ಈ ರಾಶಿಯವರು ಯೋಚಿಸಿ ಜಾಣ್ಮೆಯಿಂದ ಸಮಯವನ್ನು ದಾಟಿ: ವಾರಭವಿಷ್ಯ

Vara-Bhavishya-2
Published on
ಮೇಷ

ಏಕಾದಶದಲ್ಲಿರುವ ಗುರುವು ದಶಮಕ್ಕೆ ಬಂದು ಮನುಷ್ಯನು ಮಾಡಿದ ಪಾಪಪುಣ್ಯಗಳ ಲೆಕ್ಕ ಕೇಳಿ ಅವನೇ ಗುಣಿಸಿ ಭಾಗಿಸಿ ಲೆಕ್ಕಕೊಡುತ್ತಾನೆ. 11ನೇ ಮನೆಯಲ್ಲಿ ಗುರುವಿದ್ದಾಗ ನಿಮಗೆ ಸಂಪತ್ತು ಆರೋಗ್ಯಕೊಟ್ಟು ನೋಡಿಕೊಂಡಿದ್ದಾನೆ. ದಶಮದಲ್ಲಿ ಈಗ ಗುರು ಶನಿ ಇದ್ದಾನೆ. ಲಗ್ನಾಧಿಪತಿ ಕುಜನು ಕನ್ಯಾರಾಶಿಗೆ ಬಂದು ಚಂದ್ರನಿಗೆ ರವಿ-ಬುಧರ ಜೊತೆ ಸೇರಿದ್ದಾನೆ. ಕೆಲಸಗಳನ್ನು ಯೋಚಿಸಿ ನಿರ್ಣಯಿಸಿ.

ವೃಷಭ

ವೃಷಭಾಧಿಪತಿ ಶುಕ್ರನು ಅಂಗಾರಕನನ್ನು ಸೇರಿ ಕೇತುಗ್ರಸ್ಥನಾಗಿದ್ದಾನೆ. ನವಮದಲ್ಲಿ ಶನಿ, ಗುರು ಒಟ್ಟಿಗಿರುವುದರಿಂದ ಸ್ವಲ್ಪ ಮಟ್ಟಿಗೆ ಕಾರ್ಯಸಾಧನೆ. ಆದರೂ ಒತ್ತಡ, ಧನಕೊರತೆ ಉಂಟಾಗುತ್ತದೆ. ದುರ್ಗೆಯನ್ನು ಆರಾಧಿಸಿ. ಕನ್ಯಾಮಾಸ ಇನ್ನೂ ಹತ್ತು ದಿನ ಬಾಕಿಯಿದ್ದು, ಪಿತೃಗಳ ಪ್ರೀತ್ಯರ್ಥವಾಗಿ ಅನ್ನ, ಬಟ್ಟೆ, ಎಳ್ಳು ನೀರು ನೀಡಿದರೆ ಅನಾಹುತಗಳಿಂದ ತಪ್ಪಿಸಿಕೊಳ್ಳಬಹುದು.

ಮಿಥುನ

ಮಿಥುನ ರಾಶಿಯವರಿಗೆ ಅಷ್ಟಮ ಗುರು-ಶನಿ ಇರುವವರೆಗೂ ಸೌಖ್ಯ, ನೆಮ್ಮದಿ ಇರುವುದಿಲ್ಲ. ಗುರುವಿನ ಉಪದ್ರವ ಉಪಶಮನ ಮಾಡಲು ವಾಸುದೇವಾನಂದ ವಿರಚಿತ ದತ್ತಾತ್ರೇಯ ಅಷ್ಟಕ ಪಾರಾಯಣ ಮಾಡಿ. ದತ್ತಾತ್ರೇಯ ಅಷ್ಟೋತ್ತರದಲ್ಲಿ ಪುಷ್ಪಾರ್ಚನೆ ಮಾಡಿ. ಎರಡು ತಿಂಗಳ ನಂತರ ಗುರುವು 9ನೇ ಮನೆಗೆ ಬಂದು ತೃಪ್ತಿ, ಸಮಾಧಾನ ನೀಡುತ್ತಾನೆ.

ಕಟಕ

ಸಪ್ತಮದಲ್ಲಿ ಶನಿಯಿದ್ದು ಎಲ್ಲ ತರಹದ ಎಚ್ಚರಿಕೆಯನ್ನು ನೀಡುತ್ತಾನೆ. ಅದನ್ನು ತಾತ್ಸಾರ ಮಾಡದಿರಿ. ಏಕಾದಶ ರಾಹುವು ಲಾಭ ಕೊಡುತ್ತಾನೆ. 3 ರಲ್ಲಿ ಶುಕ್ರ ಸಂಚಾರವಿದ್ದು ನಿಮ್ಮ ದಾರಿಯನ್ನು ನೀವೇ ಕಂಡುಕೊಳ್ಳಬೇಕು. ಅನಂತಪದ್ಮನಾಭನನ್ನು ಪೂಜಿಸಿ. ನಿಮ್ಮ ಕೈಹಿಡಿಯುತ್ತಾನೆ.

