

ಮೇಷ: ಈ ಮಾಸವಿಡೀ ಸೂರ್ಯನನ್ನು ಪೂಜಿಸಿ. ಭಾನುವಾರ ಶ್ರೇಷ್ಠವಾದ ಪಂಚಮಿಯಂದು ನಾಗಪೂಜೆ, ಧನುರ್ವಸದ ಪೂಜೆ ಆರಂಭಗೊಳ್ಳುತ್ತದೆ. ಧನುರ್ವಸದ ಪೂಜೆಗಳು ಸೂರ್ಯೋ ದಯಕ್ಕೆ ಮುಂಚೆಯೇ ಆರಂಭವಾಗುತ್ತವೆ. ಈ ಮಾಸದಲ್ಲಿ ನೀವು ಪೂಜೆಯಲ್ಲಿ ತೊಡಗಿಸಿಕೊಂಡು ಕಾರ್ಯೋನ್ಮುಖರಾದರೆ ಯಾವ ಗ್ರಹಗಳೂ ಯಾರಿಗೂ ಅಶುಭ ಫಲ ಕೊಡದೇ ಸಹಕರಿಸುತ್ತವೆ. ಡಿ. 18ರಂದು ಚಂಪಾ ಷಷ್ಠಿಯಂದು ವಿಶೇಷವಾಗಿ ಸುಬ್ರಹ್ಮಣ್ಯನನ್ನು ಪೂಜಿಸಿ. ಲಗ್ನದಲ್ಲಿ ಗುರುವಿದ್ದು, ಶುಭಕ್ಕೆ ಕೊರತೆಯಿಲ್ಲ. ಆನಂದಕ್ಕೆ ಮಿತಿಯಿಲ್ಲ.
ವೃಷಭ: ಈ ರಾಶಿಯವರಿಗೆ ದ್ವಾದಶದಲ್ಲಿ ಗುರು, ಅಷ್ಟಮದಲ್ಲಿ ರವಿ, ಬುಧರು ಒಟ್ಟಿಗೆ ಸೇರಿರುತ್ತಾರೆ. ತಾವು ಮಾಡುವ ಕೆಲಸಗಳಲ್ಲಿ ಜಾಗರೂಕರಾಗಿ ಇರಬೇಕು. ಆರೋಗ್ಯ ಕಾಪಾಡಿಕೊಳ್ಳಲು ಉದ್ಯುಕ್ತರಾಗಿ ಸೂರ್ಯನಾರಾಯಣ ಅಷ್ಟೋತ್ತರ ಪಾರಾಯಣ ಮಾಡಿ. ಬುಧನಿಗೆ ಮಹಾವಿಷ್ಣುವಿನ ಕೃಪೆಯಲ್ಲಿದ್ದರೆ ಕಷ್ಟ ನಷ್ಟಗಳು ದೂರವಾಗಿ ನೀರಿನ ಮೇಲೆ ಶಯನ ಮಾಡಿದ ಶೇಷಾಚಲನು ಕಾಪಾಡುತ್ತಾನೆ. ಗುರುವಿಗೆ ಗುರು ದತ್ತಾತ್ರೇಯನನ್ನು ಪ್ರಾರ್ಥಿಸಿ, ಪೂಜಿಸಿ.
ಮಿಥುನ: ರಾಶ್ಯಾಧಿಪತಿ ಬುಧನು ಮಿಥುನ ರಾಶಿಯವರಿಗೆ ಸಪ್ತಮದಲ್ಲಿ ಇದ್ದು, ರವಿ ಸಂಪರ್ಕದಲ್ಲಿ ಇದ್ದಾನೆ. ರವಿ ಬುಧರಿಂದ ನೀವು ಸ್ನೇಹಜೀವಿಯೆಂದು ಕರೆಸಿಕೊಳ್ಳುವ ಸಮಯ. 9ರ ಸ್ವಕ್ಷೇತ್ರ ಶನಿಯು ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸಿ, 11ರ ಗುರುವು ಸುಖ ಸಂತೋಷವನ್ನು ಕೊಡುತ್ತಾನೆ. ಧನುರ್ ಮಾಸದಲ್ಲಿ ಸೂರ್ಯೋದಯಕ್ಕೆ ಮುಂಚೆಯೇ ಮಹಾವಿಷ್ಣುವನ್ನು ಸ್ಮರಿಸಿ, ಪೂಜಿಸಿ. ಸಹಸ್ರನಾಮವನ್ನು ಪಾರಾಯಣ ಮಾಡಿರಿ.
