

ಮೇಷಾಧಿಪತಿ ಸೂರ್ಯನ ಮನೆಯಲ್ಲಿದ್ದು, ಎರಡು ತಾಪ ಗ್ರಹಗಳು ಒಂದೇ ಕಡೆ ಸೇರಿ ತಾಪ-ಕೋಪಗಳು, ಅರ್ಥಮಾಡಿಕೊಳ್ಳಲಾಗದ ಸಮಸ್ಯೆ, ಅಸ್ಥಿರವಾದ ಮನಸ್ಸು ಸೃಷ್ಟಿಸುತ್ತವೆ. ಆದರೆ, ಒಂಬತ್ತರಲ್ಲಿ ಗುರು ಇರುವುದರಿಂದ ಎಲ್ಲವನ್ನೂ ನಿಭಾಯಿಸುವ ಶಕ್ತಿ ಕೊಡುತ್ತಾನೆ. ಈ ವಾರದಲ್ಲಿ ಗುರು ದತ್ತಾತ್ರೇಯ, ಮೇಷಾಧಿಪತಿ ಅಂಗಾರಕ, ಅಧಿಪತಿ ಸುಬ್ರಹ್ಮಣ್ಯ ದೇವರನ್ನು ಅರ್ಚಿಸಿ, ಪೂಜಿಸಿ. ಮುಂದಿನ ಕೆಲಸಗಳಿಗೆ ಮಾಗೋಪಾಯ ಸಿಕ್ಕ ನೆಮ್ಮದಿ ಕಾಣಬಹುದು.
ವೃಷಭದ ಅಧಿಪತ್ಯ ಹೊಂದಿರುವ ಗ್ರಹಗಳಲ್ಲಿ ಅತಿ ಮುಖ್ಯಗ್ರಹ ಶುಕ್ರನು ಕನ್ಯಾರಾಶಿ ಸೇರಿ ಪಂಚಮ ಸ್ಥಾನದಲ್ಲಿದ್ದಾನೆ. ಹೀಗಾಗಿ ಶ್ರದ್ಧೆಯಿಂದ, ಶ್ರಮದಿಂದ ನಿಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡರೆ ಲಾಭ, ಕೀರ್ತಿ ಬರುವುದು. ಚತುರ್ಥದಲ್ಲಿ ರವಿ ಇರುವುದರಿಂದ ಆರೋಗ್ಯದ ಕಡೆ ಗಮನ ಇರಲಿ. ದುರ್ಗಾಪರಮೇಶ್ವರಿಯನ್ನು ಪ್ರಾರ್ಥಿಸಿ.
ಎಂಟರಲ್ಲಿ ಶನಿಯಿದ್ದು, ಬುಧ-ಶನಿ ಮಿತ್ರರಾದ್ದರಿಂದ ಅಲ್ಪ ಕಾರ್ಯ ಜರಗುತ್ತಿದೆ. ಏಕೆಂದರೆ 9ರ ಗುರುವು ದೈವಬಲ ಕೊಡಿಸಿ ಮಾಡಿದ ಕಾರ್ಯವನ್ನು ಯಶಸ್ಸನ್ನು ಕೊಡುತ್ತದೆ. ಇನ್ನೇನು ಗುರುವೂ ಸಹ ಅಷ್ಟಮಕ್ಕೆ ಬರುವ ಕಾಲವಿದು. ಧರ್ಮ-ದೇವರಲ್ಲಿ ಭಕ್ತಿಯಿರಲಿ. ಮಹಾವಿಷ್ಣುವನ್ನು ಪೂಜಿಸಲು ಮರೆಯದಿರಿ.
ದೇಹಾರೋಗ್ಯ ಕಾಪಾಡಿಕೊಳ್ಳುವುದೇ ಆದ್ಯತೆಯಾಗಲಿ. ಅಷ್ಟಮ ಗುರು, ಸಪ್ತಮ ಶನಿ ಕಾರಣವಿಲ್ಲದೆ ಚಿಂತೆಯನ್ನು, ದೇಹಾಲಸ್ಯವನ್ನು ಉಂಟುಮಾಡುತ್ತಾರೆ. ಅಹಿತ ಕೆಲಸಗಳಿಂದ ದೂರವಿರಿ. ಮನಸ್ಸನ್ನು ಶಾಂತಗೊಳಿಸಲು ‘ಶ್ರೀ ರಾಮ ರಾಮ ರಾಮ ಜಯರಾಮ’ ಮಂತ್ರವನ್ನು ಪಠಿಸಿರಿ. ನಕಾರಾತ್ಮಕ ಯೋಚನೆಗಳಿಂದ ದೂರವಿರಿ.
