

ಮೇಷ: ಒಂಬತ್ತರ ಗುರುವು ನಿಮಗೆ ಸದಾ ಸುಖವನ್ನು ನೀಡುತ್ತಾನೆ. ಆದರೆ ನಿಮ್ಮಲ್ಲಿ ದೃಢವಾದ ಗುರುಭಕ್ತಿ ಇರಬೇಕು. ಸಪ್ತಮದಲ್ಲಿ ಪಶ್ಚಾತಾಪ ಪಟ್ಟು ಅವನನ್ನು ಪ್ರಾರ್ಥಿಸಿದಲ್ಲಿ ಅವನೇ ಮಾರ್ಗವನ್ನು ಸೂಚಿಸುತ್ತಾನೆ. ಸೂರ್ಯನನ್ನು ಆರಾಧಿಸಿ. ದ್ವಿತೀಯ ರಾಹು ನಿಮಗೆ ತೃಪ್ತಿಯಾಗುವಷ್ಟು ಧನವನ್ನು ಕೊಡುವನು. ರಾಹು-ಕೇತು ಕೊಟ್ಟರೆ ವರವನ್ನೇ ಕೊಡುತ್ತಾರೆ. ರಾಶ್ಯಾಧಿಪತಿ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ, ಪೂಜಿಸಿ.
ವೃಷಭ: ಲಗ್ನದಲ್ಲಿ ರಾಹು, ಷಷ್ಠದಲ್ಲಿ ಸೂರ್ಯ, ದ್ವಾದಶ ಕುಜ ನಿಮ್ಮ ಸಾಮರ್ಥ್ಯವನ್ನು ಒರೆ ಹಚ್ಚಲು, ನಿಮ್ಮ ನಿಂದಕರು, ಶತ್ರುಗಳು ಕಾದಿರುತ್ತಾರೆ. ಕೊಟ್ಟ ಕೆಲಸವನ್ನು ನಿಭಾಯಿಸಲು ನಿಮಗೆ ಶಕ್ತಿಯಿದೆ. ಕೇವಲ ಶಕ್ತಿಯಿಂದ ಕೆಲಸವಾಗುವುದಿಲ್ಲ. ಯುಕ್ತಿಯೂ ಬೇಕು. ಜಾಣ್ಮೆಯಿಂದ ಶತ್ರುಗಳನ್ನು ಎದುರಿಸಿ. ನಿಮ್ಮ ಚಾಣಾಕ್ಷತೆಯನ್ನು ತೋರಿಸಿ.
ಮಿಥುನ: ದ್ವಾದಶ ರಾಹು ಅಲ್ಪಸ್ವಲ್ಪ ಕೆಲಸವನ್ನು ಮುಂದೆ ಸಾಗಿಸುತ್ತಾನೆ. ನಿರೀಕ್ಷೆಯನ್ನು ಮುಟ್ಟದಿದ್ದರೂ ಗುರುವಿನ ಕರುಣೆಯಿಂದ ನಿಮ್ಮ ಮಾರ್ಗವನ್ನು ದಾಟಿಸುತ್ತಾನೆ. ನಡೆ-ನುಡಿಯ ಬಗ್ಗೆ ಎಚ್ಚರವಿರಲಿ. ಕೋಪವೊಂದೇ ಸಾಕು ಕೆಲಸವನ್ನು ಹಾಳುಮಾಡಲು. ವಿಷ್ಣುಪುರಾಣವನ್ನು ಪಠಿಸಿ. ಶ್ರೀಮಹಾವಿಷ್ಣು ಸ್ಮರಣೆ ಮಾಡಿ.
ಕಟಕ: ಆರರಲ್ಲಿ ಗುರು ಏಳರ ಶನಿ. ನೀವು ವೃಥಾ ಕೆಲಸವನ್ನು ಮಾಡಿ ದೇಹವನ್ನು ಹಾಳುಮಾಡಿಕೊಳ್ಳಬೇಡಿ. ಆಯಾಸ ಆಗುವಂತೆ ಕೆಲಸವು ನಿಮ್ಮ ಚಿತ್ತವನ್ನು ಹಾಳು ಮಾಡಿ ನಿಮ್ಮನ್ನು ಯೋಚನಾಮಗ್ನರನ್ನಾಗಿಸುತ್ತದೆ. ಜಲರಾಶಿಯಲ್ಲಿ ಹುಟ್ಟಿದ ನೀವು ವಿಷ್ಣುವನ್ನು, ಈಶ್ವರನನ್ನು ಪೂಜಿಸಿ. ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳಿ. ಬೆಂಕಿಯೊಂದಿಗೆ, ಆರೋಗ್ಯದೊಂದಿಗೆ ಸರಸವಾಡಬಾರದು. ಧೈರ್ಯವಿರಲಿ. ಭಗವಂತನು ನಿಮ್ಮನ್ನು ಕಾಪಾಡುತ್ತಾನೆ.
