

ಕುರುಕ್ಷೇತ್ರ: ಹನ್ನೆರಡನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಡ್ರಗ್ಸ್ ನೀಡಿ ಅರ್ಧ ಎಚ್ಚರದ ಸ್ಥಿತಿಯಲ್ಲಿ ಗ್ಯಾಂಗ್ ರೇಪ್ ಮಾಡಿರುವ ಪ್ರಕರಣವೊಂದು ಹರಿಯಾಣದ ಕುರುಕ್ಷೇತ್ರ ಜಿಲ್ಲೆಯಿಂದ ವರದಿಯಾಗಿದೆ. ಬಾಲಕಿಯ ಸ್ನೇಹಿತೆಯ ಸೋದರಸಂಬಂಧಿ ಸೇರಿದಂತೆ ಐವರು ಯುವಕರು ಈ ಹೇಯ ಕೃತ್ಯ ಎಸಗಿದ್ದು, ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳ ಹುಡುಕಾಟ ನಡೆದಿದೆ ಎನ್ನಲಾಗಿದೆ.
ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಹಳ್ಳಿಯೊಂದರ ನಿವಾಸಿ 17 ವರ್ಷದ ಬಾಲಕಿಯ ತಂದೆ ಫೆಬ್ರವರಿ 22 ರ ಬೆಳಿಗ್ಗೆ 7 ಗಂಟೆಗೆ ಆಕೆಯನ್ನು ಎಂದಿನಂತೆ ಶಾಲೆಗೆ ಡ್ರಾಪ್ ಮಾಡಿದ್ದರು. ಶಾಲೆಯ ನಂತರ 1.30 ರಿಂದ 4 ಗಂಟೆಯವರೆಗೆ ಇಂಗ್ಲೀಷ್ ಸಂಭಾಷಣೆ ಕಲಿಯಲು ಕೋಚಿಂಗ್ ಸೆಂಟರ್ಗೆ ಹೋಗಿಬರುತ್ತಿದ್ದ ಬಾಲಕಿ ಆ ದಿನ ಸಂಜೆಯಾದರೂ ಬರಲಿಲ್ಲ. ಪಾಲಕರು ಕೋಚಿಂಗ್ ಸೆಂಟರ್ಗೆ ಹೋಗಿ ವಿಚಾರಿಸಿದಾಗ ಅಂದು ಆಕೆ ಕ್ಲಾಸಿಗೆ ಹೋಗೇ ಇಲ್ಲ ಎಂದು ತಿಳಿದುಬಂತು.
ಮಗಳನ್ನು ಎಲ್ಲೆಡೆ ಹುಡುಕಿ ಸುಸ್ತಾದ ಪಾಲಕರು ಪೊಲೀಸರಿಗೆ ದೂರು ಸಲ್ಲಿಸಲು ಹೊರಟಿದ್ದಾಗ, 7 ಗಂಟೆಯ ವೇಳೆಗೆ ಇಬ್ಬರು ಹುಡುಗರು ಬೈಕಿನಲ್ಲಿ ಆಕೆಯನ್ನು ಕೂರಿಸಿಕೊಂಡು ಬರುತ್ತಿದ್ದುದು ಕಂಡುಬಂದಿದೆ. ಯೂನಿಫಾರಂನಲ್ಲಿದ್ದ ಮಗಳನ್ನು ಗುರುತಿಸಿದ ತಂದೆ ಬೈಕ್ ನಿಲ್ಲಿಸಿದಾಗ ಹಿಂದೆ ಕೂತಿದ್ದ ಹುಡುಗನು ಕಂಟ್ರಿ ಪಿಸ್ತೋಲನ್ನು ಆಕೆಯ ತಲೆಗೆ ಹಿಡಿದಿದ್ದ. ಆತನೊಂದಿಗೆ ಸೆಣಸಾಡಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ರಕ್ಷಿಸಲಾಯಿತು ಎನ್ನಲಾಗಿದೆ.
ನಡೆದದ್ದೇನು ? : ಬಾಲಕಿಯು ಶಾಲೆಯ ನಂತರ ಕೋಚಿಂಗ್ ಸೆಂಟರ್ಗೆ ಹೋಗುವ ಮೊದಲು ತನ್ನ ಸ್ನೇಹಿತೆಯ ಮನೆಗೆ ಹೋಗಿದ್ದಾಳೆ. ಅಲ್ಲಿ ತಲೆ ಸುತ್ತಿದಂತೆ ಆದಾಗ, ಸ್ನೇಹಿತೆ ತನ್ನ ಕಸಿನ್ ಆಕೆಯನ್ನು ಬೈಕ್ ಮೇಲೆ ಮನೆಗೆ ಬಿಟ್ಟುಬರುವುದಾಗಿ ಕಳುಹಿಸಿದ್ದಾಳೆ. ಆದರೆ ಆತ ಅವಳನ್ನು ಕುರುಕ್ಷೇತ್ರದ ಉಮ್ರಿ ಚೌಕ್ ಬಳಿಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಅದಾಗಲೇ ನಾಲ್ವರು ಯುವಕರು ಬಂದು ಕಾಯುತ್ತಿದ್ದು, ಎಲ್ಲರೂ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಅಪರಾಧ ಎಸಗುವ ವೇಳೆಯಲ್ಲಿ ಬಾಲಕಿಗೆ ಮಾದಕ ದ್ರವ್ಯಗಳನ್ನು ನೀಡಲಾಗಿತ್ತು ಎಂದು ತನಿಖೆ ನಡೆಸುತ್ತಿರುವ ಸಬ್ಇನ್ಸ್ಪೆಕ್ಟರ್ ಪ್ರವೀನ್ ಕೌರ್ ಹೇಳಿದ್ದಾರೆ.
ಸಂತ್ರಸ್ತೆಯ ತಂದೆಯ ದೂರಿನ ಮೇಲೆ ಎಫ್.ಐ.ಆರ್. ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. 18 ವರ್ಷದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬ ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ಅಬ್ಸರ್ವೇಷನ್ ಹೋಂಗೆ ಕಳುಹಿಸಲಾಗಿದೆ. ಇನ್ನುಳಿದ ಈರ್ವರು ಆರೋಪಿಗಳ ಪತ್ತೆ ಕಾರ್ಯ ಸಾಗಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಯ ಸ್ನೇಹಿತೆಯ ಪಾತ್ರ ಏನಾಗಿತ್ತು ಎಂಬುದರ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಕುರುಕ್ಷೇತ್ರ ಎಸ್ಪಿ ಹಿಮಾಂಶು ಗಾರ್ಗ್ ಹೇಳಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