

ರೋಮ್: ದೇಶದಲ್ಲಿ ಹೆಚ್ಚುತ್ತಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಯಂತ್ರಿಸಲು ಹಾಗೂ ಶಾಲಾ- ಕಾಲೇಜು ಸೇರಿದಂತೆ ಶೈಕ್ಷಣಿಕ ಪರಿಸರದಲ್ಲಿ ಬುರ್ಖಾ ಹಾಗೂ ನಿಖಾಬ್ ಧರಿಸುವುದನ್ನು ನಿಷೇಧಿಸಲು ತಮ್ಮ ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲಿಯೇ ಈ ಕುರಿತು ನಿಯಮಾವಳಿಗಳನ್ನು ಜಾರಿಗೆ ತರುವುದಾಗಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ತಿಳಿಸಿದ್ದಾರೆ.
ಇಟಲಿ ದೇಶಕ್ಕೆ ಬಂದು ಇಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಪಾಲಕರು ಕಡ್ಡಾಯವಾಗಿ ಇಟಲಿ ಭಾಷೆಯನ್ನು ಕಲಿಯಬೇಕು. ಈ ನೆಲದ ಸರ್ವ ಸಂಪನ್ಮೂಲಗಳನ್ನು ಬಳಸುವವರು ಈ ನೆಲದ ಭಾಷೆಯನ್ನು ಕಲಿಯುವುದು ಕೂಡ ಅತ್ಯಗತ್ಯವಾಗಿದೆ ಎಂದು ಮೆಲೋನಿ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ಜಿಯೋವೆಂಟು ನಾಜಿಯೋನೇಲ್ (Gioventu Nazionale) ರಾಷ್ಟ್ರೀಯ ಹಬ್ಬದಲ್ಲಿ ಮಾತನಾಡಿದ ಜಾರ್ಜಿಯಾ ಮೆಲೋನಿ, ನಮ್ಮ ದೇಶದಲ್ಲಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ಬರುವವರು ನಮ್ಮ ಭಾಷೆಯನ್ನು ಕಲಿಯಬೇಕು, ನಮ್ಮ ಸಂಸ್ಕ್ರತಿಯನ್ನು ಗೌರವಿಸಲೇಬೇಕೆಂದು ಗುಡುಗಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮೆಲೋನಿ, ಇತ್ತೀಚಿನ ವರ್ಷಗಳಲ್ಲಿ ವಿದೇಶದಿಂದ ನಮ್ಮ ಶಾಲೆಗೆ ಸೇರುತ್ತಿರುವ ಮಕ್ಕಳ ಪ್ರಮಾಣ ಹೆಚ್ಚುತ್ತಿದೆ. ತರಗತಿಯಲ್ಲಿ ಬೆರಳಣಿಕೆಯಷ್ಟು ವಿದ್ಯಾರ್ಥಿಗಳಿದ್ದರೆ, ಅವರು ತಮ್ಮ ಸಹಪಾಠಿಗಳ, ಶಿಕ್ಷಕರ ಸಹಾಯದಿಂದ ಇಟಲಿ ಭಾಷೆಯನ್ನು ಕಲಿಯುತ್ತಾರೆ. ಆದರೆ ಕ್ಲಾಸ್ರೂಮ್ ತುಂಬೆಲ್ಲಾ ವಿದೇಶಿ ಮಕ್ಕಳೇ ಇದ್ದರೆ, ಅವರು ನಮ್ಮ ಭಾಷೆಯನ್ನು ಖಂಡಿತ ಕಲಿಯುವುದಿಲ್ಲ. ಹೀಗಾಗಿ ಶಾಲೆಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಗೆ ನಿಯಂತ್ರಣ ಹೇರುವುದು ಅಗತ್ಯವಾಗಿದೆ ಎಂದಿದ್ದಾರೆ.
ಅಂತಯೇ, ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯೊಬ್ಬಳು ತನ್ನನ್ನು ತಾನು ಸಂಪೂರ್ಣವಾಗಿ ಕಡ್ಡಾಯವಾಗಿ ಮುಚ್ಚಿಕೊಳ್ಳಬೇಕೆಂಬ ಕಾನೂನು ನನ್ನ ದೇಶದಲ್ಲಿಲ್ಲ. ಹೀಗಾಗಿ ಶಾಲೆ- ಕಾಲೇಜುಗಳ ಆವರಣದಲ್ಲಿ ಬುರ್ಖಾ, ನಖಾಬ್ಗಳನ್ನು ಧರಿಸುವುದನ್ನು ನಿಷೇಧಿಸುವುದಾಗಿ ಮೆಲೋನಿ ತಿಳಿಸಿದ್ದಾರೆ.
ಎರಡನೇ ವಿಶ್ವಯುದ್ಧದ ನಂತರ, ಅತಿಹೆಚ್ಚು ಕಾಲ ಆಡಳಿತ ನಡೆಸಿದ ಪ್ರಧಾನಿ ಎಂಬ ಹೆಗ್ಗಳಿಕೆ ಜಾರ್ಜಿಯಾ ಮೆಲೋನಿ ಪಾತ್ರರಾಗಿದ್ದಾರೆ. ಈಗ 2028 ಅಂದರೆ ಮುಂದಿನ ವರ್ಷ ಇಟಲಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಮೆಲೋನಿ ಭರದಿಂದ ಸಿದ್ಧತೆ ಶುರುಮಾಡಿದ್ದಾರೆ.
ಸಣ್ಣ ಮತ್ತು ಮದ್ಯಮ ಗಾತ್ರದ ಕಾರು ಹಾಗೂ ಸ್ಕೂಕರ್ ಮೇಲೆ ಆಸ್ತಿ ತೆರಿಗೆಯನ್ನು ರದ್ದು ಪಡಿಸಿರುವ ಮೆಲೋನಿ, ಈಗ ವಿದೇಶಿ ಮಕ್ಕಳ ಮೇಲೆ ಮಿತಿ ಹಾಗೂ ಬುರ್ಖಾ ಮತ್ತು ನಿಖಾಬ್ಗಳ ಮೇಲೆ ನಿಷೇಧ ಹೇರುತ್ತಿರುವ ನಿರ್ಧಾರಗಳು ಇಟಲಿ ಮೂಲ ನಿವಾಸಿಗಳ ಮತವನ್ನು ಪಡೆಯುವ ತಂತ್ರಗಾರಿಕೆಯಾಗಿದೆ ಎಂದು ಜಾಗತಿಕ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ, (ಏಜೆನ್ಸೀಸ್).