ಸಿಂಹ: ಪಂಚಮ ಗುರು, ಆರರ ಶನಿಯು, ತುಲಾ ರವಿ ನಿಮಗೆ ಕೀರ್ತಿಯನ್ನು ತರುವುದರಲ್ಲಿ ಸಂದೇಹವಿಲ್ಲ. ಸಿಂಹ ರಾಶಿಯಲ್ಲಿ ಜನಿಸಿದ ನೀವು, ನಿಮ್ಮನ್ನು ಕಾಪಾಡಿಕೊಳ್ಳುವುದಕ್ಕೆ ಸದಾ ಕಾಲ ದೈವ ಚಿಂತನೆ ಅತ್ಯಗತ್ಯ. ‘ಬಂದದ್ದೆಲ್ಲ ಬರಲಿ ಗೋವಿಂದನ ದಯೆವೊಂದು ಇರಲಿ’ ಎಂಬಂತೆ ನಿಮ್ಮ ಜೀವನವನ್ನು ಸಾಗಿಸಿ. ಶುಭದಿನಗಳು ಹತ್ತಿರದಲ್ಲಿದೆ. ಸುಖವಾಗಿರಿ.
ಕನ್ಯಾ: ಆರೋಗ್ಯವನ್ನು ಹಾಳುಮಾಡಿಕೊಂಡು, ಬುದ್ಧಿಯನ್ನು ಕೆಡಿಸಿಕೊಂಡ ನೀವು ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಯಾರು ಏನೇ ಹೇಳಿದರು ನೀವು ಕೇಳುವುದಿಲ್ಲ. ಎಲ್ಲರನ್ನೂ, ಎಲ್ಲವನ್ನೂ ಪರೀಕ್ಷಿಸಿ ನೀವು ನಿಮ್ಮಂತೆಯೇ ನಡೆದುಕೊಳ್ಳುತ್ತೀರಿ. ಪಂಚಮ ಶನಿಯು ಪಾಠ ಕಲಿಸುತ್ತಿದ್ದಾನೆ. ವ್ಯವಹಾರವನ್ನು ನಿಧಾನವಾಗಿ ಕೊಂಡೊಯ್ಯಿರಿ. ಆಲಸ್ಯ, ಹೆದರಿಕೆ ಬೇಡ. ವಿಷ್ಣುವು ನಿಮ್ಮನ್ನು ಕಾಪಾಡುತ್ತಾನೆ. ಪುರುಷಸೂಕ್ತ ಪಾರಾಯಣವನ್ನು ಮಾಡಿ.
ತುಲಾ: ರವಿ ತುಲಾರಾಶಿಗೆ ಬಂದು ಸೇರಿ ನಿಮ್ಮ ಪ್ರತಿಭೆಯನ್ನು, ಬುದ್ಧಿವಂತಿಕೆಯನ್ನು ತೋರಲು ಪ್ರೇರೇಪಿಸುತ್ತಾನೆ. ಸೂರ್ಯ ಎಷ್ಟು ತೇಜಸ್ವಿಯೋ ಅಷ್ಟೇ ಪ್ರಬಲನು. ನಿಮಗೆ ಕೀರ್ತಿ ಬರುವ ಕಾಲ ಹತ್ತಿರದಲ್ಲಿದೆ. ಧನಕ್ಕೆ ಕೊರತೆಯಿಲ್ಲ. ನಿಮಗೆ ದೈವಬಲವಿದ್ದು, ಕೆಲಸದಲ್ಲಿ ಪ್ರಗತಿಯನ್ನು, ಸಂತಸವನ್ನೂ ಕಾಣುತ್ತೀರಿ. ನವಗ್ರಹ ಸ್ತೋತ್ರ ಪಠಿಸಿ. ಸೂರ್ಯಕವಚ ಪಾರಾಯಣ ಮಾಡಿ.
ವೃಶ್ಚಿಕ: ಲಗ್ನದಲ್ಲಿ ಕೇತುವಿದ್ದು ಕೆಲಸವು ಮುಗಿದಿದೆ ಎಂದುಕೊಂಡರೂ ಅದರಿಂದ ದುಡ್ಡನ್ನು ಕಾಣುವಷ್ಟು ಬೆಳಕು ಭಗವಂತನು ನೀಡಿಲ್ಲ. ನಿಮ್ಮ ಬಾಳಿಗೆ ಭಾಗ್ಯವು ತೆರೆದೇ ತೆರೆಯುತ್ತದೆ. ಕೊಲ್ಹಾಪುರದ ಲಕ್ಷ್ಮೀಯನ್ನು ಪ್ರಾರ್ಥಿಸಿ. ದ್ವಿತೀಯ ಗುರುವಿಗೆ ದತ್ತನನ್ನು ಆರಾಧಿಸಿ. ನಿಮ್ಮ ಆಶೋತ್ತರಗಳು ಈಡೇರುತ್ತವೆ. ಋಣ ಪರಿಹಾರವಾಗುತ್ತದೆ.
