

ಮೇಷ: ಮಾಡಿದ ಪಾಪಪುಣ್ಯಗಳನ್ನು ತುಲನೆ ಮಾಡಿ ಅದಕ್ಕೆ ತಕ್ಕ ಫಲವನ್ನು ಜಗತ್ ರಕ್ಷಕನಾದ ಪಾಂಡುರಂಗನು ಜನವರಿ 2024ರಲ್ಲಿ ಮನುಷ್ಯನಿಗೆ ಕೊಟ್ಟು ಕಾಪಾಡುತ್ತಾನೆ. ಅಶ್ವಿನಿ, ಭರಣಿ, ಕೃತಿಕಾ ಒಂದನೇ ಪಾದದವರಿಗೆ ಗುರುವು ಲಗ್ನದಲ್ಲೇ ಇರುವುದರಿಂದ ಕೆಲವೊಂದು ಒಳ್ಳೆಯ ಕೆಲಸವನ್ನು ಗುರಿಹಿರಿಯರ ಮೇಲೆ ವಿಶ್ವಾಸ, ನಂಬಿಕೆ ಇಟ್ಟು ಮುಂದೆ ಸಾಗಿದಲ್ಲಿ ಆಗುತ್ತದೆ. ಅಂಗಾರಕನ ಮನೆಯಲ್ಲಿ ಹುಟ್ಟಿದ ನೀವು ಸುಬ್ರಮಣ್ಯ ದೇವರನ್ನು ಅರ್ಚಿಸಿದರೆ ಒಳ್ಳೆಯ ಫಲವನ್ನು ಪಡೆದುಕೊಳ್ಳಬಹುದು.
ವೃಷಭ: ಮನುಷ್ಯನಿಗೆ ಸುಖ, ದುಃಖ, ಹಗಲುಇರುಳು, ಜಯ-ವಿಜಯ ಜೊತೆಗೆ ಸೋಲುಗಳು ಬರುವುದು ಸಹಜ. 12ರ ಗುರು ನಿಮಗೆ ದಾರಿ ತೋರಿಸುತ್ತಾನೆ. ಆದರೆ ರಾಜಮಾರ್ಗವನ್ನು ಬಿಟ್ಟು ಕಲ್ಲುಮುಳ್ಳು ದಾರಿಯಲ್ಲಿ ನಡೆದರೆ ಕಷ್ಟಗಳನ್ನು ನೀವೇ ಮೈಮೇಲೆ ಎಳೆದುಕೊಂಡಂತೆ. ಒಳ್ಳೆಯ ಮಾರ್ಗ, ಸತ್ಪುರುಷರ ದರ್ಶನ ಇದ್ದರೆ ನಿಮಗೆ ಕೆಲಸಗಳಲ್ಲಿ ಹಿತವು, ಜಯವು ಉಂಟಾಗುತ್ತದೆ. ದುರ್ಗೆಯನ್ನು ಪೂಜಿಸಿ.
ಮಿಥುನ: ವಿದ್ವಾಂಸರು, ಪಂಡಿತರು ಹೇಳಿದ ಮಾತನ್ನು ಕೇಳಿದರೆ ಹಿತವಾಗುತ್ತದೆ. ಇದಕ್ಕೆ ಸಾಕ್ಷಿ ಸಾಕ್ಷಾತ್ ಶ್ರೀರಾಮಚಂದ್ರನೇ 11 ಸಾವಿರ ವರ್ಷಗಳ ಕಾಲ ಭೂಲೋಕವನ್ನು ಆಳಿದ್ದು. ಗುರುವನ್ನು ಪೂಜಿಸಿ. 11ರ ಗುರು, 9ರ ಸ್ವಕ್ಷೇತ್ರ ಶನಿಯು ದೇವರು ಕೊಟ್ಟ ವರ ಎಂದು ತಿಳಿದು ಮುಂದೆ ಸಾಗಿದರೆ ಎಲ್ಲವೂ ಸಂತೋಷದಿಂದ ಸಾಗುತ್ತದೆ. ರಾಮ ಅಷ್ಟೋತ್ತರವನ್ನು ಪಠಿಸಿ. ಕಾರ್ತಿಕ ಮಾಸದಲ್ಲಿ ಖಂಡೋಬನನ್ನು ಪೂಜಿಸಿ. ಮಾನಸ ಮೈಲಾರಲಿಂಗೇಶ್ವರನನ್ನು ದರ್ಶಿಸಿ ಬನ್ನಿ.
