

26-04-2020 ರಿಂದ 2-05-2020
ಮೇಷ: ಇರುವ ಧನವನ್ನು ಆಪತ್ಕಾಲಕ್ಕೂ ಇರಿಸಿಕೊಳ್ಳಿ. ಧರ್ಮವಿಲ್ಲದ ಜೀವನ, ದಾನವಿಲ್ಲದ ಮನುಷ್ಯನ ಆಯಸ್ಸು ಹೊಳೆಯ ಶುದ್ಧ ನೀರು ಕಲ್ಮಶವಾದಂತೆ. ಎಚ್ಚರದಿಂದ ನಿಮ್ಮ ಕರ್ತವ್ಯಗಳನ್ನು ನಿರ್ವಹಿಸಿ. ಅನಗತ್ಯ ವಿಚಾರಗಳಿಗೆ ದುಃಖಿಸಬೇಡಿ. ದೈವಬಲ, ದೇವರ ಕೃಪೆ ನಿಮ್ಮದಾಗಿರುತ್ತದೆ.
ವೃಷಭ: ಸ್ವಸ್ಥಾನದಲ್ಲಿರುವ ಶುಕ್ರನು ನಿಮಗೆ ಅನ್ಯರಿಂದ ಬರಬೇಕಾದ ಧನವನ್ನು ಕೊಡಲು ಅನುಗ್ರಹಿಸುತ್ತಾನೆ. ಐಶ್ವರ್ಯವನ್ನು ಕಾಪಾಡಿಕೊಳ್ಳಿ. ಪರೋಪಕಾರ ಮಾಡಿ ಸುಖಮಯ ಜೀವನ ಸಾಗಿಸಿ. ಸಂಸಾರವನ್ನು ನಿಸ್ಸಾರವೆಂದುಕೊಳ್ಳದೆ ಅದನ್ನು ಸುಂದರಗೊಳಿಸಿಕೊಳ್ಳಿ. ದುರ್ಗೆಯನ್ನು ಆರಾಧಿಸಿ. ಲಲಿತಾ ಸಹಸ್ರನಾಮ, ದುರ್ಗಾಸ್ತವವನ್ನು ಪಠಿಸಿ.
ಮಿಥುನ: ವೈಭವೋಪೇತವಾದ ಜೀವನ ಸುಖ ತರುವುದಿಲ್ಲ. ಅಷ್ಟಮ ಶನಿಯಿಂದ ಮಾಡುವ ಅಚಾತುರ್ಯಗಳು, ಧರ್ಮಮೀರಿ ಮಾಡಿದ ಕೆಲಸಗಳು ಯಾರಿಗೆ ಕಾಣದಿದ್ದರೂ ದೈವವನ್ನು ವಂಚಿಸಲಾಗುವುದಿಲ್ಲ. ಬಂದ ಸುಖಭೋಗವನ್ನು ಸೇವಕರಿಗೂ ಹಂಚಿರಿ. ಭಯ, ಚಿಂತೆ ಬೇಡ. ಮನಸಾರೆ ನಿಮಗೆ ಆಶೀರ್ವದಿಸುವ ಗುರುವನ್ನು ಸ್ಮರಿಸಿ.
ಕಟಕ: ಸಂಸಾರದಲ್ಲಿ ತಾಪತ್ರಯಗಳಿದ್ದರೂ ಗಲಾಟೆಗಳಿಗೆ ಅವಕಾಶ ಕೊಡದಿರಿ. ಮಾಡುವ ಕೆಲಸಗಳಲ್ಲಿ ಭಯ ಬೇಡ. ವೀರತೆಯು ಮಾನವನ ಸವೋತ್ಕೃಷ್ಟ ಗುಣ. ಶನಿ ಅಷ್ಟೋತ್ತರ ಪಠಿಸಿ. ಅನನ್ಯ ಭಕ್ತಿಯಿಂದ ಲೀಲಾಮಾನುಷನಾದ ಶ್ರೀರಾಮನ ಸ್ಮರಣೆ ಮಾಡಿರಿ.
