ಸಂಪಾದಕೀಯ: ಸ್ವಾಗತಾರ್ಹ ಕ್ರಮ; ಇತರ ವಲಯಗಳಿಗೂ ಪ್ರೋತ್ಸಾಹ, ನೆರವು ಸಿಗಲಿ

edit 4
Published on

ಲಡಾಖ್ ಗಡಿಯಲ್ಲಿ ಸೃಷ್ಟಿಯಾದ ಉದ್ವಿಗ್ನ ಸ್ಥಿತಿಯ ಬಳಿಕ ಚೀನಾದ ವಿರುದ್ಧ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಆ ದೇಶದ ಟಿಕ್​ಟಾಕ್ ಸೇರಿ 59 ಆಪ್​ಗಳನ್ನು ನಿಷೇಧಿಸಿದ್ದು ಗೊತ್ತೇ ಇದೆ. ಈ ಆಪ್​ಗಳ ನಿಷೇಧವನ್ನು ಜನಸಾಮಾನ್ಯರು ಕೂಡ ಸ್ವಾಗತಿಸಿದರಾದರೂ, ಇವುಗಳಿಗೆ ಪರ್ಯಾಯ ವ್ಯವಸ್ಥೆ ಏನು, ಉತ್ತಮ ಆಪ್​ಗಳು ನಮ್ಮಲ್ಲಿ ರೂಪುಗೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗಳೂ ಉದ್ಭವವಾಗಿದ್ದವು. ಮಾಹಿತಿ-ತಂತ್ರಜ್ಞಾನ ರಂಗದಲ್ಲಿ ಜಗತ್ತಿನ ಗಮನ ಸೆಳೆಯುವಂಥ ಸಾಧನೆ ಮಾಡಿರುವ ಭಾರತಕ್ಕೆ ಪ್ರತಿಭಾವಂತರ ಕೊರತೆ ಏನಿಲ್ಲ. ಒಂದಿಷ್ಟು ಸ್ಪರ್ಧಾತ್ಮಕತೆ ಸೃಷ್ಟಿಸುವ, ಪ್ರೋತ್ಸಾಹ ನೀಡಿ ಅಡ್ಡಿಗಳನ್ನು ನಿವಾರಿಸುವ ಅವಶ್ಯಕತೆ ಇತ್ತು. ಕೇಂದ್ರ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿ, ಮಹತ್ವದ ಘೋಷಣೆ ಮಾಡಿದೆ. ಸ್ವಾವಲಂಬಿ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನವೋದ್ಯಮ ಮತ್ತು ತಂತ್ರಜ್ಞರ ಸಮೂಹಕ್ಕೆ ನೆರವಾಗುವ ‘ಆತ್ಮನಿರ್ಭರ ಭಾರತ್ ಆಪ್ ಆವಿಷ್ಕಾರದ ಸವಾಲು’ (ಇನ್ನೊವೇಶನ್ ಚಾಲೆಂಜ್) ಯೋಜನೆಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ-ತಂತ್ರಜ್ಞಾನ ಸಚಿವಾಲಯವು ಅಟಲ್ ಆವಿಷ್ಕಾರ್ ಮಿಷನ್​ನೊಂದಿಗೆ ಸೇರಿ ಪ್ರಸಕ್ತ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ನವೋದ್ಯಮಗಳಿಗೆ ಮತ್ತು ಟೆಕ್ಕಿಗಳಿಗೆ ಅನುಕೂಲವಾಗಲಿದೆ. ಈಗಿರುವ ದೇಶೀಯ ಆಪ್​ಗಳಿಗೆ ಉತ್ತೇಜನ ಮತ್ತು ಹೊಸ ಆಪ್​ಗಳ ಅಭಿವೃದ್ಧಿಗೆ ಈ ಮೂಲಕ ಪ್ರೋತ್ಸಾಹ ಸಿಗಲಿದೆ. ತಂತ್ರಜ್ಞರ ವಲಯದಲ್ಲಿ ಸಂಚಲನ ಮೂಡಿಸಿರುವ ಹೊಸ ಯೋಜನೆ, ಈ ಮುಂದೆ ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ, ಎಷ್ಟೆಲ್ಲ ಹೊಸ ಆಪ್​ಗಳು ಅಭಿವೃದ್ಧಿ ಆಗಲಿವೆ ಎಂಬುದು ಕುತೂಹಲಕರ. ಅದೇನಿದ್ದರೂ, ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಆಪ್ ಚಾಲೆಂಜ್​ನ ಕ್ರಮ ಸ್ವಾಗತಾರ್ಹವಾದುದು. ಅಲ್ಲದೆ, ತಂತ್ರಜ್ಞಾನದ ಪರಿಣಿತಿ ಹೊಂದಿರುವ ಯುವ ಸಮುದಾಯ ಇದರಲ್ಲಿ ಉತ್ಸಾಹದಿಂದ ಪಾಲ್ಗೊಂಡು, ಗುಣಮಟ್ಟದ ಫಲಿತಾಂಶ ನೀಡಲಿದೆ ಎಂಬ ಆಶಾವಾದ ವಿಷಯತಜ್ಞರದ್ದು.