ಕಟಕ: ಮಹಾವಿಷ್ಣುವವಿನಿಂದ ಚಂದ್ರ, ಸೂರ್ಯರ ಸೃಷ್ಟಿ ಆಗಿದೆ. ಇಡೀ ಬ್ರಹ್ಮಾಂಡವೇ ಮಾಯಾರೂಪಿ ವಿಷ್ಣುವಿನ ಮುಖ ಕಮಲಾರವಿಂದ ಎಂದು ತಿಳಿದು ನೀವು ಅನನ್ಯವಾಗಿ ಮಹಾ ವಿಷ್ಣುವನ್ನು ಪೂಜಿಸಿ. ಕಾರ್ತಿಕ ಮಾಸದಲ್ಲಿ ಗಿರಿಜಾರಮಣನನ್ನು ಪೂಜಿಸಿದರೆ ದೇಹಕ್ಕೆ ಆರೋಗ್ಯವು, ಮನಸ್ಸಿಗೆ ಆನಂದ, ಉತ್ಸಾಹ ದೊರಕಿ ಬೇಕಾದ ಇಷ್ಟಾರ್ಥಗಳನ್ನು ಪಡೆಯುವ ಕಾಲ.
ಸಿಂಹ: ಮನುಷ್ಯನು ಜೀವನದಲ್ಲಿ ಗಜರಾಜನಂತೆ ರಾಜನಡಿಗೆಯಿಂದ ಹೊರಟು ಸಿಂಹನಂತೆ ಗರ್ಜಿಸಿದರೆ ಯಾವುದಕ್ಕೂ ಕೊರತೆ ಇಲ್ಲ. ನೆನಪಿರಲಿ, ಸಿಂಹವು ತನ್ನ ಆಹಾರವನ್ನು ಹುಡುಕಲು ಗರ್ಜಿಸುತ್ತದೆ. ಸಿಂಹ ರಾಶಿಯವರಾದ ನೀವು ಗರ್ಜಿಸಲು ಸಿಂಹವಾಹಿನಿ ದುರ್ಗೆಯನ್ನು ಪೂಜಿಸಿ. ಆದಿತ್ಯಹೃದಯ ಪಾರಾಯಣವನ್ನು ಮಾಡಿ. ಯಥೇಚ್ಛ ಜ್ಞಾನಶಕ್ತಿಯನ್ನು ಪಡೆಯಲು ಸುಬ್ರಹ್ಮಣ್ಯನನ್ನು ಪೂಜಿಸಿ. ನೀವು ನಡೆದ ದಾರಿ ರಾಜಬೀದಿಯಾಗುತ್ತದೆ.
ಕನ್ಯಾ: ಶುಕ್ರನು ಕೇತುಗ್ರಸ್ತನಾಗಿದ್ದಾನೆ ಅಂದರೆ ಧನಲಾಭ, ಜನಲಾಭ ಉಂಟಾಗಬೇಕಾದರೆ ಗಣಪತಿಯನ್ನು ಪೂಜಿಸಿ ಎಂಬ ಪಾಠವನ್ನು ಹೇಳುತ್ತಾನೆ. ಮೆಟ್ಟಿಲು ಹತ್ತುವುದು ಕಷ್ಟ. ಇಳಿಯಲು ಹೆಚ್ಚು ಸಮಯ ಬೇಕಿಲ್ಲ. ಕೈಕಾಲುಗಳಿಗೆ ಶಕ್ತಿ ತುಂಬಿ ಅಷ್ಟಮ ಗುರುವಿಗೆ ಸಪ್ತಬೆಟ್ಟಗಳನ್ನು ಹತ್ತಿ, ತಿರುಪತಿ ತಿಮ್ಮಪ್ಪನ ದರ್ಶನವನ್ನು ಮಾಡಿ ಬನ್ನಿ. ಸಂಕಲ್ಪವು ಸಿದ್ಧಿಯಾಗಿ ಕಾರ್ಯಗಳು ತಾನಾಗಿಯೇ ಜಯದ ಪಥದಲ್ಲಿ ಸಾಗುತ್ತವೆ.