ರವಿ-ಕುಜರ ಸಂಯೋಗದಿಂದ ಸಿಂಹ ರಾಶಿಯ ರಾಶ್ಯಾಧಿಪತಿ ಸೂರ್ಯನೇ ಆಗಿರುವುದರಿಂದ ಬೇಡವೆಂದರೂ ಮನಸ್ಸು ಒತ್ತಡದಲ್ಲಿರುತ್ತದೆ. ಯಾವ ವಿಚಾರದಲ್ಲೂ ಬಾಧೆ ಪಡದಿದ್ದರೆ ಹಾಗೂ ಆಸಕ್ತಿ ತೋರದಿದ್ದರೆ ಮನಸ್ಸು ಶೀತಲ ಚಂದ್ರನಂತೆ ಆನಂದವಾಗಿರುತ್ತದೆ. ಏಕಾಗ್ರತೆ ಹಾಗೂ ದೃಢವಾದ ಭಕ್ತಿಯಿಂದ ದೇವರನ್ನು ಪ್ರಾರ್ಥಿಸಿ. ಸೂರ್ಯನ ಪ್ರಾರ್ಥನೆ ಹಾಗೂ ದತ್ತಾತ್ರೇಯ ಚರಿತ್ರೆ ಪಾರಾಯಣ ಇರಲಿ.
ಹಿರಿಯರು-ಗುರುಗಳು ನಿಮಗೆ ಯಾವಾಗಲೂ ಸನ್ಮಾರ್ಗ ತೋರುತ್ತಾರೆ. ಹೇಳಿದ್ದೆಲ್ಲ ಕೇಳಿ ನಿಮ್ಮ ಇಷ್ಟದಂತೆ ನಡೆದರೆ ಯಾರಿಗೆ ಏನು ಪ್ರಯೋಜನ? ನಿಮ್ಮ ಭಾರವನ್ನು ಯಾರೂ ಹೊರಲು ಸಾಧ್ಯವಿಲ್ಲ. ಗುರುವು ಆರರಲ್ಲಿದ್ದು, ಯಾವ ಕೆಲಸ ಮಾಡಬೇಕು ಆಲೋಚಿಸಿ, ರ್ಚಚಿಸಿ. ಏಕಕಾಲದಲ್ಲಿ ಹರಿ-ಹರನನ್ನು ಪೂಜಿಸಿ.
ಏಕಾದಶ ಶುಕ್ರನನ್ನು ಒಲಿಸಿಕೊಂಡರೆ ಯಾವ ಕೆಲಸವೂ ಕಷ್ಟವಿಲ್ಲ. ಅದಕ್ಕೆ ಸಾಕ್ಷಿ ರಾಮನು ಒಂದೇ ಬೆರಳಿನಲ್ಲಿ ಶಿವಧನಸ್ಸನ್ನು ಮುರಿದದ್ದು. ದೇವಿ ಪಾರಾಯಣ ಮಾಡಿದರೆ ಬೇಕಾದ ಕೆಲಸಗಳನ್ನು ಸಾಧ್ಯವಾಗಿಸಿಕೊಳ್ಳಬಹುದು. ಶನಿಯನ್ನು ಅಷ್ಟೋತರ ನಾಮದಿಂದ ನೆನೆದರೆ ಕಾರ್ಯ ಜಯ. ಆರೋಗ್ಯದಲ್ಲಿ ಅಲ್ಪ ವ್ಯತ್ಯಯವಾದರೂ ಭಯ ಬೇಡ. ನಿಮ್ಮ ಮಟ್ಟಿಗೆ ಒಳ್ಳೆಯ ಕಾಲ.
ಹಾಲಾಹಲವನ್ನು ಉಂಡ ಶಿವನನ್ನು ಪಾರ್ವತಿಯೇ ಕಂಠವನ್ನು ಹಿಡಿದು ರಕ್ಷಿಸಿದಳು. ಶುಕ್ರನ ಮನೆಯಲ್ಲಿ ರಾಹು ಇರುವುದರಿಂದ ಧನವನ್ನು ನಿಮ್ಮದಾಗಿಸಿಕೊಳ್ಳಲು ನಿಮ್ಮ ಕುಲದೇವರೇ ಮಾರ್ಗ ತೋರಿಸುವರು. ಅಧಿಕ ವೆಚ್ಚವಿರುತ್ತದೆ. ತಂದೆ-ತಾಯಿ ಕಾಪಾಡುವುದು ಕರ್ತವ್ಯವಾಗಿರಲಿ. ಯಾರೂ ಪಿತೃದೇವತೆಗಳ ಮನಸ್ಸನ್ನು ನೋಯಿಸಬಾರದು. ಕಾರಣ ಮಾತಾ-ಪಿತೃ ಶಾಪಗಳು ಪಾತಾಳ- ಕಂದಕಕ್ಕೆ ತಳ್ಳುತ್ತವೆ ಎಚ್ಚರವಾಗಿರಿ.
