

ಮೇಷ: ಅಶ್ವಿನಿ ನಾಲ್ಕು, ಭರಣಿ ನಾಲ್ಕು, ಕೃತಿಕ 1ನೇ ಪಾದಗಳಿಗೆ ಸುಸಮಯವು ಬಂದು ಸೇರಲಿದೆ. ಮೇಷ ರಾಶಿಯಲ್ಲಿ ಗುರು ಇರುವುದರಿಂದ ನಿಮ್ಮನ್ನು ನೀವು ತಿದ್ದಿ ನಡೆದರೆ ಭವಸಾಗರವನ್ನು ದಾಟಬಹುದು, ಬೆಳ್ಳಿ ಆಕಾಶವನ್ನು ಮುಟ್ಟಬಹುದು. ಆತುರ ಪಡದೆ ಕೆಲಸಗಳನ್ನು ಮುಂದೆ ಸಾಗಿಸಿಕೊಂಡು ಹೋಗಿ. ದೇವರೇ ನಿಮಗೆ ಸನ್ಮಾರ್ಗ ತೋರುತ್ತಾನೆ.
ವೃಷಭ: ಶುದ್ಧವಾದ ಮನಸ್ಸಿಟ್ಟು ದೇವರನ್ನು ಪ್ರಾರ್ಥಿಸಿ. ನಿಮಗೆ ಬೇಕಾದ ದಾರಿಯಲ್ಲಿ ಶ್ರೇಯಸ್ಸನ್ನು ಕೊಟ್ಟು ಅಡೆತಡೆಗಳನ್ನು ದೂರ ತಳ್ಳುತ್ತಾನೆ. ಧೈರ್ಯ, ಕೀರ್ತಿ ಕೊಡುತ್ತಾನೆ. ವೃಷಭ ರಾಶಿಯು ಶುಕ್ರನ ಮನೆ. ಕಮಲಶಿಲೆಯ ದುರ್ಗೆಯನ್ನು ಪೂಜಿಸಿ, ದರ್ಶಿಸಿ. ನಾಗದೇವರ ಆರಾಧನೆಯನ್ನು ಮಾಡಿ.
ಮಿಥುನ: ಏಕಾದಶ ಗುರು ಹಾಗೂ 9ರ ಶನಿಯು ಒಳ್ಳೆಯ ಫಲಗಳನ್ನು ಕೊಡುತ್ತಾನೆ. ರಾಶ್ಯಾಧಿಪತಿ ಬುಧ ಆಗಿರುವುದರಿಂದ ಒಳ್ಳೆಯದನ್ನು ಪಡೆಯಬೇಕಾದರೆ, ಶುದ್ಧ ಮನಸ್ಸು ಇಟ್ಟುಕೊಂಡು, ಕಾರ್ಯಯೋನ್ಮುಖರಾಗಲು ನಮ್ಮಲ್ಲಿ ದೇವರ ಪ್ರಾರ್ಥನೆ ಇರಲೇಬೇಕು. ವಿಷ್ಣುವನ್ನು ಪೂಜಿಸಿ.
ಕಟಕ: ಕಟಕ ರಾಶಿಯಲ್ಲಿ ಜನಿಸಿದವರಿಗೆ ಅಷ್ಟಮ ಶನಿಯಾಗಲಿ, ದಶಮ ಗುರುವಾಗಲಿ ಹೆಚ್ಚು ಬಾಧೆಯನ್ನು ಕೊಡುವುದಿಲ್ಲ. ಜೀವನದಲ್ಲಿ ಯಾವುದೋ ಒಂದು ಅದ್ಭುತ ನಡೆದು ನಿಮ್ಮ ಮನಸ್ಥಿತಿ, ಧನಸ್ಥಿತಿಯಲ್ಲಿ ಅನುಕೂಲವನ್ನು ಪಡೆಯುತ್ತೀರಿ. ದಾರಿದ್ರಹರಣಕ್ಕಾಗಿ ಸದಾಶಿವನ ಅಷ್ಟೋತ್ತರವನ್ನು ಪಠಿಸಿ.
