

ಮೇಷ: ಮಾತೃಪಕ್ಷದ ಒಂದು ಘಟ್ಟ ಮುಗಿದು ಸಂಪನ್ನಗೊಳ್ಳುತ್ತಿದೆ. ಈ ಸಮಯದಲ್ಲಿ ಅ. 9 ರಿಂದ ಗುರುವು ಸಕ್ರಿಯನಾಗಿರುವುದರಿಂದ ಗುರುಬಲ ಕಡಿಮೆಯಾಗಿ ಕೆಲಸಗಳು ದಿಕ್ಕಾಪಾಲಾಗದಂತೆ ನೋಡಿಕೊಳ್ಳಿ. ಗುರುಬಲ ಪಡೆಯಲು ಉಮಾಮಹೇಶ್ವರನನ್ನು ಧ್ಯಾನಿಸಿ. ಆರೋಗ್ಯವನ್ನು ಚೆನ್ನಾಗಿರಿಸಿಕೊಂಡರೆ ಕೆಲಸಗಳು ದಡವನ್ನು ಮುಟ್ಟುವವು.
ವೃಷಭ: ವಕ್ರಗತಿಯಲ್ಲಿ ಗುರುವು ಸಾಗಿದ್ದು ದ್ವಾದಶ ಫಲವು ಬಂದು ನಿಮ್ಮನ್ನು ಕೆಲವು ಗೊಂದಲಕ್ಕೆ ಸಿಕಲುಕಿಸಿದಾಗ ನಿರ್ಣಯವನ್ನು ಕೈಗೊಂಡು ತೊಳಲಾಡಬೇಡಿ. ಆದರೆ ಶನಿಯು ದಶಮದಲ್ಲಿ ಇರುವುದರಿಂದ ಧೈರ್ಯ, ಸತ್ಯ ಸಂಕಲ್ಪ ಇದ್ದಲ್ಲಿ ದೇವರು ನಿಮ್ಮ ಇಷ್ಟವನ್ನು ನಡೆಸಿಕೊಟ್ಟು ಸಂತೋಷ ನೀಡುತ್ತಾನೆ. ಯಾರು ಏನೇ ಹೇಳಲಿ ನಿಮ್ಮ ಬುದ್ದಿಯು ಸ್ಥಿರವಾಗಲು ಅಷ್ಟಸಿದ್ಧಿ ದೇವತೆಗಳನ್ನು ಪೂಜಿಸಿ. ದುರ್ಗೆಯನ್ನು ಪೂಜಿಸಿ. ಪಾರ್ವತಿಯೇ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಾಳೆ.
ಮಿಥುನ: ಮತ್ತೆ ಏಕಾದಶದಲ್ಲಿ ಗುರುವಿನ ಸುಯೋಗ ಉಂಟಾಗಿದ್ದು ಶನಿಯೂ ಸ್ವಕ್ಷೇತ್ರದಲ್ಲಿ ಇರುವುದರಿಂದ ಕೆಲವೊಂದು ವಿಚಾರಗಳನ್ನು ಸರಿಪಡಿಸಿಕೊಂಡು, ತಿದ್ದಿಕೊಂಡು ಕೆಲಸ ಮಾಡಿದಾಗ ದೇವರು ಸತ್ಪಲ ನೀಡುತ್ತಾನೆ. ಒಳ್ಳೆಯ ಕೆಲಸ ಮಾಡಿ ಒಳ್ಳೆಯ ಫಲ ಪಡೆಯಿರಿ. ಆರೋಗ್ಯಕ್ಕೆ ಹೆಚ್ಚು ಪ್ರಾಧಾನ್ಯ ನೀಡಿ.
ಕಟಕ: ಗುರು ವಕ್ರಿಯಾದರೂ ಮಾಡುವ ಕೆಲಸ ಕಾರ್ಯಗಳಲ್ಲಿ ಅಡಚಣೆ ಉಂಟುಮಾಡುವುದಿಲ್ಲ. ನಿಮ್ಮ ಅತಿಶಯ ಭಕ್ತಿಯಿಂದ ಇಷ್ಟ ದೇವರನ್ನು ಪೂಜಿಸಿ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಶ್ರೀರಾಮಚಂದ್ರನನ್ನು ಪೂಜಿಸಿ, ಪ್ರಾರ್ಥಿಸಿ. ಉಮಾ ಮಹೇಶ್ವರನ ಧ್ಯಾನ ಸದಾ ಇರಲಿ.