ತುಲಾ: ಸಪ್ತಮ ಗುರು ನಿಮಗೆ ಈಗಾಗಲೇ ಸಂತೋಷ, ಕೀರ್ತಿಯನ್ನು ತಂದ ಸಾಕ್ಷಾತ್ ಶಿವನೇ ಆಗಿದ್ದಾನೆ. ಇನ್ನು ಗುರು 7ರಲ್ಲೇ ಇದ್ದು ಬಂದಿದ್ದು ಸ್ವಲ್ಪವೇ ಆದರೂ ಬರಬೇಕಾದ ಯೋಗಗಳು ಬಹಳಷ್ಟು ಇವೆ. ನೀವು ನಿಮ್ಮ ಮನಸ್ಸು, ಬುದ್ಧಿಯನ್ನು ಚುರುಕುಗೊಳಿಸಿ ಏನನ್ನೂ ಪಡೆಯುವ ಕಾಲ. ಚಾಮುಂಡಿಯನ್ನು ದರ್ಶಿಸಿ. ಸಾಧ್ಯವಾಗದಿದ್ದರೆ ಮನೆಯಲ್ಲಿ ನಮಸ್ಕರಿಸಿ ಚಾಮುಂಡಿ ಅಷ್ಟೋತ್ತರವನ್ನು ಪಾರಾಯಣ ಮಾಡಿ.
ವೃಶ್ಚಿಕ: ಮನುಷ್ಯನಿಗೆ ಬೇಕು-ಬೇಡಗಳು ತುಂಬ ಇರುತ್ತವೆ. ನಮ್ಮ ಬೇಕು-ಬೇಡಗಳನ್ನು ಪರಮಾತ್ಮನು ಕೇಳುವುದಿಲ್ಲ. ಪೂರ್ವಾರ್ಜಿತ ಕರ್ಮಗಳಿಗೆ ಅಂಟಿಕೊಂಡಂತೆ ಫಲವನ್ನು ನೀಡುತ್ತಾನೆ. ಶುಭವನ್ನು ತರುತ್ತಾನೆ. ಕೆಲಸಗಳು ಮಂದಗತಿಯಲ್ಲಿ ಸಾಗಿ ಪೂರ್ಣವಾಗುತ್ತದೆ. ಧೈರ್ಯಕುಂದಬೇಡಿ. ಧನಬಂದು ಸೇರುತ್ತದೆ. ಪಳನಿಯಲ್ಲಿ ನೆಲೆಸಿ ರುವ ದಂಡಪಾಣಿ ಷಣ್ಮುಖನನ್ನು ದರ್ಶಿಸಿ, ಪೂಜಿಸಿ. ಪ್ರತಿನಿತ್ಯ ಸ್ಕಂದಕ ವಚವನ್ನು ಪಾರಾಯಣ ಮಾಡಿ. ಒಳ್ಳೆಯ ಫಲವನ್ನು ಪಡೆಯಬಹುದು.
ಧನು: ಗುರುವಿನ ಮನೆಯಲ್ಲಿ ಪಾದರಸದಂತೆ ಬುದ್ಧಿಯನ್ನು ಕೊಡುವ ಬುಧನು, ಜೊತೆಗೆ ಪಂಚಮದಲ್ಲಿ ಗುರು, ಮೂರರಲ್ಲಿ ಶನಿ ಬೇಕಾದನ್ನು ನೀಡುತ್ತಾನೆ. ಮನುಷ್ಯನಾಗಿ ಅವತರಿಸಿ, ರಾಕ್ಷಸರನ್ನು ಕೊಂದು ಸುಸ್ಥಿರವಾದ ಭಾರತವನ್ನು ನಿರ್ವಿುಸಿದ ಶ್ರೀರಾಮನ ಆಶೀರ್ವಾದ ಹೊಂದಿದ ಭರತನನ್ನು ನಾವು ಸ್ಮರಿಸಲೇಬೇಕು. ಭಾರತ ಖಂಡವನ್ನು ಆಳುವ ಇಚ್ಛೆ ಇದ್ದರೆ, ವ್ಯಾಪಾರವಹಿವಾಟು ಒಳ್ಳೆಯ ರೀತಿಯಲ್ಲಿ ನಡೆಸುವ ಅಪೇಕ್ಷೆ ಇದ್ದರೆ ಅಧ್ಯಾತ್ಮ ರಾಮಾಯಣದ ಪಟ್ಟಾಭಿಷೇಕದ ಅಧ್ಯಾಯವನ್ನು ಓದಿ. ಯಥೇಚ್ಛವಾಗಿ ಹಣ ಮತ್ತು ಕೀರ್ತಿ ಬಂದು ಸೇರುತ್ತದೆ.
