ಈ ರಾಶಿಯವರ ಮನೋಇಚ್ಛೆ-ಕಾಮನೆಗಳು ಈಡೇರುತ್ತವೆ: ವಾರಭವಿಷ್ಯ

Vaara-Bhavishya
Published on
ಮೇಷ

ಮಂಗಳ ಅಂದರೆ ಶುಭ ಎಂದೇ ಕರೆಯುತ್ತಾರೆ. ಹೊಸ ಸಂವತ್ಸರವೂ ಸನಿಹದಲ್ಲಿದೆ. ನಿತ್ಯವೂ ಅಂಗಾರಕನನ್ನು ಪೂಜಿಸಿ. ಸುಬ್ರಹ್ಮಣ್ಯನ ದರ್ಶನವನ್ನು ಮಾಡಿ ಬನ್ನಿ. ಬಾಕಿಯಿರುವ ಕೆಲಸವನ್ನು ಮುಗಿಸಿ, ಒಂದು ಹಂತ ತಲುಪುತ್ತೀರಿ.

ವೃಷಭ

ಜಲಸಂಪತ್ತು, ಸುಖ, ಧನಸಂಪತ್ತು ಕೊಡಬೇಕಾದಲ್ಲಿ ಅದನ್ನು ರಾಹುವೇ ಕರುಣಿಸುತ್ತಾನೆ. ರಾಹು-ಕೇತುವಿನ ಅಷ್ಟೋತ್ತರ ಜಪವಿರಲಿ. ಬೆಂಗಳೂರಿನ ವಿದ್ಯಾರಣಪುರದಲ್ಲಿ ಕಂಗೊಳಿಸುತ್ತಿರುವ ದುರ್ಗೆಯನ್ನು ಭಕ್ತಿಯಿಂದ ಪೂಜಿಸಿ. ನಿಮಗೆ ಸುಖದ ದಿನಗಳು ಬರಲಿವೆ. ಆರೋಗ್ಯದಲ್ಲಿ ಎಚ್ಚರ ಇರಲಿ.

ಮಿಥುನ

ಮಿಥುನ ರಾಶಿಯ ಅಧಿಪತಿ ವಿಷ್ಣುವನ್ನು ಪೂಜಿಸಿದರೆ ಅನ್ಯಥಾ ವಿಚಾರಗಳು ದೂರಸರಿಯುತ್ತವೆ. ಹಾಗೂ ಬೇಕಾದ ವಿಚಾರಗಳಿಗೆ ಶ್ರದ್ಧೆಯಿಂದ ಕೆಲಸ ಮಾಡಿದಲ್ಲಿ 9ರ ಗುರುವು ಭಾಗ್ಯವನ್ನು ತರುತ್ತಾನೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ನವಗ್ರಹ ಅಷ್ಟೋತ್ತರ ಪಠಿಸಿ.

ಕಟಕ

ಮನದಲ್ಲಿ ಶುದ್ಧತೆ ಇದ್ದಲ್ಲಿ ಯಾವ ಕಾರ್ಯವನ್ನೂ ಸಾಧಿಸಬಹುದು. ಕಟಕ ರಾಶಿ ಅಧಿಪತಿ ಚಂದ್ರನು ಮನಸ್ಸಿಗೆ ಹಿತವನ್ನು ನೀಡುವ ಗ್ರಹ. ಆದರೆ ಅವನನ್ನು ಶಿವನು ಶಿರದಲ್ಲಿ ಧರಿಸಿದ್ದಾನೆ. ಶಿವಾರಾಧನೆ ಮಾಡಿದ್ದಲ್ಲಿ ಪ್ರಾರಬ್ಧಗಳು ದೂರವಾಗಿ, ಸುಖವನ್ನು ನೀಡುತ್ತಾನೆ. ಶಿವಪಂಚಾಕ್ಷರಿ ಜಪಿಸಿ.

