ವಾರಭವಿಷ್ಯ: ನಿಮ್ಮ ಕೋಪಕ್ಕೆ ನೀವೇ ಬಲಿಯಾಗಿ ಕೊಟ್ಟ ಮಾತು, ಧನ ಹಾಳು ಮಾಡಿಕೊಳ್ಳುವ ಸಮಯ

Vara-Bhavishya
Published on

ಮೇಷ: ಗುರುವೇ ವಿಷ್ಣು, ಬ್ರಹ್ಮ, ಶಿವ ಎಂದು ಗುರುಚರಿತ್ರೆ ಸಾರಿ ಸಾರಿ ಹೇಳಿರುವುದು. ಲೋಕ ಸಂರಕ್ಷಕನು, ಪ್ರಜಾ ಚಿಂತನೆ ಉಳ್ಳವನು, ಮನುಷ್ಯನು ಬೇಡಿದ ವರವನ್ನು ನೀಡುವವನಾದ ಮಹಾಗುರುವೇ ಆದ ಮೇಷ ರಾಶಿಯ ಗುರುವಿಗೆ ಶುಭ ಫಲಕ್ಕಾಗಿ ಪ್ರಾರ್ಥಿಸಿ. ಈ ವಾರದಲ್ಲಿ ನಿತ್ಯವೂ ಸೂರ್ಯೋದಯಕ್ಕೆ ಮುಂಚೆ ಎದ್ದು ಮಹಾವಿಷ್ಣುವಿನ ಶತಮಾನ ಧ್ಯಾನ ಮಾಡಿದರೆ ಬೇಕಾದ್ದೆಲ್ಲ ಸಿಗುತ್ತದೆ. ನಿಮ್ಮ ದಾರಿ ಯಾವುದು ಎಂದು ನಿಖರವಾಗಿ ಕಾಣುತ್ತದೆ.

ವೃಷಭ: ಏಕಾದಶ ರಾಹು ನಿಗೂಢ ಧನವನ್ನು ಅದಕ್ಕೆ ತಕ್ಕ ಖರ್ಚನ್ನು ಸದಾ ಕಾಲ ಇಟ್ಟಿರುತ್ತಾನೆ. ಧನವು ಲಕ್ಷ್ಮಿಯಂತೆ ಚಂಚಲೆ. ನಿಮ್ಮ ಮನಸ್ಸು ದುಡ್ಡು ಕೊಡುವುದರಲ್ಲಿ ಇರುತ್ತದೆ. ನಿಮ್ಮ ವೆಚ್ಚಕ್ಕೆ ಕಡಿವಾಣ ಹಾಕಿ ಕುಬೇರನನ್ನು ಪ್ರಾರ್ಥಿಸಿ. ಬಂದ ದುಡ್ಡು ನಿಲ್ಲುವಂತೆ ಸದ್ವಿನಿಯೋಗಕ್ಕೆ, ಧರ್ಮಕ್ಕೆ, ದೇವರಿಗೆ, ಅಗತ್ಯ ಇರುವವರಿಗೆ ಕೊಡಲು ಜ್ಞಾನ ನೀಡಲಿ. ನಿಮ್ಮನ್ನು ಸಾಕಿ ಸಲಹಿದವರಿಗೆ ನಿಮ್ಮ ಚಿಂತನೆ ಇರಲಿ. ದೈವ ಪ್ರಾರ್ಥನೆ ಮಾಡುವವರಿಗೆ ಎಂದೂ ಏನೂ ಇಲ್ಲ ಎಂದು ಹೇಳಬೇಡಿ. ಹಾಗೆ ಮಾಡಿದಲ್ಲಿ ಕೈ ತುಂಬ ಧನವು ಬಂದು ಆಗಬೇಕಾದ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ.