ಸಿಂಹ

6ನೇ ಮನೆಯ ಶನಿ ಉತ್ತಮನಾಗಿದ್ದು, ಗುರು ಷಷ್ಠದಲ್ಲಿ ಬಂದೂ ಮಾಡುವ ಕೆಲಸಗಳಿಗೆ ತಡೆ ಬರಬಹುದು, ವಿಳಂಬವಾಗಬಹುದು. ಎರಡು ತಿಂಗಳ ಕಾಲ ಗುರುವು 7ನೇ ಮನೆಗೆ ಬರುವ ತನಕ ಸಂಯಮವಿದ್ದು, ಏನು ಬಂದರೂ ಜಯಿಸಬಹುದೆಂಬ ಛಲವಿದ್ದಲ್ಲಿ ಗೆಲ್ಲುವಿರಿ. ಕೆಂಪು ಪುಷ್ಪದಿಂದ ಸೂರ್ಯನ ಅರ್ಚನೆ ಮಾಡಿ. ಯೋಚಿಸಿ ಜಾಣ್ಮೆಯಿಂದ ಸಮಯವನ್ನು ದಾಟಿ.

ಕನ್ಯಾ

ಕನ್ಯಾಗತೇ ಸವಿತೃ ಆಷಾಢ್ಯಾದಿ ಪಂಚಮಾಸಗಳು ಅತಿಮುಖ್ಯವಾದದ್ದು, ಆಷಾಢ, ಶ್ರಾವಣ, ಭಾದ್ರಪದ, ಆಶ್ವೀಜ ಈ ಮಾಸಗಳಲ್ಲಿ ಸಿಂಹ, ಕನ್ಯಾ ರಾಶಿಯ ವರು ಶನಿಯ ಸಂಚಾರದಲ್ಲಿ ಪಿತೃದೇವತೆಗಳನ್ನು ನೆನೆದು ಅವರಿಗೆ ಯಥೋಚಿತ ಪೂಜೆ ಮಾಡಿದರೆ ಹರಸುವರು. ಪಂಚಮದಲ್ಲಿ ಶನಿ-ಗುರುವಿದ್ದು, ಗುರುವು ದೈವಬಲ ನೀಡಬೇಕಾದರೆ ಪಿತೃಗಳ ಆಶೀರ್ವಾದವೇ ಮುಖ್ಯ.

ತುಲಾ

ಕನ್ಯಾ-ತುಲಾ ಎರಡೂ ಅತ್ಯಂತ ಶ್ರೇಷ್ಠ ಮಾಸಗಳು. ಕನ್ಯಾಮಾಸದಲ್ಲಿ ಪಿತೃತರ್ಪಣ. ತುಲಾಮಾಸದಲ್ಲಿ ಕಾವೇರಿ ನದಿಸ್ನಾನ. ಮಕ್ಕಳು ಹಿರಿಯರ ಆಶೀರ್ವಾದ ಪಡೆದರೆ ಧೈರ್ಯ, ಕೀರ್ತಿ, ಲಾಭ ದೊರೆಯುವುದು. ರಂಗನಾಥಸ್ವಾಮಿ ದರ್ಶನ ಮಾಡಿ ಶ್ರೀರಂಗಪಟ್ಟಣದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಅನ್ನದಾನ ಮಾಡಿ ವಿಶೇಷ ಫಲ ಹೊಂದಬಹುದು. ಭಯವನ್ನು ದಾಟಲು ಕಾಲಭೈರವನನ್ನು ಪೂಜಿಸಿ.

ವೃಶ್ಚಿಕ

ತುಲಾ ರಾಶಿಯ ಶುಕ್ರನು ಕೇತುವಿನ ಜತೆ ಸೇರಿ ಮನುಷ್ಯನ ಕೀರ್ತಿ, ಆರ್ಥಿಕ ಸ್ಥಿತಿಯನ್ನು ಮೊಟಕುಗೊಳಿಸಿ ಭೀತಿ, ಉದ್ವಿಗ್ನ ಸ್ಥಿತಿಯಲ್ಲಿ ಇಟ್ಟಿರುತ್ತಾನೆ. ಭಯನಾಶಿನಿ ಮೂಕಾಂಬಿಕೆಯಲ್ಲಿ ಇರಿಸಿ ಪಾರ್ಥಿಸಿದರೆ ದುಃಖ -ತಳಮಳ ನಿಂತು ಸುಖದ ಹಾದಿಯಲ್ಲಿ ನಡೆಯುತ್ತದೆ. ಗಣಪತಿಯನ್ನು ಅರ್ಚಿಸಿ. ಚಂಡಿಕಾ ಪರಮೇಶ್ವರಿ ಅಷ್ಟೋತ್ತರ ಪಾರಾಯಣ ಮಾಡಿ.