ಕಟಕ: ರಾಶ್ಯಾಧಿಪತಿ ಚಂದ್ರನು ನಿತ್ಯವೂ ಬದಲಾಗುತ್ತಾನೆ. ಮನಸ್ಸಿನ ಚಂಚಲತೆಯನ್ನು ನಿಲ್ಲಿಸಿ, ಏಕಾಗ್ರತೆಯಿಂದ ದಶಮ ಗುರುವನ್ನು, ದಶಾವತಾರದ ರಾಮಚಂದ್ರನನ್ನು ಪೂಜಿಸಿ, ಧ್ಯಾನಿಸಿ. ಶನಿಯಿಂದ ಬರುವ ಬಾಧೆಗಳನ್ನು ತಡೆಗಟ್ಟಬಹುದು. ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಸಾಗಿರಿ. ಖರ್ಚು ವೆಚ್ಚವು ಹತೋಟಿಯಲ್ಲಿರಲಿ. ಆನಂದಕ್ಕಾಗಿ ಭೈರವಾಷ್ಟೋತ್ತರ ಪಾರಾಯಣ ಮಾಡಿ.
ಸಿಂಹ: ಈ ರಾಶಿಯವರಿಗೆ ಪಂಚಮದಲ್ಲಿ ರವಿ ಬುಧರ ಸಂಯೋಗದಲ್ಲಿ ನಿಂತ ಕೆಲಸ ಮುಂದೆ ಸಾಗಿ ಆನಂದದಾಯಕವಾದ ಯಶಸ್ಸು ಅನಂತ ಶುಭಾಶುಭ ಫಲ ನಡೆದು ಧನಾಕಾಂಕ್ಷಿ ಧನವೂ, ಯಶಸ್ಸು, ಧೈರ್ಯ, ಕೀರ್ತಿಯು ಬರುವ ಕಾಲ. ಮರೆಯದೇ ನಿತ್ಯವೂ ಸೂರ್ಯನಾರಾಯಣನನ್ನು ಪ್ರಾರ್ಥಿಸಿ. ದ್ವಿತೀಯ ಕೇತುವಿಗೆ ಗಣೇಶನನ್ನು ಪೂಜಿಸಿ. ಇನ್ನೂ ಒಳ್ಳೆಯ ಕಾಲವನ್ನು ನೋಡುತ್ತೀರಿ.
ಕನ್ಯಾ: ಲಗ್ನದಲ್ಲಿ ಕೇತು, ಸಪ್ತಮದಲ್ಲಿ ರಾಹು, ಅಷ್ಟಮ ಗುರುವಿದ್ದರೂ 6ರ ಶನಿಯು ಕೊಡುವುದನ್ನೆಲ್ಲ ಕೊಟ್ಟು, ನ್ಯಾಯಸಮ್ಮತವಾದ ಮಾರ್ಗದಲ್ಲಿ ನಡೆದಲ್ಲಿ ಶನಿಯು ಧರ್ಮ ಮತ್ತು ದೇವರ ಹಾದಿಯಲ್ಲಿ ಇದ್ದವರಿಗೆ ಯಾವ ಅಶುಭ ಫಲಗಳನ್ನೂ ಕೊಡುವುದಿಲ್ಲ. 8ರ ಗುರುವಿಗೆ ಕಡಲೆಕಾಳು, ಸಪ್ತಮ ರಾಹುವಿಗೆ ಉದ್ದಿನಬೇಳೆ ದಾನ ನೀಡಿ. ಶುಭ ಫಲಗಳನ್ನು ಕಂಡುಕೊಳ್ಳಿ.