ಮಿಥುನ: ಏಕಾದಶ ಗುರು 9ರ ಶನಿ ಇದ್ದರೂ ಅಜ್ಞಾನವಶಾತ್ ಅಥವಾ ನಿಮ್ಮ ಕೋಪಕ್ಕೆ ನೀವೇ ಬಲಿಯಾಗಿ ಕೊಟ್ಟ ಮಾತು, ಧನ ಹಾಳು ಮಾಡಿಕೊಳ್ಳುವ ಸಮಯ. ಮನುಷ್ಯನು ಸುಜ್ಞಾನದಿಂದ ಮುಂದೆ ನಡೆದರೆ ಗುರು, ಶನಿ ಬೇಕಾದ್ದೆಲ್ಲ ಕೊಡುತ್ತಾರೆ. ಭಾನುವಾರ ಮಹಾ ಪ್ರದೋಷದಂದು ಈಶ್ವರನನ್ನು ಪೂಜಿಸಿ. ನಿಮ್ಮನ್ನು ನೀವೇ ಅರ್ಥೈಸಿಕೊಂಡು ಬಾಳಲು ಬುದ್ಧಿ ಕೊಡು ಎಂದು ಪ್ರಾರ್ಥಿಸಿ. ಭೋಗಭಾಗ್ಯಗಳು ಬರುತ್ತವೆ.

ಕಟಕ: ಜೀವನದಲ್ಲಿ ಅನುಕೂಲ ಅಥವಾ ಅನನುಕೂಲ ಏನೇ ಇದ್ದರೂ ಮನಸ್ಸಿನಲ್ಲಿ ಯಾವಾಗಲೂ ದೇವರನ್ನು ಕೊಂಡಾಡಿ ಅವನ ನಾಮ ಧ್ಯಾನದಲ್ಲಿ ತೊಡಗಿರುತ್ತೀರಿ. ಇಷ್ಟೇ ಸಾಕು ನಿಮ್ಮ ಗ್ರಹಗಳು, ದೈವಗಳು ಅನುಗ್ರಹಿಸುವುದಕ್ಕೆ. 8ರ ಶನಿ 10ರ ಗುರು ನಿಮಗೆ ಯಾವ ತೊಂದರೆಯನ್ನೂ ಕೊಡುವುದಿಲ್ಲ. ನಿಂತಂತೆ ನೀವು ಎಲ್ಲೂ ನಿಲ್ಲುವುದೂ ಇಲ್ಲ. ಗುರು ದತ್ತಾತ್ರೇಯನನ್ನು ಪ್ರಾರ್ಥಿಸಿ ಶುಭಫಲಗಳನ್ನೇ ಕಂಡುಕೊಳ್ಳಿ.

ಸಿಂಹ: ಸಿಂಹಕ್ಕೆ ಯಾವ ಭಯವೂ ಇಲ್ಲ. ಯೋಗ ಇರಲಿ, ಇಲ್ಲದಿರಲಿ, ಸಿಂಹ ರಾಶಿಯಲ್ಲಿ ಅದರಲ್ಲೂ ಮಖಾ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅಸಾಧ್ಯ ಎನ್ನುವ ಮಾತೇ ಇಲ್ಲ. ಸೂರ್ಯನಾರಾಯಣನ ಪೂಜೆಯನ್ನು, ಕೇತುವಿಗೆ ಗಣೇಶನನ್ನು, ಅಷ್ಟಮ ರಾಹುವಿಗಾಗಿ ಸುಬ್ರಹ್ಮಣ್ಯನನ್ನು ಪೂಜಿಸಿ ಇಷ್ಟಾರ್ಥ ಸಿದ್ಧಿ ಗಳಿಸಿಕೊಳ್ಳಬಹುದು.

ಕನ್ಯಾ: ಪುಣ್ಯ ಕ್ಷೇತ್ರ ಸಂದರ್ಶಿಸಿ ಪವಿತ್ರ ತೀರ್ಥ ಸ್ನಾನ ಮಾಡಿದರೆ ನಮ್ಮ ಮನಸ್ಸು ಮತ್ತು ದೇಹ ಶುದ್ಧಿಯಾಗಿ ಕಾರ್ಯ ಮಾಡಲು ಅನುಕೂಲ ಮಾಡಿಕೊಡುತ್ತದೆ. ದೇವರನ್ನು ಮನಸಾರೆ ಪ್ರಾರ್ಥಿಸಿ. ಅಷ್ಟಮ ಗುರುವಿಗೆ ಗುರು ನರಸಿಂಹನನ್ನು ಧ್ಯಾನ ಮಾಡಿ ಅಷ್ಟೋತ್ತರ ಪಾರಾಯಣ ಮಾಡಿ. ಬೆಲ್ಲ, ಬೇಲದ ಹಣ್ಣು, ಹೆಸರುಬೇಳೆಯನ್ನು ನರಸಿಂಹನಿಗೆ ಸಮರ್ಪಣೆ ಮಾಡಿ, ನಿಮ್ಮ ಪುಣ್ಯವನ್ನು, ಸುಖವನ್ನು ವೃದ್ಧಿಸಿಕೊಳ್ಳಿ.

