ಈ ರಾಶಿಯವರಿಗೆ ಗುರುವೇ ಅಧಿಪತಿ ಆಗಿರುವುದರಿಂದ ಯಾವ ಸಂಕಷ್ಟವೂ ಬಾಧಿಸುವುದಿಲ್ಲ: ವಾರಭವಿಷ್ಯ

Vaara-Bhavishya
Published on
ಮೇಷ

ಕುಜ-ಶುಕ್ರರು ಧನಸ್ಸು ರಾಶಿಗೆ ಬಂದು ಮನಸ್ಸಿಗೆ ಇನ್ನಷ್ಟು ಹಿತವನ್ನು, ಅದೃಷ್ಟವನ್ನು ತಂದಿರುತ್ತಾರೆ. ಸದ್ಯ ಗುರು ಹನ್ನೊಂದರ ಸಂಚಾರದಲ್ಲಿ ಎಲ್ಲವೂ ನಿಮ್ಮ ಕೈಗೆ ನಿಲುಕಿ ನಿಮ್ಮ ಈ ವಾರದ ಪಯಣವು ಸಾಗುತ್ತದೆ. ದೃಢವಾದ ಸಂಕಲ್ಪ, ಶುದ್ಧವಾದ ಮನಸ್ಸು, ಸತ್ ಸಂಕಲ್ಪ ಈಡೇರುತ್ತದೆ. ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿ.

ವೃಷಭ

ಆತುರದ ನಿರ್ಧಾರಗಳು ಬೇಡ. ದೊಡ್ಡದಾದ ಸವಾಲು ಎದುರಿಸಲು ಏಕಾದಶಕ್ಕೆ ಗುರು ಬರುವ ನಿರೀಕ್ಷೆ ಮಾಡಿರಿ. ದುರ್ಗೆಯ ಪ್ರಾರ್ಥನೆ ಒಂದೇ ಹತ್ತು ಹಲವಾರು ಫಲಗಳನ್ನು ಕೊಡುವಂಥದ್ದು. ದೇವರನಾಮ, ಭಜನೆ ಮಾಡಿರಿ. ಭಗವಂತ ಸರಿಯಾದ ಮಾರ್ಗದಲ್ಲಿ ಕೊಂಡೊ ಯ್ಯುತ್ತಾನೆ. ದುರ್ಗಾಸಪ್ತಶತಿ ಪಾರಾಯಣ ಮಾಡಿರಿ.

ಮಿಥುನ

ಅಷ್ಟಮದಲ್ಲಿ ಗುರುವು-ಶನಿಯೂ ಇದ್ದಾಗ ಕೆಲವೊಂದು ವೈಪರೀತ್ಯಗಳು, ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಿರಿ. ಗುರುವು 9ನೇ ಮನೆಗೆ ಬಂದು ಒಳ್ಳೆಯ ಆರೋಗ್ಯ ನೀಡಿ, ನೀವು ನಡೆಯುವ ದಾರಿಯಲ್ಲಿ ಕಲ್ಲು-ಮುಳ್ಳು ತೆಗೆದುಹಾಕಿ ಪಾದೂರುವಂತೆ ಮಾಡಿಸುತ್ತಾನೆ. ಗುರುವು ದೈವಕೃಪೆಯನ್ನು ದಯಪಾಲಿಸಿದ್ದಾನೆ. ಹರಿನಾಮ ಸಂಕೀರ್ತನೆ ಇರಲಿ.

ಕಟಕ

ದೇವರ ಅನುಗ್ರಹ ಏಪ್ರಿಲ್ ನಂತರ ಬರಲಿದೆ. ವ್ಯಥೆ ಪಡುವ ಅವಶ್ಯಕತೆ ಇಲ್ಲ. ಸ್ಥಿರ ಮನಸ್ಸಿನಿಂದ ಇಷ್ಟದೇವರನ್ನು ಪೂಜಿಸಿ. ಶ್ರೀರಾಮಾಯಣದ ಸುಂದರಾಕಾಂಡ ಪಾರಾಯಣ ಮಾಡಿರಿ. ಆರೋಗ್ಯದ ಬಗ್ಗೆ ಜಾಗರೂಕರಾಗಿದ್ದು, ವೈದ್ಯರ ನೆರವು ಪಡೆಯಿರಿ.

