ಈ ರಾಶಿಯವರು ನಿಮ್ಮ ಸಂಗಡ ಇರುವವರ ಬಗ್ಗೆ ಎಚ್ಚರದಿಂದಿರಿ: ವಾರಭವಿಷ್ಯ

E vara F
Published on

ಮೇಷ

ಹೊಸ ಸಂವತ್ಸರದಲ್ಲಿ ಪ್ರಜಾಸುಖ ಕಾಣಬಹುದು. ಇಷ್ಟಾರ್ಥ ಈಡೇರಿಸುವವನು, ವ್ಯಾಪಾರ, ಉದ್ಯಮದಲ್ಲಿ ಜಯ ತರುವವನು ಸುಬ್ರಹ್ಮಣ್ಯನೊಬ್ಬನೇ. ಗುರುವನ್ನು ಪ್ರಾರ್ಥಿಸಿ. 11ನೇ ಮನೆ ಗುರುವನ್ನು ಆರಾಧನೆ ಮಾಡಿ, ಬೇಕಾದ್ದನ್ನು ಪಡೆದುಕೊಳ್ಳಿ. ಕುಜ-ರಾಹು ದ್ವಿತೀಯದಲ್ಲಿ ಇರುವುದರಿಂದ ನಿಮ್ಮ ಸಂಗಡ ಇರುವವರ ಬಗ್ಗೆ ಎಚ್ಚರದಿಂದಿರಿ.

ವೃಷಭ

ಶಸ್ತ್ರಾಸ್ತ್ರಗಳು ಇರಬೇಕಾದದ್ದು ದೇಶದ ಸಂರಕ್ಷಣೆಗೋಸ್ಕರ. ಮನುಷ್ಯ ಕೈಯಲ್ಲಿ ಅಸ್ತ್ರಗಳನ್ನು ಕೊಟ್ಟರೆ ಬೇರೆಯವರನ್ನು ಹಿಂಸಿಸುತ್ತಾನೆ. ಗುರುವು ದಶಮಕ್ಕೆ ಬರುವುದರಿಂದ ರಾಷ್ಟ್ರಮಟ್ಟದಲ್ಲಿ ಪುಂಡಾಟಿಕೆ ಕಡಿಮೆಯಾಗಿ ಶಾಂತಿ ಮನೆಮಾಡುತ್ತದೆ. ಶಂಕುಲನಾಗನನ್ನು ಅರ್ಚಿಸಿ. 9ರ ಶನಿ ಇರುವುದರಿಂದ ಧರ್ಮಕರ್ಮಗಳನ್ನು ನೋಡುತ್ತಿರುತ್ತಾನೆ. ಶರೀರದಲ್ಲಿ ಅವಘಡಗಳಾಗದಂತೆ ಎಚ್ಚರ.

ಮಿಥುನ

ಅಷ್ಟಮ ಗುರು ಸ್ಥಾನ ಪಲ್ಲಟ ಮಾಡಿ 9ನೇ ಮನೆಗೆ ಬರಲಿದ್ದಾನೆ. ದೇವರ ಅನುಗ್ರಹ ಇರುತ್ತದೆ. ಆದರೆ ಅಷ್ಟಮ ಶನಿ ಬೇಕಾದ್ದನ್ನು ಮಾತಾಡಿಸಿ ವ್ಯಕ್ತಿತ್ವ ಕುಂಠಿತಗೊಳಿಸುತ್ತಾನೆ. ಸರ್ವರೋಗಹರ ಪಳನಿತ್ರಿಶೂಲೆ (ತಮಿಳುನಾಡು) ಸುಬ್ರಹ್ಮಣ್ಯನ ದರ್ಶನ ಪಡೆಯಿರಿ. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಶರೀರದಲ್ಲಿ ಕೆಲವೊಂದು ವ್ಯತ್ಯಾಸಗಳಿಂದ ಬೇಸರವಾಗಬಹುದು.

ಕಟಕ

ಮಿತಿಮೀರಿ ಕೆಲಸ ಮಾಡಿ ಶರೀರ ಬಳಲಿಸಬೇಡಿ. ಶೀತದಿಂದ ಕೂಡಿದ ಚಂದ್ರನಿಂದ ಪಿತ್ತ-ಕಫ- ತಲೆ ಸುತ್ತುವಿಕೆ ಕಾಣಬಹುದು. ಅಷ್ಟಮ ಗುರು ಕೇಡನ್ನು ತಂದು ಒಡ್ಡುವುದಿಲ್ಲ. ಹೆದರಬೇಡಿ. ಮರೆಯದೆ ಆದಿತ್ಯಹೃದಯ ಪಠಿಸಿ. ಗುರು ದತ್ತಾತ್ರೇಯನಿಗೆ ಶರಣಾಗಿ.

