ಇಂದು ಗುಡ್ ಫ್ರೈಡೆ | ಪ್ರೀತಿ, ಕರುಣೆಯನ್ನು ಹಂಚಿದ ಯೇಸು

good friday
Published on
ಸಿ.ಮರಿಜೋಸೆಫ್

ಯೇಸು ಕ್ರಿಸ್ತ ಸ್ವತಃ ಯೆಹೂದ್ಯನಾಗಿದ್ದರೂ ಜೆರುಸಲೇಮಿನ ಪವಿತ್ರಮಂದಿರಕ್ಕೆ ಭೇಟಿ ನೀಡಿದ್ದು ಒಂದೆರಡು ಸಲವಷ್ಟೇ. ಯುದ್ಧ, ವ್ಯಾಪಾರ, ಗುಲಾಮಗಿರಿಯ ಕಾರಣ ಹೊರನಾಡುಗಳಲ್ಲಿ ಚದರಿ ಹೋಗಿದ್ದ ಯೆಹೂದ್ಯರು ವರ್ಷಕ್ಕೊಮ್ಮೆಯಾದರೂ ಜೆರುಸಲೇಮಿಗೆ ತೀರ್ಥಯಾತ್ರೆ ಕೈಗೊಂಡು ತಮ್ಮ ಆರಾಧ್ಯ ದೇವರಿಗೆ ಯಜ್ಞಬಲಿ ಅರ್ಪಿಸುವುದು ವಾಡಿಕೆಯಾಗಿತ್ತು. ಚೊಚ್ಚಲ ಮಗುವನ್ನು ದೇವರಿಗರ್ಪಿಸುವ ರಿವಾಜಿನಂತೆ ಯೇಸುವಿನ ತಂದೆತಾಯಿಯರು ಯೇಸುವಿನ್ನೂ ಶಿಶುವಾಗಿದ್ದಾಗ ಬಂದುಹೋಗಿದ್ದು, ಆಮೇಲೆ ಯೇಸು ಹನ್ನೆರಡು ವರ್ಷದವನಿದ್ದಾಗ ಮತ್ತೊಮ್ಮೆ ಭೇಟಿ ನೀಡಿದಾಗ ಧರ್ಮಪಂಡಿತರೊಂದಿಗೆ ಧರ್ಮಜಿಜ್ಞಾಸೆ ನಡೆಸಿದ್ದು, ಯೇಸು ಬಿಸಿರಕ್ತದ ತರುಣನಾಗಿ ಸ್ವತಂತ್ರ ಜೀವನ ನಡೆಸತೊಡಗಿದಾಗ ಮಗದೊಮ್ಮೆ ಭೇಟಿ ಕೊಟ್ಟಾಗ ದೇವಾಲಯವನ್ನು ಸಂತೆಯಾಗಿಸಿದ್ದ ವರ್ತಕರ ಜೊತೆ ಜಗಳ ತೆಗೆದಿದ್ದು ಇವು ಕಣ್ಣಿಗೆ ಕಟ್ಟಿದ ನೆನಪುಗಳು.

ಆದರೆ ಜೆರುಸಲೇಮಿಗೆ ಅವನ ಕೊನೆಯ ಭೇಟಿ ನಡೆದದ್ದು ಶುಭ ಶುಕ್ರವಾರಕ್ಕೆ ಹಿಂದಿನ ಭಾನುವಾರದಂದು. ಜೀವನದ ಬಹುಭಾಗವನ್ನು ಜುದೇಯ ನಾಡಿನಿಂದ ಹೊರಗೇ ಕಳೆದ ಅವನನ್ನು ಜನರು ಗಲಿಲೇಯದವನೆಂದೇ ಕರೆಯುತ್ತಿದ್ದರು. ಜೀವನದುದ್ದಕ್ಕೂ ಸಮಾಜಸುಧಾರಣೆ, ಮನಪರಿವರ್ತನೆ, ಬಡಿದೆಬ್ಬಿಸುವ ಕ್ರಾಂತಿಕಾರಿ ಮಾತುಗಳು, ಮತ್ತು ಲೆಕ್ಕವಿಲ್ಲದಷ್ಟು ಪವಾಡಕೃತ್ಯಗಳಲ್ಲಿ ಕಳೆದ ಯೇಸು ಕ್ರಿಸ್ತನು ತನ್ನದೇ ಆದ ಹಿಂಬಾಲಕರನ್ನು ಹೊಂದಿದ್ದರೂ ಆ ಶಿಷ್ಯರೆಲ್ಲ ಯೇಸುವಿನಂತೆ ಮಾನವಪ್ರೇಮದ ಹರಿಕಾರರಾಗಿದ್ದರು. ಮತ್ತೊಬ್ಬರನ್ನೂ ತನ್ನಂತೆಯೇ ಪ್ರೀತಿಸಬೇಕು ಎಂಬ ಯೇಸುವಿನ ಮಾತುಗಳು ಅವರಲ್ಲಿ ಅಚ್ಚೊತ್ತಿದ್ದವು.