ಸಿಂಹ

ಸೂರ್ಯನ ತಾಪವು ಮನುಷ್ಯನಿಗೆ ಹಿತವನ್ನು ಕೊಡುವುದಿಲ್ಲ. ಆದರೆ ಸೂರ್ಯನ ಬೆಳಕು ಮೂಡದಿದ್ದರೆ ಮನುಜನೇ ಕತ್ತಲೆಯಲ್ಲಿ ಇರಬೇಕಾಗುತ್ತದೆ. ಜನ್ಮ ಕೊಟ್ಟ ಮಾತಾ-ಪಿತರನ್ನು, ಸೂರ್ಯಾಧಿಪತಿಯನ್ನು ಚೆನ್ನಾಗಿ ಸ್ತುತಿಸಿ. ನವಗ್ರಹ ಸ್ತೋತ್ರ, ಆದಿತ್ಯ ಹೃದಯ ಪಾರಾಯಣ ಮಾಡಿ, ಸೂರ್ಯಾಷ್ಟಕವನ್ನು ಪಠಿಸಿ.

ಕನ್ಯಾ

ಕಳೆದ ಎರಡು ವರ್ಷಗಳಿಗೂ ಮಿಗಿಲಾದ ಪಂಚಮ ಶನಿ, ಗುರುಕೃಪೆ ಇಲ್ಲದ ನೀವು, ಕೇವಲ ಇನ್ನು ಎರಡು ತಿಂಗಳು ಮಾತ್ರವೇ ಕಾಯಬೇಕು. ಆನಂತರದಲ್ಲಿ ನೀವು ಅನುಭವಿಸಿದ ಶಿಕ್ಷೆಗೆ ದುಪ್ಪಟ್ಟಾಗಿ ಧನಲಾಭ, ಯಶಸ್ಸು, ಧೈರ್ಯ ಸಿಗುತ್ತದೆ. ಗುರುಚರಿತ್ರೆ ಪಾರಾಯಣ, ವಿಷ್ಣುಸಹಸ್ರನಾಮ ಪಾರಾಯಣ ಮಾಡುವುದನ್ನು ಮರೆಯಬೇಡಿ.

ತುಲಾ

ಚತುರ್ದಶಿ ಶನಿಯು ಸ್ವಕ್ಷೇತ್ರದಲ್ಲಿ ಇದ್ದು, ಪಂಚಮದಲ್ಲಿ ಶನಿಮನೆಯಲ್ಲಿ ಗುರುವಿದ್ದಾನೆ. ಅವನೊಬ್ಬನೇ ಸಾಕು, ನಿಮ್ಮನ್ನು ಸರಿಯಾದ ದಾರಿಯಲ್ಲಿ ಇರಿಸಲು. ನಿಮ್ಮ ಸುತ್ತಮುತ್ತಲಿನ ಸಂಬಂಧಿಗಳು, ಗೆಳೆಯರು ಕೊಂಡಾಡುವ ಸಮಯ. ಮೂರನೇ ಮನೆಯ ಕುಜ-ಶುಕ್ರ ನೀವು ಬಯಸಿದ್ದು ಎಲ್ಲವನ್ನೂ ಕೊಟ್ಟು, ರಹಸ್ಯವನ್ನು ಗೌಪ್ಯವಾಗಿಟ್ಟಿರುತ್ತಾರೆ. ಬನಶಂಕರಿ ಶಾಕಾಂಬರಿ ಸ್ತೋತ್ರ ಪಠಿಸಿ.

ವೃಶ್ಚಿಕ

ಶ್ರೀರಾಮಚಂದ್ರನಂತೆ ಎಲ್ಲರಲ್ಲೂ ದೇವರನ್ನು ಕಾಣುವುದು ನಮ್ಮ ಧ್ಯೇಯವಾಗಬೇಕು. ಹಾಗಾದರೆ ಮಾತ್ರವೇ ಮನುಷ್ಯನ ಬಾಳು ಸುಖವಾಗಿರಲು ಸಾಧ್ಯ. ಬಹುದಿನದ ನಿರೀಕ್ಷೆ ಸಫಲವಾಗುವ ಕಾಲ. ದೈವವನ್ನು ಬಿಟ್ಟು ಮನುಷ್ಯನಿಗೆ ಬೇರೆ ಆಸರೆಯೇ ಇಲ್ಲ. ವಿಘ್ನಹರ ಗಣಪತಿಗೆ ವಿಶೇಷವಾಗಿ ಭಜಿಸಿ, ನಾಗನಿಗಾಗಿ ನಾಗರಾಜ ಅಷ್ಟೋತ್ತರ ಪಾರಾಯಣ ಮಾಡಿ. ನಿಮ್ಮನ್ನು ನೋಡಲು ಬಂದವರಿಗೆ ಕ್ಷೀರಪಾನ ಮಾಡಿಸಿ.