ತುಲಾ: ಶುಕ್ರನು ರಾಶಿಗೆ ಎರಡನೇ ಮನೆಯಲ್ಲಿ ಅಂಗಾರಕನು ಇರುವುದು ಶುಭವಾದರೂ ಅತಿಯಾದ ದೇಹಾಲಸ್ಯವನ್ನು ಮಾಡಿ ಸಣ್ಣಪುಟ್ಟ ಅನಾರೋಗ್ಯಕ್ಕೆ ಕಾರಣವಾಗುತ್ತಾನೆ. ನಿರ್ಲಕ್ಷ್ಯ ಮಾಡಬೇಡಿ. ಸಪ್ತಮದಲ್ಲಿ ಗುರುವಿದ್ದು ಸರ್ವಸ್ವವನ್ನೂ ಕೊಡುತ್ತಾನೆ. ಯಶಸ್ಸನ್ನು ನೀಡಿ, 7ನೇ ಮನೆಯ ಸುಖವನ್ನು ಕೀರ್ತಿಯನ್ನು ಕೊಡುವುದರಲ್ಲಿ ಸಂದೇಹ ಬೇಡ. ಆದರೂ ಅಂಬಾಭವಾನಿಯನ್ನು ಪೂಜಿಸಿ, ಎಲ್ಲವನ್ನೂ ನಿಮ್ಮದಾಗಿಸಿಕೊಳ್ಳುವ ಕಾಲವಿದು.
ವೃಶ್ಚಿಕ: ರಾಶಿಯಲ್ಲಿ ಕುಜನು ಇದ್ದು, ನಿಮ್ಮ ಜೀವನದಲ್ಲಿ ಕೆಲವು ತಿದ್ದುಪಡಿ ಮಾಡಿ, ಭೂಮಿಯಿಂದ ಬರಬೇಕಾದ ಭಾಗ್ಯವನ್ನು ಕೊಟ್ಟೇ ಕೊಡುವನು. 6ರಲ್ಲಿ ಇರುವ ಗುರುವಿಗೆ ಕಾಲಭೈರವನನ್ನು ಪೂಜಿಸಿ. ಕಾಲಭೈರವ ದೇವಾಲಯಕ್ಕೆ ಹೋಗಿ ದೇವರನ್ನು ದರ್ಶಿಸಿದಲ್ಲಿ, ನಿಮ್ಮ ಕಾಲವು ಬದಲಾಗಿ ಸಮಯಕ್ಕೆ ಸರಿಯಾಗಿ ಧನಭಾಗ್ಯ ಬಂದು ಸೇರಿ ಚಿಂತೆಗಳು ದೂರವಾಗುತ್ತವೆ. ಪಂಚಮಿಯಂದು ನಾಗದೇವರನ್ನು ಷಷ್ಠಿಯಂದು ಸುಬ್ರಹ್ಮಣ್ಯ ದೇವರನ್ನು ಪೂಜಿಸಿ ಬ್ರಹ್ಮಚಾರಿಗೆ ವಸ್ತ್ರದಾನವನ್ನು ಮಾಡಿರಿ.
ಧನುಸ್ಸು: ರಾಶಿ ಅಧಿಪತಿ ಗುರುವು ಪಂಚಮದಲ್ಲಿ ಇದ್ದು, ಲಗ್ನದಲ್ಲಿ ರವಿ ಬುಧರು ಕೂಡಿರುವುದರಿಂದ ಎಲ್ಲ ಆಗುಹೋಗುಗಳು ನಿಮ್ಮಂತೆಯೇ ನಡೆದು, ತೃತೀಯ ಶನಿಯು ನಿಮ್ಮನ್ನು ಲಾಭದಾಯಕವಾದ ಕರ್ತವ್ಯದಲ್ಲಿ ಯಶಸ್ಸನ್ನು ಕಾಣುವ ಮಾರ್ಗದಲ್ಲಿ ಕೊಂಡೊಯ್ದು ಮನಸ್ಸಿಗೆ ಆನಂದವನ್ನು ತರುತ್ತಾನೆ. ಪಂಚಮದಲ್ಲಿ ಗುರು ಇರುವುದರಿಂದ ಹನುಮಂತನ, ಗುರು ದತ್ತಾತ್ರೇಯನ ಪ್ರಾರ್ಥನೆ ನಿತ್ಯವೂ ಮಾಡಿದರೆ ಸಂತೋಷ, ಆನಂದವನ್ನು ಪಡೆಯಬಹುದು.
ಮಕರ: ದ್ವಾದಶಕ್ಕೆ ರವಿ ಬರುವುದರಿಂದ ಸ್ವಲ್ಪಮಟ್ಟಿಗೆ ಆರೋಗ್ಯ ವ್ಯತ್ಯಯವಾದರೂ ನಿಮಗೆ ಯಾವ ಅಪಾಯವನ್ನೂ ಉಪಾಯದಿಂದ ದಾಟುವ ಸಮಯವಿದು. ಶನಿಯ ಸಂಚಾರವು ಕಡೆಯ ಭಾಗದಲ್ಲಿದ್ದು, ಶನಿಯ ಪ್ರೀತ್ಯರ್ಥ ಶನಿ ಅಷ್ಟೋತ್ತರ ಬಿಲ್ವದಳದಿಂದ ಪೂಜೆ ಮಾಡಿ. ರಾಹುವಿಗೆ ನಾಗಪೂಜೆಯನ್ನು ಮಾಡಿದರೆ ಕಷ್ಟ, ನಷ್ಟ ತಡೆಹಿಡಿದು ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ.
