ಚಿತ್ರರಂಗದಲ್ಲಿ 'ಸಾರಥಿ'ಗಿರುತ್ತ ಉಳಿವು​? ಮುಂದಿನ ಚಿತ್ರಗಳ ಕಥೆಯೇನು? ಹೀಗಿದೆ ವರದಿ

Untitled design - 2024-06-15T214027.330
Published on

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಮತ್ತು ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಆರೋಪಿಗಳು ಇದೀಗ ಬೆಂಗಳೂರು ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಪವಿತ್ರಾಗೆ ಅಶ್ಲೀಲ ಸಂದೇಶ ಮತ್ತು ಫೋಟೋ ಕಳಿಸಿದ ಎಂಬ ಕಾರಣಕ್ಕೆ ಶೆಡ್​ನಲ್ಲಿ ದರ್ಶನ್​ ಮತ್ತು ಬಂಧಿತ ಆರೋಪಿಗಳು, ಚಿತ್ರಹಿಂಸೆ ಕೊಟ್ಟು ಹತ್ಯೆಗೈದಿದ್ದಾರೆ ಎಂದು ಪೊಲೀಸರ ವರದಿಯಲ್ಲಿ ತಿಳಿದುಬಂದಿದೆ. ಸದ್ಯ ನಟನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಭರದಿಂದ ಸಾಗುತ್ತಿದೆ.

ಒಂದೆಡೆ ದರ್ಶನ್​ ಕೊಲೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿ ಜೈಲುಪಾಲಾದರೆ, ಮತ್ತೊಂದೆಡೆ ಅವರನ್ನು ಕನ್ನಡ ಚಿತ್ರರಂಗದಿಂದ ಸಂಪೂರ್ಣವಾಗಿ ನಿಷೇಧಿಸಬೇಕು. ಯಾವುದೇ ಚಿತ್ರಗಳನ್ನು ಮಾಡಲು ಅನುಮತಿ ಕೂಡ ಕೊಡಬಾರದು ಎಂಬ ಕೂಗುಗಳು ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿವೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಪ್ರಕರಣದಲ್ಲಿ ಅಂತಿಮ ವರದಿ ಏನು ಬರಲಿದೆ ಎಂದು ನೋಡಿಕೊಂಡು ನಾವು ನಿರ್ಣಯಿಸುತ್ತೇವೆ ಎಂದು ತಿಳಿಸಿದೆ.

ಅತ್ತ ಬಾಕ್ಸ್ ಆಫೀಸ್​ ಸುಲ್ತಾನನಾಗಿದ್ದ ದರ್ಶನ್ ಸದ್ಯ ಜೈಲುಪಾಲಾಗುತ್ತಿದ್ದಂತೆ ಇತ್ತ ಕನ್ನಡ ಚಿತ್ರರಂಗದಲ್ಲಿ ಮಂಕು ಕವಿದಂತಾಗಿದೆ. ಸದ್ಯ ಬ್ಯಾನ್ ವಿಷಯದಲ್ಲಿಯೂ ಸಿಲುಕಿರುವ ದರ್ಶನ್ ಮುಂದಿನ ದಿನಗಳಲ್ಲಿ ಈ​ ಪ್ರಕರಣದಿಂದ ಹೊರಬಂದು ಸಿನಿಮಾ ಮಾಡಿದರೆ, ಆಶ್ಚರ್ಯ ಪಡುವ ಮಾತಿಲ್ಲ. ಆದರೆ, ಹಿಂದಿನಂತೆ ಪ್ರೇಕ್ಷಕರು ಚಿತ್ರಕ್ಕೆ ಬೆಂಬಲ ಕೊಟ್ಟರೆ, ಚಿತ್ರರಂಗದವರು ಸಾಥ್ ನೀಡಿದರೆ ಮಾತ್ರ ಚಿತ್ರಗಳಿಗೆ ಗೆಲುವು ಸಿಗುವ ಸಾಧ್ಯತೆಯಿದೆ.

ಪ್ರಸ್ತುತ ದರ್ಶನ್ ಅಭಿನಯದ 'ಡೆವಿಲ್'​ ಸಿನಿಮಾ ಇದೇ ಡಿಸೆಂಬರ್ 27ಕ್ಕೆ ರಿಲೀಸ್ ಆಗಲು ಸಜ್ಜಾಗಿತ್ತು. ಆದರೆ, ಈ ಘಟನೆಯಿಂದ ಇದೀಗ ಚಿತ್ರ ಅರ್ಧಕ್ಕೆ ಸ್ಥಗಿತಗೊಂಡಿದೆ. ಚಿತ್ರತಂಡದ ಮುಂದಿನ ನಡೆಯೇನು ಎಂಬುದು ಪ್ರಶ್ನಾರ್ಥಕ. ನಿರ್ದೇಶಕ ಪ್ರೇಮ್​ ಜತೆಗೆ ದರ್ಶನ್​ರ ಮತ್ತೊಂದು ಚಿತ್ರ ಘೋಷಣೆಯಾಗಿತ್ತು. ಇದರೊಟ್ಟಿಗೆ ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿಬರಲಿರುವ 'ವೀರ ಲಕ್ಷಣ ಸಿಂಧೂರ' ಸಿನಿಮಾ ಕೂಡ ಸೆಟ್ಟೇರುವ ಹಂತದಲ್ಲಿತ್ತು. ಸದ್ಯ ಈ ಎಲ್ಲಾ ಸಿನಿಮಾಗಳ ಕಥೆ ಮುಂದೇನಾಗಲಿದೆ ಎಂಬುದೇ ಸದ್ಯ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net