

ಕೋಲ್ಕತಾ: ರಾಜ್ಯದಲ್ಲಿ ನೆರೆಯ ರಾಷ್ಟ್ರ ಬಾಂಗ್ಲಾದೇಶದ ಜನರಿಗೆ ಆಶ್ರಯ ನೀಡುವ ನೀಡುವ ಕುರಿತು ಸಿಎಂ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆಗೆ ವರದಿ ನೀಡುವಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿವಿ ಆನಂದ್ ಬೋಸ್ ಅವರು ಕೇಳಿದ್ದಾರೆ. ಸಂವಿಧಾನದ 167ನೇ ಪರಿಚ್ಛೇದದ ಅಡಿಯಲ್ಲಿ ಯಾವ ಆಧಾರದ ಮೇಲೆ ಸಾಂವಿಧಾನಿಕ ಸೌಜನ್ಯವನ್ನು ಕಡೆಗಣಿಸಿ ಇಂತಹ ಸಾರ್ವಜನಿಕ ಘೋಷಣೆ ಮಾಡಲಾಗಿದೆ ಎಂಬುದರ ಕುರಿತು ಸಮಗ್ರ ವರದಿಯನ್ನು ಸಲ್ಲಿಸುವಂತೆ ರಾಜ್ಯಪಾಲರು ಕೇಳಿದ್ದಾರೆ.
ವಿದೇಶದಿಂದ ಬರುವ ಜನರಿಗೆ ಆಶ್ರಯ ನೀಡುವ ವಿಷಯವು ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಹೊರರಾಜ್ಯದಿಂದ ಬರುವ ಜನರಿಗೆ ಆಶ್ರಯ ನೀಡುವ ಹೊಣೆಗಾರಿಕೆಯನ್ನು ಮುಖ್ಯಮಂತ್ರಿಯೊಬ್ಬರು ವಹಿಸಿಕೊಂಡು ಬಹಿರಂಗ ಹೇಳಿಕೆ ನೀಡಿರುವುದು ಗಂಭೀರ ಸಾಂವಿಧಾನಿಕ ಉಲ್ಲಂಘನೆಯನ್ನು ಸೂಚಿಸುತ್ತದೆ ಎಂದು ರಾಜಭವನದ ಮಾಧ್ಯಮ ಕೋಶವು ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ತಿಳಿಸಿದೆ.
ರಾಜ್ಯದಲ್ಲಿ ಒಳನುಸುಳುವಿಕೆಯನ್ನು ಸಿಎಂ ಸಮರ್ಥಿಸಿಕೊಳ್ಳುತ್ತಿದ್ದಾರೆ. ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ಜನರಿಗೆ ಆಶ್ರಯ ನೀಡಲು ಸಿದ್ಧ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ ನಂತರ ಬಿಜೆಪಿ ಈ ಆರೋಪ ಮಾಡಿದೆ. ಭಾರತದ ಏಕತೆ ಮತ್ತು ಸಮಗ್ರತೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.
ಬಾಂಗ್ಲಾದೇಶ ಸಾರ್ವಭೌಮ ರಾಷ್ಟ್ರವಾಗಿರುವುದರಿಂದ ನಾನು ಅದರ ವ್ಯವಹಾರಗಳ ಬಗ್ಗೆ ಮಾತನಾಡಬಾರದು. ಈ ವಿಷಯದ ಬಗ್ಗೆ ಏನು ಹೇಳಬೇಕೋ ಅದನ್ನು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ ಅಸಹಾಯಕರು ಪಶ್ಚಿಮ ಬಂಗಾಳದ ಬಾಗಿಲನ್ನು ತಟ್ಟಿದರೆ, ನಾವು ಖಂಡಿತವಾಗಿಯೂ ಅವರಿಗೆ ಆಶ್ರಯ ನೀಡುತ್ತೇವೆ ಎಂದು ನಿಮಗೆ ಹೇಳಬಲ್ಲೆ ಎಂದು ಈ ಹಿಂದೆ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು. (ಏಜೆನ್ಸೀಸ್)