ಈ ರಾಶಿಯವರಿಗೆ ಕಷ್ಟ ಬಂದರೂ ಗುರು ಅದನ್ನು ಮರೆಸಿ ಶುಭವನ್ನು ನೀಡುತ್ತಾನೆ: ವಾರಭವಿಷ್ಯ

Vaara-Bhavishya
Published on
ಮೇಷ

ಮೇಷ-ವೃಶ್ಚಿಕ ರಾಶಿಗೆ ಅಧಿಪತಿಯಾದ ಅಂಗಾರಕನಿಗೆ ಏಕಾದಶದಲ್ಲಿ ಗುರುವಿದ್ದು, ಅತ್ಯಂತ ಶುಭ ಸೂಚಕ. ಅವನೊಬ್ಬನೇ ಸಾಕು ಇಷ್ಟಾರ್ಥ ಪೂರೈಸಿ ನಿಮಗೆ ಯಾವುದೇ ಬಾಧಕ ಬರದಂತೆ ಕಾಪಾಡುತ್ತಾನೆ. ಗುರುವು ದ್ವಾದಶಕ್ಕೆ ಹೋಗುವ ಮುಂಚೆ ಮನೋಕಾಮನೆ ಪೂರ್ಣ ಮಾಡಿಕೊಳ್ಳುವ ಕಾಲ. ಷಷ್ಠಿಯಂದು ಉಪ್ಪಿಲ್ಲದ ಊಟ ಮಾಡಿ ಏಕಭುಕ್ತ ಮಾಡಿ.

ವೃಷಭ

ವೃಷಭ-ತುಲಾ ರಾಶಿಯ ಅಧಿಪತಿ ಶುಕ್ರನು ಧನಸ್ಸಿನಲ್ಲಿ ನೆಲೆಸಿರುತ್ತಾನೆ. ಅದು ಬೃಹಸ್ಪತಿಯ ಮನೆಯಾದರೂ ಶುಕ್ರಾಚಾರ್ಯ ದೈತ್ಯರಿಗೆ ಗುರು. ಆದರೆ ನಿಮಗೆ 11ನೇ ಮನೆಗೆ ಗುರು ಬರುವವರೆಗೂ ಜೀವನವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಿ. ನಿಮ್ಮ ಕೆಲಸ ಮುಂದೆ ಸಂತಸ-ಲಾಭ ತಂದು ಕೊಡುತ್ತದೆ. 9ರ ಶನಿ ಧರ್ಮದ ಹಾದಿಯಲ್ಲಿ ನಡೆಸುತ್ತಾನೆ.

ಮಿಥುನ

ರಾಶ್ಯಾಧಿಪತಿ ಬುಧನು ಪಾದರಸದಂತೆ ಕೆಲಸ ಮಾಡಿ, ಪರಾಕ್ರಮಿ, ಚಾಣಾಕ್ಷತೆಯಿಂದ ಎಂತಹ ಕೆಲಸವನ್ನೂ ಮಾಡ ಬಲ್ಲಂತೆ ಮಾಡುವವನು. ವಿಶೇಷವಾಗಿ ವಿಷ್ಣುವನ್ನು ಪೂಜೆ ಮಾಡಿದರೆ 9ರ ಗುರುವು ಸಂತೋಷ ಕೊಟ್ಟು ನಿಮ್ಮ ಅಡೆ-ತಡೆ ಸರಿಪಡಿಸಿ ಮುಂದೆ ನಡೆಸಿಕೊಂಡು ಹೋಗುತ್ತಾನೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಮಾತನಾಡುವಾಗ ಎಚ್ಚರವಿರಲಿ.

ಕಟಕ

ಚಂದ್ರನ ಅಧಿಪತ್ಯವು ಇರುವ ರಾಶಿಯವರಾದ ನಿಮಗೆ ಗುರಿಯು ಒಂದೇ ಇರಬೇಕು. ಮನಃಶಾಂತಿ ಕಾಪಾಡಿಕೊಂಡರೆ ಎಲ್ಲರಿಗೂ ಮಾದರಿಯಾಗಿ ಬದುಕಬಹುದು. 7ರ ಶನಿ, 8ರ ಗುರು ವಿಶೇಷವಾದ ಯಾವ ಫಲ ಕೊಡದಿದ್ದರೂ ವಾರದಲ್ಲಿ ಶಿವನ ತಲೆಯನ್ನು ಏರಿ ವಿಷ್ಣು ಅಂಶದಲ್ಲಿ ಚಂದ್ರನಾಗಿ ಮೂಡಿಬಂದು ಇಷ್ಟಾರ್ಥ ಈಡೇರಿಸುತ್ತಾನೆ. ಪಾರ್ವತಿ-ಈಶ್ವರನನ್ನು ಪೂಜಿಸಿದರೆ ಕಾಪಾಡುತ್ತಾರೆ.

