ಹೊಸ ಆರ್ಥಿಕ ವರ್ಷದಲ್ಲಿ ಬದುಕಿನಲ್ಲೇನು ಬದಲಾವಣೆ?

Suddi Samagra
Published on
ಪ್ರಸಕ್ತ ಸಾಲಿನ ಹಣಕಾಸು ವರ್ಷ ಮಾರ್ಚ್ 31ಕ್ಕೆ ಕೊನೆಯಾಗುತ್ತಿದೆ. ಹೊಸ ಹಣಕಾಸು ವರ್ಷ (2022-23) ಏಪ್ರಿಲ್ 1 ರಂದು ಶುರುವಾಗುತ್ತಿದೆ. ಈಗಾಗಲೇ ನಿಗದಿಯಾದಂತೆ ಹೊಸ ಆರ್ಥಿಕ ವರ್ಷದಲ್ಲಿ ಬದುಕಿನ ಮೇಲೆ ಪರಿಣಾಮ ಬೀರುವ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿವೆ. ಬ್ಯಾಂಕಿಂಗ್​ನಿಂದ ಹಿಡಿದು ಹೂಡಿಕೆಯ ತನಕ ಆಗುವ ಬದಲಾವಣೆಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ಅಂಚೆ ಇಲಾಖೆ ನಿಯಮ: ಅಂಚೆ ಇಲಾಖೆಯ ಕೆಲವು ಯೋಜನೆಗಳ ನಿಯಮಗಳು ಏಪ್ರಿಲ್ ಒಂದರಿಂದ ಬದಲಾಗಲಿವೆ. ಅವಧಿ ಠೇವಣಿ ಖಾತೆ, ಹಿರಿಯ ನಾಗರಿಕರ ಉಳಿತಾಯ ಖಾತೆ ಮತ್ತು ಮಾಸಿಕ ಆದಾಯ ಯೋಜನೆ (ಎಂಐಎಸ್)ಗಳಲ್ಲಿ ಹೂಡಿಕೆ ಮಾಡಬೇಕಾದರೆ ಬ್ಯಾಂಕ್ ಖಾತೆ ಅಥವಾ ಉಳಿತಾಯ ಖಾತೆ ತೆರೆಯುವುದಕ್ಕೆ ಇರುವ ನಿಯಮ ಬದಲಾವಣೆ ಆಗಲಿದೆ. ಇದರ ಜತೆಗೆ ಸಣ್ಣ ಉಳಿತಾಯ ಖಾತೆಯ ಬಡ್ಡಿಯನ್ನು ಇನ್ನು ಅಂಚೆ ಇಲಾಖೆಯ ಉಳಿತಾಯ ಖಾತೆ ಅಥವಾ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಇದಕ್ಕೆ ಹೊರತಾಗಿ ಸಣ್ಣ ಉಳಿತಾಯ ಖಾತೆಗಳನ್ನು ಬ್ಯಾಂಕ್ ಖಾತೆ ಅಥವಾ ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಜೋಡಿಸಬೇಕಾದ್ದು ಕಡ್ಡಾಯವಾಗಲಿದೆ.

ಕ್ರಿಪ್ಟೋ ಕರೆನ್ಸಿ ಮೇಲೆ ತೆರಿಗೆ: ಕ್ರಿಪ್ಟೋ ಕರೆನ್ಸಿ, ಎನ್​ಎಫ್​ಟಿಗಳು ಸೇರಿ ಎಲ್ಲ ಮಾದರಿಯ ವರ್ಚುವಲ್ ಡಿಜಿಟಲ್ ಅಸೆಟ್ಸ್ (ವಿಡಿಎ) ಅನ್ನು ಲಾಭಾಂಶದಲ್ಲಿ ಮಾರಾಟ ಮಾಡಿದರೆ ಅದಕ್ಕೆ ಶೇಕಡ 30ರ ದರದಲ್ಲಿ ತೆರಿಗೆ ಅನ್ವಯವಾಗಲಿದೆ. ಇದಕ್ಕೆ ಹೊರತಾಗಿ, ಯಾವಾಗೆಲ್ಲ ಕ್ರಿಪ್ಟೋ ಅಸೆಟ್ ಮಾರಾಟ ಮಾಡಲಾಗುತ್ತದೆಯೋ ಆಗೆಲ್ಲ ಶೇಕಡ 1 ಟಿಡಿಎಸ್ ಕಡಿತವಾಗಲಿದೆ. ಈ ಸಲದ ಬಜೆಟ್​ನಲ್ಲಿ ಈ ವಿಚಾರವನ್ನು ಕೇಂದ್ರ ಸರ್ಕಾರ ಘೊಷಿಸಿತ್ತು. ಕ್ರಿಪ್ಟೋ ಹೂಡಿಕೆ ಮೇಲಿನ ನಷ್ಟವನ್ನು ತೆರಿಗೆ ವಿನಾಯಿತಿಗಾಗಿ ತೋರಿಸುವುದಕ್ಕೆ ಅವಕಾಶವಿಲ್ಲ.

