

ಮೇಷ ರಾಶಿಗೆ ಶುಕ್ರನು, ರವಿ, ಬುಧರು ಮೀನರಾಶಿಯಲ್ಲಿ ಕೂಡಿ, ವೃಷಭ ರಾಶಿಯಲ್ಲಿ ಕುಜ-ರಾಹು ಸಂಧಿ ಉಂಟಾಗಿದೆ. ರಾಷ್ಟ್ರದ ಉದ್ದಗಲಕ್ಕೂ ಪಾಪಗ್ರಹಗಳ ಸಂಯೋಜನೆಯಿಂದ ರಾಜಕೀಯವಾಗಿ ಅಶಾಂತಿ ತುಂಬಿ ಕರ್ನಾಟಕದಲ್ಲಿ ಮುಗಿಲು ಮುಟ್ಟಿದೆ. ಮನೆಯಲ್ಲಿ ಇದ್ದುದರಲ್ಲೇ ತೃಪ್ತಿ ಇಟ್ಟುಕೊಂಡು ಈ ವಾರ ಕಳೆದರೆ ಗ್ರಹಚಲನ ಮುಂದೆ ಸಾಗಿ ಕೆಲಸ ಶಕ್ತಿ ಸಿಗುತ್ತದೆ. ಸೂರ್ಯನಾರಾಯಣ, ಧನ್ವಂತರಿಯನ್ನು ಪ್ರಾರ್ಥಿಸಿ.
ಅಜ್ಞಾನ, ತನಗೆ ಹಿತವಲ್ಲದ್ದನ್ನು ಮಾಡಲೇಬೇಕೆಂಬ ಹಠದಿಂದ ಕೀರ್ತಿ ಹಾಳಾಗಿ ಧನಕ್ಕೆ ಧಕ್ಕೆ ಬರುತ್ತದೆ. ರಾಹು ಸ್ವಗೃಹದಲ್ಲಿ (ವೃಷಭದಲ್ಲೇ) ಇರುವುದರಿಂದ ತಂದೆ-ತಾಯಿ ಗುರುಗಳ ಮಾತು ಕೇಳಬೇಕೆಂಬುದು ನಿಮ್ಮ ಗೌರವಕ್ಕಾಗಿ. ಅದನ್ನೇ ಕಳೆದುಕೊಂಡ ಮೇಲೆ ಯಾವ ಧನ ಸಂಪತ್ತು ಗೌರವ ತಂದೀತು. ದುಡ್ಡಿನ ದುಃಖ, ಹೆಣ್ಣಿನಿಂದ ಅಪಕೀರ್ತಿ ಬರುತ್ತದೆ. ಎಚ್ಚರಿಕೆ.
ಏ. 5ರವರೆಗೂ ಗುರುವು ಅಷ್ಟಮದಲ್ಲೇ ಇರುವುದರಿಂದ ದೈವನಿಷ್ಠರಾಗಿ, ಧರ್ಮದ ಹಾದಿಯಲ್ಲೇ ಈ ವಾರವನ್ನು ಕಳೆಯಿರಿ. ಅಷ್ಟಮ ಶನಿ, ಗುರುಗಳು ಕಡೆಗಳಿಗೆಯವರೆಗೂ ಪರೀಕ್ಷಿಸುತ್ತಾರೆ. ಗುರುವು ಕುಂಭಕ್ಕೆ ಬಂದಾಗ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ನರಸೋಬವಾಡಿಗೆ ತೆರಳಿ ಮನೋಹರತೀರ್ಥದಲ್ಲಿ ಮಿಂದು ಪಾಪರಹಿತರಾಗಿ. ಏ. 5.ರ ನಂತರ ಒಳ್ಳೆಯ ಕಾಲ.
ಗುರುವು ಸಪ್ತಮ ಸಂಚಾರದ ಅಂತ್ಯಭಾಗದಲ್ಲಿದ್ದು, ಸಪ್ತಮದಿಂದ ಅಷ್ಟಮಕ್ಕೆ ಬರುವ ಗುರುವು ಫಲಕಾರಿಯಾಗುತ್ತಾನೆ. ಆದರೂ ಮನಃಶಾಂತಿ ಕೆಡಿಸುವ ಕೆಲಸಗಳಲ್ಲಿ ತೊಡಗಿಸುತ್ತಾನೆ. ಮನಸ್ಸು ಶರೀರಕ್ಕೆ ಅನಾರೋಗ್ಯ ತಂದೊಡ್ಡುತ್ತಾನೆ. ಶಿವನ ದಾರಿದ್ರ್ಯ ದಹನ ಸ್ತೋತ್ರ ಪಾರಾಯಣ ಮಾಡಿ. ರಾಮನಾಮ ಕಾಪಾಡುತ್ತದೆ.
ಆರರ ಶನಿ-ಗುರು ಸಮಸ್ಯೆಯನ್ನು ಸವಾಲನ್ನು ಸಮನಾಗಿ ತಂದಿರುತ್ತಾನೆ. 5.4.21ರಂದು ಸಪ್ತಮ ಸುಖಸ್ಥಾನಕ್ಕೆ ಗುರುವು ಬಂದು, ನಿಂತಿರುವ ಕೆಲಸಗಳನ್ನು ಮುಂದೆ ಸಾಗಿಸಿ ಪ್ರಗತಿ ಕೊಡುತ್ತಾನೆ. ಸಿಂಹ ರಾಶಿಯವರು ರಾಶ್ಯಾಧಿಪತಿ ಸೂರ್ಯನ ತಾಪ ತಡೆದುಕೊಳ್ಳುವುದಕ್ಕೆ ದೇವರ ಆಸರೆ ಅನುಗ್ರಹ ಪಡೆಯಬೇಕು. ಸೂರ್ಯಮಂತ್ರ ಒಂದೇ ಬಾಳಿನ ಬೆಳಕು. ಕುಲದೇವರ ಪ್ರಾರ್ಥನೆ ಮಾಡಿ.
ಪಂಚಮ ಶನಿಯಿಂದ ನೋವು-ನಲಿವು, ಅನಾರೋಗ್ಯ, ಕಷ್ಟ-ನಷ್ಟಗಳನ್ನು ಕಂಡಿದ್ದರೂ, ಪಂಚಮದಲ್ಲಿ ಗುರು ಇದ್ದುದರಿಂದ ದೊಡ್ಡ ಮತ್ಸ್ಯ-ಮೊಸಳೆ, ಕೀಟ ಜಂತುಗಳಿರುವ ಸಮುದ್ರವನ್ನು ಕರುಣಾ ಸಮುದ್ರನಾದ ದೇವರಿಂದ ದಾಟಿದ್ದೀರ. ಲಕ್ಷ್ಮೀ ನರಸಿಂಹನನ್ನು ಪ್ರಾರ್ಥಿಸಿ. ಪಂಚಮ ಶನಿಯಿಂದ ಪಾರಾಗಲು ಇದು ಏಕೈಕ ಮಾರ್ಗ.
ರಾಶ್ಯಾಧಿಪತಿ ಶುಕ್ರನು ನಿಮ್ಮ ರಾಶಿಗೆ ಮೀನದಲ್ಲಿ ಕುಳಿತು, ತುಲಾ-ವೃಷಭ ಒಡೆಯನ ಮನೆಯಲ್ಲಿ ಕುಜ-ರಾಹು ಸಂಧಿಯಲ್ಲಿದ್ದಾರೆ. ಅಜಾಗರೂಕತೆಯಿಂದ ಕಷ್ಟ ತಂದುಕೊಳ್ಳಬೇಡಿ. 5.4.21ರವರೆಗೂ ನಿಧಾನವಾಗಿ ಚಲಿಸಿ. ಶೋಭಾಯಮಾನವಾದ ಬೆಳಕನ್ನು ಗುರುವು ತಂದುಕೊಡುತ್ತಾನೆ. ಕೋರ್ಟ್-ಕಚೇರಿ ಕೆಲಸದಲ್ಲಿ ಜಯ. ದುರ್ಗೆಯ ಪ್ರಾರ್ಥನೆ ಇರಲಿ. 5 ವಾರಗಳ ಕಾಲ ಸುಂದರಕಾಂಡ ಪಾರಾಯಣ ಮಾಡಿ.
ರಾಹು-ಕೇತುಗಳು ಕೊಡುವವರು, ಕೆಡಿಸುವವರೂ ಅವರೇ. ಕೆಟ್ಟ ಮೇಲೆ ಬುದ್ಧಿ ಬಂತೆಂಬಂತೆ ಒಳ್ಳೆಯ ಪಾಠವನ್ನೇ ಕಲಿತಿದ್ದೀರ. ಇದ್ದಾಗ ಅನವಶ್ಯಕ ವ್ಯಯ ಮಾಡಿ ದುಡ್ಡಿಗಾಗಿ ಈಗ ಭಯಂಕರ ಬಕಾಸುರನಂತೆ ಕಾದಿದ್ದೀರ. ಒಳ್ಳೆಯ ಕಾಲವು ಸಮೀಪದಲ್ಲಿದೆ. ಗಣಪತಿ, ಷಣ್ಮುಖನನ್ನು ಪ್ರಾರ್ಥಿಸಿ.