ಸಿಂಹ

ರಾಶ್ಯಾಧಿಪತಿ ಸಿಂಹ. ವನರಾಜನಾದ ಸಿಂಹವು ಎಲ್ಲ ರನ್ನೂ ಭೀತಿಯಲ್ಲಿ ಇರಿಸುತ್ತದೆ. ಸಿಂಹವೇ ದುರ್ಗಾಶಕ್ತಿಯ ಸ್ವರೂಪಿಣಿಯ ವಾಹನ. ದುರ್ಗೆ, ಸೂರ್ಯ ನನ್ನು ಪೂಜಿಸಿದರೆ ಆರರ ಶನಿ, 7ರ ಗುರು ಕೊಡವನ್ನು ತುಂಬಿ ತುಳುಕುವ ಕಾಲ ಕೊಟ್ಟು, ಸಂತಸ ನೀಡುತ್ತಾರೆ. ದುರ್ಗಾ ಸಹಸ್ರನಾಮ ಪಾರಾಯಣ, ಆದಿತ್ಯ ಹೃದಯ ಪಾರಾಯಣವನ್ನು ಎಂದಿಗೂ ಬಿಡಬೇಡಿ.

ಕನ್ಯಾ

ಕನ್ಯಾರಾಶಿಯು ದ್ವಿಸ್ವಭಾವ ರಾಶಿ. ಎರಡು ಮನೆಗಳ ಅಧಿಪತ್ಯವಿರುವ ಬುಧನು ಸಮತೋಲನವನ್ನು ಕೊಡುವ ಗ್ರಹವಾಗಿದ್ದರೂ ನಿಮಗೆ ಪಂಚಮದಲ್ಲಿ ಶನಿ, ಷಷ್ಠ ಗುರುವಿದ್ದರೂ ನಿರೀಕ್ಷಿಸಿದಷ್ಟು ಶುಭಫಲ ನೀಡುವುದಿಲ್ಲ. ದೇವರ ನಾಮಾಂಕಿತವೇ ಆಹಾರವೆಂದು ಮನಸ್ಸು ತುಂಬಿ ಪ್ರಾರ್ಥಿಸಿ. ಗಣಪತಿ ಸಹಿತವಾಗಿ, ಆಧ್ಯಾತ್ಮ ರಾಮಾಯಣದ ರಾಮಗೀತೆ ಪಾರಾಯಣ ಮಾಡಿ.

ತುಲಾ

ಶುಕ್ರನ ಅಧಿಪತ್ಯವಿರುವ ರಾಶಿ. ಅಲ್ಲಿ ದುರ್ಗೆಯ ಅಂಶವೂ ಸೇರಿದೆ ಹಾಗೂ ಸೂರ್ಯನ ಬೆಳಕಿನಿಂದ ಕೂಡಿದೆ. ಜಗತ್ತಿನ ಬೆಳಕನ್ನು ಕೊಡುವ ಸೂರ್ಯನನ್ನು ಸ್ತೋತ್ರ ಮಾಡಿದಾಗ ನಿಮ್ಮ ಭಾಗ್ಯದ ಬಾಗಿಲು ತೆರೆದು, ಕಷ್ಟಪಟ್ಟು ಗಳಿಸಿದ ಹಣವನ್ನು ಕಾಪಾಡಿಕೊಂಡು ಮುಂದೆ ಸಾಗಿ. ಪಂಚಮ ಗುರುವು ಶುಭ, ಸಂತಸ ಕೊಡುತ್ತಾನೆ. ಕಣ್ಣುಗಳಿಗೆ ಸೋಂಕು ತಗುಲದಂತೆ ಕಾಪಾಡಿಕೊಳ್ಳಿ.

ವೃಶ್ಚಿಕ

ವೃಶ್ಚಿಕ ರಾಶಿಯಲ್ಲಿ ಹುಟ್ಟಿದವರು ಸಂಕಲ್ಪಗಳನ್ನು ಬಿಟ್ಟು ವ್ಯವಹಾರ ಮಾಡಿದಲ್ಲಿ ಅದರಿಂದ ಬರುವಂತಹ ಕಷ್ಟ ಎದುರಿಸಬೇಕಾಗುತ್ತದೆ. ಪಾರ್ವತಿ ಅಂಶವನ್ನು ಹೊಂದಿರುವ ಗಣನಾಯಕನನ್ನು ಪ್ರಾರ್ಥಿಸಿದರೆ ಅವನು ತಾಯಿಯಿಂದಲೇ ಶುಭವನ್ನು ತಂದು ಕೊಡುತ್ತಾನೆ. ಅಡ್ಡಿ ಆತಂಕ ಕಳೆದು ನಿಮ್ಮ ಜೀವನಚಕ್ರ ಸರಿಯಾದ ದಾರಿಯಲ್ಲಿ ಸಾಗಿ ಜಯ ಕಾಣಲು ‘ಗ’ಕಾರ ಗಣಪತಿ ಅಷ್ಟೋತ್ತರ ಪಠಿಸಿ.