ಮತ್ತೊಂದೆಡೆ, ಕರೊನಾ ಸಂಕಟ ಆರ್ಥಿಕ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಒಂದು ಬಗೆಯ ನೈರಾಶ್ಯವೂ ಆವರಿಸಿದೆ. ಕರೊನಾ ಸಂಕಟವನ್ನೂ ಅವಕಾಶವಾಗಿ ಬದಲಾಯಿಸುವ ಬಗ್ಗೆ ಈ ಹಿಂದೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಉಳಿದ ರಂಗಗಳಲ್ಲೂ ಹೀಗೆ ಸ್ಪರ್ಧಾತ್ಮಕತೆ ಸೃಷ್ಟಿಸುವ, ಪ್ರೋತ್ಸಾಹ ನೀಡುವ ಅಗತ್ಯವಿದೆ. ಮಾಹಿತಿ-ತಂತ್ರಜ್ಞಾನ ರಂಗದೊಂದಿಗೆ ಇತರ ವಲಯಗಳೂ ಬೆಳವಣಿಗೆಯ ಹಾದಿಯಲ್ಲಿ ಕ್ರಮಿಸಬೇಕಿದೆ. ಪ್ರಸಕ್ತ ಹಲವು ಸಮಸ್ಯೆಗಳಿರುವುದು ನಿಜ. ಆದರೆ, ಉತ್ಪಾದನೆ ಹೆಚ್ಚಿಸುವುದು, ಸ್ಥಳೀಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು, ಸಣ್ಣ ಕೈಗಾರಿಕೆಗಳಿಗೆ ಸಕಾಲದಲ್ಲಿ ಕಚ್ಚಾ ವಸ್ತುಗಳ ಪೂರೈಕೆ, ಗ್ರಾಮೀಣ ಭಾಗದಲ್ಲಿ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ಹೀಗೆ ಸಣ್ಣ ಸಣ್ಣ ಹೆಜ್ಜೆಯೂ ಮಹತ್ವದ ಸುಧಾರಣೆ ತರುವುದರಲ್ಲಿ ಅನುಮಾನವಿಲ್ಲ. ಆಪ್ ಚಾಲೆಂಜ್​ನಂತೆ ಇತರ ಕ್ಷೇತ್ರಗಳಲ್ಲೂ ಸವಾಲು ತೆಗೆದುಕೊಂಡು ಮುನ್ನುಗಿದರೆ ಹೊಸ ಸಾಧ್ಯತೆಗಳು ಮತ್ತು ದಾರಿಗಳು ತೆರೆದುಕೊಳ್ಳುತ್ತವೆ. ಅಂಥ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net