ಸಿಂಹ: ಮನುಷ್ಯರಲ್ಲಿ ಯಾರೂ ಕೆಟ್ಟವರಿಲ್ಲ. ಯಾರೂ ಒಳ್ಳೆಯವರೂ ಇಲ್ಲ. ಎಲ್ಲವೂ ಅವರವರ ಚಿಂತನೆಯನ್ನು ಅವಲಂಬಿಸಿದೆ. ನಿಮಗೆ ದೇವರ ಸಹಾಯವು ಎಂದಿಗೂ ಇರುತ್ತದೆ. ಕಷ್ಟ- ಸುಖ ಎರಡೂ ಕೊಟ್ಟರೂ ಒಳ್ಳೆಯ ಸಂಗದಿಂದ ಸತ್ಕೀರ್ತಿ ಸಿಗುತ್ತದೆ. ಸುಬ್ರಹ್ಮಣ್ಯನ ಪ್ರಾರ್ಥನೆ ಇರಲಿ. ಗಣೇಶನಿಗೆ ಕಡುಬು ಕೊಟ್ಟು ಪೂಜಿಸಿ.
ಕನ್ಯಾ: ಸಪ್ತಮದಲ್ಲಿ ರಾಹು ಇದ್ದು ಕೇತುವು ಲಗ್ನದಲ್ಲಿರುವುದರಿಂದ ಸುಖ ಬೇಕಾದರೆ ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡಬೇಕು. ಗಣೇಶನನ್ನು ಪೂಜಿಸಿ. ಈ ಎರಡನ್ನೂ ಇಟ್ಟುಕೊಂಡು 9 ರ ಗುರು ಹಾಗೂ 6ನೇ ಮನೆಯ ಶನಿಯು ಅತ್ಯಂತ ರಾಜಯೋಗ ತಂದು ನಿಮ್ಮನ್ನು ರಕ್ಷಿಸಿ ಸಮಸ್ಯೆಯನ್ನು ದೂರ ಮಾಡುವುದರಲ್ಲಿ ಸಂದೇಹವಿಲ್ಲ.
ತುಲಾ: ಬುಧನು ಶುಕ್ರನ ಮನೆಯಲ್ಲಿದ್ದು ಲಗ್ನದಲ್ಲಿ ರವಿ ಇರುವುದರಿಂದ ಮಾತು ಹರಿತವಾಗಿ ನಾಲಗೆಯು ಖಡ್ಗವಾಗಬಾರದು. ದೇವರು ನಿಮಗೆ ಸದ್ಬುದ್ಧಿಯನ್ನು ಕೊಟ್ಟಿದ್ದಾನೆ. ಲಲಿತಾ ಪರಮೇಶ್ವರಿ ಸುಖ, ಸಂತೋಷ, ಇಷ್ಟಾರ್ಥಗಳನ್ನು ನೆರವೇರಿಸುತ್ತಾಳೆ. ಹಣಕ್ಕೆ ಕೊರತೆ ಯಿಲ್ಲ. ಎಲ್ಲರ ವಿಶ್ವಾಸ ಗಳಿಸಿ ಕಾರ್ಯವನ್ನು ಮುಂದುವರಿಸಿ.
ವೃಶ್ಚಿಕ: ಈ ರಾಶಿಯವರು ಸಪ್ತಮದಲ್ಲಿ ಗುರುವಿದ್ದಾಗ ಕೆಲಸವನ್ನು ಪರಿ ಪೂರ್ಣ ಮಾಡಿಕೊಳ್ಳಬೇಕು. ಗುರುವು 9ಕ್ಕೆ ಬಂದ ಮೇಲೆ ಕಾರ್ಯಗಳು ಸಾಗುತ್ತವೆ. ಎಚ್ಚರ ತಪ್ಪಿದರೆ ಹಾಗೂ ಜೀವನದಲ್ಲಿ ಮಾಡಬೇಕಾದ ಕರ್ತವ್ಯ ಮಾಡದೇ ಹೋದರೆ, ಸಾಕ್ಷಾತ್ ಗುರುವೇ ಬಂದರೂ ಏನೂ ಮಾಡಲಾಗದು. ಸಮಯವನ್ನು ಹಾಳು ಮಾಡದೇ, ಸಂತೋಷ, ಧನ, ಕೀರ್ತಿ ಲಾಭ ಪಡೆಯಲು ಅಷ್ಟಾದಶಭುಜೆ ದುರ್ಗೆಯನ್ನು ಪ್ರಾರ್ಥಿಸಿ, ವಿಘ್ನಗಳು ದೂರವಾಗುತ್ತವೆ.
