

ಕೋಲ್ಕತ್ತ: ಲಾಕ್ಡೌನ್ ಇದ್ದುದರಿಂದ ಮಕ್ಕಳೆಲ್ಲ ಮನೆಯಲ್ಲಿಯೇ ಇದ್ದಾರೆ. ಸದ್ಯ ಕೆಲವು ತರಗತಿಗಳಿಗೆ ಆನ್ಲೈನ್ ಮೂಲಕ ಪಾಠ ಮಾಡಲಾಗುತ್ತಿದೆ. ಶಿಕ್ಷಕರು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕವೇ ಬೋಧನೆ ಮಾಡುತ್ತಿದ್ದರೆ, ಮಕ್ಕಳೂ ಮನೆಯಲ್ಲೇ ಕುಳಿತು ಕಲಿಯುತ್ತಿದ್ದಾರೆ.
ಆದರೆ ಪಶ್ಚಿಮ ಬಂಗಾಳದ ಬಂಕುರಾ ಎಂಬ ಗ್ರಾಮದ ಶಿಕ್ಷಕ ಮರವನ್ನೇರಿ ಕುಳಿತಿದ್ದಾರೆ...!
ಪಾಠ ಮಾಡುವುದನ್ನು ಬಿಟ್ಟು ಈ ಶಿಕ್ಷಕ ಮೊಬೈಲ್ ಹಿಡಿದುಕೊಂಡು ಮರದ ಮೇಲೆ ಕುಳಿತಿದ್ದಾರೆ ಎಂದುಕೊಳ್ಳಬೇಡಿ. ಅವರು ಮರ ಹತ್ತಿ ಕುಳಿತಿದ್ದು, ಮಕ್ಕಳಿಗೆ ಮೊಬೈಲ್ ಮೂಲಕ ಪಾಠ ಮಾಡಲು...
ಗೊಂದಲ ಬೇಡ..ಈ ಗ್ರಾಮದಲ್ಲಿ ಸರಿಯಾಗಿ ನೆಟ್ವರ್ಕ್ ಸಿಗುತ್ತಿಲ್ಲ. ಹಾಗಾಗಿ ಶಿಕ್ಷಕ ಸುಬ್ರತೋ ಪಾಠಿ ಎಂಬುವರು ನೆಟ್ವರ್ಕ್ಗಾಗಿ ಮರದ ಮೇಲೆ ಕುಳಿತೇ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.
ನಮ್ಮ ಹಳ್ಳಿಯಲ್ಲಿ ಎಲ್ಲ ಕಡೆಗಳಲ್ಲೂ ಸರಿಯಾಗಿ ನೆಟ್ವರ್ಕ್ ಸಿಗುವುದಿಲ್ಲ. ನನಗೆ ಬೆಳಗ್ಗೆ 9.30ರಿಂದ ಸಂಜೆ 6ಗಂಟೆವರೆಗೆ ವಿವಿಧ ತರಗತಿಗಳಿಗೆ ಆನ್ಲೈನ್ ಪಾಠ ಮಾಡಬೇಕಾಗಿದೆ. ಸಿಗ್ನಲ್ ಪದೇಪದೆ ಕಟ್ ಆಗುತ್ತಿದ್ದರೆ ತೊಡಕಾಗುತ್ತದೆ. ಮರದ ಮೇಲೆಯೇ ಕುಳಿತರೆ ನೆಟ್ವರ್ಕ್ ಸರಿಯಾಗಿ ಸಿಗುತ್ತದೆ ಎಂದು ಸುಬ್ರತೋ ತಿಳಿಸಿದ್ದಾರೆ. ನೆಟ್ವರ್ಕ್ ಸಮಸ್ಯೆಯಿಂದ ಮಕ್ಕಳ ಕಲಿಕೆಗೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಶಿಕ್ಷಕ ಹೀಗೆ ಮರದ ಮೇಲೆ ಕುಳಿತು ಪಾಠ ಮಾಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. (ಏಜೆನ್ಸೀರ್ಸ್)