ಧನು

ಗ್ರಹಚಕ್ರದಲ್ಲಿ ಶುಭ ಅನುಗ್ರಹಿಸುವವನು ದೇವಗ್ರಹ ಬೃಹಸ್ಪತಿ. ಹೊಟ್ಟೆ ಹಸಿದರೆ ಅನ್ನ ನೀಡುವವಳು ತಾಯಿಯೊಬ್ಬಳೇ. ಅಂತೆಯೇ ನಮಗೆ ಶುಭಾಶುಭಗಳನ್ನು ಕೊಟ್ಟು ಜನಾನುರಾಗಿಯಾಗಿ ಬದುಕಬೇಕೆಂಬುದೇ ಗುರುವಿನ ಅನುಗ್ರಹ ಮತ್ತು ಗುರಿ. ಆಕಸ್ಮಿಕವಾಗಿ ಖರ್ಚು-ವೆಚ್ಚ ಜಾಸ್ತಿಯಾದರೂ ಹೆದರಬೇಕಿಲ್ಲ. ರಾಶ್ಯಾಧಿಪತಿ ಕೈಬಿಡುವುದಿಲ್ಲ.

ಮಕರ

ಮಕರ-ಕುಂಭ ರಾಶಿಗಳಿಗೆ ಅಧಿಪತಿ ಏಳನೇ ಗ್ರಹವಾದ ಶನಿಯು ಈ ರಾಶಿಯಲ್ಲಿ ಸಂಚಾರ ಮಾಡಿ ಮಾಡಿದ ಕರ್ಮಗಳನ್ನು- ವ್ಯವಹಾರಗಳನ್ನು ಶುದ್ಧಿಮಾಡಿ, ಜೀವನಶೈಲಿ ಬದಲಾಯಿಸಿಕೊಳ್ಳುವಂತೆ ಮಾಡುತ್ತಾನೆ. ದ್ವಿತೀಯದಲ್ಲಿ ಗುರುವಿರುವುದರಿಂದ ಕಷ್ಟ ಬಂದರೂ ಅದನ್ನು ಮರೆಸಿ ಶುಭವನ್ನು ನೀಡುತ್ತಾನೆ. ಶನಿ ಅಷ್ಟೋತ್ತರ ಪಾರಾಯಣ ಮಾಡಿ. ಸೋಮವಾರದಂದು ಶಿವಾಲಯಕ್ಕೆ ಬಿಲ್ವಪತ್ರೆ ಕೊಡಿ.

ಕುಂಭ

ಕುಂಭಾಧಿಪತಿಗೆ ಲಗ್ನದಲ್ಲಿ ಗುರುವಿದ್ದು, ಗೋಚಾರದಲ್ಲಿ ಶನಿಯು ದ್ವಾದಶದಲ್ಲಿದ್ದಾನೆ. ಮನೆಯನ್ನು ಶುಭ್ರವಾಗಿಟ್ಟುಕೊಳ್ಳಬೇಕು. ಆಗಲೇ ಬಹಳಕಾಲ ಅದು ಸೂರನ್ನು ನೀಡುತ್ತದೆ. ಅಂತೆಯೇ ಶುದ್ಧತೆ ಕಾಪಾಡಿಕೊಂಡು ಸತ್ಯ-ಧರ್ಮದಲ್ಲಿ ಹೆಜ್ಜೆ ಇಟ್ಟರೆ ಕೇಡುಂಟಾಗದು. ಆದರೂ ನಂಜನಗೂಡಿನ ಶ್ರೀಕಂಠೇಶ್ವರನನ್ನು ದರ್ಶಿಸಿ, ಪ್ರದೋಷದಲ್ಲಿ ರುದ್ರಾ ಭಿಷೇಕ ಮಾಡಿಸಿ. ಗಿರಿಜಾ ಕಲ್ಯಾಣವನ್ನು ಮಾಡಿಸಿ.

ಮೀನ

ಮೀನರಾಶಿಯವರು ಸ್ವಾಭಾವಿಕವಾಗಿ ಒಳ್ಳೆಯವರಾಗಿದ್ದರೂ ಅನ್ಯರಿಗೆ ಸಹಾಯ ಮಾಡುವುದೇ ಧರ್ಮ. ಸತ್ಯವಂತರಾಗಿ ಬದುಕುವುದು ಧರ್ಮವಾದರೂ, ಅದಕ್ಕೆ ಚ್ಯುತಿ ಬಂದಾಗ ಸತ್ಯವನ್ನೂ ಉಳಿಸಿ, ಮಾನವ ಧರ್ಮವನ್ನೂ ಉಳಿಸುವುದೇ ನಿಮ್ಮ ಧ್ಯೇಯವಾಗಿರಲಿ. ಮಾಡಿದ ಉಪಕಾರ, ಕೊಟ್ಟ ಅನ್ನ ಎಲ್ಲವೂ ಪುಣ್ಯವನ್ನು ತುಂಬುತ್ತದೆ. ಭವಾನಿ ಶಂಕರನನ್ನು ಪೂಜಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net