ಈ ರಾಶಿಯವರಿಗೆ ಕೆಲಸ ವಿಳಂಬವಾದರೂ ಆಗುವ ಸೂಚನೆ ಸಿಗುತ್ತದೆ: ವಾರಭವಿಷ್ಯ

Vara-Bhavishya-2
Published on

ಮೇಷ

ಮೇಷ ರಾಶಿಯಲ್ಲಿ ಸೂರ್ಯ ಸಂಚಾರ ಮುಂದುವರಿದಿದ್ದು, ಏ. 30ರಂದು ವೃಷಭಕ್ಕೆ ಬುಧನು, ಮೇ4ರಂದು ಶುಕ್ರ ಸ್ವಕ್ಷೇತ್ರಕ್ಕೆ ಬಂದು ಸೇರುತ್ತಾರೆ. ಮೇಷ ರಾಶಿಗೆ ದ್ವಿತೀಯದಲ್ಲಿ ರವಿ, ಶುಕ್ರರು ಒಳ್ಳೆಯ ಫಲ ಕೊಟ್ಟರೂ ಕೆಲಸ ಆಗುವುದು ಕಷ್ಟವಾಗುವುದು. ಆದರೆ ಏಕಾದಶದಲ್ಲಿ ಗುರುವಿರುವುದರಿಂದ ದೃಢವಾದ ಗುರುಭಕ್ತಿಯಿದ್ದಲ್ಲಿ ಕೆಲಸಗಳು ನಿರೀಕ್ಷೆ ಮಟ್ಟ ಮುಟ್ಟುತ್ತದೆ. ಸುಬ್ರಹ್ಮಣ್ಯನನ್ನು ಪೂಜಿಸಿ.

ವೃಷಭ

ಮೇ 4ರಂದು ಶುಕ್ರನು ತನ್ನ ಕ್ಷೇತ್ರಕ್ಕೆ ಬಂದು ಬುಧರಾಹು ಸಂಯೋಗದಲ್ಲಿ ಬಲಿಷ್ಠನಾಗುತ್ತಾನೆ. ಬುಧ-ಶುಕ್ರರ ಸಂಯೋಜನೆ ಒಳ್ಳೆಯ ಫಲ ನೀಡಲು ಅನುವಾಗುತ್ತದೆ. ಶುಕ್ರನು ರಾಹುವೊಂದಿಗೆ ಕೂಡಿದಾಗ ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ. ರಾಶಿಯಲ್ಲಿ ರಾಹು, ಮಿಥುನದಲ್ಲಿ ಕುಜ ಆಕಸ್ಮಿಕವಾಗಿ ಚಿಂತೆ ಅಥವಾ ವ್ಯಾಧಿ ಉಂಟುಮಾಡಬಹುದು. ಚಂಡಿ ಪಾರಾಯಣ ಮಾಡಿಸಿ.

ಮಿಥುನ

ದ್ವಾದಶ ಬುಧ-ಶುಕ್ರರು ಅಧಿಕ ಖರ್ಚು-ವೆಚ್ಚ ತೋರಿಸುತ್ತಾರೆ. ರಾಶಿಗೆ ಅಷ್ಟಮದಲ್ಲಿ ಶನಿಯಿಂದ ಕೆಲವು ರೋಗ ಲಕ್ಷಣ ಕಂಡುಬರುತ್ತದೆ. 9ರ ಗುರು ನಿಮ್ಮನ್ನು ಅದರಿಂದ ಪಾರು ಮಾಡುತ್ತಾನಾದರೂ, ಈ ಸಮಯದಲ್ಲಿ ಗ್ರಹಗಳು ವಿಶೇಷ ಫಲ ನೀಡಲಾಗುವುದಿಲ್ಲ. ಸುಬ್ರಹ್ಮಣ್ಯ ಸಹಸ್ರನಾಮ ಪಾರಾಯಣ ಮಾಡಿ. ನಿತ್ಯವೂ ಸಾಯಂಕಾಲದಲ್ಲಿ ದತ್ತಾಷ್ಟಕ ಪಾರಾಯಣ ಮಾಡಿ.

ಕಟಕ

ಜಲತತ್ವದ ಕರ್ಕಾಟಕ ರಾಶಿಯವರಿಗೆ ಗುರು ಅಷ್ಟಮಕ್ಕೆ ಬಂದು, ಸಪ್ತಮದಲ್ಲಿ ಶನಿಯು ಸ್ವಕ್ಷೇತ್ರದಲ್ಲಿದ್ದು, ಕೆಲವೊಂದು ಅನಿರೀಕ್ಷಿತ ಬೆಳವಣಿಗೆಯಿಂದ ಶರೀರದಲ್ಲಿ ವ್ಯತ್ಯಯ ಉಂಟಾಗಿ ಆತಂಕ ವಾಗುತ್ತದೆ. ಮೇ 2,3,4 ಶುಭಪ್ರದವಾಗಿದ್ದು, ನಿಮ್ಮ ಕಾರ್ಯವನ್ನು ಅನುಕೂಲ ಮಾಡಿಕೊಡುತ್ತಾನೆ. ಚಂದ್ರನ ಪ್ರೀತಿಗೆ ವಾಸುದೇವಾನಂದ ವಿರಚಿತ ‘ಚಿತ್ತಸ್ಥಿತಿ ಕಾರಕ ದತ್ತ ಸ್ತೋತ್ರ’ವನ್ನು 5 ಬಾರಿ ಪಠಿಸಿ.