ಮನೆ ಖರೀದಿ ದುಬಾರಿ: ಚೊಚ್ಚಲ ಮನೆ ಖರೀದಿದಾರರಿಗೆ ಆದಾಯ ತೆರಿಗೆ ಕಾಯ್ದೆಯ 80ಇಇಎ ಸೆಕ್ಷನ್ ಪ್ರಕಾರ ತೆರಿಗೆ ವಿನಾಯಿತಿಯನ್ನು ಕೇಂದ್ರ ಸರ್ಕಾರ ನೀಡಿತ್ತು. ಇದು ಏಪ್ರಿಲ್ 1ರಿಂದ ಸ್ಥಗಿತಗೊಳ್ಳಲಿದೆ. ಇದರೊಂದಿಗೆ ಚೊಚ್ಚಲ ಮನೆ ಖರೀದಿ ದುಬಾರಿ ಆಗಲಿದೆ.

ಔಷಧಗಳ ಬೆಲೆ ಏರಿಕೆ: ನೋವು ನಿವಾರಕಗಳು, ಆಂಟಿ ಬಯಾಟಿಕ್, ಆಂಟಿ ವೈರಸ್ ಸೇರಿ 800ಕ್ಕೂ ಹೆಚ್ಚು ಔಷಧಗಳ ಬೆಲೆಯಲ್ಲಿ ಶೇಕಡ 10ಕ್ಕೂ ಹೆಚ್ಚು ಏರಿಕೆ ಉಂಟಾಗಲಿದೆ. ನ್ಯಾಷನಲ್ ಫಾರ್ವಸ್ಯೂಟಿಕಲ್ ಪ್ರೖೆಸಿಂಗ್ ಅಥಾರಿಟಿ (ಎನ್​ಪಿಪಿಎ) ಶುಕ್ರವಾರ ಸಗಟು ಮಾರಾಟ ದರ ಸೂಚ್ಯಂಕದಲ್ಲಿ ಶೇಕಡ 10.7ರ ಬದಲಾವಣೆಯನ್ನು ಘೊಷಿಸಿದೆ. ಈ ದರ ಪರಿಷ್ಕರಣೆ ಪ್ರಸಕ್ತ ವರ್ಷ ಮತ್ತು ಹಿಂದಿನ ವರ್ಷಕ್ಕೂ ಅನ್ವಯ.

ಏಕ್ಸಿಸ್ ಬ್ಯಾಂಕ್ ನಿಯಮ: ಏಕ್ಸಿಸ್ ಬ್ಯಾಂಕ್ ತನ್ನ ಉಳಿತಾಯ ಖಾತೆಯಲ್ಲಿನ ತಿಂಗಳ ನಿರ್ವಹಣಾ ಮಿತಿಯನ್ನು 10,000 ರೂಪಾಯಿಯಿಂದ 12,000 ರೂಪಾಯಿಗೆ ಏರಿಸುತ್ತಿದೆ. ಇದು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.