ಧನಸ್ಸು: ಲಗ್ನದಲ್ಲಿ ಗುರುವು ನವೆಂಬರ್ 20ರಂದು ದ್ವಿತೀಯಕ್ಕೆ ಬಂದು ನಿಮ್ಮನ್ನು ಕೀರ್ತಿಶಾಲಿಯಾಗಿ ಮಾಡುತ್ತಾನೆ. ಗುರುಹಿರಿಯರ ಆಶೀರ್ವಾದ ಬೇಕು. ನಿಂದನೆ, ನಿಷ್ಠೂರವೂ ಬೇಡ. ನಿಮ್ಮ ಬಾಳು ಸುಖವಾಗಿರುವ ಕಾಲವಿದು. ಶನಿ ಮಕರ ರಾಶಿ- ತನ್ನ ಸ್ವಕ್ಷೇತ್ರದಲ್ಲಿರುವಾಗ ನಾಲಿಗೆಯ ಮೇಲೆ ಎಚ್ಚರವಿರಲಿ ಹಾಗೂ ಹಿಡಿತವಿರಲಿ. ನಗುಮುಖವಿರಲಿ ಹಾಗೂ ತಾಳ್ಮೆಯಿರಲಿ. ಕುಲದೇವರನ್ನು ಪೂಜಿಸಿ. ಜನ್ಮದಾತೆಯ ಆಶೀರ್ವಾದ ಪಡೆಯಲು ಮರೆಯದಿರಿ.
ಮಕರ: ಎಲ್ಲ ವಿಷಯದಲ್ಲೂ ನೀವು ಸೋಲನ್ನೇ ಉಂಡಂತೆ ಕಾಣುತ್ತದೆ. ಆದರೆ ಅದು ವಾಸ್ತವವಲ್ಲ. ಪರೀಕ್ಷೆ ಬರೆಯುವುದು ವಿದ್ಯಾರ್ಥಿಯ ಕೆಲಸ. ಫಲಿತಾಂಶವನ್ನು ಪರಮಾತ್ಮನೇ ಕೊಡುವುದು. ಶನಿ ಸಂಚಾರದಲ್ಲಿ ದೇವರು ನಿಮ್ಮ ನಡೆ-ನುಡಿಯನ್ನು ನೋಡುತ್ತಿರುತ್ತಾನೆ. ಪರಮಾತ್ಮನನ್ನು ಪೂಜಿಸಿ. ಮನಸ್ಸಿನಲ್ಲಿ ಯಾವ ನೋವನ್ನೂ ಇಟ್ಟುಕೊಳ್ಳಬೇಡಿ.
ಕುಂಭ: ದ್ವಾದಶಿ ಶನಿ, ಹನ್ನೊಂದರ ಗುರು ನಿಮ್ಮನ್ನು ಕಾಪಾಡುತ್ತಾನೆ. ಧರ್ಮ ಪ್ರವೃತ್ತರಾಗಿ ದೈವದಲ್ಲಿ ನಂಬಿಕೆ ಇಡಿ. ಗುರು, ಶನಿ ಸೇರಿ ಎರಡೂ ಗ್ರಹಗಳು ನ.20ರಂದು ಹನ್ನೆರಡನೆ ಸ್ಥಾನಕ್ಕೆ ಬಂದು ನಿಮ್ಮನ್ನು ಪರೀಕ್ಷೆಗೆ ಒಳಪಡಿಸುತ್ತಾರೆ. ದೈವಸಹಾಯ ನಿಮ್ಮನ್ನು ಕಾಪಾಡುತ್ತದೆ. ಆಲೋಚಿಸಿ ಕೆಲಸವನ್ನು ಮುಂದೆ ನಡೆಸಿಕೊಂಡು ಹೋಗಿ. ರಾಮಾಷ್ಟೋತ್ತರ ಪಠಿಸಿ. ಸಂಜೆಯ ವೇಳೆಯಲ್ಲಿ ಆಂಜನೇಯನನ್ನು ಪ್ರಾರ್ಥಿಸಿ.
ಮೀನ: ಹತ್ತರ ಗುರುವು ಹನ್ನೊಂದರ ಶನಿ ನಿಮಗೆ ಆತ್ಮಬಲ, ದೈವಬಲವನ್ನು ನೀಡಿದ್ದಾನೆ. ನಿಮ್ಮ ನಿರ್ಣಯವೇ ಮುಖ್ಯವಾದದ್ದು. ಅಶಾಂತಿ ತರುವ ವಿಚಾರಗಳು ಬೇಡ. ರೋಗ ಭಯವಿಲ್ಲ. ದಕ್ಷಿಣಾಮೂರ್ತಿಯನ್ನು ಧ್ಯಾನಿಸಿ. ಶನಿ ಅಷ್ಟೋತ್ತರ ಪಠಿಸಿ. ಕೆಲಸ ಕೈಗೂಡುತ್ತದೆ. ಗಾಣಗಾಪುರಕ್ಕೆ ಹರಕೆ ಇಡಿ. ನಿಮ್ಮ ಕೆಲಸಗಳು ಚುರುಕಾಗಿ ಸಾಗುತ್ತದೆ.