ಸಿಂಹ

ಮಾರ್ಜಾಲವು ಏನೇ ಮಾಯ ಮಾಡಿದರೂ ಸಿಂಹವಾಗಲಾರದು. ಸಿಂಹದ ಗಾಂಭೀರ್ಯ ನಡಿಗೆ, ಘರ್ಜನೆ ಒಂದೇ ಸಾಕು ರಾಶಿಯ ಶುಭಾಶುಭ ಫಲಗಳನ್ನು ಹೇಳುವುದಕ್ಕೆ. ಬೇಕಾದ್ದನ್ನು ಕೊಡಲು ಸಪ್ತಮ ಗುರು- ಆರರ ಶನಿ ಬೆನ್ನ ಹಿಂದೆ ಕಾಯುತ್ತಿದ್ದಾರೆ. ಅನ್ಯಮಾರ್ಗಗಳಲ್ಲಿ ಹೋಗದೆ ದೈವಮಾರ್ಗದಲ್ಲಿ ಹೋದರೆ ಯಶಸ್ಸು, ಕೀರ್ತಿ ತಂದುಕೊಡುತ್ತಾನೆ.

ಕನ್ಯಾ

ಹೇಳುವುದಕ್ಕೂ ಕೇಳುವುದಕ್ಕೂ ಸಮಯವೊಂದಿದೆ ಎಂಬಂತೆ ನಿಮ್ಮ ನಡೆ-ನುಡಿಯು ಪಂಚಮ ಶನಿಯನ್ನು ದಾಟಲು ದಾರಿ. ಷಷ್ಠ ಗುರುವು ರೋಗಗ್ರಸ್ಥ ಮನಸ್ಸನ್ನು ಕೊಟ್ಟು ಏನೂ ಮಾಡಲಾಗದ ಸ್ಥಿತಿ ತಲುಪುತ್ತೀರ. ಧ್ಯೇಯ, ಧಾನ್ಯವಿರಲಿ. 5ರ ಶನಿ, 6ರ ಗುರುವಿಗೆ ನಿರಂತರವಾದ ಹರಿಯ ಪ್ರಾರ್ಥನೆ ಇರಲಿ. ಹಯಗ್ರೀವಾಷ್ಟೋತ್ತರ ಪಠಿಸಿ. ಗುರುವಿಗೆ ಬೃಹಸ್ಪತಿ ಮಂತ್ರ ನಿತ್ಯವೂ 21 ಬಾರಿ ಪಠಿಸಿ.

ತುಲಾ

ವೃಷಭ ರಾಶ್ಯಾಧಿಪತಿ ಶುಕ್ರನು ಮೇ 4ರಿಂದ ಬುಧನ ಜತೆ ಕುಳಿತು ಸಪ್ತಮದಲ್ಲಿ ಇರುವುದರಿಂದ ನಿಮ್ಮ ಮನಸ್ಸನ್ನು ಹಾಳುಮಾಡುವವರನ್ನು ದೂರವಿಟ್ಟು, 2ನೇ ಮನೆಯ ಕೇತುವಿಗೆ ಗಣಪತಿ ಪ್ರಾರ್ಥನೆ ಮಾಡಿರಿ. ದೈವವನ್ನು ಮುಂದಿಟ್ಟುಕೊಂಡು ಸಾಗಿದರೆ ಕಾರ್ಯ ಕೈಗೂಡುತ್ತದೆ. ಪಂಚಮ ಗುರು ಒಬ್ಬನೇ ಸಾಕು ಕಾರ್ಯಸಾಧನೆ ಮಾಡಲು. ಸ್ಥಿರಮನಸ್ಸಿಗೆ ಚಂದ್ರಾಷ್ಟೋತ್ತರ ಪಠಿಸಿ.

ವೃಶ್ಚಿಕ

ತಡೆಗೋಡೆಯನ್ನು ನಿರ್ವಿುಸುವವರೂ ನಾವೇ; ಕೆಡಹುವವರೂ ನಾವೇ. ಭಕ್ತಿಯಿಂದ ಉದಯ ಗಣಪತಿಯನ್ನು ಪೂಜೆ ಮಾಡಿ ಕಷ್ಟ-ನಷ್ಟದಿಂದ ಪಾರಾಗಬಹುದು. ಮೂರನೇ ಮನೆಯ ಶನಿಯಿಂದ ಅದೃಷ್ಟ ಸೂಚಿಸಿದರೂ, ಸಂದರ್ಭ ಕಟ್ಟಿಹಾಕಿದೆ. ವಿಳಂಬವಾದರೂ ಬರಬೇಕಾದದ್ದು ಬರುತ್ತದೆ. 4ನೇ ಗುರುವಿಗೆ ದತ್ತಾತ್ರೇಯನನ್ನು ಪೂಜಿಸಿ.