ಐಟಿಆರ್ ಅಪ್ಡೇಟ್ ಸಲ್ಲಿಕೆ: ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ನಲ್ಲಿನ ಆರಂಭಿಕ ದೋಷಗಳನ್ನು ಸರಿಪಡಿಸಿ ಮರು ಸಲ್ಲಿಸುವುದಕ್ಕೆ ಅವಕಾಶ ಸಿಗಲಿದೆ. ಪ್ರತಿ ಹಣಕಾಸು ವರ್ಷದ ಐಟಿಆರ್ ದೋಷ ಸರಿಪಡಿಸಿ ಮರುಸಲ್ಲಿಕೆಗೆ ಎರಡು ವರ್ಷಗಳ ಕಾಲಾವಕಾಶ ಇರಲಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆ: ರಾಜ್ಯ ಸರ್ಕಾರದ ಉದ್ಯೋಗಿಗಳ ವೇತನದಿಂದ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್​ಪಿಎಸ್) ಕಡಿತದ ಕ್ಲೇಮನ್ನು ಆದಾಯ ತೆರಿಗೆಯ ಸೆಕ್ಷನ್ 80 ಸಿಸಿಡಿ (2) ಪ್ರಕಾರ ಸಲ್ಲಿಸಲು ಸಾಧ್ಯವಾಗಲಿದೆ. ಮೂಲವೇತನ ಮತ್ತು ಡಿಯರ್​ನೆಸ್ ಅಲೋವೆನ್ಸ್ ನ ಶೇಕಡ 14ರ ಪಾಲನ್ನು ಉದ್ಯೋಗದಾತರು ಭರಿಸಲಿದ್ದಾರೆ.

ಪಿಎಫ್ ಖಾತೆ ಮೇಲೆ ತೆರಿಗೆ: ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ (ಇಪಿಎಫ್) ಗೆ ಉದ್ಯೋಗಿಗಳು ನೀಡುವ ದೇಣಿಗೆ ವರ್ಷಕ್ಕೆ 2.5 ಲಕ್ಷ ರೂಪಾಯಿ ಮಿತಿ ಏಪ್ರಿಲ್ 1ರಿಂದ ಅನ್ವಯವಾಗಲಿದೆ. ದೇಣಿಗೆ ಮಿತಿ 2.5 ಲಕ್ಷ ರೂಪಾಯಿ ಮೀರಿದರೆ ಅದಕ್ಕೆ ಉದ್ಯೋಗಿಗಳು ತೆರಿಗೆ ಪಾವತಿಸಬೇಕು.

ಕೋವಿಡ್ ಚಿಕಿತ್ಸಾ ವೆಚ್ಚ: ಕೋವಿಡ್ ಸಂಬಂಧಿತ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕೆ ತೆರಿಗೆ ವಿನಾಯಿತಿಯನ್ನು ಕೇಂದ್ರ ಸರ್ಕಾರವು 2021ರ ಜೂನ್​ನಲ್ಲಿ ಘೊಷಿಸಿತ್ತು. ಇದರಂತೆ ಕೋವಿಡ್ ಕಾರಣಕ್ಕೆ ಸಾವು ಸಂಭವಿಸಿದ್ದರೆ ಅಂಥವರ ಮನೆಯವರಿಗೆ ಆ ಸಾವು ಸಂಭವಿಸಿ ಒಂದು ವರ್ಷದ ಒಳಗೆ ಕೋವಿಡ್ ಚಿಕಿತ್ಸಾ ವೆಚ್ಚಕ್ಕೆ ಗರಿಷ್ಠ 10 ಲಕ್ಷ ರೂಪಾಯಿ ತನಕದ ತೆರಿಗೆ ವಿನಾಯಿತಿ ಅನ್ವಯ ಎಂದು ಸರ್ಕಾರ ಹೇಳಿತ್ತು.

ಅಂಗವಿಕಲರ ಪಾಲಕರಿಗೆ ವಿನಾಯಿತಿ: ಅಂಗವಿಕಲರ ಪಾಲಕರು ಅಥವಾ ಪೋಷಕರಿಗೆ ಕೆಲವು ಷರತ್ತು ಬದ್ಧ ತೆರಿಗೆ ವಿನಾಯಿತಿ ಲಭ್ಯವಾಗಲಿದೆ. ಇದು ಪಾಲಕರು ಅಥವಾ ಪೋಷಕರ ಒಟ್ಟು ಆದಾಯದ ಮೇಲೆ ಅನ್ವಯವಾಗಲಿದೆ.

ಜಿಎಸ್​ಟಿ ನಿಯಮ ಸರಳ: ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್್ಸ ಮಂಡಳಿಯು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ)ಯ ಅಧೀನ ಇ-ಚಲನ್​ಗಳ ವಿತರಣೆಯ ವಹಿವಾಟಿನ ಮಿತಿಯನ್ನು ಹಿಂದಿನ 50 ಕೋಟಿ ರೂಪಾಯಿಯಿಂದ 20 ಕೋಟಿ ರೂಪಾಯಿಗೆ ಇಳಿಕೆ ಮಾಡಲಾಗುತ್ತಿದೆ.

