

ಮಂಡ್ಯ: ಸುತ್ತೂರು ಕ್ಷೇತ್ರದಲ್ಲಿ ಫೆ.6 ರಿಂದ 11ರವರೆಗೆ ನಡೆಯುವ ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ನಗರದಲ್ಲಿ ಸ್ವಾಗತ ಕೋರಲಾಯಿತು.
ರಥಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳು ಸ್ವಾಗತ ಕೋರಿ ಶುಭ ಹಾರೈಸಿದವು. ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಸುತ್ತೂರು ಜಾತ್ರಾ ಮಹೋತ್ಸವಕ್ಕೆ ವಿಶೇಷ ಪರಂಪರೆ ಇದೆ. ಲಕ್ಷಾಂತರ ಭಕ್ತರು ಭಾಗಿಯಾಗಿ ದೇವರು ಮತ್ತು ಗುರುಗಳ ಆಶೀರ್ವಾದ ಪಡೆಯುತ್ತಾ ಬಂದಿದ್ದಾರೆ. ಆದಿಚುಂಚನಗಿರಿ ಹಾಗೂ ಸುತ್ತೂರು ಮಠ ಜನಪರ ಕೆಲಸದಲ್ಲಿ ಮುಂಚೂಣಿಯಲ್ಲಿವೆ. ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಕೊಡುಗೆ ನೀಡಿವೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಸುತ್ತೂರು ಮಠ ತನ್ನದೇ ಆದ ಮಹತ್ವ ಹೊಂದಿದೆ. ಶ್ರೀಗಳ ಮಾರ್ಗದರ್ಶನದಲ್ಲಿ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದ ಬೆಳವಣಿಗೆಗೆ ಅಪಾರ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಧನಗೂರು ಮಠದ ಮುಮ್ಮಡಿ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ, ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್, ಎಂ.ಗುರುಪ್ರಸಾದ್, ಎಂ.ಶಿವಕುಮಾರ್, ಜೀವನ್, ಸಂದೇಶ್, ಮಹಾಂತಪ್ಪ ಇತರರಿದ್ದರು.