ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿದ ರೈಲು! ದಾರಿ ಮಾಡಿಕೊಡಲು ಪೊಲೀಸ್​ ಹರಸಾಹಸ, ವಿಡಿಯೋ ವೈರಲ್​

Traffic Jam
Published on

ಲಖನೌ: ಬಸ್ಸು, ಕಾರು, ಲಾರಿ, ಬೈಕ್​ ಸೇರಿದಂತೆ ಮುಂತಾದ ವಾಹನಗಳು ಟ್ರಾಫಿಕ್​ ಜಾಮ್​ನಲ್ಲಿ ಸಿಲುಕುವದನ್ನು ಕಂಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ, ರೈಲೊಂದು ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಂಡಿತು ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಏಕೆಂದರೆ, ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಟ್ರಾಫಿಕ್​ ಜಾಮ್​ ಅನ್ನೋದು ಭಾರತ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದು. ಫ್ಲೈಓವರ್​, ರಸ್ತೆ ಅಗಲೀಕರಣದಂತಹ ಅನೇಕ ಪರಿಹಾರಗಳನ್ನು ಕಂಡುಕೊಂಡಿದ್ದರೂ ಟ್ರಾಫಿಕ್​ ಜಾಮ್​ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಪ್ರಮುಖ ನಗರಗಳಲ್ಲಿ ಟ್ರಾಫಿಕ್​ ಸಮಸ್ಯೆಯಿಂದ ಅನೇಕ ತೊಂದರೆಗಳು ಕೂಡ ಎದುರಾಗುತ್ತಿವೆ. ಅಚ್ಚರಿಯ ಸಂಗತಿಯೇನೆಂದರೆ, ಬೆಂಗಳೂರಿನಲ್ಲಿ ಟ್ರಾಫಿಕ್​ ಜಾಮ್​ನಿಂದ ವಾರ್ಷಿಕ 19 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂಬ ಸಂಶೋಧನಾ ವರದಿಯು ಕೂಡ ಬಹಿರಂಗವಾಗಿದೆ.

ಅನೇಕ ಜನರು ದೇಶದಲ್ಲಿ ವಿವಿಧ ರೀತಿಯ ಟ್ರಾಫಿಕ್ ಜಾಮ್ ಅನ್ನು ನೋಡಿದ್ದಾರೆ. ಆದರೆ, ಟ್ರಾಫಿಕ್ ಜಾಮ್​ನಲ್ಲಿ ರೈಲು ಸಿಕ್ಕಿಹಾಕಿಕೊಂಡಿರುವ ಘಟನೆ ಇದೀಗ ವೈರಲ್ ಆಗಿದೆ. ಹೇಳಬೇಕೆಂದರೆ ರೈಲ್ವೆ ಕ್ರಾಸಿಂಗ್​ನಲ್ಲಿ ರೈಲು ಆಗಮಿಸುವಾಗ ವಾಹನಗಳನ್ನು ತಡೆದು ನಿಲ್ಲಿಸಿ, ರೈಲಿಗೆ ಹೋಗಲು ದಾರಿ ಮಾಡಿಕೊಡಲಾಗುತ್ತದೆ. ಆದರೆ, ಕ್ರಾಸಿಂಗ್​ನಲ್ಲಿ ರೈಲೇ ಕೆಲ ಕಾಲ ನಿಂತು ವಾಹನಗಳಿಗೆ ಹೋಗಲು ದಾರಿ ಮಾಡಿಕೊಟ್ಟ ಪ್ರಸಂಗ ಇದಾಗಿದೆ.

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ವಾರಣಾಸಿಯ ಬನಾರಸ್​ನಲ್ಲಿ. ಭಾರೀ ಪ್ರಮಾಣದ ವಾಹನಗಳು ರೈಲ್ವೆ ಕ್ರಾಸಿಂಗ್​ನಲ್ಲಿ ಜಮಾಯಿಸಿದ್ದರಿಂದ ಟ್ರಾಫಿಕ್ ಜಾಮ್​ ಉಂಟಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅದೇ ಸಮಯದಲ್ಲಿ ಬರುತ್ತಿದ್ದ ರೈಲನ್ನು ನಿಲ್ಲಿಸಿ ವಾಹನಗಳು ಹೋಗಲು ದಾರಿ ಮಾಡಿಕೊಡಲಾಗಿದೆ. ಪೊಲೀಸ್​ ಟ್ರಾಫಿಕ್​ ಕ್ಲಿಯರ್​ ಮಾಡಲು ಹರಸಾಹಸ ಮಾಡುತ್ತಿರುವ ದೃಶ್ಯವನ್ನು ನೀವು ವಿಡಿಯೋದಲ್ಲಿ ನೋಡಬಹುದು.

ಬಾಲಾ ಎಂಬ ಹೆಸರಿನ ಎಕ್ಷ್​ (ಟ್ವಿಟರ್​) ಖಾತೆಯಲ್ಲಿ ಆ. 13ರಂದು ವಿಡಿಯೋ ಪೋಸ್ಟ್​ ಮಾಡಲಾಗಿದೆ. ಕೇವಲ ಮೂರೇ ದಿನದಲ್ಲಿ ಈ ವಿಡಿಯೋವನ್ನು 9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. 11 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net