ಬ್ರಹ್ಮಚರ್ಯೆ ಎಂದರೇನು?

bramhacharya
Published on

ಬ್ರಹ್ಮಚರ್ಯ ಎಂದರೆ ಬ್ರಹ್ಮಣಿ ಚರತಃ - ಬ್ರಹ್ಮನನ್ನು ಅನುಸರಿಸುವುದು ಎಂದರ್ಥ. ಪರಮಾತ್ಮನ ಅನುಸಂಧಾನ, ವೇದ ಶಾಸ್ತ್ರಗ್ರಂಥಗಳ ಅಧ್ಯಯನ, ವೀರ್ಯ ರಕ್ಷಣೆ. ಆದರೆ ಜನಮಾನಸದಲ್ಲಿ ಕೇವಲ ವೀರ್ಯ ರಕ್ಷಣೆ ಬ್ರಹ್ಮಚರ್ಯ ಎಂಬ ಅಭಿಪ್ರಾಯವಿದೆ.ಡಾ. ನಿಕೋಲಸ್, ‘ಶರೀರದ ಕೆಲವು ರಕ್ತ ಕಣಗಳು ವೀರ್ಯವಾಗಿ ಮಾರ್ಪಾಡಾಗುತ್ತದೆ. ಅದನ್ನು ವ್ಯರ್ಥ ಮಾಡಿದರೆ ಅದು ನಾಶವಾಗುತ್ತದೆ. ಅದನ್ನು ಸಂರಕ್ಷಿಸಿದರೆ ಅದು ಮತ್ತೆ ರಕ್ತದೊಳಗೆ ಸೇರಿ, ಶಕ್ತಿ ಹೆಚ್ಚಾಗುತ್ತದೆ’ ಎನ್ನುತ್ತಾರೆ.

ಆದ್ದರಿಂದ ಅನೇಕರು ನಾವು ವೀರ್ಯಸ್ಖಲನ ಮಾಡಿಕೊಳ್ಳದಿದ್ದರೂ ಅದು ನೈಸರ್ಗಿಕವಾಗಿ ನಾಶಹೊಂದುವುದರಿಂದ ವೀರ್ಯಸ್ಖಲನ ತಪ್ಪೇನಿಲ್ಲ ಎಂದು ಹೇಳುವುದನ್ನು ನಾವು ಗಮನಿಸಿರಬಹುದು. ಅದು ಸತ್ಯಕ್ಕೆ ದೂರವಾದ ಮಾತು. ವೀರ್ಯ ಸಂರಕ್ಷಣೆಯಿಂದ ನಾವು ತೇಜೋವಂತ ರಾಗುತ್ತೇವೆ, ಬಲವಂತರಾಗುತ್ತೇವೆ, ದೇಹ-ಮುಖಗಳ ಕಾಂತಿ ಹೆಚ್ಚಾಗುತ್ತದೆ. ಉತ್ತಮ ಜೀವನ ನಡೆಸಲು, ಯಶಸ್ವೀ ವ್ಯಕ್ತಿಯಾಗಲು ನಮಗೆ ಸುಲಭ ಸಾಧ್ಯವಾಗುತ್ತದೆ. ರೇಮಂಡ್ ಬರ್ನಾಡ್ ತಮ್ಮ Science of Regeneration ಪುಸ್ತಕದಲ್ಲಿ, ‘ವೀರ್ಯ ನಾಶದಿಂದ ನಾವು ಸುಲಭವಾಗಿ ಉದ್ವೇಗಕ್ಕೆ ಒಳಗಾಗುತ್ತೇವೆ. ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತೇವೆ. ಸಣ್ಣ ಸಣ್ಣ ವಿಷಯಗಳಿಗೆ ಮನಸ್ಸು ಪ್ರಕ್ಷುಬ್ಧಗೊಳ್ಳುತ್ತದೆ. ಕೋಪ ಬರುತ್ತದೆ. ಮಾನಸಿಕ ಒತ್ತಡ, ಆತ್ಮಹತ್ಯೆ ಮನೋಭಾವ, ನಕರಾತ್ಮಕ ಚಿಂತನೆ, ಚಿಂತೆ, ಮಂತಾದ ಮಾನಸಿಕ ಪಿಡುಗುಗಳಿಗೆ ತುತ್ತಾಗುತ್ತೇವೆ’ ಎಂದು ವೀರ್ಯ ನಾಶದ ದುಷ್ಪರಿಣಾಮಗಳನ್ನು ವಿವರಿಸಿದ್ದಾರೆ.

ಇಂದು ನಮ್ಮಲ್ಲಿ ಅನೇಕರ ಮಾನಸಿಕ ಪರಿಸ್ಥಿತಿಯ ಕಾರಣವನ್ನು ಇದರಿಂದ ನಾವು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಮೈಥುನ ಸುಖಕ್ಕಿಂತ ಪವಿತ್ರ ಜೀವನದಿಂದ ಸಿಗುವ ಆನಂದ, ತೃಪ್ತಿ ಹೆಚ್ಚಾಗಿರುತ್ತದೆ. ಅದು ಶಕ್ತಿದಾಯಕವೂ, ಸಕಾರಾತ್ಮಕವಾಗಿಯೂ ಇರುತ್ತದೆ. ವೇದ ಅಥವಾ ಯಾವುದೇ ಶಾಸ್ತ್ರಗ್ರಂಥಗಳ ಅಧ್ಯಯನದಿಂದ ನಮ್ಮ ಮನಸ್ಸು ಉನ್ನತವಾದ ಆಲೋಚನೆಗಳಿಂದ ಯುಕ್ತವಾಗುತ್ತದೆ. ಅಲ್ಲದೆ ಅದು ನಮ್ಮ ಜೀವನಕ್ಕೆ ಉತ್ತಮ ದಾರಿದೀಪವೂ ಹೌದು. ಶಾಸ್ತ್ರಗ್ರಂಥಗಳು ಋಷಿ-ಮುನಿಗಳ ಆತ್ಮಾನುಭದ, ಸತ್ಯಾನುಭವದ ನುಡಿಗಳಲ್ಲವೇ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net