
ದೇಶವ್ಯಾಪಿ ಇಂತಹ ರೋಗ ಅಥವಾ ಸೋಂಕುಗಳ ತಡೆ ಮತ್ತು ನಿಯಂತ್ರಣಕ್ಕಾಗಿ ನ್ಯಾಷನಲ್ ಅಡ್ಮಿನಿಸ್ಟ್ರೇಶನ್ ಆಫ್ ಡಿಸೀಸ್ ಪ್ರಿವೆನ್ಶನ್ ಆಂಡ್ ಕಂಟ್ರೋಲ್ (ಎನ್ಎಡಿಪಿಸಿ) ಸಂಸ್ಥೆಯನ್ನು ಚೀನಾ ಸರ್ಕಾರ ಮೇ 13ರಂದು ಸ್ಥಾಪಿಸಿದೆ. ಸೋಂಕು ರೋಗ ಗಳ ನಿಯಂತ್ರಣ ಮತ್ತು ತಡೆಗಾಗಿ ನೀತಿ ರೂಪಿಸುವುದು, ಸಾರ್ವಜನಿಕ ಆರೋಗ್ಯದ ಮೇಲೆ ನಿಗಾ ಈ ಸಂಸ್ಥೆಯ ಕೆಲಸ.
ಆರ್ಥಿಕ ಸ್ಥಿರತೆ
ಕರೊನಾ ಸನ್ನಿವೇಶ ಏನೇ ಇದ್ದರೂ, ಚೀನಾದ ಅರ್ಥ ವ್ಯವಸ್ಥೆ ಸ್ಥಿರತೆಯನ್ನು ಕಾಪಾಡಿಕೊಂಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೊದಲ ತ್ರೈಮಾಸಿಕದಲ್ಲಿ ಶೇಕಡ 18.3 ಪ್ರಗತಿ ದಾಖಲಾಗಿದೆ ಎಂದು ಕಳೆದ ಸೋಮವಾರ ಬಿಡುಗಡೆಯಾದ ನ್ಯಾಷನಲ್ ಬ್ಯೂರೋ ಆಫ್ ಸ್ಟಾ್ಯಟಿಸ್ಟಿಕ್ಸ್ (ಎನ್ಬಿಎಸ್) ಡೇಟಾ ಬಹಿರಂಗಪಡಿಸಿದೆ. 2020ರ ಏಪ್ರಿಲ್ಗೆ ಹೋಲಿಸಿದರೆ ಈ ವರ್ಷ ಏಪ್ರಿಲ್ನಲ್ಲಿ ಕೈಗಾರಿಕಾ ಉತ್ಪಾದನೆ, ಕೈಗಾರಿಕಾ ಚಟುವಟಿಕೆ ಮಾಪನ ಪ್ರಮಾಣ ಶೇಕಡ 9.8 ಹೆಚ್ಚಳವಾಗಿದೆ. ಗ್ರಾಹಕ ವಸ್ತುಗಳ ಚಿಲ್ಲರೆ ಮಾರಾಟ ಶೇ.29.6 ಹೆಚ್ಚಳವಾಗಿದೆ. ಸ್ಥಿರಾಸ್ತಿ ಮೇಲಿನ ಹೂಡಿಕೆ ಇದೇ ಅವಧಿಯಲ್ಲಿ ಶೇಕಡ 19.9 ಏರಿಕೆ ಆಗಿದೆ. ನಗರ ನಿರುದ್ಯೋಗ ಸಮಸ್ಯೆ ದರ ಶೇಕಡ 0.9 ಇಳಿದು ಹಿಂದಿನ ವರ್ಷದ ಏಪ್ರಿಲ್ಗೆ ಹೋಲಿಸಿದರೆ ಈ ವರ್ಷ ಏಪ್ರಿಲ್ನಲ್ಲಿ 5.1%ಗೆ ತಲುಪಿದೆ. ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ 43.7 ಲಕ್ಷ ಉದ್ಯೋಗ ಸೃಜನೆ ಆಗಿರುವುದು ಇದಕ್ಕೆ ಕಾರಣ.
ವಿದೇಶದಿಂದ ಸೋಂಕು!
ಚೀನಾ ಸರ್ಕಾರ ಹೇಳುವ ಪ್ರಕಾರ, ಲಿಯೋನಿಂಗ್ ಪ್ರಾಂತ್ಯದ ಯಿಂಗ್ಕೌ ಬಂದರು ಪ್ರದೇಶವಾಗಿದ್ದು ಅಲ್ಲಿಗೆ 40 ರಾಷ್ಟ್ರಗಳಿಂದ ಕಂಟೇನರ್ಗಳು ಬರುತ್ತಿರುತ್ತವೆ. 140 ಇತರೆ ಬಂದರುಗಳ ಜತೆಗೆ ಸಂಪರ್ಕ ಇದೆ. ಅಲ್ಲಿಂದ ಎಲ್ಲಿಂದಲೋ ಹೊಸ ಕರೊನಾ ವೈರಸ್ ಸೋಂಕು ಇಲ್ಲಿಗೆ ಬಂದು ಹರಡತೊಡಗಿದೆ. ಸದ್ಯ, ಈಶಾನ್ಯ ಚೀನಾದ ಲಿಯೋನಿಂಗ್ ಮತ್ತು ಪೂರ್ವ ಚೀನಾದ ಅನ್ಹಯಿ ಪ್ರಾಂತ್ಯದಲ್ಲಿ ಆರಂಭಿಕ ಹಂತದಲ್ಲಿ ಒಟ್ಟು 16 ಖಚಿತ ಮತ್ತು 13 ಅಸಿಮ್ಟಮ್ಯಾಟಿಕ್ ಕೇಸ್ಗಳು ಪತ್ತೆಯಾಗಿವೆ. ಇವರ ಪ್ರಯಾಣದ ಇತಿಹಾಸ ಪಡೆದು ಹತ್ತಿರದ ಸಂಪರ್ಕ ಹೊಂದಿದ 28 ಜನರನ್ನು ಟ್ರೇಸ್ ಮಾಡಿದಾಗ ಬೀಜಿಂಗ್ ಸೇರಿ ಆರು ಪ್ರಾಂತ್ಯ, ನಗರಗಳಲ್ಲಿ ಅವರೆಲ್ಲ ಇರುವುದು ಪತ್ತೆಯಾಗಿದೆ. ಅವರ ಮೇಲೆ ನಿಗಾ ಇರಿಸಲಾಗಿದೆ.