

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಜಿಮ್ (Gym Fight) ಗೆ ಹೋಗುವುದು ಕೇವಲ ದೇಹವನ್ನು ದಂಡಿಸಲು ಮಾತ್ರವಲ್ಲ ಶೋ ಆಫ್ ಮಾಡುವ ಸ್ಥಳವಾಗಿ ಮಾರ್ಪಾಡಾಗುತ್ತಿದೆ. ಹಿಂದಿನ ಕಾಲದಲ್ಲಿ ಗರಡಿ ಮನೆಗೆ ತೆರಳುತ್ತಿದ್ದ ಕುಸ್ತಿ ಫೈಲ್ವಾನ್ಗಳು ಶಿಸ್ತು ಹಾಗೂ ಭಕ್ತಿಯಿಂದ ಕಸರತ್ತು ಮಾಡುತ್ತಿದ್ದರು. ಆದರೆ ಈಗ ಈ ವಾತಾವರಣ ಸಂಪೂರ್ಣವಾಗಿ ಬದಲಾಗಿದೆ.
ಮೇಲೆ ಹೇಳಿದೆ ಮಾತಿಗೆ ಪುಷ್ಠಿ ಎಂಬಂತೆ, ಬೆಂಗಳೂರಿನ ಇಂದಿರಾನಗರದಲ್ಲಿರುವ ಕಲ್ಟ್ ಜಿಮ್ವೊಂದರಲ್ಲಿ ನಡೆದಿರುವ ಘಟನೆ, ದೇಹವನ್ನು ಕಟ್ಟುಮಸ್ತಾಗಿ ಇರಿಸುವಲ್ಲಿ ಸಹಕಾರ ನೀಡುವ ಹಾಗೂ ಅವಕಾಶ ಕಲ್ಪಿಸುವ ಜಿಮ್ ಮೇಲೆ ಗೌರವದ ಕೊರತೆ ಹಾಗೂ ಜನರಲ್ಲಿ ತಾಳ್ಮೆ ಕಡಿಮೆ ಆಗುತ್ತಿರುವುದಕ್ಕೆ ತಾಜಾ ಉದಾಹರಣೆಯಾಗಿದೆ.
ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಹಾಗೂ ಮಾಹಿತಿ ಪ್ರಕಾರ, ಜಿಮ್‌ನಲ್ಲಿ ಒಬ್ಬರು ತೂಕಗಳನ್ನು ಎತ್ತುವ ಕಸರತ್ತನ್ನು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಇನ್ನೊಬ್ಬರು ಬಂದು ತಾವೀಗ ಇದೇ ಕಸರತ್ತನ್ನು ಮಾಡಬೇಕು. ನೀವು ಎದ್ದೇಳಿ ಎಂದು ಹೇಳಿದ್ದಾರೆ.
ಆಗ, ಕಸರತ್ತನ್ನು ಮಾಡುತ್ತಿದ್ದ ವ್ಯಕ್ತಿ, ಇನ್ನೊಂದೆರಡು ನಿಮಿಷ, ತಮ್ಮ ಕಸರತ್ತು ಮುಗಿಯುತ್ತದೆ. ನಂತರ ನೀವು ಮಾಡಿ ಎಂದಿದ್ದಾರೆ. ಇಷ್ಟಕ್ಕೆ ಕೋಪಗೊಂಡ ವ್ಯಕ್ತಿ, ಲಿಫ್ಟಿಂಗ್ ಬಾರ್ನಲ್ಲಿದ್ದ 20 ಕೆ.ಜಿಯ ವೇಟ್ ಪ್ಲೇಟ್‌ಗಳನ್ನು ನೆಲಕ್ಕೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಈ ದೃಶ್ಯವನ್ನು ಜಿಮ್ನಲ್ಲಿದ್ದ ಇತರರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆತನಿಗೆ ಸ್ವಲ್ಪವೂ ತಾಳ್ಮೆ ಇರಲಿಲ್ಲ. ಒಂದೇ ಸಮನೆ 20 ಕೆಜಿ ತೂಕದ ಪ್ಲೇಟ್‌ಗಳನ್ನು ನೆಲಕ್ಕೆ ಬಿಸಾಕಿದ್ದಾನೆ. ಅದು ಸ್ವಲ್ಪ ಆಚೀಚೆ ಆಗಿದ್ದರೂ ಜಿಮ್ನಲ್ಲಿದ್ದ ಇತರರಿಗೆ ಭಾರಿ ಸಂಕಷ್ಟವನ್ನು ತರಲಿತ್ತೆಂದು ಬರೆದುಕೊಂಡಿದ್ದಾರೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ, ಜಿಮ್ನ ಇತರ ಸದಸ್ಯರು, ಆ ವ್ಯಕ್ತಿ ವಿರುದ್ಧ ಮುಗಿಬಿದ್ದಿದ್ದಾರೆ. ಆ ವ್ಯಕ್ತಿ ಸ್ವಭಾವವೇ ಹಾಗೆ. ಅವನು ಮೊದಲಿಂದಲೂ ಆಕ್ರಮಣಕಾರಿಯಾಗಿಯೇ ವರ್ತಿಸುತ್ತಿದ್ದ. ತಾನು ಬಳಸುವ ಜಿಮ್ ಪರಿಕರಗಳನ್ನು ಇತತರೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಈ ಬಗ್ಗೆ ಜಿಮ್ ಮ್ಯಾನೇಜರ್ ಗಮನಕ್ಕೆ ಈ ಮೊದಲೇ ತರಲಾಗಿತ್ತು. ಆದರೆ ಮ್ಯಾನೇಜರ್ ಏನು ಕ್ರಮ ಕೈಗೊಂಡಿರಲಿಲ್ಲ. ಮೊದಲೇ ಕ್ರಮ ಕೈಗೊಂಡಿದ್ದರೆ, ಇಂದು ಈ ರೀತಿಯಾಗಿ ಅವನು ವರ್ತಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಕಲ್ಟ್.ಫಿಟ್ ಮಂಡಳಿ ತಕ್ಷಣವೇ ಆಕ್ಷನ್ ತೆಗೆದುಕೊಂಡಿದೆ. ಘಟನೆಯ ಸಂಪೂರ್ಣ ತನಿಖೆ ನಡೆಸಿ, ದುರ್ವತನೆ ತೋರಿದ ಆ ವ್ಯಕ್ತಿಯ ಜಿಮ್ ಸದಸ್ಯತೆಯನ್ನು ಶಾಶ್ವತವಾಗಿ ರದ್ದುಗೊಳಿಸಿದೆ.
ಕಂಪನಿ ಕಡೆಯಿಂದ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ನಮ್ಮ ಜಿಮ್‌ಗೆ ಬರುವ ಪ್ರತಿಯೊಬ್ಬ ಸದಸ್ಯರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿರುತ್ತದೆ. ಇಂತಹ ಅಸಹ್ಯ ಹಾಗೂ ಬೇಜವಾಬ್ದಾರಿಯ ವರ್ತನೆಯನ್ನು ನಾವು ಸಹಿಸುವುದಿಲ್ಲ. ಕೂಡಲೇ ತನಿಖೆ ನಡೆಸಿ ಆ ವ್ಯಕ್ತಿಯ ಮೆಂಬರ್‌ಶಿಪ್ ಕ್ಯಾನ್ಸಲ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಮಾಧ್ಯಮ ವರದಿಗಳ ಪ್ರಕಾರ, ವಿಡಿಯೋ ವೈರಲ್ ಆದ ಬೆನ್ನಲ್ಲೇ ಇಂದಿರಾನಗರ ಪೊಲೀಸರು ಈ ಬಗ್ಗೆ ಗಮನ ಹರಿಸಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಇನ್ನು ಬೆಂಗಳೂರು ಪೊಲೀಸ್ ಅಧಿಕೃತ ಎಕ್ಸ್ ಹ್ಯಾಂಡಲ್ ಕೂಡ ಈ ಪೋಸ್ಟ್‌ಗೆ ರಿಪ್ಲೈ ಮಾಡಿ, ಘಟನೆ ನಡೆದ ನಿಖರವಾದ ಲೊಕೇಶನ್ ಹಾಗೂ ಕಾಂಟ್ಯಾಕ್ಟ್ ಡಿಟೇಲ್ಸ್ ಕಳುಹಿಸುವಂತೆ ಕೋರಿದೆ, (ಏಜೆನ್ಸೀಸ್).