ತುಲಾ: ಸಪ್ತಮಾಂ ದೈವ ಚಿಂತನಂ ಎಂಬ ವಾಕ್ಯವನ್ನು ಅರಿತು ಪ್ರಯತ್ನ ಕೈಗೂಡುವಂತೆ ದೈವಾನುಗ್ರಹದಿಂದ ನಿಮ್ಮ ಕೆಲಸ ಅನುಕೂಲ ಮಾಡಿಕೊಡಲು, ಸುಖ ಭೋಗ ಅನುಭವಿಸಲು ಸಪ್ತಮ ಗುರುವು ಪ್ರೇರೇಪಿಸುತ್ತದೆ. ಇಂಗ್ಲಿಷ್ ವಾಕ್ಯದಂತೆ ನಿಮಗೆ ಉಪಟಳ ಕೊಡುವವರನ್ನು ನೆಗ್ಲಿಜೆನ್ಸ್ ಇನ್ ಸೈಲೆನ್ಸ್ ಎಂಬ ಸರಪಳಿಯಲ್ಲಿ ಕಟ್ಟಿ ಹಾಕಿ ಬೇಕಾದ್ದನ್ನು ಪಡೆಯಿರಿ. ಮೀನಾಕ್ಷಿ ಸುಂದರೇಶ್ವರ ಕಲ್ಯಾಣದ ಕಥಾ ಸಾರಾಂಶವನ್ನು ಓದಿರಿ, ಶುಭವಾಗಲಿ.

ವೃಶ್ಚಿಕ: ವೃಶ್ಚಿಕ ರಾಶಿಗೆ ಅಧಿಪತಿ ಕುಜನೇ ಆಗಿರುವುದರಿಂದ ಖಂಡಿತವಾಗಿ ನಿಮ್ಮ ಪ್ರಾರ್ಥನೆ ಈಡೇರುತ್ತದೆ. ನಿಮ್ಮ ಬೇಡಿಕೆಯನ್ನು ದೇವರು ನಡೆಸಿಕೊಡುವ ಕಾಲವಿದು. ಬಂದದ್ದೆಲ್ಲ ಬರಲಿ, ಈಶ್ವರನ ಕೃಪೆ ಇರಲಿ ಎಂದು ಆರಾಧ್ಯ ದೇವರನ್ನು ಪ್ರಾರ್ಥಿಸಿ. ಶೀಘ್ರದಲ್ಲಿ ಮನೋ ಇಚ್ಛೆ ಪೂರ್ಣವಾಗುವುದು. ಮಾಘ ಪುಷ್ಯ ಫಾಲ್ಗುಣ ಮಾಸದಲ್ಲಿ ಬರುವ ಯಾವುದಾದರೂ ಒಂದು ಮಾಸದಲ್ಲಿ ಶುದ್ಧ ಷಷ್ಟಿಯಂದು ಬ್ರಹ್ಮಚಾರಿಗೆ ಪೂಜೆ ಮಾಡಿದರೆ ಮುಂದಿನ ಉಜ್ವಲ ಭವಿಷ್ಯಕ್ಕೆ ನಾಂದಿ ಆಗುತ್ತದೆ.