ಸಿಂಹ

ನಿಮ್ಮ ಕೋಪವನ್ನು ದೂರವಿಟ್ಟು, ಕೆಲಸವನ್ನು ಸಾಧಿಸಿಕೊಳ್ಳುವ ಸಮಯ. ಮಾರ್ಚ್ 24ರಿಂದ ಏಪ್ರಿಲ್ 8ರವರೆಗೆ ಸಾಧಕ-ಬಾಧಕಗಳಿದ್ದು, ಕೆಲಸ ಕೈಗೂಡಲಿಲ್ಲವೆಂದು ಹೆದರಬೇಡಿ. ಸೂರ್ಯ ಮತ್ತು ತಾಯಿ ದುರ್ಗೆಯನ್ನು ಅರ್ಚಿಸಿ. ಮುಂದೆ ಕ್ಷೇಮಕರ ದಿನಗಳು ಇವೆ. ನಿಮ್ಮ ಮನೋಇಚ್ಛೆ ಈಡೇರುತ್ತದೆ. ದೈವನಂಬಿಕೆ ಸದಾ ಇರಲಿ.

ಕನ್ಯಾ

ಪಂಚಮ ಶನಿಯಿಂದ ನಿಮಗೆ ಆರ್ಥಿಕ ಸಮಸ್ಯೆ ಉಂಟಾಗಿತ್ತು. ಹಲವು ಬಗೆಯ ಚಿಂತೆಗಳು ನಿಮ್ಮನ್ನು ಕಾಡಿದ್ದವು. ಬೆಳಕು ಹರಿದು, ಇರುಳು ಮುಗಿಯುವ ಸಮಯ. ಕನ್ಯಾರಾಶಿಯವರು ದೇವರ ಪೂಜೆಯನ್ನು ಬಿಟ್ಟರೆ ದುರ್ಬಲರಾಗುತ್ತಾರೆ. ಹಾಗಾಗಿ, ನಿರಂತರ ದೈವಪ್ರಾರ್ಥನೆ ಇರಲಿ. ಮುಂದೆ ಸುಖದ ದಿನಗಳು ಬರಲಿವೆ.

ತುಲಾ

ಹೆದರಿಸುವವರು, ಆಡಿಕೊಳ್ಳುವವರು ಏನನ್ನಾದರೂ ಮಾಡಿಕೊಳ್ಳಲಿ. ವಿಶಾಖ ನಕ್ಷತ್ರದ ಅಧಿಪತಿ ಷಣ್ಮುಖನೇ ನಿಮ್ಮನ್ನು ಕಾಪಾಡಿ, ಹರಸುತ್ತಾನೆ. ಗೃಹದಲ್ಲಿ ಸಂತೋಷವೂ, ಸಮಾಧಾನವೂ ಇರಲಿ. ಚಂಡಿಕಾ ಅಷ್ಟೋತ್ತರ ಪಾರಾಯಣ ಮಾಡಿ. ಶುಕ್ರನಿಗಾಗಿ ಶಾರದೆಯನ್ನು ಸಂದರ್ಶಿಸಿ, ಗುರುದ್ವಯರ ಆಶೀರ್ವಾದ ಪಡೆದು ಬನ್ನಿ.

ವೃಶ್ಚಿಕ

ಬೇಡಿದ್ದನ್ನು ಕೊಡುವವನು ದತ್ತಾತ್ರೇಯನೊಬ್ಬನೇ. ಸಕಲ ಕಾರ್ಯಗಳಲ್ಲಿ ಜಯ ಪಡೆಯಲು ದತ್ತಭಕ್ತಿಯೊಂದೇ ಸಾಕು. ದುಃಖ ಬಂದಾಗ ತಲೆಯೆತ್ತಿ ಮುನ್ನಡೆದು ಧೈರ್ಯದಿಂದ ಇರಬೇಕು. ಕಷ್ಟ ಕಾರ್ಪಣ್ಯದ ದಿನಗಳನ್ನು ಎದುರಿಸಿದ್ದೀರಿ. ಬೇಕಾದ್ದನ್ನು ಪಡೆಯುವ ಕಾಲ. ಸುಬ್ರಹ್ಮಣ್ಯನನ್ನು ಧ್ಯಾನಿಸಿ, ದರ್ಶಿಸಿ, ಪೂಜಿಸಿ.