ಮಕರ: ಶನಿ ದ್ವಿತೀಯದಲ್ಲಿದ್ದು, ಗುರು ಅಂಗಾರಕನ ಮನೆಯಲ್ಲಿದ್ದಾನೆ. ರಾಹು ಗುರುವಿನ ಮನೆಯಲ್ಲಿ ಇದ್ದಾನೆ. ಮನುಷ್ಯನು ಮಾಡುವ ಪುಣ್ಯದ ಫಲದಿಂದ ಅವನು ಮಾಡುವ ಕೆಲಸಗಳಲ್ಲಿ ಜಯ, ಅಪಜಯ ಹೊಂದುತ್ತಾನೆ. ಹಿಂದಿನದನ್ನು ಸ್ಮರಿಸಬೇಡಿ. ಇಟ್ಟ ಹೆಜ್ಜೆ ಹಿಂತೆಗೆಯಬೇಡಿ. ಗುರು ದತ್ತಾತ್ರೇಯನನ್ನು ಸ್ಮರಿಸಿ. ಶ್ರೀಕ್ಷೇತ್ರ ಗಾಣಗಾಪುರವನ್ನು ದರ್ಶಿಸಿ ಬನ್ನಿ.
ಕುಂಭ: ಸ್ವಕ್ಷೇತ್ರದಲ್ಲಿ ಶನಿಯು ಏಳೂವರೆ ವರ್ಷ ಸಂಚಾರದ ಮಧ್ಯಭಾಗದಲ್ಲಿ ಇರುವುದರಿಂದ, ಕುಂಭ ರಾಶಿಗೆ ದ್ವಿತೀಯದಲ್ಲಿ ರಾಹು ಇರುವುದರಿಂದ ಉತ್ತಮ ಬಾಂಧವ್ಯವನ್ನು ಎಲ್ಲರೊಂದಿಗೆ ಬೆಳೆಸಿಕೊಳ್ಳಬೇಕು. ಹೆಂಡತಿ, ಮಕ್ಕಳು, ಆಪ್ತಮಿತ್ರರನ್ನು ಪರಿಗಣಿಸಿ ಅವರಿಗೆ ಬೇಕಾದ ಸ್ವಾತಂತ್ರ್ಯವನ್ನು ಕೊಟ್ಟು ಸುಖ-ಸಂತೋಷವನ್ನು ಪಡೆದುಕೊಳ್ಳಿ. ಸಹನೆ, ತಾಳ್ಮೆ ಈ ಅವಧಿಯಲ್ಲಿ ನಿಮ್ಮನ್ನು ಕಾಪಾಡುವುದು. ವೃಥಾ ವಿವಾದಗಳನ್ನು ಸೃಷ್ಟಿಸಿಕೊಳ್ಳಬೇಡಿ. ಈಶ್ವರನ ಅರ್ಚನೆಯನ್ನು ಮಾಡಿ. ಶಿವ ಸಹಸ್ರನಾಮವನ್ನು ಪಠಿಸಿ.
ಮೀನ: ದ್ವಾದಶದಲ್ಲಿ ಶನಿ, ಲಗ್ನದಲ್ಲಿ ರಾಹು. ದ್ವಿತೀಯದಲ್ಲಿ ಗುರು ಇದ್ದು, ಶುಭಸಂದೇಶ ಬಂದರೂ ನಿಮ್ಮ ದುಃಖವನ್ನು ನೀವು ಬಿಡುವುದಿಲ್ಲ. ನಿಮ್ಮ ಅಪನಂಬಿಕೆ ನಿಮ್ಮ ಜೀವನದ ಮುಳ್ಳಾಗುತ್ತದೆ. ಮಹಾತ್ಮರ ಸಹವಾಸ, ಸದ್ಗುರುವಿನ ಉಪದೇಶ ಈ ಸಾಡೇಸಾತಿ ಶನಿಯ ಕಾಲದಲ್ಲಿ ಅವಶ್ಯ. ಶನಿಯ ಉಪದ್ರವ ನಿವಾರಿಸಿ ಸರ್ವಸಂಕಟ ಪರಿಹಾರ ಮಾಡಲು ದತ್ತಾತ್ರೇಯ ಗುರುಚರಿತ್ರೆಯ 14ನೇ ಅಧ್ಯಾಯವನ್ನು ಪಾರಾಯಣ ಮಾಡಿ. ದತ್ತ ಅಷ್ಟೋತ್ತರವನ್ನು ಪಠಿಸಿ.