ಧನು

ಗುರುವಿರುವುದು 3ನೇ ಮನೆಯಲ್ಲಿ. ಶನಿಯ ಅಂತಿಮ ಸಂಚಾರದಲ್ಲಿ ನೀವಿದ್ದೀರ. ಎಲ್ಲವೂ ದೈವನಿಯಾಮಕ. ಹರಿಯನ್ನು ಭಜಿಸಿ- ಹರನ ಪೂಜಿಸಿದರೆ, ವ್ಯಾಪಾರ ಧನ-ಸುಖ-ಯಶಸ್ಸು ಎಲ್ಲವೂ ಕೈಗೂಡಿ ಆನಂದ ತರುತ್ತದೆ. ಅತಿಯಾದ ಆಯಾಸ ಶರೀರಕ್ಕೆ ಕೊಡುವ ಶಿಕ್ಷೆ. ಬರಬೇಕಾದದ್ದು ಬಂದೇ ಬರುತ್ತದೆ.

ಮಕರ

ಶ್ರವಣ ಎಂದರೆ ಒಳ್ಳೆಯದನ್ನು, ಹೃದಯಚಿತ್ತವನ್ನು ಹಿಡಿದು ಭಗವಂತನ ನಾಮಸ್ಮರಣೆ ಕೇಳು ಎಂದು. ಜನ್ಮಶನಿಗೆ ಇದೊಂದೇ ಮಾರ್ಗ. ದ್ವಿತೀಯದಲ್ಲಿ ಶನಿ ಮನೆಯಲ್ಲಿ ಗುರುವಿರುವುದರಿಂದ ಕೆಲಸ ವಿಳಂಬವಾದರೂ ಆಗುವ ಸೂಚನೆ ನೀಡುತ್ತದೆ. ಅನನ್ಯವಾಗಿ ‘ಶ್ರೀರಾಮ ಶರಣಂ ಮಮ’ ಎಂದುಚ್ಚರಿಸಿ. ನಕಾರಾತ್ಮಕತೆ ತೊಲಗಿಸಿ ಸಕಾರಾತ್ಮಕ ಶಕ್ತಿ ತುಂಬುತ್ತದೆ.

ಕುಂಭ

ರಾಶಿಯಲ್ಲಿ ಗುರು, ರಾಶ್ಯಾಧಿಪತಿ ದ್ವಾದಶದಲ್ಲಿದ್ದು, ಈ ವಾರ ನಿಮ್ಮಲ್ಲಿ ಎಲ್ಲವೂ ಇದೆ. ಆದರೆ ಯಾವುದೂ ಕೈಗೆಟಕುವಂತಿಲ್ಲ. ಮೇಷದಲ್ಲಿ ರವಿ, 4ರಲ್ಲಿ ಶುಕ್ರ, ರಾಹು ಇದ್ದು, ಬುಧನು ಬಂದು ಸೇರುತ್ತಾನೆ. ಚಿಂತೆಯನ್ನು ಬಿಟ್ಟು ಚಿದಾನಂದ ಸ್ವರೂಪ ಭಗವಂತನನ್ನು ಪ್ರಾರ್ಥಿಸಿ. ದಾರಿ ತೋರುತ್ತಾನೆ. ಗ್ರಹಗತಿ ಸರಿಹೋಗಲು ಮನೆಯ ಹಿರಿಯರಿಗೆ ನಮಸ್ಕರಿಸಿ.

ಮೀನ

ಹನ್ನೊಂದರ ಶನಿ, ರಾಶ್ಯಾಧಿಪತಿ ದ್ವಾದಶದಲ್ಲಿದ್ದು, ಸುಖ-ದುಃಖ ಸಮನಾಗಿ ಬರುತ್ತದೆ. ಹಗಲು ಕಳೆದ ಮೇಲೆ ರಾತ್ರಿ ಬರಲೇಬೇಕು. ಇದ್ದಾಗ ಕೊಟ್ಟು ಇಲ್ಲದಾಗ ಕೈಚಾಚಿದರೆ ಭಗವಂತ ಕೊಡುತ್ತಾನೆ. ದಾನ-ಧರ್ಮ ಮನುಷ್ಯನನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ದ್ವಾದಶ ಗುರುವಿಗೆ ಚಿದಂಬರ ದೇವರನ್ನು ಪೂಜಿಸಿ. ಹೇಳಿಕೆ ಮಾತಿಗೆ ಕಿವಿಗೊಡಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net