ಧನು

ಧನುರ್​ಧಾರಿಯಾಗಿ ದಶರಥ ಮಹಾರಾಜನ ಮಗನಾಗಿ ರಾಜಠೀವಿಯಿಂದ ನಡೆದವನು ರಾಮಚಂದ್ರನು. ನಿಮಗೂ ಮಹಾರಾಜ ಯೋಗವೇ ಕಾದಿದೆ. ರಾಜನಾಗಬೇಕಾದರೆ ಸದ್ಗುಣಗಳು, ಉತ್ತಮ ವ್ಯಕ್ತಿತ್ವ ಸಹನೆ ಅತ್ಯಗತ್ಯ. ದತ್ತದೇವರನ್ನು ಧ್ಯಾನಿಸಿ. ಜಯವೂ ಸಿಕ್ಕಿ, ಆಕಾಶವನ್ನು ಮುಟ್ಟುವ ಕಾಲ ಬರಲಿದೆ.

ಮಕರ

ಕಷ್ಟ-ಕಾರ್ಪಣ್ಯದಿಂದ ಬಾಡಿಹೋದ ನೀವು ಮತ್ತೆ ಹೂವಾಗಿ ಅರಳಿ ಸುಖಪಡುವ ಕಾಲ ಹತ್ತಿರದಲ್ಲಿದೆ. ಮಕರದ ಶನಿಯಿಂದ ಪಾಠವನ್ನು ಕಲಿತಿದ್ದೀರಿ. ದೈವಭಕ್ತಿಯನ್ನು ಮೈಗೂಡಿಸಿಕೊಂಡಿದ್ದೀರಿ. ದೇವರು-ಧರ್ಮವನ್ನು ಬಿಟ್ಟು ನಡೆಯಬಾರದು. ಸುಂದರಕಾಂಡ ಪಾರಾಯಣ ನಿರಂತರವಾಗಿರಲಿ. ದಶರಥ ವಿರಚಿತ ಶನಿಸ್ತೋತ್ರ ಪಠಿಸಿ.

ಕುಂಭ

ದ್ವಾದಶ ಶನಿ ತೊಂದರೆಯನ್ನು ಕೊಟ್ಟು ತೊಡಕುಗಳನ್ನು ತಂದರೂ ಲಗ್ನಾತ್ ಗುರುವು ಅಲ್ಪಸ್ವಲ್ಪ ಕಾರ್ಯಗಳಲ್ಲಿ ಯಶಸ್ಸನ್ನು ಕೊಡುತ್ತಾನೆ. ಗುರುವು ಮೀನರಾಶಿಗೆ ಬರುವ ಸಮಯದಲ್ಲಿ ಸುಖ-ಸಂತೋಷ ಪಡೆಯಬಹುದು. ಸೋಮವಾರದಂದು ಈಶ್ವರನನ್ನು ಸ್ತುತಿಸಿ. ಧರ್ಮಸ್ಥಳ ಮಂಜುನಾಥನನ್ನು ತಲೆಬಾಗಿ ನಮಸ್ಕರಿಸಿ. ನಿಮ್ಮ ಮನೋಇಚ್ಛೆ, ಕಾಮನೆಗಳು ಈಡೇರುತ್ತವೆ.

ಮೀನ

ಹನ್ನೆರಡರ ಮನೆಯ ಗುರುವು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರಿ, ಆರ್ಥಿಕ ಹಿನ್ನಡೆಯನ್ನು ಉಂಟುಮಾಡಿದ್ದಾನೆ. ಕಷ್ಟ-ದುಃಖ ಗಳಿಂದ ಪಾರಾಗಲು ದೈವಸಹಾಯ ಅತ್ಯಗತ್ಯ. ದತ್ತಾತ್ರೇಯ ಗುರುಚರಿತ್ರೆಯಲ್ಲಿ 14ನೇ ಅಧ್ಯಾಯವನ್ನು ನಿತ್ಯವೂ ಪಾರಾಯಣ ಮಾಡಿ. ಮೀನಾಕ್ಷಿ ಸುಂದರೇಶ್ವರನನ್ನು ಅರ್ಚಿಸಿ. ಕಾರ್ಯ ಕೈಗೂಡುತ್ತದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net