

ಬೆಂಗಳೂರು:
ಪಶ್ಚಿಮಘಟ್ಟದಲ್ಲಿ ಗುಡ್ಡಗಳು ಕುಸಿಯುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಈ ಬಗ್ಗೆ ಕೂಡಲೇ ವೈಜ್ಞಾನಿಕ ಅಧ್ಯಯನ ಮಾಡಬೇಕು ಎನ್ನುವ ಕೂಗು ಪರಿಸರವಾದಿಗಳಿಂದ ಕೇಳಿ ಬಂದಿದೆ.
ಕೊಡಗಿನಲ್ಲಿ ಭೂಕುಸಿತ ಉಂಟಾದ ಸಂದರ್ಭದಲ್ಲಿಯೇ ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ, ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ಪಶ್ಚಿಮಘಟ್ಟದಲ್ಲಿ ಭೂಕುಸಿತ ಸರಣಿ ಮುಂದುವರಿದಿದೆ. ಕೇರಳದಲ್ಲಿನ ಭೂ ಕುಸಿತ ಈಗಲಾದರೂ ನಮ್ಮೆಲ್ಲರ ಕಣ್ಣು ತೆರಸಬೇಕಿದೆ ಎಂದು ಪರಿಸರವಾದಿಗಳು ಅಭಿಪ್ರಾಯಿಸಿದ್ದಾರೆ.
ಶಿರಾಡಿ ಘಾಟ್‌ನಲ್ಲಿ ಎತ್ತಿನಹೊಳೆ ಯೋಜನೆಯಿಂದ ಆಗಿರುವ ನಷ್ಟದ ಪ್ರಮಾಣವನ್ನು ತುಂಬಲು ಸಾಧ್ಯವಿಲ್ಲ. ಇದರ ಜೊತೆಗೆ ಚತುಸ್ಪಥ ರಸ್ತೆಯನ್ನು ನಿರ್ಮಾಣ ಮಾಡುತ್ತಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುವ ಸ್ಪಷ್ಟ ಸೂಚನೆಗಳು ವ್ಯಕ್ತವಾಗುತ್ತಿವೆ. ಅಷ್ಟೆ ಅಲ್ಲ ಜೀವ ಹಾನಿಯೂ ಹೆಚ್ಚಾಗುತ್ತಿದೆ. ಆದ್ದರಿಂದ ಸರ್ಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪಶ್ಚಿಮಘಟ್ಟಗಳ ಜೀವ ವೈವಿದ್ಯತೆಯನ್ನು ಕಾಪಾಡಿಕೊಳ್ಳುವುದು ಆದ್ಯತೆ ಆಗಬೇಕು. ಜೊತೆಗೆ ಅಲ್ಲಿ ರಸ್ತೆ ಮತ್ತಿತರೆ ಅಭಿವೃದ್ಧಿ ಕೆಲಸಗಳನ್ನು ಮಾಡುವ ಸಂದರ್ಭದಲ್ಲಿ ಕಡಿಮೆ ಅಪಾಯದ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಲು ತಜ್ಞರುಗಳ ಜೊತೆಗೆ ಸಮಾಲೋಚಿಸಬೇಕು. ಕೇವಲ ಇಂಜಿನೀಯರ್‌ಗಳ ಅಭಿಪ್ರಾಯಗಳನ್ನು ಮುಂದಿಟ್ಟುಕೊಂಡು ಕಾಮಗಾರಿಗಳನ್ನು ಮಾಡಬಾರದು ಎಂದು ಸರ್ಕಾರಕ್ಕೆ ಸಲಹೆ ನೀಡಲಾಗಿದೆ.
ಪಶ್ಚಿಮಘಟ್ಟಗಳ ಹಾನಿಯ ಬಗ್ಗೆ ಪತ್ರ ಚಳವಳಿ ಮಾಡುವ ಮೂಲಕ ಸರ್ಕಾರದ ಕಣ್ಣು ತೆರಸಲು ಮತ್ತು ಅಲ್ಲಿ ಮುಂದೆ ಸಂಭವಿಸಬಹುದಾದ ಅನಾವುತವನ್ನು ತಪ್ಪಿಸಲು ಪರಿಸರವಾದಿಗಳು ನಿರ್ಧರಿಸಿ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಚಳವಳಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಪರಿಸರವಾದಿ ಕೇಸರಿ ಹರವೂ ಅವರು ವಿಜಯವಾಣಿಗೆ ತಿಳಿಸಿದ್ದಾರೆ.