ಸಿಂಹ

7ರಲ್ಲಿ ಗುರು, ಷಷ್ಠದಲ್ಲಿ ಶನಿ- ಮುಗಿಲು ಮುಟ್ಟಲು ಏನು ಬೇಕು? ನಾಲ್ಕು ತಿಂಗಳು ನೀವು ಹೇಳಿದ್ದೇ ವಚನ, ಮಾಡಿದ್ದೇ ಹಿತ. ಹಣಕಾಸು, ವ್ಯಾಪಾರ ವಹಿವಾಟು ಎಲ್ಲವೂ ಅಭಿವೃದ್ಧಿಯತ್ತ ಸಾಗುತ್ತದೆ. ರಾಶ್ಯಾಧಿಪತಿ ಭಾಸ್ಕರನನ್ನು ಭಾಸ್ಕರ ಕವಚದಿಂದ ಪೂಜಿಸಿ. ಆದಿತ್ಯಹೃದಯ ಪಠಿಸಿ. ರಾಮನನ್ನು ಭಜಿಸಿ-ಪೂಜಿಸಿ.

ಕನ್ಯಾ

ಮನುಷ್ಯನು ಸುಖದಿಂದ ಇರಬೇಕಾದರೆ ದೈವಬಲದ ಅಗತ್ಯವಿದೆ. ನಿತ್ಯ ಜೀವನದಲ್ಲಿ ದೇವರ ಪ್ರಾರ್ಥನೆ ಇರಲೇಬೇಕು. ವಿಷ್ಣು ಅಷ್ಟೋತ್ತರ ಪಠಿಸಿ. ಸತ್ಯನಾರಾಯಣ ಕಥೆಯ ಸಾರಾಂಶ ಓದಿ. ಇದ್ದಿದ್ದರಲ್ಲೇ ಸಂತೋಷದಿಂದ ಇರಿ.

ತುಲಾ

ಪಂಚಮಕ್ಕೆ ಗುರು ಬಂದು ಸೇರಲಿದ್ದಾನೆ. ಕೀರ್ತಿ ಮೇಲೇರುತ್ತದೆ. ಚತುರ್ಥದಲ್ಲಿ ಶನಿಯಿದ್ದಾನೆ. ನೀವಾಗೇ ಅವಘಡವನ್ನು ತಂದುಕೊಳ್ಳಬಾರದು. ತುಲಾ ರಾಶಿಯವರು ದೇವರು, ಧರ್ಮವನ್ನು ಬಿಟ್ಟರೆ ಭ್ರಷ್ಟರಾಗುತ್ತಾರೆ. ತಂದೆ-ತಾಯಿಯನ್ನು ಪೂಜಿಸಿ. ಬಾಳು ಸುಖಮಯವಾಗುತ್ತದೆ. ದ್ವಿತೀಯ ಕೇತುಗಾಗಿ ಸುಬ್ರಹ್ಮಣ್ಯನನ್ನು ಪೂಜಿಸಿ. ಯಾರನ್ನೂ ನಿಂದಿಸಬೇಡಿ.

ವೃಶ್ಚಿಕ

ಲಗ್ನದಿಂದ ಮೂರನೆ ಗುರು ನಾಲ್ಕನೇ ಮನೆಗೆ ಚಲಿಸಿ ಮೂರರ ಶನಿ ಇನ್ನೂ ಬಲಿಷ್ಠನಾಗುತ್ತಾನೆ. ನೀಚತ್ವವನ್ನು ಕಳೆದುಕೊಂಡ ಗುರುವಿನಿಂದ ತಡೆಹಿಡಿದ ಕಾರ್ಯಗಳು ಪೂರ್ಣವಾಗುತ್ತವೆ. ಕೇತುವಿಗಾಗಿ ಗಣಪತಿಯನ್ನು ಪೂಜಿಸಿ. ತಾಯಿ ಮೂಕಾಂಬಿಕೆಯ ದರ್ಶನ ಮಾಡಿರಿ.

