ವನ್ಯಜೀವಿಗಳ ರಕ್ಷಣೆಗೆ ಕೈಗೊಂಡ ಕ್ರಮಗಳೇನು? ರಾಜ್ಯಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

highcourt
Published on

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ವಿದ್ಯುತ್ ಸ್ಪರ್ಶ ಹಾಗೂ ಅಸ್ವಾಭಾವಿಕ ಕಾರಣಗಳಿಂದಾಗಿ ವನ್ಯಜೀವಿಗಳು ಸಾವನ್ನಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಈ ಕುರಿತು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ.

ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧಾರದ ಮೇಲೆ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಲು ಆದೇಶಿಸಿತು.

ಅಲ್ಲದೆ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿದ್ದು, ಮುಂದಿನ ವಿಚಾರಣೆ ವೇಳೆ ಲಿಖಿತ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಜು.1ಕ್ಕೆ ಮುಂದೂಡಿತು.

ಆಶ್ವತ್ಥಾಮ ಎಂಬ ಆನೆ ಮೈಸೂರಿನಲ್ಲಿ ಸಾವಿಗೀಡಾಗಿದೆ. ಚಿಕ್ಕಮಗಳೂರಿನಲ್ಲಿ ಮತ್ತೊಂದು ಆನೆ ಹಾಗೂ ಮಡಿಕೇರಿಯಲ್ಲಿ ಎರಡು ಆನೆಗಳು ಮೃತಪಟ್ಟಿವೆ. ರಾಜ್ಯದಲ್ಲಿ ವಿದ್ಯುತ್ ಸ್ಪರ್ಶ ಮತ್ತು ಅಸ್ವಭಾವಿಕ ಕಾರಣಗಳಿಂದ ವನ್ಯಜೀವಿಗಳು ಸಾವನ್ನಪ್ಪುತ್ತಿವೆ. ಇದಕ್ಕೆ ಎಚ್ಚರಿಕೆ ವಹಿಸದಿರುವುದೇ ಮುಖ್ಯ ಕಾರಣ.

ಹಾಗಾಗಿ ನ್ಯಾಯಾಲಯ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಂವಿಧಾನದ 226ನೇ ವಿಧಿಯಡಿ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಆದೇಶಿಸಿತು.

ಪ್ರಕರಣ ಸಂಬಂಧ ಅರಣ್ಯ ಇಲಾಖೆ ಸೇರಿ ಸಂಬಂಧಪಟ್ಟ ಅಧಿಕಾರಿಗಳು ಶಾಸನಬದ್ಧ ಕಾರ್ಯಗಳ ಕುರಿತಂತೆ ತಿಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದಿನ ವಿಚಾರಣೆ ವೇಳೆ ಪ್ರತಿವಾದಿ ಇಲಾಖೆಗಳ ಅಧಿಕಾರಿಗಳು, ಆನೆ ಸೇರಿ ವನ್ಯಜೀವಿಗಳ ಅಸ್ವಾಭಾವಿಕ ಸಾವುಗಳನ್ನು ತಡೆಯುವುದು ಮತ್ತು ಅವುಗಳಿಗೆ ರಕ್ಷಣೆ ಒದಗಿಸುವ ಕುರಿತು ಕೈಗೊಂಡಿರುವ ಕ್ರಮಗಳೇನು? ಆನೆಗಳ ಸಾವುಗಳನ್ನು ತಡೆಯುವುದಕ್ಕೆ ಕೈಗೊಂಡಿರುವ ಕ್ರಮಗಳೇನು? ಈ ರೀತಿಯ ಸಾವುಗಳಿಗೆ ಯಾವ ರೀತಿ ಆಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸಲಾಗುವುದು ಎಂಬ ಪ್ರಶ್ನೆಗಳಿಗೆ ಮುಂದಿನ ವಿಚಾರಣೆ ವೇಳೆ ಉತ್ತರ ನೀಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net