ಸಿಂಹ: ಗ್ರಹಗಳ ಅನುಕೂಲವಿದ್ದರೂ ನಿಮಗೆ ಈತನಕ ಏನೂ ಲಭಿಸಿಲ್ಲ. ಧನದ ವೆಚ್ಚ, ಕಡವಾಗಿ ಪಡೆದದ್ದನ್ನು ಇನ್ನೂ ಹಿಂತಿರುಗಿಸಲು ಸಾಧ್ಯವಾಗಿಲ್ಲ. ಸಿಂಹವು ಘರ್ಜಿಸುತ್ತದೆ. ದುಃಖಿಸುವುದಿಲ್ಲ. ಅಚಲ ನಂಬಿಕೆ , ದೇವತಾರಾಧನೆ, ದೈನಂದಿನ ಪ್ರಾರ್ಥನೆ ಮಾಡುವುದನ್ನು ಮರೆಯಬೇಡಿ. ಶ್ರೀಶಾರದಾಂಬೆಯನ್ನು ಸ್ಮರಿಸಿ. ಎಲ್ಲವೂ ನಿಮಗೆ ಬಂದು ಸೇರುವ ಕಾಲ ಸನ್ನಿಹಿತವಾಗಿದೆ.
ಕನ್ಯಾ: ಚಂಚಲ ಬುದ್ಧಿಯವರಾದ ನೀವು ನಿರ್ಣಯಗಳು ತಪು್ಪ ಎಂದು ಗೊತ್ತಿದ್ದರೂ ಅದನ್ನು ಸರಿಪಡಿಸಿಕೊಳ್ಳುವ ಯೋಚನೆ ಮಾಡಿಲ್ಲ. ಪಂಚಮ ಶನಿಯು ಪರೀಕ್ಷೆ ಮಾಡುತ್ತಾನೆ. ತಪ್ಪಿಗೆ ಪಶ್ಚಾತ್ತಾಪವಿರಲಿ. ನಿಮ್ಮ ಭಕ್ತಿಯನ್ನು ನೋಡಿ ದೇವರು ನಿಮಗೆ ಸುಖ ಕರುಣಿಸುತ್ತಾನೆ. ದುಃಖವನ್ನು ದೂರಮಾಡುತ್ತಾನೆ. ರಾಮಾಷ್ಟೋತ್ತರ, ಸುಂದರಕಾಂಡ ಪಾರಾಯಣ ಮಾಡಿರಿ.
ತುಲಾ: ತೃತೀಯ ಕೇತು ಹಾಗೂ ಒಂಬತ್ತರ ರಾಹು ಧನವನ್ನು ಕೊಡುವನು. ಶನಿಯು ಅದನ್ನು ವಿನಿಯೋಗ ಮಾಡಿಸುತ್ತಾನೆ. ಅಶುದ್ಧ ನಾಲಿಗೆಯಿಂದ ಅನ್ಯರನ್ನು ಕೆಣಕದಿರಿ. ವೃಥಾ ಅಪವಾದ ಸಂಪಾದನೆ ಮಾಡಬೇಡಿ. ಉಪಯೋಗವಿಲ್ಲದೆಡೆ ನಿಮ್ಮ ಖರ್ಚನ್ನು ಹತೋಟಿಯಲ್ಲಿಡಿ. ಶ್ರೀದುರ್ಗೆಯನ್ನು ಆರಾಧನೆ ಮಾಡಿ.
ವೃಶ್ಚಿಕ: ಮೂರನೆಯ ಮನೆಯಲ್ಲಿನ ಶನಿಯು ಕಳೆದುಕೊಂಡಿರುವುದನ್ನು ತಂದುಕೊಡುತ್ತಾನೆ. ಕೈ ಜಾರಿದ ಧನ, ಸಂಪತ್ತು, ಐಶ್ವರ್ಯ ಎಲ್ಲವೂ ನಿಮ್ಮದಾಗುತ್ತದೆ. ವಿಶ್ವಾಸವಿರಲಿ. ತಂದೆ ತಾಯಿಯನ್ನು ಸ್ಮರಿಸಿ. ಜಗತ್ತಿನಲ್ಲಿ ಅವರಿಗಿಂತ ಮಿಗಿಲಾದ ದೇವರಿಲ್ಲ. ನಿಮಗೆ ಧನ, ಸುಖ-ಸಂತೋಷ ಪಡೆಯಲು ಕುಬೇರ ಹಾಗೂ ಲಕ್ಷ್ಮೀಯನ್ನು ಪ್ರಾರ್ಥಿಸಿ.