ಸಿಂಹ: ಸಪ್ತಮ ಶನಿಯ ಬಾಧೆ ಇಲ್ಲ. 9ರ ಗುರು ಸಂಪರ್ಕದಲ್ಲಿ ಇರುವುದರಿಂದ ಯಾವ ನಷ್ಟವೂ ಇಲ್ಲ. ನಷ್ಟಕಷ್ಟಗಳು ಬಂದರೂ ಅದನ್ನು ಸಾಧಿಸಲು ಸಾಧ್ಯವಾಗುವುದು ಸಿಂಹ ರಾಶಿಯವರಿಗೆ ಮಾತ್ರವೇ. ಅನಂತವಾಗಿ ಸೂರ್ಯನಾರಾಯಣ ದೇವರನ್ನು ಪೂಜಿಸಿ. ಸೂರ್ಯ ಅಷ್ಟೋತ್ತರವನ್ನು ಪಠಿಸಿ.
ಕನ್ಯಾ: ಗುರು ದುರ್ಬಲನಾಗಿದ್ದರೂ ದುರ್ಬುದ್ಧಿಯನ್ನು ಬಿಟ್ಟು ಧರ್ಮದಲ್ಲಿ, ದೇವರಲ್ಲಿ ಭಕ್ತಿಯನ್ನು ಇಟ್ಟು ನಡೆದರೆ ಅದೇ ಒಳ್ಳೆಯ ಕಾಲವಾಗಿ ಪರಿಣಮಿಸುತ್ತದೆ. ದೈವಾನುಗ್ರಹದಿಂದ ಆರ್ಥಿಕ ಸ್ಥಿತಿಗತಿ ಉತ್ತಮವಾಗುವ ಕಾಲ. ವಾಮನ ಅಷ್ಟೋತ್ತರವನ್ನು ಪಠಿಸಿ.
ತುಲಾ: ಮನಸ್ಸಿಗೆ ಬೇಕಾದ ಕೆಲಸಗಳು ಆಗಿ ಸುಖವಾದ ಜೀವನವನ್ನು ನಡೆಸುತ್ತಿದ್ದೀರಿ. ನಾವು ಏನೇ ಮಾಡಿದರೂ, ದೇವರೊಬ್ಬನು ನಮ್ಮ ಹಣೆಯಬರಹವನ್ನು ಸ್ಪಷ್ಟಾಕ್ಷರದಲ್ಲಿ ಬರೆದಿದ್ದರೆ ಎಲ್ಲವೂ ಸಿಗುತ್ತದೆ. ಇಷ್ಟಾರ್ಥಗಳನ್ನು ಪಡೆಯುವ ಸಿದ್ಧಿಕಾಲವಾಗುತ್ತದೆ. ಆತ್ಮರಕ್ಷಣೆಗೆ, ಮನೋಧೈರ್ಯಕ್ಕೆ ಲಲಿತಾ ಸಹಸ್ರನಾಮವನ್ನು ಪಾರಾಯಣ ಮಾಡಿ.
ವೃಶ್ಚಿಕ: ತಕ್ಕಡಿಯು ಎಂದು ತಪ್ಪುತೂಕವನ್ನು ತೂಗುವುದಿಲ್ಲ. ಮನುಷ್ಯನ ತುಲಾಭಾರವು ಶ್ರೀಕೃಷ್ಣ ಪರಮಾತ್ಮನ ಕೈಯಲ್ಲಿದೆ. ಗ್ರಹಸ್ಥಿತಿಯು ಮಧ್ಯಮವಾಗಿದ್ದರೂ, ದೈವಕೃಪೆ ಇದ್ದರೆ, ನೀವು ಮಾಡಿದ ಪುಣ್ಯವು ನಿಮ್ಮನ್ನು ಸೇರಿ ಬೇಕಾದ ಧನವನ್ನು ಕೊಟ್ಟು ದುಡ್ಡಿನ ದಾಹವನ್ನು ಇಂಗಿಸುತ್ತದೆ. ಷಣ್ಮುಖನನ್ನು ಪೂಜಿಸಿ. ಸ್ಕಂದಕವಚ ಪಠಿಸಿ.