ಧನು

ದ್ವಾದಶದಲ್ಲಿ ಕೇತುವಿದ್ದು, ನಿಮ್ಮ ನಾಲಿಗೆ ಚಾಕು ಆಗಬಾರದು. ಧನುರ್-ಮೀನ ರಾಶ್ಯಾಧಿಪತಿ ಗುರುವು ನಿಮಗೆ ಒಳ್ಳೆಯದನ್ನೇ ಮಾಡಬೇಕು. ನಿಮ್ಮ ನಡೆ-ನುಡಿ ಕಾರ್ಯವೈಖರಿ ನೋಡಿಯೇ ಫಲ ನೀಡುತ್ತಾನೆ. ಗೊಂದಲದಲ್ಲಿರುವ ಅಗತ್ಯವಿಲ್ಲ. ಮೂರರ ಗುರು, ದ್ವಿತೀಯ ಶನಿ ನಿಮ್ಮ ಬಾಳಿನ ಗುರಿ ಮುಟ್ಟಿಸುತ್ತಾನೆ. ನಿಮ್ಮ ನೋವನ್ನು ದತ್ತಾತ್ರೇಯನಿಗೆ ತಿಳಿಸಿ. ಅವನೇ ಪಾಠ ಕಲಿಸುತ್ತಾನೆ. ಎಚ್ಚರವಿರಲಿ. ಗುರು ದತ್ತಾತ್ರೇಯನನ್ನು ಪ್ರಾರ್ಥಿಸಿ. ಕೇತುವಿಗಾಗಿ ಇಡಗುಂಜಿ ಗಣೇಶನನ್ನು ಪೂಜಿಸಿ.

ಮಕರ

ರಾಶ್ಯಾಧಿಪತಿ ಮಕರದಲ್ಲಿದ್ದು, ಗುರು ಕುಂಭಕ್ಕೆ ಬರುತ್ತಾನೆ. ನಿಮ್ಮ ಪುಣ್ಯಕ್ಕೆ ತಕ್ಕದಾಗಿ ಕೀರ್ತಿ, ಯಶಸ್ಸು ನೀಡುತ್ತಾನೆ. ಜನ್ಮಶನಿಯಿದೆ. ಯಾರಿಗೂ ಶನಿ ಮಹಾರಾಜನ ಅಂದಾಜು ಬರುವುದಿಲ್ಲ. ಗುರು ನಿಮಗೆ ಸಾಂತ್ವನ ಕೊಟ್ಟು ಅಲ್ಪಸ್ವಲ್ಪ ತೃಪ್ತಿ, ಆರಾಮ ನೀಡುತ್ತಾನೆ. ದೃಢಭಕ್ತಿಯಿಂದ ಗುರುವನ್ನು ಅರ್ಚಿಸಿ-ಪೂಜಿಸಿ.

ಕುಂಭ

ದ್ವಾದಶ ಶನಿ ಇದ್ದಾನೆಂದು ಮರೆಯಬೇಡಿ. ಲಗ್ನಕ್ಕೆ ಗುರು ಬಂದು ಕಾಲಿಡುತ್ತಾನೆ. ಜನ್ಮಕ್ಕೆ ಗುರು ಬಂದು ಸೇರಿದರೂ ಕೆಲವೊಮ್ಮೆ ಒಳ್ಳೆಯದನ್ನು ಮಾಡದಿದ್ದರೂ ಕೆಟ್ಟದ್ದನ್ನು ಮಾಡುವುದಿಲ್ಲ. ನಿಮ್ಮನ್ನು ಎಚ್ಚರ ತಪ್ಪುವಂತೆ ಮಾಡಿ ಕಾಡುತ್ತಾನೆ. ರಾಮಸಹಸ್ರನಾಮ ಪಾರಾಯಣ ಮಾಡಿ. ತಪ್ಪದೇ ಗುರುಪರಂಪರಾ ಸ್ತೋತ್ರವನ್ನು ಪಠಿಸಿ.

ಮೀನ

ಒಂದನೇ ಮನೆಯ ಶನಿ ನಿಮ್ಮನ್ನು ಕಾಪಾಡುತ್ತಾನೆ. ನಿಮ್ಮಲ್ಲಿ ಪುಣ್ಯವಿದ್ದರೆ ಸಂತಸ ಕೊಡುತ್ತಾನೆ. ಧನುರ್-ಮೀನ ರಾಶಿಯವರು ಪೂಜೆಯನ್ನು ಮರೆತರೆ ಬ್ರಹ್ಮಾಂಡದಲ್ಲಿ ಯಾವ ದೈವವೂ ನಿಮ್ಮನ್ನು ಕಾಪಾಡಲಾರದು. ಮುಂದಿನ ಸಂವತ್ಸರದಲ್ಲಿ ಬರುವ ಎಲ್ಲ ಶನಿತ್ರಯೋದಶಿಯಂದು ಈಶ್ವರನನ್ನು ಪೂಜಿಸಿ. ಆನಂದ ಕೊಳ್ಳುವ ವಸ್ತುವಲ್ಲ. ಸಂತೋಷ ನೀಡುವವನು ಭಗವಂತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net