ಧನು

ಬಿಟ್ಟ ಬಾಣ, ಸಂಕಲ್ಪ ಮಾಡಿದ ವಿಚಾರಗಳು ನಡೆಯದಿದ್ದಾಗ ಭಗವಂತನ ಕೃಪೆ ಇಲ್ಲವೆಂದೇ ತಿಳಿಯಬೇಕು. ವ್ಯವಹಾರ ಗಳಲ್ಲಿ ಸುಖ-ಸಂತೋಷ ಕಾಣಬೇಕಾದರೆ ಶುದ್ಧವಾದ ಮನಸ್ಸು, ಧ್ಯೇಯ, ಎಲ್ಲರೂ ಹೋಗುವ ಧರ್ಮಮಾರ್ಗದ ಬಗ್ಗೆ ಚಿಂತನೆ ಇರಬೇಕು. ಅದರಂತೆ ನಡೆಯಬೇಕು. ಶ್ರೀರಾಮಚಂದ್ರನ ಕೃಪೆ ಇರಲಿ. ದತ್ತಾತ್ರೇಯ ಗುರುಚರಿತ್ರೆಯ ಪಾರಾಯಣ ಎಂದೆಂದಿಗೂ ಸಾಗುತ್ತಲೇ ಇರಲಿ.

ಮಕರ

ಈ ರಾಶಿಯವರಿಗೆ ಲಗ್ನ ಶನಿಯು ಕೆಲಸದಲ್ಲಿ ಜಯ, ಪರಿಪೂರ್ಣತೆಯನ್ನು ಕೊಡುವುದಿಲ್ಲ. ಶುದ್ಧಾತ್ಮನೂ, ಜೀವಾತ್ಮನು ಆದ ಅಂತರ್ಯಾಮಿ ಭಗವಂತನನ್ನು ಪೂಜಿಸಿದರೆ ನಿಮ್ಮ ಧ್ಯೇಯವನ್ನು ಈಡೇರಿಸುತ್ತಾನೆ. ಏಪ್ರಿಲ್ ನಂತರದಲ್ಲಿ ಕತ್ತಲು ಸರಿದು ಹುಣ್ಣಿಮೆಯ ಬೆಳಕು ಮೂಡುತ್ತದೆ. ಶನಿಯ ಪ್ರಾರ್ಥನೆ ಇರಲಿ. ಹಯಗ್ರೀವ ಅಷ್ಟೋತ್ತರ ಪಠಿಸಿ.

ಕುಂಭ

ಗುರುವು ಆತ್ಮಕಾರಕನಾಗಿ ಕುಂಭರಾಶಿಯಲ್ಲಿ ಕುಳಿತಿದ್ದಾನೆ. ಸ್ವಕ್ಷೇತ್ರದಲ್ಲಿ ಗುರುವೇ ಕುಳಿತಿರುತ್ತಾನೆ. ಜೀವನ ನಡೆಸಲು ಯಾವ ಅಡೆ-ತಡೆಗಳೂ ಇಲ್ಲ. ದ್ವಾದಶ ಶನಿಯ ಸಂಕಷ್ಟ-ಸಂಕೋಲೆಗಳನ್ನು ತೆಗೆದುಹಾಕಿ ನಿಮ್ಮನ್ನು ಮುಂದೆ ಕೊಂಡೊಯ್ಯುತ್ತಾನೆ. ದೇಹಾರೋಗ್ಯವನ್ನು ಕಾಪಾಡಿಕೊಳ್ಳಿ. ಧನ್ವಂತರಿ ಅಷ್ಟೋತ್ತರ ಪಾರಾಯಣ ಮಾಡಿ. ನಿಂತಿರುವ ಕೆಲಸಗಳು ಏರುಪೇರಿಲ್ಲದೆ ನಿಮ್ಮಂತೆ ನಡೆದು ಸುಖ-ಸಂತೋಷ ನೀಡುವುದು.

ಮೀನ

ದ್ವಾದಶ ಗುರುವು ನಿಮ್ಮನ್ನು ಯಾವ ಸಂಕೋಲೆಗೂ ಸಿಕ್ಕಿಸದೆ, ವಿಕಾರವನ್ನು ಮಾಡದೆ ಕಾಪಾಡುತ್ತಾನೆ. ಏಕೆಂದರೆ ಮೀನಾಧಿಪತಿ ಗುರುವೇ ಆಗಿರುವುದರಿಂದ ಗುರುವಿನಿಂದ ಯಾವ ಸಂಕಷ್ಟವೂ ಬಾಧಿಸುವುದಿಲ್ಲ. ಕುಲದೇವರನ್ನು ಪೂಜಿಸಿದಲ್ಲಿ ಇಷ್ಟವಾದ ಕೆಲಸಗಳು ನಡೆದು ಸುಖ-ಸಂತೋಷ ಲಭಿಸುತ್ತದೆ. ಗುರು ಅಷ್ಟೋತ್ತರ, ಗುರುಪರಂಪರಾ ಸ್ತೋತ್ರ ಪಠಿಸಿ, ಶಿವಧ್ಯಾನ ಮಾಡುವುದನ್ನು ಮರೆಯದಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net