ಧನಸ್ಸು: ಈಗಾಗಲೇ ಧನು ರಾಶಿಯವರಿಗೆ ಶನಿಯು ವಕ್ರದಲ್ಲಿದ್ದು, ಆಗಿಂದಾಗ್ಗೆ ಬುದ್ದಿಯನ್ನು, ಮನಸ್ಸನ್ನು ಕೆಡಿಸುತ್ತಾನೆ. ಬುದ್ದಿಯು ಕೆಟ್ಟಾಗ ದೈವಬಲ ಇಲ್ಲವೆಂದು ಭಾವಿಸಿ ಸ್ಥಿರವಾದ ಮನದಿಂದ ಇಷ್ಟದೇವರನ್ನು ಏಕಾಗ್ರತೆಯಿಂದ ಧ್ಯಾನಿಸಿದರೆ ಒಳ್ಳೆಯದೇ ಆಗುತ್ತದೆ. ಕಷ್ಟವು ದೂರವಾಗಿ, ಸುಖಕ್ಕೆ ಪರಿವರ್ತನೆಯಾಗಿ ತಾಳ್ಮೆಯನ್ನು ಕೊಡುತ್ತಾರೆ. ವಿನಾಕಾರಣ ಕೋಪದಿಂದ ವರ್ತಿಸಬೇಡಿ. ಶಾಪ-ತಾಪಗಳು ಮನುಷ್ಯನ ಗುಣವಾಗಿರಬಾರದು. ನಿತ್ಯ ಗುರು ಚರಿತ್ರೆಯ ಮೊದಲ ಅಧ್ಯಾಯ ಪಾರಾಯಣ ಮಾಡಿ.
ಮಕರ: ಎಲ್ಲ ಕಡೆಯಿಂದಲೂ ಕಟ್ಟಿಹಾಕಿ ಕೆಲಸಗಳು ಪರಿಪೂರ್ಣವಾಗಿ ನಡೆಯದೇ ಬೇಕಾದಷ್ಟು ದುಃಖ ಅನುಭವಿಸಿದ್ದೀರಿ. ಇನ್ನು ಸಮಯವು ಹಾಗಿರುವುದಿಲ್ಲ. ಹೊರಡುವ ಶನಿಯು ಒಳ್ಳೆಯದನ್ನು ಮಾಡಿ ಸಾಗುತ್ತಾನೆ. ಹಿಂದಿನ ಕಾಲದಲ್ಲಿ ನೆಂಟರು ಊರಿಗೆ ಬಂದರೆ ದುಡ್ಡು ಹಂಚಿ ಹೋಗುತ್ತಿದ್ದರು. ಅದೇ ಗುಣವನ್ನು ಶನಿ ಹೊಂದಿದ್ದಾನೆ. ಸುಖಪಡುವ ಕಾಲವನ್ನು ನಿರೀಕ್ಷಿಸಬಹುದು. ಧರ್ಮವೇ ಮೂಲವಾಗಿರಲಿ. ದೇವರ ಧ್ಯಾನವು ನಿಮ್ಮ ನಿತ್ಯದ ಕರ್ತವ್ಯವಾಗಿರಲಿ.
ಕುಂಭ: ಶನಿಯು ಜನ್ಮದಲ್ಲಿದ್ದು ಇನ್ನೇನು ದ್ವಿತೀಯಕ್ಕೆ ಬರುವ ಕಾಲ ಹತ್ತಿರವಾಗಿದೆ. ಶತ್ರುಗಳು ಕಡಿಮೆಯಾಗಿ ಮನಸ್ಸಿಗೆ ಒಂದು ವಿಧವಾದ ಧೈರ್ಯ ಬಂದು ಬದುಕನ್ನು ಮೊದಲಿನಿಂದ ಆರಂಭಿಸುವ ಕಾಲವಿದು. ಮಕ್ಕಳು 1,2,3,4 ಓದಲು ಕಲಿತಂತೆ ನಿಧಾನವಾಗಿ ನಿಮ್ಮ ಜೀವನವನ್ನು ರೂಪಿಸಿಕೊಂಡು ಮುಂದೆ ಸಾಗಿದಲ್ಲಿ ಕಾಯುವ ದೇವರು ನಿಮ್ಮನ್ನು ಕಾಪಾಡುತ್ತಾನೆ.
ಮೀನ: ಗುರುವು ವಕ್ರಗತಿಯಲ್ಲಿ ಬಂದು ಎರಡನೇ ಮನೆಯ ಫಲವನ್ನು ಕೊಟ್ಟು ಅಲ್ಪಕಾಲ ಸುಖ ಸಂತೋಷ ನೀಡಿದ್ದಾನೆ. ಅತಿಥಿ ಸತ್ಕಾರ ಮಾಡಿರಿ. ನಿಮ್ಮ ಕುಲದೇವರ ಸಹಿತ ಕುಲಗುರುಗಳ ಪೂಜೆಯನ್ನು ಮಾಡಿರಿ. ನಿಮ್ಮ ಇಚ್ಛೆಯು ಪೂರೈಸುತ್ತದೆ. ಶರೀರ ಸ್ವಾಸ್ಥ್ಯ ಉಂಟಾಗುವುದು. ಇಷ್ಟ ಕಾರ್ಯವೂ ಸಿದ್ಧಿಯಾಗುವುದು. ಮನುಷ್ಯನಿಗೆ ಮನಸ್ಸೇ ದೊಡ್ಡದು. ಬೆನ್ನ ಹಿಂದೆ ದೇವರು ಇದ್ದಾನೆ. ಲಕ್ಷ್ಮೀನರಸಿಂಹ ಅಷ್ಟೋತ್ತರ ಪಾರಾಯಣ ಮಾಡಿ.