ಪತಿತೆಯರನ್ನು ಸಾತ್ವಿಕ ಜೀವನಕ್ಕೆ ತಿರುಗುವಂತೆ ಮಾಡಿ ಪುನರುದ್ಧಾರ ಮಾಡಿದ, ಕುರುಡರಿಗೆ ಕಣ್ಣು ಬರಿಸಿದ, ಪಾರ್ಶ್ವವಾಯು ಪೀಡಿತರಿಗೆ ಬಲತುಂಬಿದ, ಶೋಷಿತರಲ್ಲಿ ಸಾಂತ್ವನದ ಹೊಳೆ ಹರಿಸಿದ. ಅಂದು ಕುಷ್ಟರೋಗಿಗಳನ್ನು ಪಾಪಿಷ್ಟರು ಎಂದು ಕರೆದು ಊರಿಂದಾಚೆಗೆ ನೂಕಲಾಗುತ್ತಿತ್ತು. ಯೇಸು ಅವರೆಡೆ ಕನಿಕರ ತೋರಿ ಮುಖ್ಯವಾಹಿನಿಗೆ ಕರೆತಂದ. ಈ ಎಲ್ಲ ಅದ್ಭುತಕ್ರಿಯೆಗಳ ಜೊತೆಜೊತೆಗೇ ಯೇಸು ಸಮಾಜವಾದದ ಬೀಜ ಬಿತ್ತಿದ. ಅದಕ್ಕೆ ಪ್ರೀತಿ ಮತ್ತು ಕ್ಷಮೆಯ ನೀರೆರೆದ.

ಜನರೂ ಸಹ ತಮ್ಮ ನಾಡಿನಲ್ಲಿ ದೇವರು ಸ್ವತಃ ಪ್ರವಾದಿಗಳ ಮೂಲಕ ಮಾತನಾಡಿ ತಮ್ಮನ್ನೆಲ್ಲ ಎಚ್ಚರಿಸುತ್ತಿದ್ದ ಪರಂಪರೆಯಂತೆಯೇ ಯೇಸುವೊಬ್ಬ ಪ್ರವಾದಿ ಎಂದು ನಂಬಿದ್ದರು. ಪ್ರವಾದಿಯಾಗಿ ಜನರಲ್ಲಿನ ಮೂಢನಂಬಿಕೆಗಳನ್ನು ಹೊಡೆದೋಡಿಸುತ್ತಿದ್ದ ಯೇಸು, ಅದಕ್ಕೆ ಅಡ್ಡಿಯಾಗಿದ್ದ ಪುರೋಹಿತ ವರ್ಗದವರನ್ನು ಮೂದಲಿಸುತ್ತಿದ್ದ. ಧರ್ಮದ ಗುತ್ತಿಗೆ ಹಿಡಿದವರಂತೆ ಜನರನ್ನು ಹಿಂಸಿಸುತ್ತಿದ್ದ ಪುರೋಹಿತರ ಡಂಭಾಚಾರವನ್ನು ಎಳೆಎಳೆಯಾಗಿ ಬಯಲಿಗೆಳೆಯುತ್ತಿದ್ದ ಯೇಸು ಕೆಲವರ ದ್ವೇಷ ಕಟ್ಟಿಕೊಂಡಿದ್ದು ನಿಜ. ಹಳ್ಳಿಗಾಡಿನ ಜನರ ಹಾಗೆಯೇ ಸಭಾಪ್ರಮುಖರಲ್ಲೂ ಪಂಡಿತರಲ್ಲೂ ಯೇಸುವನ್ನು ಮೆಚ್ಚಿಕೊಂಡವರು ಅನೇಕರಿದ್ದರು. ಅವರಿಂದಾಗಿಯೇ ತನ್ನ ಹಿಂದೆ ನಡೆಯುತ್ತಿದ್ದ ಸಂಚುಪಿತೂರಿಗಳ ಒಳಸುಳಿವು ಯೇಸುವಿಗೆ ಲಭ್ಯವಾಗುತ್ತಿತ್ತು.