ಧನಸ್ಸು: ದೈವ ಬಲೇ ದುರ್ಬಲೆ. ಈ ರಾಶಿಯಲ್ಲಿ ಜನಿಸಿದವರಿಗೆ ತಂದೆಯೇ ಮೊದಲ ಗುರು. ಗುರುದ್ರೋಹ ಸಲ್ಲ. ಸತ್ಯವನ್ನೇ ನುಡಿಯಿರಿ. ನಿಮ್ಮ ಅಭ್ಯುದಯ ಆರಂಭವಾಗಿದೆ. ಪರೋಪಕಾರ ಮಾಡಿ. ದಾನ-ಧರ್ಮ ಮಾಡಲು ಕೈಹಿಡಿತ ಬೇಡ. ಅಪಾತ್ರ ದಾನ ಸಲ್ಲ.
ಮಕರ: ಜನ್ಮ ಶನಿಯು ಕಾರಣವಿಲ್ಲದೆ ದುಃಖಕೊಡುತ್ತಾನೆ. ದಶರಥ ವಿರಚಿತ ಶನಿ ಸ್ತೋತ್ರವನ್ನು ಪಠಿಸಿ. ಅಸಾಧ್ಯವಾದುದನ್ನು ಸಾಧಿಸಿ ತೋರಿಸಿ. ಜೀವನದಲ್ಲಿ ಛಲವೇ ಮುಖ್ಯ. ನೀವು ಯಾರನ್ನೂ ಸಂಹರಿಸಲಾಗುವುದಿಲ್ಲ. ಆದರೆ ಆ ಗುಣವನ್ನು ಬಿಟ್ಟು ಕಾಲಕ್ಕೆ ತಕ್ಕಂತೆ ಶಾಂತಿ, ಸುಖವು ಸಿಗುವುದು.
ಕುಂಭ: ದ್ವಾದಶದಲ್ಲಿ ಶನಿ ಮತ್ತು ಗುರುಗ್ರಹಗಳಿರುವುದರಿಂದ ಮನಸ್ಸಿಗೆ ಬಂದಂತೆ ವರ್ತಿಸುವ ಕಾಲವಲ್ಲ. ಬ್ರಹ್ಮಪುತ್ರನಾದ ಕಾಲನು ಯಾರನ್ನೂ ಬಿಡುವುದಿಲ್ಲ. ದೇವರಲ್ಲಿ, ಹಿರಿಯರಲ್ಲಿ ಶ್ರದ್ಧೆ, ಭಕ್ತಿ ಇರಲಿ. ಶನಿಯ ಪಲ್ಲಟದಿಂದ ಸುಖಪ್ರಾಪ್ತಿ. ಆಂಜನೇಯನನ್ನು ಪೂಜಿಸಿ. ಹನುಮಾನ್ ಚಾಲೀಸ ಪಠಿಸಿ.
ಮೀನ: ಮತ್ಸ್ಯವು ನೀರಿಲ್ಲದೆ ಬದುಕಲಾರದು. ಅಂತೆಯೇ ಈ ರಾಶಿಯವರು ದೈವಬಲದಿಂದಲೇ ಬದುಕಬೇಕು. ಏಕಾದಶದಲ್ಲಿರುವ ಶನಿ-ಗುರು ಗ್ರಹಗಳು ಯಾವ ಭಯ, ಅಶಾಂತಿಯನ್ನೂ ಉಂಟುಮಾಡಲಾರವು. ನಿಂದನೆ ಬೇಡ. ನಿಮಗಾಗಿ ಹಿತವನ್ನು ನುಡಿಯುವವರ ಬಗ್ಗೆ ಕಾಳಜಿ ತೋರಿಸಿ. ಅತ್ಯುತ್ತಮ ಸಮಯವನ್ನು ಹಾಳುಮಾಡಿಕೊಳ್ಳಬೇಡಿ. ಧನ್ವಂತರಿ ಶ್ರೀ ಮಹಾವಿಷ್ಣುವನ್ನು ಪ್ರಾರ್ಥಿಸಿ.