ಆನಂದ ಬಯಸುವವರು ದ್ವೇಷವನ್ನು, ದ್ವೇಷ ಮಾಡುವವರನ್ನು ನುಂಗಿ ಕಾಲಕ್ಕಾಗಿ ಕಾಯಬೇಕು. ನಿಮಗೆ ಎಲ್ಲವೂ ವಿಚಿತ್ರವಾಗಿ ಕಾಣುತ್ತದೆ. ಸಾಧನೆಯಲ್ಲಿ ಮುಂದಿದ್ದರೂ, ಏನೂ ಲಾಭವಾಗಿಲ್ಲ ಅಥವಾ ಸಿಗಬೇಕಾದಲ್ಲಿ ದೂರವಾಗಿದೆ ಎಂಬ ಭಾವನೆ ಬೇಡ. ಪೂರ್ವಪುಣ್ಯ ನಿಮಗೆ ಭಾಗ್ಯೋದಯ ತರುವುದರಲ್ಲಿ ಸಂದೇಹವಿಲ್ಲ. ಕಟ್ಟಿದ ಕನಸು, ಗೆಲುವಿನ ತುದಿಯನ್ನು ತಲುಪಬೇಕಾದರೆ ರಾಮನಾಮ ಜಪಿಸಿ.
ನೂರು ಮೀಟರ್ ಓಟದಲ್ಲಿ ತೊಂಬತ್ತು ಮೀಟರ್ ತಲುಪಿದರೂ, ಅದು ಸೋಲೆಂದು ನೆನಪಿರಲಿ. ಮನಸ್ಸಿನ ನೋವು, ದುಡ್ಡಿನ ಕೊರತೆ ನೀಗಲು ಕುಲದೇವರನ್ನು ಸ್ಮರಿಸಿ. ಮಹಾಲಕ್ಷ್ಮಿಯನ್ನೂ ಆರಾಧಿಸಿ. ದೈವದ ಕಡೆಗೆ ಮನಸ್ಸು ತಿರುಗಿಸಿ, ಮುಂದೇನು ಮಾಡಬೇಕೆಂದು ದೈವ ದಾರಿ ತೋರುತ್ತದೆ. ಮಹಾಲಕ್ಷ್ಮೀ ಅಷ್ಟಕ ಪಠಿಸಿ. ಐದು ಜನ ಸುಹಾಸಿನಿಯರಿಗೆ ಮಂಗಳದ್ರವ್ಯ ಕೊಟ್ಟು ಆಶೀರ್ವಾದ ಪಡೆಯಿರಿ.
‘ಆನಂದ ಮಾನಂದಮಾನಂದಂ ತಪೋನಿಧಿಂ ಯೋಗಿಯಂ’- ಯೋಗಿಯು ಆನಂದದಲ್ಲಿ ತಪಸ್ಸು ಆಚರಿಸಿ, ದೈವವನ್ನು ಕಂಡು ಆನಂದ ಹೊಂದುತ್ತಾರೆ. ಗೃಹಸ್ಥರು ಮಡದಿ-ಮಕ್ಕಳನ್ನು ನೋಡುತ್ತ ಆನಂದವಾಗಿರುತ್ತಾರೆ. ಇನ್ನೂ ಕೆಲವರು ಲೋಕದಲ್ಲಿನ ಎಲ್ಲ ಆನಂದವನ್ನು ಬಯಸುತ್ತಾರೆ. ಇನ್ನು ಕೆಲವರು ಪರಮಾತ್ಮನ ದಿವ್ಯದರ್ಶನ ಪಡೆಯುವಲ್ಲಿ ಮಗ್ನರಾಗಿರುತ್ತಾರೆ. ದ್ವಾದಶ ಶನಿ ನೀವು ಗಟ್ಟಿಯಾಗುವಂತೆ ಮಾಡುತ್ತಾನೆ. ಇನ್ನು 5 ಸಂವತ್ಸರಗಳು ದಶರಥ ವಿರಚಿತ ಶನಿಸ್ತೋತ್ರವನ್ನು ಪಠಿಸಿ.
ಮೀನಾಧಿಪತಿ ಗುರುವು ಸೆಪ್ಟೆಂಬರ್ 17ರಿಂದ ಹಿಂದಕ್ಕೆ ಬಂದು ಏಕಾದಶಕ್ಕೆ ಬರುತ್ತಾನೆ. ಆದ್ದರಿಂದ ಏಕಾದಶ ಗುರುವಿಗೆ ಪ್ರಾರ್ಥನೆ ಸಲ್ಲಿಸಿದರೆ ನಿಮ್ಮ ಬಲವನ್ನು ಉಪಯೋಗಿಸಿ ಶ್ರೇಯಸ್ಸನ್ನು, ಲಾಭವನ್ನು ಪಡೆದುಕೊಳ್ಳಬಹುದು. ಆದರೆ ಗುರು ರಾಶಿಯಲ್ಲಿ ಹುಟ್ಟಿದ ನೀವು ಹರಿಹರರ ಭೇದವಿಲ್ಲದೆ ಈಶ್ವರನಿಗೆ ಸತತ ಅಭಿಷೇಕ, ಲಡ್ಡು ಚಣಕದ ಉಸಳಿಯನ್ನು ನೈವೇದ್ಯ ಮಾಡಿ. ನಿಮ್ಮ ಇಷ್ಟಾರ್ಥ ಸಿದ್ಧಿಸುವುದು.