ಧನುಸ್ಸು: ತೃತೀಯ ಶನಿ, ಪಂಚಮದಲ್ಲಿ ಗುರು ಇರುವುದು ಶುಭಸೂಚನೆಯೇ. 2024 ಮೇ 1ರವರೆಗೂ ನೀವು ಎಲ್ಲೇ ಇದ್ದರೂ ನಿಮ್ಮ ಗುರಿಯನ್ನು ಸಾಧಿಸಿಕೊಳ್ಳುವ ಕಾಲ. ಮನುಷ್ಯನು ಚೆನ್ನಾಗಿರುವ ಕಾಲದಲ್ಲಿಯೂ ದೇವರರಕ್ಷಣೆ ಬೇಕೇಬೇಕು. ಶ್ರೀರಾಮಚಂದ್ರನನ್ನು ಪ್ರಾರ್ಥಿಸಿ, ಪೂಜಿಸಿ. ನಿಮ್ಮ ಗುರುಬಲಕ್ಕಾಗಿ ದತ್ತಾತ್ರೇಯನ ಸ್ತುತಿ ಮಾಡಿ.
ಮಕರ: ಶನಿಯಿಂದ ದೋಷವಿದ್ದ ಕಾಲ ಮುಗಿದು ಒಳ್ಳೆಯ ಸಮಯವು ಬಂದು ಕಾರ್ಯಸಾಧನೆ ಆಗುವುದು. ಆದರೂ ಅಲ್ಪವಿಘ್ನ ಗಳಿಗೆ ಹೆದರದೆ ಧೈರ್ಯದಿಂದ ಮುನ್ನುಗ್ಗಿ, ಸ್ಥಿರಬುದ್ಧಿಯಿಂದ ಕಾರ್ಯಗಳಲ್ಲಿ ಜಯವನ್ನು ಸಾಧಿಸಬಹುದು. ದುಃಖ ಮತ್ತು ದಾರಿದ್ರ್ಯವನ್ನು ನಾಶ ಮಾಡಿ ಜಯವಿಜಯವನ್ನು ಕೊಡುವ ಶೃಂಗೇರಿಯಲ್ಲಿ ನೆಲೆಸಿರುವ ದುರ್ಗೆಯನ್ನು ಪೂಜಿಸಿ.
ಕುಂಭ: ತೃತೀಯದಲ್ಲಿ ಗುರುವು ತೊಂದರೆ ಕೊಡುವುದಿಲ್ಲ. ಸಾಡೇಸಾತಿ ನಡೆಯುತ್ತಿದ್ದು ಜನ್ಮದಲ್ಲಿ ಶನಿ ಇರುವುದರಿಂದ ಬಲಿಷ್ಠನಾದ ಶನಿಗೆ ಈಶ್ವರನ ಪ್ರಾರ್ಥನೆ ಬೇಕೇಬೇಕು. ಗುರುಚರಿತ್ರೆಯ 14ನೇ ಅಧ್ಯಾಯವನ್ನು ಪ್ರತಿನಿತ್ಯ ಪಾರಾಯಣ ಮಾಡಿ, ಶನಿಗೆ ತೈಲಾಭಿಷೇಕವನ್ನು ಮಾಡಿಸಿ. ಒಪ್ಪತ್ತು ಊಟವನ್ನು ಮಾಡಿ. ಆತ್ಮಬಲವನ್ನು ವೃದ್ಧಿಸಿಕೊಳ್ಳಿ.
ಮೀನ: ದ್ವಾದಶದಲ್ಲಿ ಶನಿ ಇದ್ದರೂ ದ್ವಿತೀಯದಲ್ಲಿ ಗುರು ಇರುವುದರಿಂದ ಕೆಲಸಗಳಿಗೆ ಯಾವುದೇ ಅಡೆತಡೆಗಳು ಉಂಟಾಗುವುದಿಲ್ಲ. ಧರ್ಮದಲ್ಲಿ, ದೇವರಲ್ಲಿ ನಂಬಿಕೆ ಇಟ್ಟರೆ ಯಾವುದೇ ಕೆಲಸವನ್ನು ಮಾಡಿಕೊಡಲು ದೈವವೇ ನಿಮಗೆ ಸಹಾಯವನ್ನು ಮಾಡುತ್ತದೆ. ಹಯಗ್ರೀವನನ್ನು ಪೂಜಿಸಿ. ಸಾಯಂಕಾಲದಲ್ಲಿ ಲಕ್ಷ್ಮೀನರಸಿಂಹನ ಪ್ರಾರ್ಥನೆ ಮಾಡಿ. ಒಳ್ಳೆಯ ಫಲಗಳನ್ನು ಪಡೆಯಬಹುದು.