ಧನು

ಚತುಷ್ಚಕ್ರ ರಥದಲ್ಲಿ ಓಡಾಡುವವರಿಗೆ ದಾರಿಯೂ ಗೊತ್ತಿರಬೇಕು, ಚಾಲನೆಯೂ ಗೊತ್ತಿರಬೇಕು. ಹಾಗೆಯೇ ನಿಮ್ಮ ದೇಹವೆಂಬ ರಥವನ್ನು ಕಾಯ್ದು ಕೊಳ್ಳಿ. ಪೂರ್ವಪುಣ್ಯವನ್ನು ಏನು ಸಂಪಾದನೆ ಮಾಡಿ ದಿರೋ ಅದೇ ನಿಮ್ಮನ್ನು ಕಾಯುತ್ತದೆ. ತಂದೆಗಿಂತ ದೇವರಿಲ್ಲ. ತಾಯಿಗಿಂತ ಮಿಗಿಲಾದ ವಸ್ತು ಜಗತ್ತಿನಲ್ಲಿ ಇಲ್ಲ. ಮಾತಾ-ಪಿತೃಗಳ ಆಶೀರ್ವಾದ ಪಡೆಯಿರಿ.

ಮಕರ

ಲಾವಣ್ಯ-ತಾರುಣ್ಯ, ಯೌವ್ವನ-ತೇಜಸ್ಸು ರೂಪ ಸ್ವರೂಪವನ್ನು ಕರುಣಿಸುವುದು ಸಾಕ್ಷಾತ್ ಲಕ್ಷ್ಮಿಯೇ. ಅವಳಲ್ಲಿ ಭಕ್ತಿ ಕಡಿಮೆಯಾದರೆ ಇವು ಕಡಿಮೆಯಾಗುತ್ತದೆ. ಜನ್ಮ ಗುರುವಿರುವುದರಿಂದ, ಶನಿಯ ತಾಪ ಕಡಿಮೆಯಾದರೂ ವಿಶೇಷ ದೈವಬಲ ಇರುವುದಿಲ್ಲ. ಆದ್ದರಿಂದ ದತ್ತಾತ್ರೇಯನನ್ನು ಪೂಜಿಸಿ. ಮಕರ ರಾಶಿಯವರಿಗೆ ಕುಂಭಕ್ಕೆ ಶನಿ ಬಂದರೆ ಒಳ್ಳೆಯ ದಿನಗಳು ಬಂದಂತೆ. ಶನಿ ಅಷ್ಟೋತ್ತರ ಪಾರಾಯಣ ಮಾಡಿ.

ಕುಂಭ

ನೀರು ಬಾವಿಯಲ್ಲಿದ್ದರೂ ಕೊಡದಲ್ಲಿದ್ದರೂ, ತುಂಬಲು ಲೋಟವೇ ಬೇಕು. ದೇವರ ಪ್ರಾರ್ಥನೆ ಮಾಡಿದರೆ ನೀವು ಅವನ ಮುಂದೆ ನೀರನ್ನೇ ಇಟ್ಟರೂ ಅದನ್ನೇ ಅಮೃತವನ್ನಾಗಿ ಮಾಡುತ್ತಾನೆ. ಕೊಟ್ಟವನು ಕೊಟ್ಟಿದ್ದಕ್ಕೆ ತೃಪ್ತಿಯಿರಿಸಿ. ದಶರಥ ಶನಿ ಸ್ತೋತ್ರ, ವಾಮನ ಜಯಂತಿ ಕಥೆ, ರಾಮಾಷ್ಟೋತ್ತರ ಪಾರಾಯಣ ಮಾಡಿ ಸುಖ-ತೃಪ್ತಿ ಪಡೆಯಬಹುದು.

ಮೀನ

ಏಕಾದಶದಲ್ಲಿ ಗುರು-ಶನಿಯಿದ್ದು, ಈಗ ಗ್ರಹಚಾಲನೆಯ ಮಾರ್ಗದಲ್ಲಿ ಅತ್ಯಂತ ಶುಭವಾಗಿದ್ದು, ಬಯಸಿದ್ದೆಲ್ಲಾ ನಿಮ್ಮಂತೆ ನಡೆಯುತ್ತದೆ. ದೈವಭಕ್ತರಾಗಿ, ಅನ್ಯರಿಗೆ ಉಪಕಾರಿಗಳಾಗಿ ವಿಷ್ಣುವನ್ನು ಶಂಭುವನ್ನು ಪೂಜಿಸಿ. 1ನೇ ಮನೆಯಲ್ಲಿ ಗುರು-ಶನಿಯಿರುವುದರಿಂದ ಉಮಾಮಹೇಶ್ವರ ವ್ರತಕಥೆಯನ್ನು ಪ್ರತಿ ಸೋಮವಾರ ಓದಿ. ಪಾರ್ವತಿ ಸಮೇತ ಸಾಂಬಸದಾಶಿವನನ್ನು ಪೂಜಿಸಿದರೆ ಸುಖಕ್ಕೂ -ಧನಕ್ಕೂ ಕೊರತೆಯಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net