ಇನ್ನು ಒಂದು ವರ್ಷಕ್ಕೂ ಮಿಗಿಲಾಗಿ ಶನಿಯು ಕಡೆಯ ಹಂತದಲ್ಲಿ ನಿಮ್ಮನ್ನು ಹದಮಾಡುತ್ತಿದ್ದಾನೆ. ಎಲ್ಲವೂ ಸುಳ್ಳಲ್ಲ. ಎಲ್ಲವೂ ನಿಜವಲ್ಲ. ಸುಳ್ಳನ್ನು ನಿಜವೆಂದು ಎಡವಬೇಡಿ. ಪ್ರಜ್ಞಾಶೂನ್ಯರಾಗಿ ಪರಿತಪಿಸಬೇಡಿ. ಗುರುವು ತೃತೀಯಕ್ಕೆ ಬರುತ್ತಾನೆ. ಏನು ಬಂದರೂ ಎದುರಿಸುವ ಧೈರ್ಯವಿರಲಿ. ಇಷ್ಟದೇವರನ್ನು, ದತ್ತಾತ್ರೇಯನನ್ನು, ಶನಿಗಾಗಿ ವಿಷ್ಣುವನ್ನು ಪ್ರಾರ್ಥಿಸಿ.
ರಾಶಿಯಲ್ಲೇ ಗುರು-ಶನಿ ಇದ್ದು, ಗುರುವು ನೀಚತ್ವವನ್ನು ಕಳೆದು 5.4.21ರ ನಂತರ ಕುಂಭಕ್ಕೆ ಬಂದು ನಿಮಗೆ ಶುಭಫಲ ಕೊಡುತ್ತಾನೆ. ಎರಡು ಹೊತ್ತು ಊಟ ಮಾಡಿ ಖರ್ಚುವೆಚ್ಚ ಭರಿಸುವಂತೆ ಧನವಿದ್ದರೆ ಸಾಕು. ಎಲ್ಲವೂ ಸಿಕ್ಕಂತೆ. ಪಂಢರಾಪುರ ವಿಠೋಭನನ್ನು ಪೂಜಿಸಿ. ಮೈಲಾರದಲ್ಲಿ ಖಂಡೋಭನನ್ನು ಪೂಜಿಸಿ. ದುಃಖ ಬಂದಾಗ ದೇವರನ್ನು ಆಶ್ರಯಿಸಬೇಕು.
ದ್ವಾದಶ ಶನಿ-ಗುರು ಸಂಯೋಗವಿದ್ದು, ಏ.5ರ ನಂತರ ಗುರು ಬದಲಾವಣೆಯಾಗಲಿದ್ದು, ಸೂಕ್ಷ್ಮವಾಗಿ ಮನಸ್ಸಿಗೆ ಅಹಿತ ಉಂಟುಮಾಡುವ ಸಂದರ್ಭಗಳನ್ನು ತಂದೊಡ್ಡುತ್ತಾನೆ. ದ್ವಾದಶ ಶನಿಯು ಅಲ್ಲೇ ಇದ್ದು ನಿಮ್ಮ ಕೆಲಸ ಕಾರ್ಯಗಳು ಮಂದಗತಿಯಿಂದ ಸಾಗುತ್ತದೆ. ಪುಣ್ಯಕೆಲಸಗಳು ನಿಮ್ಮನ್ನು ಕಾಪಾಡುತ್ತದೆ. ಶ್ರೀರಾಮ ಕಥಾಚರಿತವನ್ನು ತಪ್ಪದೇ ಪಾರಾಯಣ ಮಾಡಿ.
ಏಕಾದಶದಲ್ಲಿ ಗುರು-ಶನಿಯಿದ್ದು ಈತನಕ ನಿಮಗೆ ಕೀರ್ತಿ, ಸಂತಸವನ್ನು ಕೊಟ್ಟಿದ್ದಾನೆ. ಗುರುವು ದ್ವಾದಶಕ್ಕೆ ಬಂದು ಶತ್ರುಭಯವನ್ನು, ಕೆಲಸದಲ್ಲಿ ಅಪೂರ್ಣತೆಯನ್ನು ಮಾಡುತ್ತಾನೆ. ಆದರೆ ಏಕಾದಶ ಶನಿ ನಿಮ್ಮ ಕೈಹಿಡಿಯುತ್ತಾನೆ. ಮಾತಾ-ಪಿತರನ್ನು ಪೂಜಿಸಿ. ಗುರುವಿನ ಅನುಗ್ರಹಕ್ಕಾಗಿ ಗಾಣಗಾಪುರದ ಭೀಮ ಅಮರಜಾ ಸಂಗಮದಲ್ಲಿ ಮಿಂದು ಕಲ್ಲೇಶ್ವರನನ್ನು ಪೂಜಿಸಿ.