ಕೆ.ಆರ್​. ಪೇಟೆ ಕಾಂಗ್ರೆಸ್​ ಟಿಕೆಟ್​: ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆದ ಮಾಜಿ ಸಿಎಂ ಸಿದ್ದು!

ಸಿದ್ದರಾಮಯ್ಯ siddaramaiah
ಮಾಜಿ ಸಿಎಂ ಸಿದ್ದರಾಮಯ್ಯ
Published on

ಮಂಡ್ಯ: ಪ್ರತಿಷ್ಠೆಯ ವಿಧಾನಸಭಾ ಕಣವಾಗಿರುವ ಕೆ.ಆರ್​.ಪೇಟೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಎಲ್​. ದೇವರಾಜು ಸ್ಪರ್ಧಿಸಲಿದ್ದಾರೆ. ನಿನ್ನೆ (ಏ.6) ಬಿಡುಗಡೆಯಾದ ಕಾಂಗ್ರೆಸ್​ ಎರಡನೇ ಪಟ್ಟಿಯಲ್ಲಿ ದೇವರಾಜುಗೆ ಟಿಕೆಟ್​ ಘೋಷಣೆಯಾಗಿದ್ದು, ಇದರ ಹಿಂದೆ ಎಚ್​.ಡಿ. ರೇವಣ್ಣ ಅವರ ಪಾತ್ರ ಇದೆ ಎಂದು ಹೇಳಲಾಗುತ್ತಿದೆ.

ಮಾಜಿ ಸಿಎಂ ಸಿದ್ದು ಜೊತೆ ಸೇರಿ ಸಹೋದರ ಎಚ್​ಡಿಕೆಗೆ ರೇವಣ್ಣ ಟಕ್ಕರ್ ಕೊಟ್ರಾ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ಬಿ.ಎಲ್​. ದೇವರಾಜು ಕಳೆದ 40 ವರ್ಷದಿಂದ ಜೆಡಿಎಸ್​ನಲ್ಲಿದ್ದರು. ಕಳೆದ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತಗೊಂಡಿದ್ದರು.

ಬಿ.ಎಲ್.ದೇವರಾಜು ಅವರು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಆಪ್ತ. ಎಚ್​.ಟಿ. ಮಂಜುಗೆ ಜೆಡಿಎಸ್ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ದೇವರಾಜು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಇದರ ಹಿಂದೆ ರೇವಣ್ಣರ ಶ್ರೀರಕ್ಷೆ ಇದೆ ಎನ್ನಲಾಗುತ್ತಿದೆ. ಆಪ್ತನಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಸಿದ್ದರಾಮಯ್ಯಗೆ ರೇವಣ್ಣ ಗೌಪ್ಯವಾಗಿ ಮನವಿ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಕೊಟ್ಟ ಮಾತು ಉಳಿಸಿಕೊಳ್ಳುವ ಲೆಕ್ಕಚಾರದಲ್ಲೇ ರೇವಣ್ಣ ಆಪ್ತನಿಗೆ ಸಿದ್ದು ಮಣೆ ಹಾಕಿದ್ದಾರೆ. 2004ರಲ್ಲಿ ಜೆಡಿಎಸ್​ನಲ್ಲಿದ್ದಾಗ ದೇವರಾಜುಗೆ ಸಿದ್ದರಾಮಯ್ಯ ಟಿಕೆಟ್ ತಪ್ಪಿಸಿದ್ದರು. ಅಂದಿನ ತಪ್ಪಿಗೆ ಪ್ರತಿಯಾಗಿ ಇಂದು ಕೈ ಟಿಕೆಟ್ ಕೊಡಿಸುವಲ್ಲಿ ಸಿದ್ದು ಯಶಸ್ವಿಯಾಗಿದ್ದಾರೆ. ಆ ಮೂಲಕ ಒಂದೇ ಕಲ್ಲಲ್ಲಿ ಮೂರು ಹಕ್ಕಿಯನ್ನು ಸಿದ್ದು ಹೊಡೆದಿದ್ದಾರೆ.

ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವುದರ ಜೊತೆಗೆ 2004ರಲ್ಲಾದ ಅನ್ಯಾಯವನ್ನು ಸರಿಪಡಿಸಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಬಹು ಚರ್ಚೆಯಾಗುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net