ಅಡುಗೆ ಅನಿಲ ದರ ಏರಿಕೆ: ಪ್ರತಿ ತಿಂಗಳಿನಂತೆ ಅಡುಗೆ ಅನಿಲದ ದರ ಏಪ್ರಿಲ್ 1ರಿಂದ ಏರಿಕೆಯಾಗುವ ಸಾಧ್ಯತೆ ಇದೆ. ಪೆಟ್ರೋಲ್, ಡೀಸೆಲ್ ದರಗಳು ನಿತ್ಯ ಪರಿಷ್ಕರಣೆ ಆಗುವಂತೆ ಅಡುಗೆ ಅನಿಲ ದರ ತಿಂಗಳಿಗೆ ಒಮ್ಮೆ ಪರಿಷ್ಕರಣೆ ಆಗುತ್ತದೆ.

ಪ್ಯಾನ್-ಆಧಾರ್ ಜೋಡಣೆ: ಪ್ಯಾನ್ ಮತ್ತು ಆಧಾರ್ ಸಂಖ್ಯೆ ಜೋಡಣೆಗೆ ಮಾರ್ಚ್ 31 ಕೊನೇ ದಿನ. ಅಷ್ಟರೊಳಗೆ ಜೋಡಿಸದಿದ್ದರೆ ಏಪ್ರಿಲ್ 1ರಿಂದ ಪ್ಯಾನ್ ನಿಷ್ಕ್ರಿಯವಾಗಲಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234 ಎಚ್ ಪ್ರಕಾರ ಗರಿಷ್ಠ 1,000 ರೂಪಾಯಿ ತನಕ ದಂಡ ತೆರಬೇಕಾದೀತು.

ಆಡಿ ಕಾರು ತುಟ್ಟಿ: ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿ ಆಡಿ ಭಾರತದಲ್ಲಿ ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸಲಿದೆ. ಇದರಂತೆ, ಎಲ್ಲ ಮಾದರಿಯ ವಾಹನಗಳ ಬೆಲೆಗಳು ಶೇ. 3ರಷ್ಟು ಹೆಚ್ಚಾಗಲಿದೆ. ಏಪ್ರಿಲ್ 1 ರಿಂದ ಹೊಸ ಬೆಲೆ ಅನ್ವಯವಾಗುತ್ತದೆ.

ಥರ್ಡ್ ಪಾರ್ಟಿ ಪ್ರೀಮಿಯಂ ಹೆಚ್ಚಳ: ಹೊಸ ಕಾರು, ಬೈಕ್​ನ ದರ ಹೆಚ್ಚಾಗುವ ಸಾಧ್ಯತೆ ಇದೆ. ರಸ್ತೆ ಸಾರಿಗೆ ಸಚಿವಾಲಯವು ವಿಮಾ ನಿಯಂತ್ರಕ (ಐಆರ್​ಡಿಏಐ)ದೊಂದಿಗೆ ಸಮಾಲೋಚಿಸಿ 2022-23ರ ಹಣಕಾಸು ವರ್ಷಕ್ಕೆ ಅನ್ವಯವಾಗುವ ವ್ಯಕ್ತಿ ವಿಮೆಗಾಗಿ ಶೇಕಡ 17 ರಿಂದ 23 ರಷ್ಟು ಹೆಚ್ಚು ಪಾವತಿಸಬೇಕಾಗಲಿದೆ. ಹೊಸ ದರಗಳ ನಂತರ, 1500 ಸಿಸಿ ವರೆಗಿನ ವಾಹನವನ್ನು ಖರೀದಿಸುವವರು ಥರ್ಡ್ ಪಾರ್ಟಿ ವಿಮೆಗೆ 1200 ರೂ. ವರೆಗೆ ಮತ್ತು 150 ಸಿಸಿ ವರೆಗಿನ ದ್ವಿಚಕ್ರ ವಾಹನಕ್ಕೆ 600 ರೂ.ಹೆಚ್ಚು ಪಾವತಿಸಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net