'ಕಾವೇರಿ'ದ ಹೋರಾಟ; ನಟಿ ಪೂಜಾ ಗಾಂಧಿ ಮತ್ತು ಶ್ರೀಮುರುಳಿ ಹೇಳಿದ್ದೇನು?

Untitled design - 2023-09-29T122846.463
Published on

ಬೆಂಗಳೂರು: ರಾಜ್ಯದಲ್ಲಿ ಕರ್ನಾಟಕ ಬಂದ್​ ನಡೆಸುವ ಮುಖೇನ ತಮಿಳುನಾಡು ವಿರುದ್ಧ ಪ್ರತಿಭಟಿಸುತ್ತಿರುವ ವಿವಿಧ ಕನ್ನಡ ಪರ ಸಂಘಟನೆಗಳೊಂದಿಗೆ ಕನ್ನಡ ಚಿತ್ರರಂಗದವರು ಹೋರಾಟ ಆರಂಭಿಸಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಬೃಹತ್ ವೇದಿಕೆಯಲ್ಲಿ ಸ್ಯಾಂಡಲ್​ವುಡ್​ನ ಕಲಾವಿದರು ಭಾಗಿಯಾಗಿ, ಕಾವೇರಿ ಕೂಗಿಗೆ ದನಿಗೂಡಿಸಿದ್ದಾರೆ.

ಹೋರಾಟದಲ್ಲಿ ಭಾಗಿಯಾಗಿದ್ದ ನಟಿ ಪೂಜಾ ಗಾಂಧಿ, "ನಮ್ಮ ಕನ್ನಡಿಗರಿಗೆ ಸಹನೆಯಿದೆ. ಕೆ.ಆರ್.ಎಸ್ ಡ್ಯಾಂ ತುಂಬಲಿ, ಎಲ್ಲರೂ ಅಹಂ ಬಿಟ್ಟು ಚರ್ಚೆ ಮಾಡಬೇಕು. ಮೇಕೆದಾಟು ವಿಚಾರವಾಗಿ ಕೂಡ ನಾವೆಲ್ಲರೂ ಚರ್ಚಿಸಬೇಕು" ಎಂದು ಹೇಳಿದರು.

"ಇಡೀ ಚಿತ್ರರಂಗ ನೆಲ, ಜಲ, ಭಾಷೆಯ ವಿಷಯ ಬಂದಾಗ ಒಗ್ಗಟಿನಿಂದ ಹೋರಾಡುತ್ತೇವೆ. ಎಲ್ಲ ಸಮಸ್ಯೆಗೂ ಪರಿಹಾರ ಇರುತ್ತದೆ. ಎಲ್ಲರೂ ಚೆನ್ನಾಗಿರಬೇಕು. ಇದು ನಮ್ಮ ನೀರು, ನಮ್ಮದೇ ಹಕ್ಕು" ಎಂದು ಹೇಳಿದರು.

ಇದೇ ವೇಳೆ ನಟ ಶ್ರೀಮುರುಳಿ ಕೂಡ ಮಾತನಾಡಿದ್ದು, "ಕಾವೇರಿ ಯಾವತ್ತಿದ್ದರೂ ನಮ್ಮ ಹಕ್ಕು. ಅನ್ಯ ಭಾಷೆ, ಅನ್ಯ ರಾಜ್ಯದವರ ಮೇಲೆ ಗೌರವವಿದೆ. ಕಾವೇರಿ ವಿಚಾರಕ್ಕೆ ಬಂದರೆ ನಾವು ಸುಮ್ಮನಿರುವುದಿಲ್ಲ. ಎರಡು ರಾಜ್ಯದಲ್ಲಿ ಈ ವಿಚಾರವಾಗಿ ಗಲಭೆ ಉಂಟಾಗುತ್ತಿದೆ. ಆದ್ರೆ, ಈ ವಿಷಯಗಳಲ್ಲಿ ರಾಜಕಾರಣಿಗಳು ಪ್ರತಿ ಬಾರಿಯೂ ಮೌನವಾಗುತ್ತಾರೆ. ದಯವಿಟ್ಟು ನೀರಿನ ವಿಚಾರದಲ್ಲಿ ರಾಜಕೀಯ ಬೇಡ. ನಾಡು, ನುಡಿ, ನೆಲ, ಜಲದ ವಿಚಾರಕ್ಕೆ ನಾವು ಎಂದಿಗೂ ರಾಜೀಯಾಗುವುದಿಲ್ಲ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net