ತಾನು ಅವಮಾನಕರ ಮರಣಕ್ಕೆ ಬಲಿಯಾಗಬೇಕಿದೆ ಎಂಬುದು ಅವನ ಅರಿವಿಗೆ ಬಂದ ಹಿಂದಿನ ದಿನ ಅಂದರೆ ಗುರುವಾರ ತನ್ನ ಬೋಧನೆಗಳ ಮೇರುತತ್ವಗಳನ್ನು ಅಧಿಕೃತವಾಗಿ ಅನುಷ್ಠಾನಗೊಳಿಸಿ ಕ್ರೖೆಸ್ತಧರ್ಮಕ್ಕೆ ಸುಭದ್ರ ಅಡಿಪಾಯ ಹಾಕಿದ.

ಶಿಷ್ಯರನ್ನು ‘ಸ್ನೇಹಿತರು’ ಎಂದು ಕರೆದು ಆಲಂಗಿಸಿ ಅವರ ಪಾದ ತೊಳೆದ. ರೊಟ್ಟಿರಸಗಳನ್ನು ಎಲ್ಲರೊಡನೆ ಹಂಚಿತಿಂದು ಇದೇ ದೇವರಿಗೆ ಸಲ್ಲತಕ್ಕ ಅತಿಪವಿತ್ರ ಯಜ್ಞಾರ್ಪಣೆ ಎಂದು ಘೊಷಿಸಿದ. ಹಿಂದೆ ಅನೇಕ ಹಿಂಬಾಲಕರಿದ್ದರೂ, ಅಪಾರ ಜನಪ್ರಿಯತೆ ಗಳಿಸಿದ್ದರೂ ಯೇಸು ಕ್ರಿಸ್ತನು ಜೆರುಸಲೇಮಿನಲ್ಲಿ ಪುರೋಹಿತಶಾಹಿಗೆ ಸುಲಭವಾದ ಬಲಿಪಶುವಾಗಿದ್ದು ಮಾತ್ರ ಒಗಟಾಗಿ ಉಳಿಯುತ್ತದೆ. ಯೇಸುವಿನ ಜೊತೆಜೊತೆಗೇ ಜೀವನ ಸವೆಸಿದ, ಅವನ ಎಲ್ಲ ಕಾರ್ಯಗಳನ್ನೂ ಬೋಧೆಗಳನ್ನೂ ನಿತ್ಯವೂ ಕಂಡು ಅನುಭವಿಸಿದ ಆಪ್ತ ಸಂಗಡಿಗರಿಗೂ ಇದೊಂದು ನಂಬಲಾಗದ ಸತ್ಯವಾಗಿತ್ತು. ಏನೋ ಒಂದು ಪವಾಡ ಘಟಿಸಿ, ಎಲ್ಲ ಹಿಂಸೆಗಳನ್ನೂ ಯೇಸು ಗೆದ್ದು ವಿರೋಧಿಗಳ ಮಣ್ಣುಮುಕ್ಕಿಸಿ ಹೊಸ ರಾಜ್ಯ ಸ್ಥಾಪಿಸುವನೆಂದೇ ಅವರು ನಂಬಿದ್ದರು.

ಅಂದು ಶುಕ್ರವಾರ. ಮಧ್ಯಾಹ್ನದ ಸುಡುಬಿಸಿಲು. ಗೊಲ್ಗೊಥಾ ಗುಡ್ಡದ ಮೇಲೆ, ಶಿಲುಬೆ ಮರದ ಕೊರಡಿಗೆ ಯೇಸುವಿನ ದೇಹವನ್ನು ಮೊಳೆಹೊಡೆದು ನೇತಾಡಿಸಲಾಗಿತ್ತು. ‘ಕ್ಷಮಿಸಿವರನೆಲೆ ತಂದೆ ತಾವೇನೆಸಗಿದೆವೆಂದರಿಯರಿವರು’ ಎಂದು ಹೇಳಿ, ಅಂಥ ಪಾಪಕೃತ್ಯವೆಸಗಿದವರನ್ನೂ ಕ್ಷಮಿಸಿ ಯೇಸು ಅಸುನೀಗಿದ. ಹೀಗೆ ಮರಣಕಾಲದಲ್ಲೂ ಶತ್ರುವನ್ನು ಕ್ಷಮಿಸೆಂದು ಕೋರುವವನು ದೇವರೇ ದಿಟ. ಹೀಗಾಗಿಯೇ ಈ ದಿನ ಗಾಡ್ ಫ್ರೈಡೆ- ಗುಡ್ ಫ್ರೈಡೆ ಅಂದರೆ ಶುಭ ಶುಕ್ರವಾರ.

(ಲೇಖಕರು ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net