ಕುಂಭ: ಈ ರಾಶಿಯವರಿಗೆ ಲಗ್ನತ್ ಶನಿಯು ಸ್ವಲ್ಪ ತಡೆಯನ್ನು ಉಂಟು ಮಾಡಿದರೂ ಯಾವ ಹಾನಿಯನ್ನೂ ಮಾಡದೇ ಕಾಪಾಡುವನು. ಏಕೈಕ ಮಹಾಪುರುಷ ಗುರು- ನರಸಿಂಹನೆಂದು ಮರೆಯದಿರಿ. ನರಸಿಂಹನ ಧ್ಯಾನ-ಪೂಜೆಯಿಂದ ದುಷ್ಟ ಶಕ್ತಿ ದೂರವಾಗಿ ಇಷ್ಟಾರ್ಥಗಳು ಈಡೇರುವ ಕಾಲವು ನಿಮ್ಮ ಕಷ್ಟಗಳನ್ನು ಪರಿಹರಿಸಿ, ನಿಮಗೆ ಧೈರ್ಯ, ಯಶಸ್ಸು ಕರುಣಿಸಲು ನಿತ್ಯವೂ ಲಕ್ಷ್ಮೀ ನರಸಿಂಹ ಸ್ತೋತ್ರವನ್ನು ಪಾರಾಯಣ ಮಾಡಿ. ಮಂಗಳವಾರ ತಪ್ಪದೇ ಲಕ್ಷ್ಮೀ ನರಸಿಂಹ ದೇವಾಲಯ ದರ್ಶಿಸಿ ಬೆಲ್ಲ, ಹೆಸರು ಬೇಳೆ ದೇವರಿಗೆ ಸಮರ್ಪಣೆ ಮಾಡಿ ಕಾರ್ಯೋನ್ಮುಖರಾಗಿರಿ.
ಮೀನ: ಈ ರಾಶಿಯವರಿಗೆ ಲಗ್ನದಲ್ಲೇ ರಾಹು ಇರುವುದರಿಂದ ಪಂಚಮಿಯಿಂದ (ಡಿ. 17) ನಾಗಪೂಜೆಯನ್ನು, ಚಂಪಾ ಷಷ್ಠಿಯ ಆಚರಣೆ ಖಂಡಿತವಾಗಿ ಮಾಡಲೇಬೇಕು. ದ್ವಾದಶ ಶನಿಯು ಏನನ್ನೂ ಮಾಡಲಾರನು. ದ್ವಿತೀಯ ಗುರು ನಿಮ್ಮನ್ನು ದಡ ಸೇರಿಸುತ್ತಾನೆ. 2ರ ಗುರುವು ವಿಶೇಷ ಫಲವನ್ನು ನೀಡುವುದಲ್ಲದೇ ಮನಸ್ಸಿಗೆ ಹರ್ಷವನ್ನು, ಮನೆಯಲ್ಲಿ ಸುಖಶಾಂತಿಯನ್ನು ನೀಡುತ್ತದೆ. ನಿಮ್ಮನ್ನು ಅರ್ಥ ಮಾಡಿಕೊಳ್ಳುವ ಕುಟುಂಬದವರು ನಿಮಗೆ ನೆಮ್ಮದಿ ನೀಡಿ ನಿಮ್ಮನ್ನು ಸಂತೋಷದಿಂದ ಇಟ್ಟು ದ್ವಾದಶ ಶನಿಗೆ ಉಮಾ ಮಹೇಶ್ವರನನ್ನು ಪೂಜಿಸಿ. ದೇವರನ್ನು ನಂಬಿ ಕೆಟ್ಟವರಿಲ್ಲ ಎಂಬಂತೆ ಗುರು ದತ್ತಾತ್ರೇಯನ ಚರಿತ್ರೆಯ ಪಾರಾಯಣ ಮಾಡಿ ಸುಖವನ್ನು ಕಂಡುಕೊಳ್ಳಿ.