ಧನು: ಪಂಚಮದಲ್ಲಿ ಗುರು 3ರ ಶನಿ ಏನನ್ನೂ ಕೊಡಬಲ್ಲನು. ಧನುರ್ ಬಾಣಾದಿಗಳ ಸಂಕೇತ ಹೊತ್ತ ಪಟ್ಟಾಭಿರಾಮನನ್ನು ಪ್ರಾರ್ಥಿಸಿದರೆ ನಿಮಗೂ ಅವನಂತೆ ಅಧಿಕಾರದ ಪಟ್ಟ ದೊರೆತು ರಾಜ್ಯವನ್ನು ಆಳುತ್ತೀರಿ. ಮೂಲ ರಾಮನನ್ನು ರಾಮ ನಾಮ ಮಂತ್ರದಿಂದ ಜಪಿಸಿ, ಬೇಕಾದ್ದನ್ನು ಪಡೆಯಬಹುದು. ದೇಹದಲ್ಲಿನ ಸಣ್ಣ ವ್ಯತ್ಯಾಸಗಳಿಗೆ ಸೂರ್ಯ ಅಷ್ಟಕವನ್ನು ಓದಿ. ಸ್ಥಿರ ಆರೋಗ್ಯ, ಸಂತೋಷ ತುಂಬಿದ ಮನಸ್ಸನ್ನು ದೇವರೇ ಕರುಣಿಸುತ್ತಾನೆ.

ಮಕರ: ಈ ರಾಶಿಗೆ ತೃತೀಯದಲ್ಲಿ ಶನಿ ಇದ್ದು ಚತುರ್ಥದಲ್ಲಿ ಗುರುವಿದ್ದಾನೆ. ಮಾಯಾವಿಯು, ಮನೋಹರನು, ನಮ್ಮ ಕಣ್ಣಿಗೆ ಕಾಣದವನು, ಏಕೈಕ ಸ್ಪುರದ್ರೂಪಿ ವೆಂಕಟೇಶ ದರ್ಶಯಿತ್ವ ಸುಖ ಭೋಗ ಭಾಗ್ಯ ಲಭ್ಯತೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ, ನಿಮ್ಮ ಕೆಲಸಗಳಲ್ಲಿ ಮುಂದೆ ಸಾಗಿ. ಆಗ ತೃಪ್ತಿ, ಹರ್ಷ ಸಿಗುತ್ತದೆ.

ಕುಂಭ: ಲಗ್ನದಲ್ಲಿ ಶನಿ ಇದ್ದರೂ 3ರಲ್ಲಿ ಗುರು ಇರುವುದರಿಂದ ಹೆಚ್ಚಿನ ಸಮಸ್ಯೆ ಉಂಟಾಗದು. ಸಮಸ್ಯೆ ಬಗೆಹರಿಯಬೇಕಾದರೆ ಸಾಮಾನ್ಯ ಮನುಷ್ಯರಿಂದ ಹಿಡಿದು ಉತ್ತಮ ಮನುಷ್ಯರು ಕೂಡ ದೈವ ಸಂಪರ್ಕ ಬೆಳೆಸಿಕೊಂಡರೆ ‘ಇರುವುದಿಲ್ಲ’ ಎಂಬ ಶಬ್ದಕ್ಕೆ ಇತಿಶ್ರೀ ಹಾಡಬಹುದು. ಕೊಡುವ ದೇವರು ಕೊಟ್ಟೇ ಕೊಡುತ್ತಾನೆ. ಗುರು ದತ್ತಾತ್ರೇಯನನ್ನು ಪ್ರಾರ್ಥಿಸಿ.

ಮೀನ: ಮಾನ್ಯತೆ, ಸೃಜನಶೀಲತೆ ಎರಡೂ ಮನುಷ್ಯನಿಗೆ ಬೇಕಾದ ಶುದ್ಧವಾದ ದಾರಿಗಳು. ರಾತ್ರಿಯಲ್ಲಿ ದೀಪ ಇಲ್ಲದಿದ್ದರೆ ಕಣ್ಣಿದ್ದವನಿಗೂ ದಾರಿ ಕಾಣದು. ಅದರಂತೆ ಗುರುವಿನಲ್ಲಿ ಭಕ್ತಿಯನ್ನು ಇರಿಸಿಕೊಂಡು ದತ್ತಾತ್ರೇಯನನ್ನು ಪೂಜಿಸಿ. ಸುಖ, ಶಾಂತಿ, ಸಮೃದ್ಧಿ ಪಡೆಯಿರಿ. ಶಂಕರಾಚಾರ್ಯ ರಚಿತ ಕನಕಾಧರ ಸ್ತೋತ್ರ ಪಾರಾಯಣ ಮಾಡಿ, ಶುಭವಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net