

ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ದ್ವೀತಿಯ ಪಿಯು ಪರೀಕ್ಷೆಯ ನಡೆಯುತ್ತಾ.. ಇಲ್ಲವೇ ರದ್ದಾಗುತ್ತಾ.. ಎಂಬ ಕುತೂಹಲ ಪ್ರಶ್ನೆಗೆ ನಾಳೆ ಬೆಳಗ್ಗೆ ಉತ್ತರ ದೊರೆಯಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿ ಬಳಿ ಮಾತುಕತೆ ನಡೆಸಿದ್ದು, ಈ ವಿಚಾರವಾಗಿ ಶುಕ್ರವಾರ (ಜೂ.4) ಬೆಳಗ್ಗೆ 10 ಗಂಟೆಗೆ ಸಚಿವರು ಮಾಧ್ಯಮ ಸುದ್ದಿಗೋಷ್ಠಿ ಕರೆದಿದ್ದು, ಪರೀಕ್ಷೆಯ ನಿರ್ಧಾರ ಪ್ರಕಟಿಸಲಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ರದ್ದು ಮಾಡುವ ಸಾಧ್ಯತೆ ಹೆಚ್ಚಿದ್ದು, ದ್ವಿತೀಯ ಪಿಯು ಪರೀಕ್ಷೆಯನ್ನು ಸರಳವಾಗಿ ನಡೆಸಲು ಸಚಿವರು ಆಲೋಚಿಸಿದ್ದಾರೆಂದು ತಿಳಿದು ಬಂದಿದೆ. ಈಗಾಗಲೇ ಸಚಿವರು ಶಿಕ್ಷಣ ತಜ್ಞರು, ಪಾಲಕರು, ಖಾಸಗಿ ಶಾಲೆಗಳ ಒಕ್ಕೂಟಗಳ ಜತೆಗೆ ಮಾತುಕತೆ ನಡೆಸಿದ್ದಾರೆ.
ಪಾಲಕರು ಮತ್ತು ಶಿಕ್ಷಣ ತಜ್ಞರು ಎರಡೂ ಪರೀಕ್ಷೆಗಳನ್ನು ರದ್ದು ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ, ಖಾಸಗಿ ಸಂಘಟನೆಗಳು ಯಾವುದೇ ಕಾರಣಕ್ಕೂ ಪರೀಕ್ಷೆ ರದ್ದು ಮಾಡಬಾರದು ಬದಲಾಗಿ ಸರಳವಾಗಿ ನಡೆಸಬೇಕೆಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಕೆಲವು ಸಚಿವರು ದ್ವೀತಿಯ ಪಿಯು ಪರೀಕ್ಷೆ ರದ್ದು ಮಾಡಬಾರದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಎಸ್ಸೆಸ್ಸೆಲ್ಸಿಯ 8 ಲಕ್ಷ ಮತ್ತು ದ್ವೀತಿಯ ಪಿಯುನ 6 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಪರೀಕ್ಷೆ ನಾಳೆ ನಿರ್ಧಾರವಾಗಲಿದೆ.